ಶ್ರೀನಗರ: ಲಷ್ಕರ್-ಎ-ತೊಯ್ಬಾ (LeT) ಉಗ್ರಗಾಮಿ ಸಂಘಟನೆಯ ಡಿಜಿಟಲ್ ಮುಖವಾಣಿ ಎನ್ನಲಾದ ‘ಯುನೈಟೆಡ್ ಲಿಬರೇಶನ್ ಕೌನ್ಸಿಲ್’ (ULC) ಹೆಸರಿನಲ್ಲಿ ಬೆದರಿಕೆ ಪತ್ರವೊಂದು ಹರಿದಾಡುತ್ತಿದ್ದು, ಕಾಶ್ಮೀರಿ ಪಂಡಿತರು ಮತ್ತು ಹೊರರಾಜ್ಯದ ನೌಕರರಿಗೆ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಭದ್ರತಾ ಸಂಸ್ಥೆಗಳು ಜಾಗರೂಕತೆಯನ್ನು ಹೆಚ್ಚಿಸಿವೆ.
ಈ ಪತ್ರವು ಕಣಿವೆ ರಾಜ್ಯಕ್ಕೆ ಹಿಂತಿರುಗುತ್ತಿರುವ ಕಾಶ್ಮೀರಿ ಹಿಂದೂಗಳು ಹಾಗೂ ಹೊರರಾಜ್ಯದ ಕಾರ್ಮಿಕರನ್ನು ಗುರಿಯಾಗಿಸಿಕೊಂಡಿದೆ. ಹೊರರಾಜ್ಯದ ನೌಕರರು ದೆಹಲಿಯ “ದಾಳಗಳು” (pawns) ಎಂದು ಆರೋಪಿಸಿರುವ ಉಗ್ರರ ಸಂಘಟನೆಯು, ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಖಾಯಂ ಆಗಿ ನೆಲೆಸಲು ಯತ್ನಿಸುತ್ತಿದ್ದಾರೆ ಎಂದು ದೂರಿದೆ. ಸರ್ಕಾರಿ ಬೆಂಬಲಿತ ಪ್ರತಿಭಟನೆಗಳು ಅಥವಾ ಪುನರ್ವಸತಿ ಪ್ರಯತ್ನಗಳಲ್ಲಿ ತೊಡಗಿಸಿಕೊಂಡವರ ವಿರುದ್ಧ ಹಿಂಸಾತ್ಮಕ ಕ್ರಮ ಕೈಗೊಳ್ಳಲಾಗುವುದು ಹಾಗೂ ಲಿಂಗ ಅಥವಾ ಹುದ್ದೆಯ ಭೇದವಿಲ್ಲದೆ ಈ ಎಚ್ಚರಿಕೆ ಅನ್ವಯಿಸುತ್ತದೆ ಎಂದು ಪತ್ರದಲ್ಲಿ ಬೆದರಿಸಲಾಗಿದೆ. ಅಲ್ಲದೆ, ಬಂದೂಕುಗಳನ್ನು ಬಳಸಿ ಬಲಿಪಶುಗಳ ಮೃತದೇಹಗಳನ್ನು ಅವರ ಸ್ವಂತ ಊರುಗಳಿಗೆ ಶವದ ಚೀಲಗಳಲ್ಲಿ (body bags) ಕಳುಹಿಸಲಾಗುವುದು ಎಂದು ಹೆದರಿಸಲಾಗಿದ್ದು, ಹೊರಗಿನವರನ್ನು ಪ್ರದೇಶದಿಂದ ಹೊರಹಾಕುವಂತೆ ಸ್ಥಳೀಯ ನಿವಾಸಿಗಳಿಗೆ ಕರೆ ನೀಡಲಾಗಿದೆ.
ಹಿರಿಯ ಗುಪ್ತಚರ ಮೂಲಗಳ ಪ್ರಕಾರ, ಯುಎಲ್ಸಿ ಸಂಘಟನೆಯನ್ನು ಡಿಜಿಟಲ್ ಬೆದರಿಕೆ ಮತ್ತು ಮಾನಸಿಕ ಯುದ್ಧ ತಂತ್ರಗಳಿಗೆ ಬಳಸಿಕೊಳ್ಳಲಾಗುತ್ತಿದೆ. ಜನರಲ್ಲ ಭೀತಿ ಹುಟ್ಟಿಸುವುದು, ಭದ್ರತಾ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸುವಂತೆ ಮಾಡುವುದು ಮತ್ತು ಕಣಿವೆಯಲ್ಲಿ ಸರ್ಕಾರದ ಪುನರ್ವಸತಿ ಯೋಜನೆಗಳನ್ನು ಕಡ್ಡಾಯವಾಗಿ ತಡೆಯುವುದು ಈ ಸಂದೇಶಗಳ ಮುಖ್ಯ ಉದ್ದೇಶವಾಗಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ಸದ್ಯ ಹಲವು ಭದ್ರತಾ ಏಜೆನ್ಸಿಗಳು ಈ ಸಂದೇಶದ ಡಿಜಿಟಲ್ ಹೆಜ್ಜೆಗುರುತು, ಅದರ ಮೂಲ, ಹರಡಿದ ರೀತಿ ಮತ್ತು ಇದರ ಹಿನ್ನೆಲೆಯಲ್ಲಿರುವ ಸೂತ್ರಧಾರರ ಬಗ್ಗೆ ಪರಿಶೀಲನೆ ನಡೆಸುತ್ತಿವೆ. ಬೆದರಿಕೆಯ ತೀವ್ರತೆಯನ್ನು ಮೌಲ್ಯಮಾಪನ ಮಾಡುತ್ತಿರುವ ಅಧಿಕಾರಿಗಳು, ಸಾಮಾಜಿಕ ಜಾಲತಾಣಗಳ ಮೇಲೆ ತೀವ್ರ ನಿಗಾ ವಹಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಬೆದರಿಕೆ:
ಈ ವರ್ಷ ಈ ಗುಂಪು ಇಂತಹ ಸಂದೇಶವನ್ನು ನೀಡುತ್ತಿರುವುದು ಇದೇ ಮೊದಲೇನಲ್ಲ.
