ಮೂಡುಬೆಳ್ಳೆ: ವಿಬಿ ಜಿ ರಾಮ್ ಜಿ (ಹಿಂದಿನ ನರೇಗಾ) ಯೋಜನೆಯಡಿ ರಾಜ್ಯದ ಗ್ರಾಮ ಪಂಚಾಯಿತಿಗಳಿಂದ ಕೈಗೊಳ್ಳುವ ಅನುಮೋದಿತ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿರುವ ಸಾಮಗ್ರಿಗಳನ್ನು ಪ್ರತಿ ಕಾಮಗಾರಿಗೆ 5 ಲಕ್ಷ ರೂ. ಮಿತಿಯೊಳಗೆ ಖರೀದಿಸಲು ಟೆಂಡರ್ ವಿನಾಯ್ತಿ ನೀಡಿ ಸರಕಾರ ನ. 2ರಂದು ಆದೇಶಿಸಿದೆ. ಇದರಿಂದ ಒಟ್ಟು ಕಾಮಗಾರಿ ವೆಚ್ಚದಲ್ಲಿ ಶೇ. 40ರಷ್ಟು ಅಂದರೆ ಗರಿಷ್ಟ 5 ಲಕ್ಷ ದಷ್ಟು ಸಾಮಗ್ರಿ ಖರೀದಿಗೆ ಇದ್ದ ಟೆಂಡರ್ ಕಡ್ಡಾಯದ ಅಡ್ಡಿ ದೂರವಾಗಿದ್ದು ಗ್ರಾಮೀಣಾಭಿವೃದ್ಧಿಯ ಹೊಸ ಅಧ್ಯಾಯ ಆರಂಭವಾಗಲಿದೆ.
4ಜಿ ವಿನಾಯ್ತಿ
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿನ ಪಾರದರ್ಶಕತೆ ಅಧಿನಿಯಮ 1999ರ ನಿಯಮ 4ಜಿ ಪ್ರಕಾರ ಈ ವಿನಾಯ್ತಿ ನೀಡಲಾಗಿದ್ದು ತಲಾ ಕಾಮಗಾರಿಗೆ ೧ ವರ್ಷದ ಅವಧಿಗೆ ಈ ವಿನಾಯ್ತಿ ಅನ್ವಯಿಸುತ್ತದೆ. ಇದನ್ನು ಹೊರತುಪಡಿಸಿ ಬೇರೆ ಯಾವುದೇ ಶರತ್ತುಗಳಿಗೆ ವಿನಾಯ್ತಿ ಇಲ್ಲ ಎಂದು ಸರಕಾರ ನಡವಳಿ ಕೈಗೊಂಡಿದೆ.
ಯಾವೆಲ್ಲ ಕಾಮಗಾರಿಗೆ ಅವಕಾಶ?
ಸರಕಾರಿ ಜಾಗದಲ್ಲಿರುವ ಸರಕಾರಿ ಶಾಲಾ ಆವರಣ ಗೋಡೆ, ಪಂಚಾಯತ್ ಸಿಸಿ ರಸ್ತೆ, ಪಂಚಾಯತ್ ಒಳ ರಸ್ತೆಗಳ ಚರಂಡಿ, ಕೆರೆ ಅಭಿವೃದ್ಧಿ, ತೋಡಿಗೆ ತಡೆಗೋಡೆ, ತೋಡು ರಚನೆ (ನೆರೆ ನಿಯಂತ್ರಣಕ್ಕೆ), ಕಾಲು ಸಂಕ ಸಹಿತ ಮೂಲ ಸೌಕರ್ಯ ಅಭಿವೃದ್ಧಿಗೆ ವಿಪುಲ ಅವಕಾಶವಿದೆ. ಘಟಕ ವೆಚ್ಚದ ಶೇ. ೪೦ರಷ್ಟು ಗರಿಷ್ಟ 5 ಲಕ್ಷ ಸಾಮಗ್ರಿ ಹಾಗೂ ಶೇ. 60ರಷ್ಟು ಕೂಲಿ ನಿಯಮ ಅನ್ವಯಿಸುತ್ತದೆ. ಗ್ರಾಪಂ ವರ್ಗ 1ರ ಹಾಗೂ ೧೬ನೇ ಹಣಕಾಸು ಯೋಜನೆಯನ್ನು ಇದಕ್ಕೆ ಒಗ್ಗೂಡಿಸಬಹುದಾಗಿದೆ.
