ಬೆಂಗಳೂರು: ವಿಶ್ವ ಹಿಂದೂ ಪರಿಷದ್ನ ಮಾಜಿ ಅಂತರರಾಷ್ಟ್ರೀಯ ಅಧ್ಯಕ್ಷರು ಹಾಗೂ ರಾಮಜನ್ಮಭೂಮಿ ಆಂದೋಲನದ ಪ್ರಮುಖ ರೂವಾರಿಗಳಲ್ಲಿ ಒಬ್ಬರಾದ ಮಾನ್ಯ ಅಶೋಕ್ ಜಿ ಸಿಂಘಾಲ್ ಅವರ ಜನ್ಮ ಶತಮಾನೋತ್ಸವದ ಕಾರ್ಯಕ್ರಮಗಳು ಬೆಂಗಳೂರಿನಲ್ಲಿ ಸೆಪ್ಟೆಂಬರ್ 27, 2026 ರಂದು ಅತ್ಯಂತ ವಿಜೃಂಭಣೆಯಿಂದ ಜರುಗಲಿವೆ. ಶ್ರೀ ಪರಾಭವ ನಾಮ ಸಂವತ್ಸರ, ದಕ್ಷಿಣಾಯಣ, ವರ್ಷಋತು, ಭಾದ್ರಪದ ಕೃಷ್ಣ ಪ್ರಥಮ ದಿನದಂದು ನಡೆಯುವ ಈ ಶತಮಾನೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಸಕಲ ಸಿದ್ಧತೆಗಳು ನಡೆದಿವೆ.
ಈ ಕಾರ್ಯಕ್ರಮವು ಬೆಂಗಳೂರಿನ ಜಯನಗರ 3ನೇ ಬ್ಲಾಕ್ನಲ್ಲಿರುವ (ಮೆಟ್ರೋ ಹತ್ತಿರ) ಎನ್.ಎಂ.ಕೆ.ಆರ್.ವಿ ಕಾಲೇಜಿನ ಶ್ರೀ ಮಂಗಳ ಮಂಟಪದಲ್ಲಿ ಬೆಳಿಗ್ಗೆ 10:00 ಗಂಟೆಗೆ ಜರುಗಲಿದೆ. ಈ ಸಮಾರಂಭಕ್ಕೆ ಬೇಲಿಮಠ ಮಹಾಸಂಸ್ಥಾನದ ಪೂಜ್ಯ ಚರಮೂರ್ತಿ ಶಿವರುದ್ರ ಸ್ವಾಮಿಗಳು ಮತ್ತು ಚಿತ್ರದುರ್ಗದ ಮಾದಾರ ಚೆನ್ನಯ ಮಠದ ಪೂಜ್ಯ ಮಾದಾರ ಚೆನ್ನಯ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ವಿಶ್ವ ಹಿಂದೂ ಪರಿಷದ್ನ ಕೇಂದ್ರೀಯ ಉಪಾಧ್ಯಕ್ಷರಾದ ಶ್ರೀ ಚಂಪತ್ ರಾಯ್ ಅವರು ಮುಖ್ಯ ಅಭ್ಯಾಗತರಾಗಿ ಆಗಮಿಸಲಿದ್ದು, ಗೌಹಾಟಿ ಉಚ್ಚ ನ್ಯಾಯಾಲಯದ ನಿವೃತ್ತ ಮುಖ್ಯ ನ್ಯಾಯಾಧೀಶರಾದ ಶ್ರೀ ಕೆ. ಶ್ರೀಧರ್ ರಾವ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಹಾಗೆಯೇ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತ ಸಹ ಬೌದ್ಧಿಕ್ ಪ್ರಮುಖ್ ಶ್ರೀ ಸುಧೀರ್ ಅವರು ವಕ್ತಾರರಾಗಿ ಭಾಗವಹಿಸಿ ಮಾರ್ಗದರ್ಶನ ನೀಡಲಿದ್ದಾರೆ.
