ಮಕ್ಕಳೇ ದೇಶದ ಭವಿಷ್ಯ, ಸಮಾಜದ ಆಶಾಕಿರಣ ಮತ್ತು ನಾಳಿನ ರಾಷ್ಟ್ರ ನಿರ್ಮಾತೃಗಳು. ಪ್ರತಿವರ್ಷ ನವೆಂಬರ್ 14ರಂದು ಆಚರಿಸಲಾಗುವ ಮಕ್ಕಳ ದಿನಾಚರಣೆಯು ಮಕ್ಕಳ ಮೇಲಿನ ಪ್ರೀತಿ, ಕಾಳಜಿ ಮತ್ತು ಅವರ ಹಕ್ಕುಗಳನ್ನು ಸ್ಮರಿಸುವ ಮಹತ್ವದ ಸಂದರ್ಭವಾಗಿದೆ. ಈ ದಿನ ಮಕ್ಕಳಿಗೆ ಶುಭಾಶಯಗಳನ್ನು ಕೋರುವುದರ ಜೊತೆಗೆ ಅವರ ಶಿಕ್ಷಣ, ವ್ಯಕ್ತಿತ್ವ ವಿಕಸನ, ಸ್ವಾತಂತ್ರ್ಯ, ಆಸಕ್ತಿ, ಪ್ರತಿಭೆ ಮತ್ತು ಭವಿಷ್ಯದ ಕುರಿತು ಗಂಭೀರವಾಗಿ ಚಿಂತಿಸುವ ಅಗತ್ಯವೂ ಇದೆ. ಇಂದಿನ ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಯಲ್ಲಿ ಮಕ್ಕಳು ಅಂಕಗಳ ಒತ್ತಡ, ಪೋಷಕರ ನಿರೀಕ್ಷೆಗಳು, ಶಾಲೆಗಳ ಪೈಪೋಟಿ ಮತ್ತು ಡಿಜಿಟಲ್ ತಂತ್ರಜ್ಞಾನದ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮಕ್ಕಳ ಶಿಕ್ಷಣದ ನಿಜವಾದ ಉದ್ದೇಶವೇನು? ಮಕ್ಕಳ ಪ್ರತಿಭೆಯನ್ನು ಗುರುತಿಸುವಲ್ಲಿ ನಮ್ಮ ಶಿಕ್ಷಣ ವ್ಯವಸ್ಥೆ ಯಶಸ್ವಿಯಾಗಿದೆಯೇ? ಮಕ್ಕಳನ್ನು ಬದಲಾಯಿಸುವ ಮೊದಲು ನಮ್ಮ ಶಿಕ್ಷಣ ವ್ಯವಸ್ಥೆಯನ್ನೇ ಬದಲಾಯಿಸಬೇಕೇ? ಎಂಬ ಮಹತ್ವದ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಮಕ್ಕಳ ದಿನಾಚರಣೆಯ ಪ್ರಯುಕ್ತ ಈ ಚಿಂತನಾತ್ಮಕ ಲೇಖನವನ್ನು ಬರೆಯಲಾಗಿದೆ.
ಅಂಕಗಳೇ ಪ್ರತಿಭೆಯ ಮಾನದಂಡವೇ?
ಮಕ್ಕಳ ಶಿಕ್ಷಣದ ಯಶಸ್ಸನ್ನು ಕೇವಲ ಅಂಕಗಳ ಮೂಲಕ ಅಳೆಯಬಹುದೇ? ಹೆಚ್ಚು ಅಂಕ ಗಳಿಸಿದವನೇ ಪ್ರತಿಭಾವಂತ, ಕಡಿಮೆ ಅಂಕ ಪಡೆದವನು ಸಾಮರ್ಥ್ಯವಿಲ್ಲದವನು ಎಂಬ ಮನೋಭಾವ ಎಷ್ಟು ಸರಿ? ಇಂದಿನ ಶಿಕ್ಷಣ ವ್ಯವಸ್ಥೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ, ವಿದ್ಯಾರ್ಥಿಯ ಬೌದ್ಧಿಕ ಸಾಮರ್ಥ್ಯವನ್ನು ಅಳೆಯುವ ಪ್ರಮುಖ ಸಾಧನವಾಗಿ ಅಂಕಗಳು ರೂಪುಗೊಂಡಿರುವುದು ಸ್ಪಷ್ಟವಾಗುತ್ತದೆ. ಹೆಚ್ಚು ಅಂಕ ಪಡೆದವರು ಬುದ್ಧಿವಂತರು, ಕಡಿಮೆ ಅಂಕ ಪಡೆದವರು ಹಿಂದುಳಿದವರು