ಗೋಶಾಲೆ: 32 ಲಕ್ಷ ಘಟಕ ವೆಚ್ಚ
ಸರಕಾರಿ/ಕುಮ್ಕಿ ಜಮೀನಿನಲ್ಲಿ ಗೋಶಾಲೆ ನಿರ್ಮಿಸಲು ಘಟಕ ವೆಚ್ಚ 32 ಲಕ್ಷದಲ್ಲಿ ವಿಬಿ ಜಿ ರಾಮ್ಜಿ ಯಲ್ಲಿ ಕಾಮಗಾರಿ ಕೈಗೊಳ್ಳಲು ಅವಕಾಶವಿದೆ. ಇಂಟರ್ಲಾಕ್ ರಸ್ತೆ ನಿರ್ಮಾಣಕ್ಕೆ ಅವಕಾಶವಿದ್ದು, ಇಂಟರ್ಲಾಕ್ ಘಟಕ ಸ್ಥಾಪಿಸಿ ಸ್ವ ಸಹಾಯ ಸಂಘಗಳ ಮೂಲಕ ಇಂಟರ್ಲಾಕ್ ಪೂರೈಕೆಗೂ ಅವಕಾಶವಿದೆ. ಇದರಿಂದ ಗ್ರಾಮೀಣರಿಗೆ ಹಲವಾರು ಉದ್ಯೋಗ ಸೃಷ್ಟಿ ಆಗಲಿದೆ. ರೈತರಕಣ (ಕೃಷಿ ಚಟುವಟಿಕೆ) ಯೋಜನೆಯಲ್ಲಿ ಶೇ. 80 ಸಾಮಗ್ರಿ ವೆಚ್ಚಕ್ಕೆ ಅನುಮತಿ ಇದೆ.
ಕಾಪು ತಾಪಂಗೆ ಉತ್ಸಾಹಿ ಅಧಿಕಾರಿ
ಕಾಪು ತಾಲ್ಲೂಕು ಪಂಚಾಯತ್ಗೆ ಮಾಜಿ ಸೈನಿಕ ಅನಂತ ಪದ್ಮನಾಭ ನಾಯಕ್ ಅವರು ವಿಬಿ ಜಿ ರಾಮ್ಜಿ ಯೋಜನೆಯ ಸಹಾಯಕ ನಿರ್ದೇಶಕರಾಗಿ ನೇಮಕಾತಿಯಾಗಿದ್ದು ಸಾರ್ವಜನಿಕ ಕಾಮಗಾರಿ ಹಾಗೂ ಯೋಜನೆಯ ಅನುಷ್ಠಾನಕ್ಕೆ ಉತ್ಸಾಹಿ ಅಧಿಕಾರಿಯಿಂದ ಚಾಲನೆ ದೊರೆತಿದೆ.
ಪಿಡಿಒ, ಡಿಇಒ, ಸಾರ್ವಜನಿಕರು ಸಹಕಾರ ನೀಡಿದರೆ ವಿಬಿ ಜಿ ರಾಮ್ ಜಿ ಯೋಜನೆಯಿಂದ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಾಧ್ಯವಿದೆ. ಪಾರದರ್ಶಕ ವ್ಯವಸ್ಥೆಯಡಿ ಎಲ್ಲ ಕಾಮಗಾರಿಗಳು ಸಾಮಾಜಿಕ ಲೆಕ್ಕಪರಿಶೋಧನೆ, ಜಿಪಿಎಸ್ ಟ್ರ್ಯಾಕಿಂಗ್ಗೆ ಒಳಪಡುತ್ತವೆ. ಕಾಪು ತಾಪಂ ನಲ್ಲಿ ಈ ಬಗ್ಗೆ ವಿಶೇಷ ಆದ್ಯತೆ ನೀಡಲಾಗುತ್ತಿದೆ.
- ಅನಂತ ಪದ್ಮನಾಭ ನಾಯಕ್,
ಸ.ನಿರ್ದೇಶಕರು, ವಿಬಿ ಜಿ ರಾಮ್ಜಿ, ಕಾಪು ತಾಪಂ.
ವರದಿ: ಕಟ್ಟಿಂಗೇರಿ ಅಶ್ವಿನಿ
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
