ಸಾಮಾನ್ಯ ದೃಷ್ಟಿಗೆ ‘ಅಭಿವೃದ್ಧಿ’, ‘ಪ್ರಗತಿ’ ಮತ್ತು ‘ವಿಕಾಸ’ ಮೂರೂ ಪದಗಳು ಒಂದೇ ಎನಿಸಿದರೂ, ದೇಶದ ಆರ್ಥಿಕತೆಯ ಒರೆಗಲ್ಲಿನಲ್ಲಿ ಇವುಗಳ ಅರ್ಥ ಸಂಪೂರ್ಣ ಭಿನ್ನ.
ಕಣ್ಣಿಗೆ ಗೋಚರಿಸುವ ಮೂಲಭೂತ ಸೌಕರ್ಯಗಳಾದ ಹೆದ್ದಾರಿಗಳು, ರೈಲ್ವೆ ಮಾರ್ಗಗಳು, ಬಂದರುಗಳು, ವಿಮಾನ ನಿಲ್ದಾಣಗಳು, ಅಣೆಕಟ್ಟುಗಳು, ಸೇತುವೆಗಳು, ವಿದ್ಯುತ್ ಸ್ಥಾವರಗಳು ಮತ್ತು ದೊಡ್ಡ ಕೈಗಾರಿಕೆಗಳ ನಿರ್ಮಾಣವನ್ನು ‘ಅಭಿವೃದ್ಧಿ’ ಎನ್ನಬಹುದು. ಇದನ್ನು ನಾವು ಕಣ್ಣಿನಿಂದ ಕಾಣಬಹುದು ಮತ್ತು ಸ್ಪರ್ಶಿಸಬಹುದು.
ಇನ್ನು, ಕೇವಲ ಭೌತಿಕ ಸ್ವತ್ತುಗಳಷ್ಟೇ ಅಲ್ಲದೆ, ಸೂಕ್ತ ವಿದ್ಯಾರ್ಹತೆ, ಕೌಶಲ್ಯ ಹಾಗೂ ತರಬೇತಿಯನ್ನು ಪಡೆದ ನುರಿತ ಯುವ ಜನತೆ ಮತ್ತು ಮಾನವ ಸಂಪನ್ಮೂಲವನ್ನು ಹೊಂದುವುದನ್ನು ‘ಪ್ರಗತಿ’ ಎಂದು ಕರೆಯಲಾಗುತ್ತದೆ.
ಆದರೆ, ಕಣ್ಣಿಗೆ ಕಾಣುವ ಸ್ವತ್ತುಗಳು ಹಾಗೂ ಕುಶಲ ಮಾನವ ಸಂಪನ್ಮೂಲದ ಜೊತೆಗೆ, ಪ್ರಾಕೃತಿಕ ಸಂಪತ್ತಿನ ಮೇಲಿನ ಅತಿಯಾದ ಶೋಷಣೆಯನ್ನು ತಡೆದು, ಅವಶ್ಯವಿದ್ದಷ್ಟು ಮಾತ್ರ ಬಳಸಿ, ಸುಸಂಸ್ಕೃತ ನಡವಳಿಕೆ ಹಾಗೂ ಉತ್ತಮ ಗುಣಮಟ್ಟದ ಜೀವನವನ್ನು ಮೈಗೂಡಿಸಿಕೊಂಡು ಸಾಧಿಸುವ ಸಮಗ್ರ ಆರ್ಥಿಕ ಸ್ಥಿರತೆಯೇ ‘ವಿಕಾಸ’.
ಈ ಹಿನ್ನೆಲೆಯಲ್ಲಿ ಇಂದಿನ ಭಾರತೀಯ ಆರ್ಥಿಕತೆ ಹಾಗೂ ಶಿಕ್ಷಣ ವ್ಯವಸ್ಥೆಯನ್ನು ಒಮ್ಮೆ ಅವಲೋಕಿಸಬೇಕಿದೆ.