ಎಂಬ ತಪ್ಪು ಕಲ್ಪನೆ ಸಮಾಜದಲ್ಲಿ ಬೇರೂರಿದೆ. ಆದರೆ ಪ್ರತಿಯೊಬ್ಬ ವಿದ್ಯಾರ್ಥಿಯ ಸಾಮರ್ಥ್ಯವನ್ನು ಪರೀಕ್ಷೆಯ ಅಂಕಗಳಿಂದ ಮಾತ್ರ ನಿರ್ಧರಿಸುವುದು ಎಷ್ಟು ಸಮಂಜಸ? ತಂದೆ-ತಾಯಿಯರು ತಾವು ಸಾಧಿಸಲಾಗದ ಗುರಿಗಳನ್ನು ತಮ್ಮ ಮಕ್ಕಳು ಸಾಧಿಸಬೇಕೆಂದು ಬಯಸುವುದು ಸಹಜ. ಆದರೆ ಆ ಬಯಕೆ ಕೆಲವೊಮ್ಮೆ ಮಕ್ಕಳ ಮೇಲೆ ಅತಿಯಾದ ಒತ್ತಡವಾಗಿ ಪರಿಣಮಿಸುತ್ತದೆ. ಮಕ್ಕಳ ಆಸೆ, ಆಕಾಂಕ್ಷೆ, ಆಸಕ್ತಿ, ಅನುಭವ ಮತ್ತು ಪ್ರತಿಭೆಯನ್ನು ಅರ್ಥಮಾಡಿಕೊಳ್ಳದೆ ಹೆಚ್ಚಿನ ಅಂಕ ಗಳಿಸಬೇಕೆಂಬ ನಿರೀಕ್ಷೆಯನ್ನು ಅವರ ಮೇಲೆ ಹೇರುವುದು ಸರಿಯಲ್ಲ. ಕೆಲವು ಶಾಲೆಗಳಲ್ಲಿ ಹೆಚ್ಚುವರಿ ತರಗತಿಗಳು, ನಿರಂತರ ಮನೆಕೆಲಸಗಳು ಮತ್ತು ಪರೀಕ್ಷಾ ಸಿದ್ಧತೆಯ ಹೆಸರಿನಲ್ಲಿ ಮಕ್ಕಳಿಗೆ ವಿಶ್ರಾಂತಿಗೂ ಅವಕಾಶವಿಲ್ಲದ ವಾತಾವರಣ ನಿರ್ಮಾಣವಾಗುತ್ತಿದೆ. ಆಟ, ಪಾಠ, ಕಲೆ, ಸಂಗೀತ ಮತ್ತು ಸೃಜನಶೀಲ ಚಟುವಟಿಕೆಗಳಿಗೆ ದೊರೆಯಬೇಕಾದ ಮಹತ್ವ ಕಡಿಮೆಯಾಗುತ್ತಿದೆ.
ನಾವು ವಿದ್ಯಾರ್ಥಿಗಳಾಗಿದ್ದ ಕಾಲದಲ್ಲಿ ಶಾಲೆಗಳಲ್ಲಿ ಕ್ರೀಡೆ, ಡಂಬಲ್ಸ್, ಲೆಜಿಮ್, ಯೋಗ ಮತ್ತು ಪ್ರಾಣಾಯಾಮದಂತಹ ಚಟುವಟಿಕೆಗಳಿಗೆ ಮಹತ್ವ ನೀಡಲಾಗುತ್ತಿತ್ತು. ಅವು ಕೇವಲ ದೈಹಿಕ ಚಟುವಟಿಕೆಗಳಾಗಿರದೆ, ಶಿಸ್ತು, ಏಕಾಗ್ರತೆ, ಆತ್ಮವಿಶ್ವಾಸ ಮತ್ತು ತಂಡಭಾವವನ್ನು ಬೆಳೆಸುವ ಸಾಧನಗಳಾಗಿದ್ದವು. ಆದರೆ ಇಂದು ಅನೇಕ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದೆ. ಶಿಕ್ಷಕರಿದ್ದರೂ ಅವರಿಗೆ ಸಮರ್ಪಕ ಸಮಯ ಮತ್ತು ಅವಕಾಶ ದೊರೆಯದಿರುವುದು ವಿಷಾದನೀಯ. ಕ್ರೀಡಾ ಅವಧಿಯಲ್ಲಿಯೂ ಹೆಚ್ಚುವರಿ ತರಗತಿಗಳನ್ನು ನಡೆಸುವ ಪ್ರವೃತ್ತಿ ಕಂಡುಬರುತ್ತಿದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಕ್ರೀಡೆ ಅತ್ಯುತ್ತಮ ಸಾಧನವಾಗಿರುವಾಗ, ಮಕ್ಕಳನ್ನು ಕ್ರೀಡಾಂಗಣದಿಂದ ದೂರವಿಡುವುದು ಆರೋಗ್ಯಕರ ಬೆಳವಣಿಗೆಯ ಲಕ್ಷಣವಲ್ಲ.
