ಕಲಬುರಗಿ: ಸನಾತನ ಹಿಂದೂ ಧರ್ಮದಲ್ಲಿ ಕುಟುಂಬ ವ್ಯವಸ್ಥೆಗೆ ಅತ್ಯುನ್ನತ ಸ್ಥಾನವಿದ್ದು, ಮಕ್ಕಳಿಗೆ ಬಾಲ್ಯದಿಂದಲೇ ನೈತಿಕ ಹಾಗೂ ಧಾರ್ಮಿಕ ಶಿಕ್ಷಣ ನೀಡುವುದರ ಮೂಲಕ ಆದರ್ಶ ಕುಟುಂಬಗಳ ನಿರ್ಮಾಣ ಮಾಡುವುದು ಇಂದಿನ ತುರ್ತು ಅವಶ್ಯಕತೆಯಾಗಿದೆ ಎಂದು ಮಣಿಪಾಲ ಸಮೂಹ ಶಿಕ್ಷಣ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ಅರ್ಪಿತಾ ಶೆಟ್ಟಿ ಅಭಿಪ್ರಾಯಪಟ್ಟರು.
ನಗರದ ಐತಿಹಾಸಿಕ ಕೋಟೆಯ ಮುಂಭಾಗದಲ್ಲಿ ಪ್ರತಿಷ್ಠಾಪಿಸಲಾದ ಹಿಂದೂ ಮಹಾಗಣಪತಿ ವೇದಿಕೆಯಲ್ಲಿ ಆಯೋಜಿಸಿದ್ದ ‘ಆದರ್ಶ ಹಿಂದೂ ಕುಟುಂಬ’ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ದಿಕ್ಕೂಚಿ ಭಾಷಣಕಾರರಾಗಿ ಮಾತನಾಡಿದರು.
ಸಂಸ್ಕಾರ ಮತ್ತು ತಾಯಿಯ ಪಾತ್ರ:
ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಅತ್ಯುನ್ನತ ಸ್ಥಾನಮಾನ ನೀಡಲಾಗಿದೆ. ಕುಟುಂಬದ ಸಂಸ್ಕಾರವನ್ನು ಬೆಳೆಸುವ ಹಾಗೂ ಮಕ್ಕಳ ವ್ಯಕ್ತಿತ್ವವನ್ನು ರೂಪಿಸುವಲ್ಲಿ ತಾಯಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಅವರು ತಿಳಿಸಿದರು. ಪ್ರತಿಯೊಬ್ಬ ತಾಯಿಯಲ್ಲೂ ಜೀಜಾಬಾಯಿ, ಲಕ್ಷ್ಮಿ ಮತ್ತು ಶಕ್ತಿಯ ಸ್ವರೂಪ ಅಡಗಿದೆ. ಮಕ್ಕಳಿಗೆ ಉತ್ತಮ ಮೌಲ್ಯಗಳು, ತ್ಯಾಗ, ಸಹಿಷ್ಣುತೆ, ಪರಸ್ಪರ ಗೌರವ ಹಾಗೂ ಕುಟುಂಬದ ಬಗ್ಗೆ ಕಾಳಜಿ ಬೆಳೆಸುವುದು ಪೋಷಕರ ಪ್ರಮುಖ ಕರ್ತವ್ಯ ಎಂದರು.
ಮುಂದುವರಿದು ಮಾತನಾಡುತ್ತಾ, ನಮ್ಮ ಮಕ್ಕಳು ಕೇವಲ ಕುಟುಂಬಕ್ಕಷ್ಟೇ ಸೀಮಿತವಾಗದೆ, ಹಿಂದೂ ಸಮಾಜವನ್ನು ಕಾಪಾಡುವ ಛತ್ರಪತಿ ಶಿವಾಜಿ ಮಹಾರಾಜರಂತಹ ಆದರ್ಶ ವ್ಯಕ್ತಿಗಳಾಗಿ ಬೆಳೆಯಬೇಕು ಎಂದು ಕರೆ ನೀಡಿದರು. ಹೆಣ್ಣನ್ನು ಭೋಗದ ವಸ್ತುವಾಗಿ ನೋಡುವುದು ನಮ್ಮ ಸಂಸ್ಕೃತಿಯಲ್ಲ, ಆಕೆ ಮಹಾಶಕ್ತಿಯ ಪ್ರತಿರೂಪಳಾಗಿದ್ದು ಸಮಾಜ ನಿರ್ಮಾಣದ ಪ್ರಮುಖ ಶಕ್ತಿಯಾಗಿದ್ದಾಳೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಹಿಂದೂ ಮಹಾಗಣಪತಿ ಸಮಿತಿಯ ಸಹ ಕಾರ್ಯದರ್ಶಿ ಸುಮಂಗಲಾ ಚಕ್ರವರ್ತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಈ ಸಂದರ್ಭದಲ್ಲಿ ಜ್ಯೋತಿ ತೆಗನೂರ, ಅನಿತಾ ಸುಬೇದಾರ್, ವಿಜಯಲಕ್ಷ್ಮೀ ಸಿಂಗೋಡಿ, ಸಿದ್ಧಮ್ಮ ಪಾಟೀಲ್, ಶೈಲಜಾ ತಪಲಿ, ಶ್ವೇತಾ ಪಾಟೀಲ್, ಡಾ. ಮಂಗಲಾ ರುದ್ರವಾಡಿ, ಸರಸ್ವತಿ ಹೆಬ್ಬಾರ್, ಸುಷ್ಮಾ ಭೋಸಗಿ, ಮನಂ ಕುಲಕರ್ಣಿ, ಆರತಿ ತಿವಾರಿ, ಪ್ರೀತಿ ಮಾನಕ, ಮೇಘಾ ದೇಶಮುಖ, ಶ್ರೀದೇವಿ ನವಲದಿ, ಇಂದಿರಾ ರಾಠೋಡ್, ಸ್ವಾತಿ ಮಹಾಗಾಂವ್, ಚಂದ್ರಕಲಾ ಸೇರಿದಂತೆ ಅನೇಕ ಪ್ರಮುಖರು ಉಪಸ್ಥಿತರಿದ್ದರು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