ಅಂಕಗಳ ಅಬ್ಬರ ಮತ್ತು ವಾಸ್ತವದ ಕೊರತೆ:
ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳ ಮುಖಪುಟ ತುಂಬೆಲ್ಲಾ ನೀಟ್ (NEET) ಹಾಗೂ ವಿಜ್ಞಾನ ವಿಭಾಗದ ಪರೀಕ್ಷೆಗಳಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳ ಜಾಹೀರಾತುಗಳೇರಾಜಿಸುತ್ತವೆ. ಜಿಲ್ಲೆಗೊಂದರಂತೆ ತರಬೇತಿ ಕೇಂದ್ರಗಳು ಅಣಬೆಗಳಂತೆ ಹುಟ್ಟಿಕೊಂಡಿದ್ದು, ಮಧ್ಯಮ ವರ್ಗದ ಪೋಷಕರು ಮಕ್ಕಳನ್ನು ಅಲ್ಲಿಗೆ ಸೇರಿಸಲು ತುದಿಗಾಲಲ್ಲಿ ನಿಂತಿರುವುದನ್ನು ಕಾಣಬಹುದು.
ಇಂದಿನ ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲೂ ನೂರಕ್ಕೆ ನೂರು ಅಂಕಗಳನ್ನು ಗಳಿಸುತ್ತಿದ್ದಾರೆ. ಮೂವತ್ತು ವರ್ಷಗಳ ಹಿಂದಿನ ಕಾಲಕ್ಕೂ ಇಂದಿಗೂ ಮೌಲ್ಯಮಾಪನ ಪದ್ಧತಿಯಲ್ಲಿ ದೊಡ್ಡ ಬದಲಾವಣೆಯಾಗಿದೆ. ಹಿಂದೆ, “ಹಸುವಿಗೆ ಎಷ್ಟು ಕಾಲುಗಳು?” ಎಂಬ ಪ್ರಶ್ನೆಗೆ ಸರಿಯಾಗಿ ‘ನಾಲ್ಕು’ ಎಂದು ಬರೆದರೆ ಮಾತ್ರ ಅೂರ್ಣ ಅಂಕ ಸಿಗುತ್ತಿತ್ತು. ಆದರೆ, ಇಂದಿನ ಹಂತ-ಹಂತದ (Step-by-step) ಮೌಲ್ಯಮಾಪನ ಪದ್ಧತಿಯಲ್ಲಿ, ತಪ್ಪು ಉತ್ತರಿಗೂ ಅಂಕ ನೀಡುವ ಉದಾರ ಧೋರಣೆ ಇದೆ.
ಈ ಸಡಿಲ ಮೌಲ್ಯಮಾಪನದಿಂದಾಗಿ ಎಲ್ಲರಿಗೂ ಅತಿ ಹೆಚ್ಚು ಅಂಕಗಳು ಬರುತ್ತಿವೆ. ಪೋಷಕರೆಲ್ಲರೂ ತಮ್ಮ ಮಕ್ಕಳು ಐಐಟಿ (IIT) ಅಥವಾ ಎಂಬಿಬಿಎಸ್ (MBBS) ಮಾಡಲೇಬೇಕೆಂದು ಹಂಬಲಿಸುತ್ತಿದ್ದಾರೆ. ಆದರೆ ಇದರ ದುಷ್ಪರಿಣಾಮವೆಂದರೆ, ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳಿಗೆ ಮತ್ತು ಕಾಲೇಜುಗಳಿಗೆ ಸಮರ್ಥ ಹಾಗೂ ಬುದ್ಧಿವಂತ ಬೋಧಕ ಸಿಬ್ಬಂದಿಯ ಕೊರತೆ ಎದುರಾಗಿದೆ. ಅಂತಿಮವಾಗಿ ಐಐಟಿ, ಐಐಎಂ ಮುಗಿಸಿ ಹೊರಬರುವ ವಿದ್ಯಾರ್ಥಿಗಳು ಬಹುರಾಷ್ಟ್ರೀಯ ಕಂಪನಿಗಳನ್ನು ಸೇರುತ್ತಾರೆ.
ಸಾಮಾನ್ಯರ ಬದುಕಿಗೆ ಬೇಕಿದೆ ಸರಳ ಆವಿಷ್ಕಾರಗಳು:
ಈ ಎಲ್ಲ ಪ್ರಕ್ರಿಯೆಗಳ ನಡುವೆ, ಸಾಮಾನ್ಯ ವ್ಯಕ್ತಿಯ ದೈನಂದಿನ ಜೀವನವನ್ನು ಸುಲಭವಾಗಿಸುವ ಕನಿಷ್ಠ ವೆಚ್ಚದ ಸರಳ ಸಂಶೋಧನೆಗಳು ನಡೆಯುತ್ತಿಲ್ಲ. ಅತ್ಯಾಧುನಿಕ ಮಿಲಿಟರಿ ಉಪಕರಣಗಳು, ಸಂಕೀರ್ಣ ಸಾಫ್ಟ್ವೇರ್ ಉತ್ಪನ್ನಗಳು ಮತ್ತು ದುಬಾರಿ ಔಷಧಿಗಳು ತಯಾರಾಗುತ್ತಿವೆಯಾದರೂ, ಜನಸಾಮಾನ್ಯನ ಜೀವನಮಟ್ಟ ಸುಧಾರಿಸುವ ಕೈಗೆಟುಕುವ ತಂತ್ರಜ್ಞಾನಗಳು ಮೂಲೆಗುಂಪಾಗಿವೆ.