ಮತ್ತೊಂದೆಡೆ, ಪೋಷಕರು ತಮ್ಮ ಪ್ರತಿಷ್ಠೆಗಾಗಿ ಹೆಚ್ಚಿನ ಶುಲ್ಕ ಪಾವತಿಸಿ ಮಕ್ಕಳನ್ನು ಪ್ರತಿಷ್ಠಿತ ಶಾಲೆಗಳಿಗೆ ಸೇರಿಸುತ್ತಾರೆ. ಆದರೆ ದುಬಾರಿ ಶಿಕ್ಷಣ ಪಡೆಯುವುದೇ ಜೀವನಕ್ಕೆ ಬೇಕಾದ ಪ್ರಾಯೋಗಿಕ ಜ್ಞಾನವನ್ನು ನೀಡುತ್ತದೆ ಎಂಬ ಭರವಸೆ ಇಲ್ಲ. ತರಗತಿಯಲ್ಲಿ ಗಣಿತದ ಲೆಕ್ಕಗಳನ್ನು ಸರಿಯಾಗಿ ಮಾಡುವ ವಿದ್ಯಾರ್ಥಿಯೊಬ್ಬ ಮಾರುಕಟ್ಟೆಗೆ ಹೋದಾಗ ತರಕಾರಿಗಳ ಬೆಲೆ ಲೆಕ್ಕಹಾಕಲು ತಡಕಾಡುವ ಪರಿಸ್ಥಿತಿ ಎದುರಾಗುತ್ತದೆ. ಪುಸ್ತಕದಲ್ಲಿ ಕಲಿತ ಜ್ಞಾನವನ್ನು ನೈಜ ಜೀವನದಲ್ಲಿ ಅನ್ವಯಿಸಲು ಸಾಧ್ಯವಾಗದಿದ್ದರೆ ಆ ಕಲಿಕೆಯ ಉದ್ದೇಶವೇನು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ವಿಭಿನ್ನ. ಅವರ ಆಲೋಚನಾ ಕ್ರಮ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ, ಅಭಿವ್ಯಕ್ತಿ, ಸೃಜನಶೀಲತೆ ಮತ್ತು ಕಾರ್ಯಕ್ಷಮತೆ ಒಂದೇ ರೀತಿಯಾಗಿರುವುದಿಲ್ಲ. ಹೀಗಿರುವಾಗ ಎಲ್ಲ ಮಕ್ಕಳನ್ನೂ ಒಂದೇ ಮಾನದಂಡದಲ್ಲಿ ಅಳೆಯುವುದು ಅಥವಾ ಪರಸ್ಪರ ಹೋಲಿಸುವುದು ಸರಿಯಲ್ಲ. ಮಕ್ಕಳನ್ನು ಅಂಕಗಳನ್ನು ಹೊತ್ತು ತರುವ ಮೂಟೆಗಳಂತೆ ಕಾಣದೆ, ಭವಿಷ್ಯದ ಸಮಾಜವನ್ನು ನಿರ್ಮಿಸುವ ಸುಂದರ ಹೂವುಗಳಂತೆ ಕಾಣುವ ಮನೋಭಾವ ನಮ್ಮಲ್ಲಿ ಬೆಳೆಯಬೇಕು.
