ಗಾಂಧಿನಗರ: ಗುಜರಾತಿನ ಐತಿಹಾಸಿಕ ಹಾಗೂ ವಾಸ್ತುಶಿಲ್ಪದ ಅದ್ಭುತವಾದ ಪ್ರಸಿದ್ಧ ಮೊಢೆರಾ ಸೂರ್ಯ ಮಂದಿರದ ನಿರ್ಮಾಣಕ್ಕೆ 1,000 ವರ್ಷಗಳು ಪೂರ್ಣಗೊಂಡಿರುವ ಸಂಭ್ರಮವನ್ನು ಆಚರಿಸಲು ಕೇಂದ್ರ ಸರ್ಕಾರವು 100 ರೂಪಾಯಿಯ ವಿಶೇಷ ಸ್ಮರಣಾರ್ಥ ನಾಣ್ಯವನ್ನು ಬಿಡುಗಡೆ ಮಾಡಿದೆ. ಈ ಕುರಿತು ಕೇಂದ್ರ ಹಣಕಾಸು ಸಚಿವಾಲಯವು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ.
ಭಾರತೀಯ ಪುರಾತನ ವೈಭವ, ಕಲೆ ಮತ್ತು ಭವ್ಯವಾದ ವಾಸ್ತುಶಿಲ್ಪ ಪರಂಪರೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ ಈ ಮಹತ್ವದ ಹೆಜ್ಜೆಯನ್ನಿಡಲಾಗಿದೆ.
ಈ ಸ್ಮರಣಾರ್ಥ ನಾಣ್ಯದ ಮುಂಭಾಗದ ಮಧ್ಯಭಾಗದಲ್ಲಿ ಅಶೋಕ ಸ್ತಂಭದ ಸಿಂಹ ಲಾಂಛನವಿರಲಿದ್ದು, ಅದರ ಕೆಳಗೆ ‘ಸತ್ಯಮೇವ ಜಯತೆ’ ಎಂದು ಮುದ್ರಿಸಲಾಗಿದೆ. ಇದರ ಎಡಭಾಗದಲ್ಲಿ ದೇವನಾಗರಿ ಲಿಪಿಯಲ್ಲಿ ‘ಭಾರತ’ ಎಂದೂ ಹಾಗೂ ಬಲಭಾಗದಲ್ಲಿ ಇಂಗ್ಲಿಷ್ನಲ್ಲಿ ‘INDIA’ ಎಂದೂ ಬರೆಯಲಾಗಿದೆ. ಜೊತೆಗೆ ಅಂತರರಾಷ್ಟ್ರೀಯ ಅಂಕಿಗಳಲ್ಲಿ ರೂಪಾಯಿ ಚಿಹ್ನೆ ‘₹’ ಹಾಗೂ ‘100’ ಎಂದು ಮುದ್ರಿಸಲಾಗಿದೆ.
ನಾಣ್ಯದ ಹಿಂಭಾಗದ ಮಧ್ಯಭಾಗದಲ್ಲಿ ಗುಜರಾತಿನ ಮೊಢೆರಾ ಸೂರ್ಯ ಮಂದಿರದ ಚಿತ್ರಣವನ್ನು ಮುದ್ರಿಸಲಾಗಿದೆ. ಇದರ ಮೇಲ್ಭಾಗದ ಸುತ್ತಳತೆಯಲ್ಲಿ ದೇವನಾಗರಿ ಲಿಪಿಯಲ್ಲಿ ‘मोढेरा सूर्य मंदिर, गुजरात के 1000 वर्ष’ ಎಂದು ಹಾಗೂ ಚಿತ್ರದ ಮೇಲೆ ‘1026-2026’ ವರ್ಷಗಳನ್ನು ನಮೂದಿಸಲಾಗಿದೆ. ಹಾಗೆಯೇ ಕೆಳಗಿನ ಸುತ್ತಳತೆಯಲ್ಲಿ ಇಂಗ್ಲಿಷ್ನಲ್ಲಿ ‘1000 YEARS OF MODHERA SUN TEMPLE, GUJARAT’ ಎಂದು ಮುದ್ರಿಸಲಾಗಿದೆ.
ಸೂರ್ಯ ದೇವನಿಗೆ ಸಮರ್ಪಿತವಾಗಿರುವ ಗುಜರಾತಿನ ಮೇಹ್ಸಾನಾ ಜಿಲ್ಲೆಯ ಪುಷ್ಪಾವತಿ ನದಿ ತೀರದಲ್ಲಿರುವ ಮೊಢೆರಾ ಸೂರ್ಯ ಮಂದಿರವು ತನ್ನ ವಿಶಿಷ್ಟ ವಾಸ್ತುಶಿಲ್ಪ ಶೈಲಿಗೆ ವಿಶ್ವಖ್ಯಾತಿ ಪಡೆದಿದೆ. ಚಾಲುಕ್ಯ ವಂಶದ ರಾಜ ಮೊದಲನೇ ಭೀಮನು ಇದನ್ನು ನಿರ್ಮಿಸಿದ್ದನು. ಈ ದೇವಾಲಯವು ತನ್ನ ಕಲಾಕುಶಲತೆ, ಅತ್ಯಾಕರ್ಷಕ ಕೆತ್ತನೆಗಳು ಮತ್ತು ಸೂರ್ಯ ಕುಂಡವೆಂದು ಕರೆಯಲ್ಪಡುವ ವಿಶಾಲವಾದ ಮೆಟ್ಟಿಲುಗಳ ಬಾವಿಗೆ ಅತೀವ ಪ್ರಸಿದ್ಧಿಯನ್ನು ಪಡೆದಿದೆ. ಸೂರ್ಯನ ಮೊದಲ ಕಿರಣಗಳು ನೇರವಾಗಿ ಗರ್ಭಗುಡಿಯಲ್ಲಿರುವ ದೇವಸ್ಥಾನದ ದೇವತೆಯ ಪಾದಗಳ ಮೇಲೆ ಬೀಳುವಂತೆ ಇದನ್ನು ಅತ್ಯಂತ ವೈಜ್ಞಾನಿಕವಾಗಿ ನಿರ್ಮಿಸಲಾಗಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
