ಸಂಸ್ಕಾರಹೀನ ವಿಕೃತಿಗೆ ಸಭ್ಯ ಸಮಾಜದಲ್ಲಿ ಜಾಗವಿಲ್ಲ
ಹುಬ್ಬಳ್ಳಿ: “ಹುಬ್ಬಳ್ಳಿಯಲ್ಲಿ ನೆನ್ನೆ ನಡೆದ ಕಬ್ಬು ಬೆಳೆಗಾರರ ಪ್ರತಿಭಟನೆಯ ಪವಿತ್ರ ವೇದಿಕೆಯನ್ನು ತನ್ನ ವಿಕೃತ ರಾಜಕೀಯ ಅಜೆಂಡಾಕ್ಕೆ ಬಳಸಿಕೊಂಡ ಶಶಿಕಾಂತ ಗುರೂಜಿ ಎಂಬ ಮುಖವಾಡಧಾರಿ, ದೇಶದ ಗೌರವಾನ್ವಿತ ಕೇಂದ್ರ ಸಚಿವ ಶ್ರೀ ಪ್ರಲ್ಹಾದ ಜೋಶಿ ಅವರ ವಿರುದ್ಧ ಬಳಸಿರುವ ಅತ್ಯಂತ ನೀಚ, ಕೀಳುಮಟ್ಟದ ಹಾಗೂ ಗೂಂಡಾ ಸಂಸ್ಕೃತಿಯ ಭಾಷೆ ಇಡೀ ಮಾನವಕುಲವೇ ತಲೆತಗ್ಗಿಸುವಂತಿದೆ” ಎಂದು ಭಾರತೀಯ ಜನತಾ ಪಕ್ಷದ ಧಾರವಾಡ ವಿಭಾಗ ಪ್ರಭಾರಿ ಶ್ರೀ ಜಯತೀರ್ಥ ಕಟ್ಟಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂದು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಶಶಿಕಾಂತ ಗುರೂಜಿ ವರ್ತನೆಯನ್ನು ಕಟುವಾಗಿ ಖಂಡಿಸಿರುವ ಅವರು, “ಬೆವರು ಸುರಿಸಿ ದೇಶಕ್ಕೆ ಅನ್ನ ನೀಡುವ ಸಾತ್ವಿಕ ರೈತರ ಹೋರಾಟದ ಹೆಸರಿನಲ್ಲಿ ಬಂದು, ಇಂತಹ ಸಂಸ್ಕಾರಹೀನ, ಲುಚ್ಚಾ ಭಾಷೆ ಬಳಸುವುದು ಇವರ ವಿಕೃತ ಮನಸ್ಥಿತಿಯನ್ನು ತೋರಿಸುತ್ತದೆ. ಕಾವಿ ಧರಿಸಿದ ತಕ್ಷಣ ಅಥವಾ ‘ಗುರೂಜಿ’ ಎಂದು ಕರೆಯಿಸಿಕೊಂಡ ತಕ್ಷಣ ಸಾರ್ವಜನಿಕವಾಗಿ ಯಾರಿಗೆ ಬೇಕಾದರೂ ಅಸಭ್ಯವಾಗಿ ನಿಂದಿಸುವ ಲೈಸೆನ್ಸ್ ಸಿಗುವುದಿಲ್ಲ. ಇದು ಪ್ರಜಾಪ್ರಭುತ್ವದ ಸಾಂವಿಧಾನಿಕ ವ್ಯವಸ್ಥೆಗೆ ಮಾಡಿದ ದ್ರೋಹ ಹಾಗೂ ಉತ್ತರ ಕರ್ನಾಟಕದ ಘನತೆಯ ಸಂಸ್ಕೃತಿಗೆ ಹಚ್ಚಿದ ಕಪ್ಪುಚುಕ್ಕೆ” ಎಂದು ಆಪಾದಿಸಿದ್ದಾರೆ.

ಗೃಹ ಇಲಾಖೆ ಹಾಗೂ ಪೊಲೀಸರು ಈ ಕೂಡಲೇ ಸುಮ್ಮನೆ ಕೂರದೆ ದೇಶದ ಗೌರವಾನ್ವಿತ ಕೇಂದ್ರ ಸಚಿವರನ್ನು ಸಾರ್ವಜನಿಕವಾಗಿ ನಿಂದಿಸಿದ ಈತನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು, ತಕ್ಷಣವೇ FIR ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿರುವ ಕಟ್ಟಿ. ಕೇವಲ ವೈಯಕ್ತಿಕ ಪ್ರಚಾರ ಮತ್ತು ಬೂಟಾಟಿಕೆಯ ನಾಯಕತ್ವಕ್ಕಾಗಿ ಸಾರ್ವಜನಿಕವಾಗಿ ಇಷ್ಟೊಂದು ಹದ್ದುಮೀರಿ ವರ್ತಿಸುವ ಇಂತಹ ವ್ಯಕ್ತಿಗಳನ್ನು ಸಭ್ಯ ಸಮಾಜದಿಂದ ಬಹಿಷ್ಕರಿಸಬೇಕು ಅಲ್ಲದೇ, ಪವಿತ್ರವಾದ ರೈತರ ಹೋರಾಟವನ್ನು ವೈಯಕ್ತಿಕ ದ್ವೇಷ ಸಾಧನೆಗೆ ಬಳಸಿಕೊಂಡಿರುವುದು ಖಂಡನೀಯ.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ಈ ಕೂಡಲೇ ಕಾನೂನು ಕ್ರಮ ಜರುಗಿಸಬೇಕು ಎಂದು ಶ್ರೀ ಜಯತೀರ್ಥ ಕಟ್ಟಿ ಅವರು ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