ಆಗಸ್ಟ್ 7, 2026: ಪ್ರಧಾನಮಂತ್ರಿಯವರ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಸರ್ಕಾರಿ ಇಲಾಖೆಯಲ್ಲಿ ಉದ್ಯೋಗದಲ್ಲಿರುವ ಆರು ಕಾಶ್ಮೀರಿ ಪಂಡಿತ್ ನೌಕರರ ಹೆಸರು, ಫೋನ್ ಸಂಖ್ಯೆ ಹಾಗೂ ಕುಟುಂಬದ ವಿವರಗಳನ್ನು ಯುಎಲ್ಸಿ ಬಹಿರಂಗಪಡಿಸಿತ್ತು. ಕಾಶ್ಮೀರದ ಹೊರಗೂ ಅವರ ಮೇಲೆ ನಿಗಾ ಇಡಲಾಗುತ್ತಿದೆ ಎಂದು ಬೆದರಿಸಿ, ಜಮ್ಮು ಮತ್ತು ಕಾಶ್ಮೀರ ಪೊಲೀಸರಿಗೂ ಎಚ್ಚರಿಕೆ ನೀಡಿತ್ತು.
ಆಗಸ್ಟ್ 23, 2026: ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ಹೊಸ ಪೋಸ್ಟರ್ ಮೂಲಕ ಜಮ್ಮುವಿನಲ್ಲಿರುವ ನಿವಾಸದ ವಿಳಾಸಗಳು ಮತ್ತು ನಿರ್ದಿಷ್ಟ ಅಲ್ಪಸಂಖ್ಯಾತ ನೌಕರರ ವಾಹನ ಸಂಖ್ಯೆಗಳನ್ನು ಹಂಚಿಕೊಳ್ಳಲಾಗಿತ್ತು.
ಆಗಸ್ಟ್ ಕೊನೆ: ಈ ಗುಂಪಿನಿಂದ ಕನಿಷ್ಠ ನಾಲ್ಕು ಪ್ರತ್ಯೇಕ ಆನ್ಲೈನ್ ಬೆದರಿಕೆಗಳನ್ನು ಏಜೆನ್ಸಿಗಳು ಗುರುತಿಸಿದ್ದವು. ಯುಎಲ್ಸಿಯ ಮಾಧ್ಯಮ ಸಂಯೋಜಕ ಎಂದು ಹೇಳಿಕೊಳ್ಳುವ ‘ಅಹ್ಮದ್ ಬಿಲಾಲ್’ ಎಂಬ ಅಲಿಯಾಸ್ ಹೆಸರಿನಲ್ಲಿ ಈ ಪತ್ರಗಳಿಗೆ ಸಹಿ ಮಾಡಲಾಗಿತ್ತು.
ರಾಜಕೀಯ ಸಂಘರ್ಷಕ್ಕೆ ಕಾರಣವಾದ ಬೆದರಿಕೆ ಪತ್ರ:
ಸೆಪ್ಟೆಂಬರ್ 2-3 ರಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಈ ಪತ್ರಗಳ ಮೂಲವನ್ನು ಪ್ರಶ್ನಿಸಿದ ನಂತರ, ಇದು ರಾಜಕೀಯವಾಗಿ ದೊಡ್ಡ ಚರ್ಚೆಗೆ ಗ್ರಾಸವಾಯಿತು. ವಿರೋಧ ಪಕ್ಷದ ನಾಯಕರು ಫಾರೂಕ್ ಅಬ್ದುಲ್ಲಾ ಅವರು ಇಸ್ಲಾಮಿಕ್ ಭಯೋತ್ಪಾದನೆಯ ಬೆದರಿಕೆಯನ್ನು ಹಗುರವಾಗಿ ಪರಿಗಣಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ಬೆದರಿಕೆ ಪತ್ರದ ಕುರಿತು ತನಿಖೆ ಮುಂದುವರಿದಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