ಶಿಕ್ಷಕರು ಮತ್ತು ಪೋಷಕರ ಜವಾಬ್ದಾರಿ
ಸುಂದರ ಸಮಾಜ ನಿರ್ಮಾಣದಲ್ಲಿ ಪೋಷಕರ ಪಾತ್ರ ಮೊದಲನೆಯದಾದರೆ, ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಶಿಕ್ಷಕರು ಕೇವಲ ಪಠ್ಯಪುಸ್ತಕದ ವಿಷಯಗಳನ್ನು ಬೋಧಿಸುವವರಲ್ಲ; ಅವರು ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವ ಭವಿಷ್ಯದ ನಿರ್ಮಾತೃಗಳು. ಮಕ್ಕಳು ಕೆಲವೊಮ್ಮೆ ತಂದೆ-ತಾಯಿಯ ಮಾತುಗಳನ್ನು ನಿರ್ಲಕ್ಷಿಸಬಹುದು. ಆದರೆ ಶಿಕ್ಷಕರ ಮಾತು, ನಡೆ-ನುಡಿ ಮತ್ತು ಮಾರ್ಗದರ್ಶನ ಅವರ ಮನಸ್ಸಿನ ಮೇಲೆ ದೀರ್ಘಕಾಲದ ಪ್ರಭಾವ ಬೀರುತ್ತದೆ. ಪ್ರತಿಯೊಂದು ಮಗುವಿನ ಆಸಕ್ತಿ, ಸಾಮರ್ಥ್ಯ ಮತ್ತು ಕಲಿಕೆಯ ಸ್ವಭಾವವನ್ನು ಗುರುತಿಸಿ ಅದಕ್ಕೆ ಅನುಗುಣವಾಗಿ ಬೋಧಿಸುವುದು ಶಿಕ್ಷಕರ ಕರ್ತವ್ಯ. ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ, ತಾರ್ಕಿಕ ಚಿಂತನೆ, ಕಲ್ಪನಾಶಕ್ತಿ, ನಿರ್ಧಾರ ಸಾಮರ್ಥ್ಯ, ಅಭಿವ್ಯಕ್ತಿ ಕೌಶಲ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬೆಳೆಸಬೇಕು. ವಿದ್ಯಾರ್ಥಿಗಳು ತಪ್ಪು ಮಾಡಿದಾಗ ಅವರನ್ನು ಅವಮಾನಿಸುವುದು, ಇತರರ ಮುಂದೆ ಹೀಯಾಳಿಸುವುದು ಅಥವಾ ಮಾನಸಿಕವಾಗಿ ಕುಗ್ಗಿಸುವುದು ಸರಿಯಲ್ಲ. ತಪ್ಪುಗಳನ್ನು ತಿದ್ದಿಕೊಳ್ಳಲು ಪ್ರೀತಿ, ಸಹನೆ ಮತ್ತು ಪ್ರೋತ್ಸಾಹದ ಮೂಲಕ ಅವಕಾಶ ಕಲ್ಪಿಸಬೇಕು. ಜಾತಿ, ಧರ್ಮ, ಭಾಷೆ ಮತ್ತು ಆರ್ಥಿಕ ಸ್ಥಿತಿಯ ಭೇದವಿಲ್ಲದೆ ಎಲ್ಲ ವಿದ್ಯಾರ್ಥಿಗಳನ್ನೂ ಸಮಾನವಾಗಿ ಕಾಣಬೇಕು.
ಇದೇ ರೀತಿ ಪೋಷಕರ ಜವಾಬ್ದಾರಿಯೂ ಕಡಿಮೆಯಿಲ್ಲ. ತಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಸಿ ಮಾನಸಿಕ ಒತ್ತಡಕ್ಕೆ ಒಳಪಡಿಸುವುದನ್ನು ನಿಲ್ಲಿಸಬೇಕು. ಮಗುವಿನಲ್ಲಿರುವ ವಿಶೇಷ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಗುರುತಿಸಿ ಅದಕ್ಕೆ ಪ್ರೋತ್ಸಾಹ ನೀಡಬೇಕು. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು ಎಂಬ ಮಾತಿನಂತೆ ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಮಾನವೀಯತೆ, ಪ್ರಾಮಾಣಿಕತೆ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸಬೇಕು. ಮಕ್ಕಳು ತಂದೆ-ತಾಯಿಯ ನಡೆ-ನುಡಿ, ವರ್ತನೆ ಮತ್ತು ಅಭ್ಯಾಸಗಳನ್ನು ಸೂಕ್ಷ್ಮವಾಗಿ ಗಮನಿಸಿ ಅನುಸರಿಸುತ್ತಾರೆ. ಆದ್ದರಿಂದ ಪೋಷಕರು ಮಕ್ಕಳ ಮುಂದೆ ಸೌಜನ್ಯ, ಸಹನೆ ಮತ್ತು ಪರಸ್ಪರ ಗೌರವದಿಂದ ವರ್ತಿಸಬೇಕು. ಭಾರತದ ಇತಿಹಾಸ, ಸಂಸ್ಕೃತಿ, ಮಹಾನ್ ವ್ಯಕ್ತಿಗಳ ಜೀವನ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಮಹನೀಯರ ಆದರ್ಶಗಳನ್ನು ಮಕ್ಕಳಿಗೆ ಪರಿಚಯಿಸಬೇಕು. ಅವರೊಂದಿಗೆ ಸಮಯ ಕಳೆಯಬೇಕು, ಸಮಸ್ಯೆಗಳನ್ನು ಆಲಿಸಬೇಕು ಮತ್ತು ಅವರ ಕನಸುಗಳಿಗೆ ಬೆಂಬಲ ನೀಡಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಪ್ರೀತಿ, ಭದ್ರತೆ, ಸ್ವಾತಂತ್ರ್ಯ ಮತ್ತು ಆತ್ಮವಿಶ್ವಾಸ ನೀಡುವುದು ಪೋಷಕರು ನೀಡಬಹುದಾದ ಅತ್ಯಮೂಲ್ಯ ಕೊಡುಗೆಯಾಗಿದೆ.
