ಬೆಂಗಳೂರು: ನೃತ್ಯಾರ್ಪಣ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ (ರಿ.) ವತಿಯಿಂದ ಇದೇ ನವೆಂಬರ್ 29ರ ಭಾನುವಾರ ಸಂಜೆ 5:30ಕ್ಕೆ ‘ಸಾ ಶಕ್ತಿ:’ (Sā Śaktiḥ— The one who becomes many) ಎಂಬ ವಿಷಯಾಧಾರಿತ ಏಕವ್ಯಕ್ತಿ ಭರತನಾಟ್ಯ ಪ್ರಸ್ತುತಿಯನ್ನು ಆಯೋಜಿಸಲಾಗಿದೆ.
ನಗರದ ಕನಕಪುರ ಮುಖ್ಯ ರಸ್ತೆಯ ದೊಡ್ಡಕಲ್ಲಸಂದ್ರದಲ್ಲಿರುವ ಶ್ರೀ ಕುಮಾರನ್ ಚಿಲ್ಡ್ರನ್ಸ್ ಅಕಾಡೆಮಿಯ ಆವರಣದಲ್ಲಿರುವ ‘ಶ್ರೀ ಮೀನಾಕ್ಷಿ ರಂಗಮಂಚ ಸಭಾಂಗಣ’ದಲ್ಲಿ ಈ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನೃತ್ಯಗುರು ಶ್ರೀಮತಿ ಹರ್ಷಿತಾ ದೊರೆಸ್ವಾಮಿ ಅವರ ಶಿಷ್ಯೆ ತನ್ಮಯಿ ಚಂದ್ರಶೇಖರ್ ಅವರು ಈ ಏಕವ್ಯಕ್ತಿ ನೃತ್ಯ ರೂಪಕವನ್ನು ಪ್ರಸ್ತುತಪಡಿಸಲಿದ್ದಾರೆ.
ಶತಾವಧಾನಿ ಡಾ. ಆರ್. ಗಣೇಶ್ ಅವರ ರಚನೆಯಲ್ಲಿ ಮೂಡಿಬಂದಿರುವ ಈ ಕೃತಿಗೆ ಶ್ರೀಮತಿ ಹರ್ಷಿತಾ ದೊರೆಸ್ವಾಮಿ ಪರಿಕಲ್ಪನೆ ಮತ್ತು ನೃತ್ಯ ಸಂಯೋಜನೆ ಒದಗಿಸಿದ್ದು, ಶ್ರೀ ಮಹೇಶ್ ಸ್ವಾಮಿ ಸಂಗೀತ ನಿರ್ದೇಶನ ಮಾಡಿದ್ದಾರೆ. ನಟ್ಟುವಾಂಗದಲ್ಲಿ ಶ್ರೀಮತಿ ಹರ್ಷಿತಾ ದೊರೆಸ್ವಾಮಿ, ಗಾಯನದಲ್ಲಿ ಶ್ರೀ ರಘುರಾಮ್ ರಾಜಗೋಪಾಲ್, ಮೃದಂಗದಲ್ಲಿ ಶ್ರೀ ಹರ್ಷ ಸಾಮಗ, ಕೊಳಲಿನಲ್ಲಿ ಶ್ರೀ ಮಹೇಶ್ ಸ್ವಾಮಿ, ವೀಣೆಯಲ್ಲಿ ಶ್ರೀ ಗೋಪಾಲ್ ವೆಂಕಟರಮಣ ಹಾಗೂ ರಿದಮ್ ಪ್ಯಾಡ್ನಲ್ಲಿ ಶ್ರೀ ಡಿ.ವಿ. ಪ್ರಸನ್ನ ಕುಮಾರ್ ಸಾಥ್ ನೀಡಲಿದ್ದಾರೆ.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಶ್ರೀಮತಿ ಶುಭಾ ಧನಂಜಯ್, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೂಚಿಪುಡಿ ನೃತ್ಯಗಾರ್ತಿ ಶ್ರೀಮತಿ ವೈಜಯಂತಿ ಕಾಶಿ ಹಾಗೂ ಬಹುಭಾಷಾ ವಿದ್ವಾಂಸರು ಮತ್ತು ಪ್ರೇಕ್ಷಾದ ಸಂಪಾದಕರಾದ ಶ್ರೀ ಅರ್ಜುನ್ ಭಾರದ್ವಾಜ್ ಆಗಮಿಸಲಿದ್ದಾರೆ.