ಉದಾಹರಣೆಗೆ:
ಬಡಮನೆಯೂ ಕೊಳ್ಳಬಹುದಾದ ಅತ್ಯಂತ ಕಡಿಮೆ ಬೆಲೆಯ ಕುಡಿಯುವ ನೀರಿನ ಶುದ್ಧೀಕರಣ ಯಂತ್ರ.
ಮನೆಗಳ ಬಳಕೆಗೆ ಅನುಕೂಲವಾಗುವ ಅ ಕಡಿಮೆ ವೆಚ್ಚದ ಮಿನಿ ವಾಟರ್ ಟ್ರೀಟ್ಮೆಂಟ್ ಪ್ಲಾಂಟ್.
ಮನೆಯ ಮೇಲ್ಛಾವಣಿಯ ಮೇಲೆಯೇ ಅಳವಡಿಸಬಹುದಾದ ಸಣ್ಣ ಗಾಳಿಂತ್ರ (Windmill).
ಮನೆಯ ತ್ಯಾಜ್ಯವನ್ನು ಸುಲಭವಾಗಿ ಗೊಬ್ಬರವನ್ನಾಗಿ ಪರಿವರ್ತಿಸುವ ಪುಟ್ಟ ಘಟಕ.
ತರಕಾರಿ ತಳ್ಳುಬಂಡಿಯನ್ನು ಸುಲಭವಾಗಿ ಸಾಗಿಸಲು ನೆರವಾಗುವ ಸಣ್ಣ ಮೋಟಾರು ಅಥವಾ ಬಸ್ ಮೇಲ್ಛಾವಣಿಯಲ್ಲಿ ಅಳವಡಿಸಿ ವಿದ್ಯುತ್ ಉತ್ಪಾದಿಸಬಹುದಾದ ಸಣ್ಣ ಟರ್ಬೈನ್.
ಬಿಸಿಲಿನಲ್ಲಿ ರೋಧಿಸುವ ರಸ್ತೆಬದಿ ವ್ಯಾಪಾರಿಗಳಿಗೆ ತಂಪು ನೀಡುವ ‘ಏರ್-ಕೂಲ್ ಛತ್ರಿ’.
ಇಂತಹ ಸಣ್ಣ ಹಾಗೂ ಉಪಯುಕ್ತ ಆವಿಷ್ಕಾರಗಳು ಜನಸಾಮಾನ್ಯರ ಕೈಗೆಟುಕಿದಾಗ ಮಾತ್ರ ಜೀವನದ ಗುಣಮಟ್ಟ ಸುಧಾರಿಸಲು ಸಾಧ್ಯ.
ಕೇವಲ ಹೆಚ್ಚಿನ ಸಂಖ್ಯೆಯಲ್ಲಿ ಐಐಟಿ, ಐಐಎಸ್ಸಿ ಪದವೀಧರರನ್ನು ಹೊಂದುವುದರೊಂದಿಗೆ, ದೇಶದ ಕಟ್ಟಕಡೆಯ ವ್ಯಕ್ತಿಯ ಬದುಕು ಹಸನಾಗುವಂತಹ ಕಡಿಮೆ ವೆಚ್ಚದ ಆವಿಷ್ಕಾರಗಳು ಸೃಷ್ಟಿಯಾದಾಗ ಮಾತ್ರ ನಮ್ಮ ದೇಶವು ನಿಜವಾದ ‘ವಿಕಾಸ’ದ ದಾರಿಯಲ್ಲಿದೆ ಎಂದು ಹೆಮ್ಮೆಯಿಂದ ಹೇಳಬಹುದು.
— ಶಂಭುಲಿಂಗಪ್ಪ ವಿ., ದಾವಣಗೆರೆ
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
