ಕಳೆದ ಕೆಲವು ದಶಕಗಳಲ್ಲಿ ಭಾರತೀಯ ಪ್ರಜಾಪ್ರಭುತ್ವದ ಮಣ್ಣಿನಲ್ಲಿ ಹತ್ತು ಹಲವು ಜನಪರ ಆಂದೋಲನಗಳು ಹುಟ್ಟಿಕೊಂಡಿವೆ. ಜಯಪ್ರಕಾಶ್ ನಾರಾಯಣರವರ ನೇತೃತ್ವದ ಧಮನಕಾರಿ ಆಡಳಿತ ವಿರೋಧಿ ವಿದ್ಯಾರ್ಥಿ ಹೋರಾಟದಿಂದ ಹಿಡಿದು, 1980ರ ಅಸ್ಸಾಂ ಚಳುವಳಿ, ಜನಲೋಕ್ಪಾಲ್ ಮಸೂದೆಗಾಗಿ ನಡೆದ ಜನಾಂದೋಲನ, ಸಿಎಎ ವಿರುದ್ಧದ ಪ್ರತಿಭಟನೆ ಹಾಗೂ ಇತ್ತೀಚಿನ ರೈತ ಹೋರಾಟದವರೆಗೆ ಪ್ರತಿಯೊಂದೂ ಕೂಡ ಒಂದು ನಿರ್ದಿಷ್ಟ ಗುರಿ, ಪೂರ್ವಸಿದ್ಧತೆ ಮತ್ತು ಗಟ್ಟಿಯಾದ ನೇತೃತ್ವವನ್ನು ಹೊಂದಿದ್ದವು. ಇಷ್ಟೆಲ್ಲಾ ಸಿದ್ಧತೆ ಮತ್ತು ಬೌದ್ಧಿಕ ಅಡಿಪಾಯವಿದ್ದರೂ ಸಹ, ಅಂತಹ ಐತಿಹಾಸಿಕ ಚಳುವಳಿಗಳು ಕಾಲಕ್ರಮೇಣ ತಾತ್ಕಾಲಿಕ ಯಶಸ್ಸನ್ನು ಮಾತ್ರ ಕಂಡು ಸಮಾಪ್ತಿಯಾದವು. ಆದರೆ, ಈ ಐತಿಹಾಸಿಕ ಹೋರಾಟಗಳ ಹಾದಿಗೆ ತದ್ವಿರುದ್ಧವಾಗಿ, ಯಾವುದೇ ಸಿದ್ಧಾಂತ ಅಥವಾ ದೂರದೃಷ್ಟಿಯಿಲ್ಲದೆ ಹಠಾತ್ತನೆ ಹುಟ್ಟಿಕೊಳ್ಳುವ ಇಂದಿನ ಕೆಲ ತುರ್ತು ಸಂಘಟನೆಗಳು ಮತ್ತು ಅವುಗಳ ಸ್ವರೂಪವು ನಮ್ಮ ವ್ಯವಸ್ಥೆಯ ಮುಂದೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಆದರೆ, 2026ರಲ್ಲಿ ಹುಟ್ಟಿಕೊಂಡ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಇವೆಲ್ಲಕ್ಕಿಂತ ಭಿನ್ನವಾದದ್ದು. ಇದು ಕೇವಲ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಒಂದು ಪದಪ್ರಯೋಗಕ್ಕೆ ಪ್ರತಿಕ್ರಿಯೆಯಾಗಿ ರಾತ್ರೋರಾತ್ರಿ ಹುಟ್ಟಿಕೊಂಡಿತು. ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂಬುದು ಇದರ ಮೂಲ ಉದ್ದೇಶವಾಗಿದ್ದು, ಇದಕ್ಕಾಗಿ ಆಂದೋಲನ ಹಾಗೂ ಪ್ರತಿಭಟನೆಗಳನ್ನು ನಡೆಸಲಾಯಿತು.
ಆದರೆ, ನಾವೆಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಕಂಡಂತೆ, ಈ ಪ್ರತಿಭಟನೆಕಾರರು ಹಿಂಸಾತ್ಮಕವಾಗಿ ನಡೆದುಕೊಂಡು ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ನಷ್ಟ ಉಂಟುಮಾಡಿದರು, ದೇಶವಿರೋಧಿ ಘೋಷಣೆಗಳನ್ನು ಕೂಗಿದರು ಮತ್ತು ಪೊಲೀಸರ ಮೇಲೆ ಹಲ್ಲೆ ನಡೆಸಿದರು. ಆದರೂ ಸರ್ಕಾರ ಕೂಡಲೇ ಸ್ಪಂದಿಸಿ ಪರಿಹಾರಗಳನ್ನು ಪ್ರಕಟಿಸಿ ಬೇಡಿಕೆಗಳನ್ನು ಈಡೇರಿಸಿತು.