ಉನ್ನತ ಐ.ಸಿ.ಎಸ್ (ICS) ಅಧಿಕಾರಿಯೊಬ್ಬರ ಮಗುವಾಗಿ ಜನಿಸಿ, ಬಿ.ಟೆಕ್ ಪದವಿ ಪಡೆದ ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ತಮ್ಮ ಜೀವನವನ್ನು ಸಮರ್ಪಿಸಿಕೊಂಡವರು ಅಶೋಕ್ ಜಿ ಸಿಂಘಾಲ್. ಪರಮಪೂಜ್ಯ ಗುರೂಜಿ, ಬಾಳಾಸಾಹೇಬ್ ದೇವೆರಸ್ ಮತ್ತು ಪ್ರೊ. ರಾಜೇಂದ್ರ ಸಿಂಹ ಜಿ ಅವರ ಮಾರ್ಗದರ್ಶನದಲ್ಲಿ ಬೆಳೆದ ಅವರು, ವಿಶ್ವ ಹಿಂದೂ ಪರಿಷದ್ ಅನ್ನು ಹಿಂದೂ ಉತ್ಥಾನದ ಪ್ರಮುಖ ಮಾಧ್ಯಮವನ್ನಾಗಿಸಿದರು. ವೇದಗಳ ಪ್ರಚಾರ, ಗೋ ಸಂರಕ್ಷಣೆ, ಮತಾಂತರ ತಡೆಗೆ ಯುವಶಕ್ತಿಯ ಜಾಗರಣೆ ಹಾಗೂ ಸಾವಿರಾರು ಸೇವಾ ಕಾರ್ಯಗಳಲ್ಲಿ ಹಿಂದೂ ಸಮಾಜವನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಅವರು ಪ್ರೇರೇಪಿಸಿದರು.
ವಿಶೇಷವಾಗಿ 1991ರ ಏಪ್ರಿಲ್ 4 ರಂದು ದೆಹಲಿಯ ಬೋಟ್ಕ್ಲಬ್ನಲ್ಲಿ ಎಂದೂ ನಡೆದಿರದ ರೀತಿಯಲ್ಲಿ ಸುಮಾರು 25 ಲಕ್ಷ ಶ್ರೀ ರಾಮ ಭಕ್ತರನ್ನು ಸೇರಿಸಿ “ಮಂದಿರ್ ವಹಿ ಬನಾಯೇಂಗೆ” ಎಂಬ ಐತಿಹಾಸಿಕ ಘೋಷಣೆಯೊಂದಿಗೆ ಶ್ರೀ ರಾಮ ಜನ್ಮಭೂಮಿ ದೇವಾಲಯಕ್ಕಾಗಿ ಬೃಹತ್ ಸಮಾವೇಶವನ್ನು ಅವರು ಆಯೋಜಿಸಿದ್ದರು. ಈ ಐತಿಹಾಸಿಕ ಸಭೆಯೇ ಮುಂದಿನ ಎಲ್ಲ ಹೋರಾಟಗಳಿಗೂ ಅಡಿಪಾಯ ಹಾಕಿತ್ತು. ಲಕ್ಷಾಂತರ ಕಾರ್ಯಕರ್ತರ ಪ್ರೀತಿ ಹಾಗೂ ವಿಶ್ವಾಸಕ್ಕೆ ಪಾತ್ರರಾಗಿದ್ದ ಅಶೋಕ್ ಜಿ ಅವರ ಈ ಶತಮಾನೋತ್ಸವ ವರ್ಷದಲ್ಲಿ ಅವರ ಆದರ್ಶಗಳನ್ನು ಸ್ಮರಿಸಿಕೊಳ್ಳಲಾಗುತ್ತಿದೆ.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಸಾರ್ವಜನಿಕರು ಹಾಗೂ ರಾಮಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಕಾರ್ಯಕ್ರಮದ ನಂತರದ ಭೋಜನ ಪ್ರಸಾದವನ್ನು ಸ್ವೀಕರಿಸಿ ತೆರಳುವಂತೆ ಸ್ವಾಗತ ಸಮಿತಿಯ ಅಧ್ಯಕ್ಷರಾದ ಶ್ರೀ ದೀಪಕ್ ರಾಜಗೋಪಾಲ್ ಹಾಗೂ ಕಾರ್ಯದರ್ಶಿ ಶ್ರೀ ಬಿ.ಇ. ಸುರೇಶ ಅವರು ವಿನಂತಿಸಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