ಮಕ್ಕಳು ನಿನ್ನೆಗಿಂತ ಇಂದು ಎಷ್ಟು ಉತ್ತಮವಾಗಿ ಬೆಳೆಯುತ್ತಿದ್ದಾರೆ ಎಂಬುದನ್ನು ಗಮನಿಸುವ ಮನೋಭಾವ ಪೋಷಕರಲ್ಲಿ ಮತ್ತು ಶಿಕ್ಷಕರಲ್ಲಿ ಬೆಳೆದುಬರಬೇಕು. ಇತರರ ಮಕ್ಕಳೊಂದಿಗೆ ಹೋಲಿಸುವ ಬದಲು ತಮ್ಮ ಮಕ್ಕಳ ಪ್ರಗತಿಯನ್ನು ಗುರುತಿಸಿ ಪ್ರೋತ್ಸಾಹಿಸುವುದು ಅತ್ಯಂತ ಮುಖ್ಯ.
ಡಿಜಿಟಲ್ ಯುಗದ ಶಿಕ್ಷಣ ಮತ್ತು ಹೊಸ ಸವಾಲುಗಳು
ಇಂದು ನಾವು ಕೃತಕ ಬುದ್ಧಿಮತ್ತೆ, ಡಿಜಿಟಲ್ ತಂತ್ರಜ್ಞಾನ ಮತ್ತು ಮಾಹಿತಿಯ ಸ್ಫೋಟದ ಯುಗದಲ್ಲಿ ಬದುಕುತ್ತಿದ್ದೇವೆ. ಮೊಬೈಲ್, ಇಂಟರ್ನೆಟ್ ಮತ್ತು ವಿವಿಧ ಡಿಜಿಟಲ್ ಸಾಧನಗಳು ಮಕ್ಕಳ ಕಲಿಕೆಗೆ ಅನೇಕ ಹೊಸ ಅವಕಾಶಗಳನ್ನು ತೆರೆದಿವೆ. ಚಾಟ್ಜಿಪಿಟಿಯಂತಹ ಕೃತಕ ಬುದ್ಧಿಮತ್ತೆಯ ಸಾಧನಗಳು ಮಾಹಿತಿ ಪಡೆಯಲು, ವಿಷಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಹೊಸ ಕೌಶಲಗಳನ್ನು ಕಲಿಯಲು ನೆರವಾಗುತ್ತಿವೆ. ಆದರೆ ಅವುಗಳ ಬಳಕೆಗೆ ಸೂಕ್ತ ಮಿತಿಗಳು ಮತ್ತು ಮಾರ್ಗದರ್ಶನ ಅತ್ಯಗತ್ಯ. ಕೋವಿಡ್ ಕಾಲಘಟ್ಟದಲ್ಲಿ ಶಾಲೆಗಳು ಮುಚ್ಚಿದಾಗ ಆನ್ಲೈನ್ ಶಿಕ್ಷಣ ಅನಿವಾರ್ಯವಾಗಿತ್ತು. ಆ ಸಂದರ್ಭದಲ್ಲಿ ಮೊಬೈಲ್ ಮತ್ತು ಡಿಜಿಟಲ್ ಸಾಧನಗಳು ಶಿಕ್ಷಣ ಮುಂದುವರಿಸಲು ಸಹಕಾರಿಯಾದವು. ಆದರೆ ಪರಿಸ್ಥಿತಿ ಸಹಜವಾದ ನಂತರವೂ ಕೆಲವು ಶಾಲೆಗಳಲ್ಲಿ ಮನೆಕೆಲಸ, ಸೂಚನೆಗಳು ಮತ್ತು ಕಲಿಕಾ ಚಟುವಟಿಕೆಗಳ ಹೆಸರಿನಲ್ಲಿ ಮೊಬೈಲ್ ಬಳಕೆ ಹೆಚ್ಚುತ್ತಿರುವುದು ಗಮನಾರ್ಹ. ಮನೆಕೆಲಸದ ನೆಪದಲ್ಲಿ ಮಕ್ಕಳು ಪೋಷಕರ ಮೊಬೈಲ್ ಪಡೆದು ಗಂಟೆಗಟ್ಟಲೆ ಅದರಲ್ಲಿ ಸಮಯ ಕಳೆಯುವ ಸಾಧ್ಯತೆ ಇದೆ. ಹೀಗಾಗಿ ಅನಿವಾರ್ಯ ಸಂದರ್ಭಗಳನ್ನು ಹೊರತುಪಡಿಸಿ, ಶಾಲಾ ಸೂಚನೆಗಳು ಮತ್ತು ಮನೆಕೆಲಸಗಳಿಗೆ ಮೊಬೈಲ್ ಬಳಕೆಯನ್ನು ಮಿತಿಗೊಳಿಸುವ ಅಗತ್ಯವಿದೆ. ಎಲ್ಲವನ್ನೂ ಮೊಬೈಲ್ ಮೂಲಕವೇ ನಿರ್ವಹಿಸುವುದಾದರೆ ಶಾಲೆಯ ನೇರ ಕಲಿಕಾ ವಾತಾವರಣದ ಮಹತ್ವವೇನು ಎಂಬ ಪ್ರಶ್ನೆಯೂ ಎದುರಾಗುತ್ತದೆ.