ಈ ಬೆಳವಣಿಗೆಯಿಂದಾಗಿ, ಮುಂಬರುವ ದಿನಗಳಲ್ಲಿ ‘ಕಾಕ್ರೋಚ್ ಜನತಾ ಪಾರ್ಟಿ’ ಒಂದು ದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಬಹುದೇ ಎಂಬ ಭಾವನೆ ಜನರಲ್ಲಿ ಮತ್ತು ಕೆಲವು ರಾಜಕೀಯ ಪಕ್ಷಗಳಲ್ಲಿ ಮೂಡಿದೆ.
ಆದರೆ ಗಮನಿಸಬೇಕಾದ ಅಂಶವೆಂದರೆ:
‘ಸಿ.ಜೆ.ಪಿ’ (CJP) ಗೆ ನಿರ್ದಿಷ್ಟವಾದ ನೀತಿಯಿಲ್ಲ, ಸ್ಪಷ್ಟ ನೇತೃತ್ವವಿಲ್ಲ ಮತ್ತು ನಿಯತ್ತಿಲ್ಲ. ಇದು ದೇಶವಿರೋಧಿ ವ್ಯಕ್ತಿಗಳು ಮತ್ತು ಅಂತರರಾಷ್ಟ್ರೀಯ ಭಾರತ ವಿರೋಧಿ ಶಕ್ತಿಗಳ ಪ್ರಚೋದನೆಯ ಪರಿಣಾಮವಾಗಿ ಬೆಳೆದಿರುವ ಒಂದು ಕಳೆ ಗಿಡವಷ್ಟೇ. ಕಳೆ ಗಿಡ ಎಂದೆಂದಿಗೂ ಬೆಳೆಯಾಗಿ ಉಳಿಯುವುದಿಲ್ಲ; ಅದಕ್ಕೆ ಸ್ವಲ್ಪ ತೊಡಕುಂಟು ಮಾಡಿದರೆ ಸಾಕು, ಅದು ನಾಶವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ.
ಸಾಧನೆ ಇಲ್ಲದೆ, ಕೇವಲ ಜನಮನ ಸೆಳೆಯುವ ಮಾತನಾಡುವ ಮೂಲಕ ಮಾತ್ರ ಯಾರೂ ನಾಯಕರಾಗಲು ಸಾಧ್ಯವಿದ್ದರೆ, ಭಾರತದಲ್ಲಿ ಕಮ್ಯೂನಿಸ್ಟರು ಯಾವಾಗಲೋ ದೇಶವನ್ನು ಆಳುತ್ತಿದ್ದರು!
ಹೇಗೆ ಊರಿನ ಜಾತ್ರೆಗೆ ಸಾವಿರಾರು ಜನ ಸೇರುತ್ತಾರೋ ಮತ್ತು ರಥೋತ್ಸವ ಮುಗಿದ ನಂತರ ಎಲ್ಲರೂ ತಮ್ಮ ಮನೆಗಳಿಗೆ ತೆರಳುತ್ತಾರೋ, ಹಾಗೆಯೇ ಜನ ಸೇರುವುದನ್ನು ಮಾತ್ರ ಗಟ್ಟಿ ಸಂಘಟನೆ ಅಥವಾ ಕ್ರಾಂತಿ ಎಂದು ಭಾವಿಸಲು ಸಾಧ್ಯವಿಲ್ಲ.
ಕೊನೆಯದಾಗಿ, ದಾರಿ ತಪ್ಪುವ ಆಡಳಿತಗಾರರಿಗೆ ಅಂಕುಶವಾಗಿ, ಅವರನ್ನು ಎಚ್ಚರಿಸಿ ಒಳ್ಳೆಯ ಆಡಳಿತವನ್ನು ನೀಡುವಂತೆ ಮಾಡಲು ಆಗಾಗ್ಗೆ ಇಂತಹ ಆಂದೋಲನಗಳು ನಡೆಯುತ್ತಿರಬೇಕು. ಪ್ರಜಾಪ್ರಭುತ್ವ ವ್ಯವಸ್ಥೆ ನಿರಂತರವಾಗಿ ಎಚ್ಚರದಿಂದಿರಲು ಇದು ಅತ್ಯಗತ್ಯ.
- ಶಂಭುಲಿಂಗಪ್ಪ ವಿ. ದಾವಣಗೆರೆ
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