ಮೊಬೈಲ್ನ ಅತಿಯಾದ ಬಳಕೆ ಮಕ್ಕಳ ಏಕಾಗ್ರತೆ, ಓದುವ ಅಭ್ಯಾಸ, ನೇರ ಸಂವಹನ ಮತ್ತು ದೈಹಿಕ ಚಟುವಟಿಕೆಗಳ ಮೇಲೆ ಪರಿಣಾಮ ಬೀರಬಹುದು. ಪುಸ್ತಕ ಓದುವ ಅಭ್ಯಾಸವು ಮಕ್ಕಳ ಶಬ್ದಸಂಪತ್ತು, ಕಲ್ಪನಾಶಕ್ತಿ, ಭಾಷಾ ಸಾಮರ್ಥ್ಯ ಮತ್ತು ಆಲೋಚನಾ ಶಕ್ತಿಯನ್ನು ವೃದ್ಧಿಸುತ್ತದೆ. ಆದ್ದರಿಂದ ಡಿಜಿಟಲ್ ಕಲಿಕೆಯ ಜೊತೆಗೆ ಪುಸ್ತಕ ಓದುವ ಅಭ್ಯಾಸಕ್ಕೂ ಆದ್ಯತೆ ನೀಡಬೇಕು. ತಂತ್ರಜ್ಞಾನವು ಶಿಕ್ಷಕರಿಗೆ ಪರ್ಯಾಯವಾಗಬಾರದು; ಬದಲಾಗಿ ಬೋಧನೆ ಮತ್ತು ಕಲಿಕೆಯನ್ನು ಪರಿಣಾಮಕಾರಿಯಾಗಿಸುವ ಸಹಾಯಕ ಸಾಧನವಾಗಬೇಕು. ಮಕ್ಕಳಿಗೆ ತಂತ್ರಜ್ಞಾನವನ್ನು ಹೇಗೆ ಬಳಸಬೇಕು ಎಂಬುದನ್ನು ಕಲಿಸುವುದರ ಜೊತೆಗೆ ಅದನ್ನು ಯಾವಾಗ ಮತ್ತು ಎಷ್ಟು ಬಳಸಬೇಕು ಎಂಬ ಅರಿವನ್ನೂ ಮೂಡಿಸಬೇಕು. ಡಿಜಿಟಲ್ ಜ್ಞಾನ ಮತ್ತು ಮಾನವೀಯ ಮೌಲ್ಯಗಳ ಸಮನ್ವಯವೇ ಭವಿಷ್ಯದ ಶಿಕ್ಷಣದ ಪ್ರಮುಖ ಆಶಯವಾಗಬೇಕು.
ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಸಮಗ್ರ ಬೆಳವಣಿಗೆ
ರಾಷ್ಟ್ರೀಯ ಶಿಕ್ಷಣ ನೀತಿ 2020 ಮಕ್ಕಳ ಸಮಗ್ರ ಬೆಳವಣಿಗೆ, ಅನುಭವಾಧಾರಿತ ಕಲಿಕೆ, ವಿಮರ್ಶಾತ್ಮಕ ಚಿಂತನೆ, ಸೃಜನಶೀಲತೆ, ಕೌಶಲಾಧಾರಿತ ಶಿಕ್ಷಣ ಮತ್ತು ಬಹುಶಿಸ್ತೀಯ ಕಲಿಕೆಗೆ ಮಹತ್ವ ನೀಡಿದೆ. ಈ ಆಶಯಗಳನ್ನು ಶಾಲಾ ಹಂತದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು ಇಂದಿನ ಅಗತ್ಯವಾಗಿದೆ. ಪಠ್ಯಪುಸ್ತಕ ಮತ್ತು ಪರೀಕ್ಷೆಗಳ ಜೊತೆಗೆ ಕ್ರೀಡೆ, ಕಲೆ, ಸಂಗೀತ, ನಾಟಕ, ವೃತ್ತಿಪರ ಕೌಶಲಗಳು, ಪರಿಸರ ಚಟುವಟಿಕೆಗಳು ಮತ್ತು ಜೀವನಾನುಭವಗಳಿಗೂ ಸೂಕ್ತ ಸ್ಥಾನ ದೊರೆಯಬೇಕು. ಮಕ್ಕಳು ಕೇವಲ ವಿಷಯಗಳನ್ನು ಕಂಠಪಾಠ ಮಾಡುವುದಕ್ಕಿಂತ ಅವುಗಳನ್ನು ಅರ್ಥಮಾಡಿಕೊಂಡು ನೈಜ ಜೀವನದಲ್ಲಿ ಅನ್ವಯಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಗ್ರಾಮೀಣ ಮತ್ತು ನಗರ ಪ್ರದೇಶಗಳ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಹಾಗೂ ಸಮಾನ ಅವಕಾಶಗಳು ದೊರೆಯಬೇಕು.
ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯಗಳು ಕೇವಲ ದಾಖಲೆಗಳಿಗೆ ಸೀಮಿತವಾಗದೆ ತರಗತಿಯ ಕಲಿಕಾ ಅನುಭವದಲ್ಲಿ ಪ್ರತಿಫಲಿಸಬೇಕು. ಇದಕ್ಕಾಗಿ ಶಿಕ್ಷಕರು, ಪೋಷಕರು, ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರದ ನಡುವೆ ಸಮನ್ವಯ ಇರಬೇಕು. ಮಕ್ಕಳ ಮಾನಸಿಕ ಆರೋಗ್ಯ, ಸಂತೋಷ, ನೆಮ್ಮದಿ, ಆತ್ಮವಿಶ್ವಾಸ ಮತ್ತು ಕ್ರಿಯಾಶೀಲತೆಯನ್ನು ಉತ್ತೇಜಿಸುವ ಪಠ್ಯಕ್ರಮ ಹಾಗೂ ಶಾಲಾ ವಾತಾವರಣ ರೂಪುಗೊಳ್ಳಬೇಕು. ಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಮುಂದುವರಿದ ಸಮಾಜ ನಿರ್ಮಿಸುವುದಷ್ಟೇ ಶಿಕ್ಷಣದ ಗುರಿಯಾಗಬಾರದು. ಪ್ರಾಮಾಣಿಕತೆ, ಸಹಾನುಭೂತಿ, ಪರಸ್ಪರ ಗೌರವ, ಸಮಾನತೆ, ಪ್ರಕೃತಿಪ್ರೇಮ ಮತ್ತು ಸಾಮಾಜಿಕ ಜವಾಬ್ದಾರಿಯಂತಹ ಮೌಲ್ಯಗಳನ್ನೂ ಮಕ್ಕಳಲ್ಲಿ ಬೆಳೆಸಬೇಕು. ಇತರರನ್ನು ಗೌರವಿಸುವ, ಹಿರಿಯರನ್ನು ಆದರಿಸುವ, ಪ್ರಕೃತಿಯನ್ನು ಪ್ರೀತಿಸುವ ಮತ್ತು ಸಮಾಜದ ಒಳಿತಿಗಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿಯುತ ನಾಗರಿಕರನ್ನು ರೂಪಿಸುವುದೇ ಶಿಕ್ಷಣದ ನಿಜವಾದ ಉದ್ದೇಶವಾಗಬೇಕು.
ಬದಲಾವಣೆ ಎಲ್ಲಿ ಆರಂಭವಾಗಬೇಕು?
ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ ಎಂದರೆ ಕೇವಲ ಪಠ್ಯಪುಸ್ತಕಗಳನ್ನು ಬದಲಾಯಿಸುವುದು ಅಥವಾ ಪರೀಕ್ಷಾ ವಿಧಾನಗಳನ್ನು ಪರಿಷ್ಕರಿಸುವುದಲ್ಲ. ಅದಕ್ಕಿಂತ ಮುಖ್ಯವಾಗಿ ಮಕ್ಕಳನ್ನು ನೋಡುವ ನಮ್ಮ ದೃಷ್ಟಿಕೋನ ಬದಲಾಗಬೇಕು. ಪ್ರತಿಯೊಂದು ಮಗುವಿನಲ್ಲಿಯೂ ಒಂದು ವಿಶಿಷ್ಟ ಸಾಮರ್ಥ್ಯವಿದೆ ಎಂಬ ನಂಬಿಕೆ ಶಿಕ್ಷಣದ ಕೇಂದ್ರಬಿಂದುವಾಗಬೇಕು.ಶಾಲೆಗಳು ಕೇವಲ ಪಾಠ ಮತ್ತು ಪರೀಕ್ಷೆಗಳ ಕೇಂದ್ರಗಳಾಗದೆ, ಮಕ್ಕಳ ಕನಸುಗಳು ಅರಳುವ, ಪ್ರಶ್ನೆಗಳು ಹುಟ್ಟುವ, ಹೊಸ ಆಲೋಚನೆಗಳು ರೂಪುಗೊಳ್ಳುವ ಮತ್ತು ಪ್ರತಿಭೆಗಳು ವಿಕಸಿಸುವ ಕಲಿಕಾ ಕೇಂದ್ರಗಳಾಗಬೇಕು. ಶಿಕ್ಷಕರು ಮಕ್ಕಳಿಗೆ ಕಲಿಯುವ ಸ್ವಾತಂತ್ರ್ಯ ನೀಡಬೇಕು. ಪೋಷಕರು ಮಕ್ಕಳ ಕನಸುಗಳಿಗೆ ಬೆಂಬಲ ನೀಡಬೇಕು. ಶಿಕ್ಷಣ ಸಂಸ್ಥೆಗಳು ಅವರ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ವಾತಾವರಣ ನಿರ್ಮಿಸಬೇಕು.
ಮಕ್ಕಳ ದಿನಾಚರಣೆಯು ಕೇವಲ ಶುಭಾಶಯ ವಿನಿಮಯದ ದಿನವಾಗಿರದೆ, ಮಕ್ಕಳ ಹಕ್ಕುಗಳು, ಅವರ ಭವಿಷ್ಯ ಮತ್ತು ನಮ್ಮ ಜವಾಬ್ದಾರಿಯನ್ನು ನೆನಪಿಸುವ ದಿನವಾಗಬೇಕು. ಮಕ್ಕಳನ್ನು ನಮ್ಮ ನಿರೀಕ್ಷೆಗಳಿಗೆ ತಕ್ಕಂತೆ ರೂಪಿಸುವ ಪ್ರಯತ್ನಕ್ಕಿಂತ ಅವರ ಕನಸುಗಳಿಗೆ ತಕ್ಕಂತೆ ಬೆಳೆಯಲು ಅವಕಾಶ ನೀಡಬೇಕು. ಶಿಕ್ಷಣದ ನಿಜವಾದ ಯಶಸ್ಸು ಎಷ್ಟು ಮಕ್ಕಳು ಹೆಚ್ಚು ಅಂಕ ಗಳಿಸಿದರು ಎಂಬುದರಲ್ಲಿ ಮಾತ್ರವಿಲ್ಲ; ಎಷ್ಟು ಮಕ್ಕಳು ಸ್ವತಂತ್ರವಾಗಿ ಯೋಚಿಸಲು ಕಲಿತರು, ಎಷ್ಟು ಮಕ್ಕಳು ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯ ಬೆಳೆಸಿಕೊಂಡರು, ಎಷ್ಟು ಮಕ್ಕಳು ತಮ್ಮ ಪ್ರತಿಭೆಯನ್ನು ಗುರುತಿಸಿಕೊಂಡರು ಮತ್ತು ಎಷ್ಟು ಮಕ್ಕಳು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಜವಾಬ್ದಾರಿಯುತ ನಾಗರಿಕರಾದರು ಎಂಬುದರಲ್ಲಿ ಅಡಗಿದೆ.
ಮಕ್ಕಳನ್ನು ಬದಲಾಯಿಸುವ ಮೊದಲು ನಮ್ಮ ಶಿಕ್ಷಣದ ದೃಷ್ಟಿಕೋನವನ್ನು ಬದಲಾಯಿಸೋಣ. ಮಕ್ಕಳಿಗೆ ಕೇವಲ ಭವಿಷ್ಯವನ್ನು ಕಲ್ಪಿಸುವುದಲ್ಲ, ಅವರೇ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸೋಣ.
- ಡಾ. ಶರಭಯ್ಯ ಸ್ವಾಮಿ
ಸಹಾಯಕ ಪ್ರಾಧ್ಯಾಪಕರು
ಚಾಂದ್ ಬೀಬಿ ಮಹಿಳಾ ಶಿಕ್ಷಣ ಮಹಾವಿದ್ಯಾಲಯ, ಕಲಬುರಗಿ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