ನೃತ್ಯಾರ್ಪಣ ಅಕಾಡೆಮಿಯ ಶ್ರೀಮತಿ ಹರ್ಷಿತಾ ದೊರೆಸ್ವಾಮಿ ಮತ್ತು ಶ್ರೀ ಹೆಚ್. ಎಲ್. ಚಂದ್ರಶೇಖರ್ ಕಾರ್ಯಕ್ರಮದ ಆಯೋಜನೆ ವಹಿಸಿದ್ದಾರೆ. ಕಲಾವಿದೆ ತನ್ಮಯಿ ಚಂದ್ರಶೇಖರ್ ಅವರು ಹೆಚ್. ಎಲ್. ಚಂದ್ರಶೇಖರ್ ಅವರ ಪುತ್ರಿ.
ಕುಮಾರಿ ತನ್ಮಯಿ ಚಂದ್ರಶೇಖರ್- ಗುರು ಶ್ರೀಮತಿ ಹರ್ಷಿತಾ ದೊರೆಸ್ವಾಮಿ ಅವರ ಶಿಷ್ಯೆ
ಹನ್ನೆರಡು ವರ್ಷದ ಕುಮಾರಿ ತನ್ಮಯಿ ಚಂದ್ರಶೇಖರ್ ಅವರು ತಮ್ಮ ತಾಯಿ ಹಾಗೂ ಗುರುಗಳಾದ ಶ್ರೀಮತಿ ಹರ್ಷಿತಾ ದೊರೆಸ್ವಾಮಿ ಅವರ ಮಾರ್ಗದರ್ಶನದಲ್ಲಿ ಬಾಲ್ಯದಿಂದಲೇ ವಳವೂರು ಶೈಲಿಯ ಭರತನಾಟ್ಯವನ್ನು ಅಭ್ಯಾಸ ಮಾಡುತ್ತಿದ್ದಾರೆ.
ಎಂಟನೇ ವಯಸ್ಸಿನಲ್ಲೇ ತಮ್ಮ ಭರತನಾಟ್ಯ ರಂಗಪ್ರವೇಶವನ್ನು ಯಶಸ್ವಿಯಾಗಿ ನೆರವೇರಿಸಿ, ಗಣ್ಯರು ಹಾಗೂ ಕಲಾರಸಿಕರಿಂದ ಅಪಾರ ಮೆಚ್ಚುಗೆಗೆ ಪಾತ್ರರಾದರು. ನಿರಂತರ ಸಾಧನೆ ಹಾಗೂ ಅಭ್ಯಾಸದ ಫಲವಾಗಿ ಅತ್ಯಂತ ಕಿರಿಯ ವಯಸ್ಸಿನಲ್ಲೇ ಮಣ್ಣಿನ ಕುಂಭದ ಮೇಲೆ ಭರತನಾಟ್ಯ ಪ್ರದರ್ಶಿಸುವ ವಿಶಿಷ್ಟ ಪೇರಿಣಿ ನೃತ್ಯವನ್ನು ಕರಗತ ಮಾಡಿಕೊಂಡಿರುವ ಪ್ರತಿಭಾವಂತ ನೃತ್ಯಗಾರ್ತಿಯರಲ್ಲಿ ಇವರು ಒಬ್ಬರು.
ಭಾರತ ಸರ್ಕಾರದ ಸಿ.ಸಿ.ಆರ್.ಟಿ. (CCRT) ಕಿರಿಯ ವಿದ್ಯಾರ್ಥಿವೇತನಕ್ಕೆ ಭಾಜನರಾಗಿರುವ ಇವರು, ಯುನೆಸ್ಕೋ (UNESCO) ಸಾಂಸ್ಕೃತಿಕ ಅಂಗಸಂಸ್ಥೆಯಾದ ಅಂತರರಾಷ್ಟ್ರೀಯ ನೃತ್ಯ ಮಂಡಳಿ (CID) ಯ ಸದಸ್ಯೆಯೂ ಆಗಿದ್ದಾರೆ.
ಕುಮಾರಿ ತನ್ಮಯಿ ಅವರು ದೇಶದ ವಿವಿಧ ಪ್ರತಿಷ್ಠಿತ ವೇದಿಕೆಗಳಲ್ಲಿ ತಮ್ಮ ಭರತನಾಟ್ಯ ಪ್ರದರ್ಶನಗಳ ಮೂಲಕ ಅಪಾರ ಪ್ರಶಂಸೆಯನ್ನು ಗಳಿಸಿದ್ದಾರೆ. ಪ್ರಮುಖವಾಗಿ ಚಿನ್ನ ಕಲಾನಾದಂ, ಕನಸು ಡ್ಯಾನ್ಸ್ ಫೆಸ್ಟಿವಲ್, ನಿನಾದ ನೃತ್ಯೋತ್ಸವ, ಮಂಗಳೂರಿನ ಅಂಕುರ ಡ್ಯಾನ್ಸ್ ಫೆಸ್ಟಿವಲ್, ಚೆನ್ನೈನ ನಂಗನಲ್ಲೂರು ಸಭಾದ ಮಾರ್ಗಳಿ ವಾರ್ಷಿಕ ನೃತ್ಯೋತ್ಸವ (2024ರ ಅತ್ಯುತ್ತಮ ಕಲಾವಿದೆ ಪ್ರಶಸ್ತಿ), ತಿರುವನಂತಪುರದ ಲಲಿತಾಂಬಿಕಾ ಸಭಾದ ಮಾರ್ಗಳಿ ಉತ್ಸವ, ಅರ್ಕ ಕಲಾ ಸಂಭ್ರಮ, ಚಿನ್ನರ ಕಲರವ, ಕೇರಳದ ಗೋಕುಲಂ ಗೋಶಾಲೆ, ಪಲ್ಲವ–2025, ಸಂಕ್ರಮಣ–24, ನೃತ್ಯಾರ್ಪಣ ನೃತ್ಯೋತ್ಸವ, ಮೈಸೂರಿನ ಕಲೆಮನೆ ಉತ್ಸವ, ನವದೆಹಲಿಯ ಭರತಮುನಿ ಉತ್ಸವ, ಉಡುಪಿಯ ಶ್ರೀಕೃಷ್ಣ ಮಠದ ಅಯೋಧ್ಯಾಗಮನ ಚರಿತಂ ರಾಜಾಂಗಣ, ಹೊಸೂರಿನ ನಾಟ್ಯಾಂಜಲಿ, ಕಾದಂಬರಿ ಉತ್ಸವ– ಕಾದಂಬರಿ ಕಲಾಕ್ಷೇತ್ರ, ಬಾಲ ನರ್ತನಂ, ಡ್ಯಾನ್ಸ್ ಜಾತ್ರೆ, ಮೇಡೈ– ಕೋರಮಂಗಲ, ಶಾಂಡಿಲ್ಯ ಶಾಸ್ತ್ರೀಯ ನೃತ್ಯೋತ್ಸವ, ನಾಟ್ಯ ವೈಭವಂ ಹಾಗೂ ಹಾಸನಾಂಬ ನೃತ್ಯ ವೈಭವ ಮೊದಲಾದ ವೇದಿಕೆಗಳಲ್ಲಿ ಮನೋಜ್ಞ ಪ್ರದರ್ಶನಗಳನ್ನು ನೀಡಿದ್ದಾರೆ.
ಇದಲ್ಲದೆ, ಪ್ರತಿವರ್ಷ ನವರಾತ್ರಿ ಹಾಗೂ ಮಹಾಶಿವರಾತ್ರಿ ಉತ್ಸವಗಳ ಅಂಗವಾಗಿ ವಿವಿಧ ದೇವಾಲಯಗಳಲ್ಲಿ ನೃತ್ಯ ಸೇವೆ ಸಲ್ಲಿಸುತ್ತಿದ್ದಾರೆ.
ಕುಮಾರಿ ತನ್ಮಯಿ ಅವರು ತಮ್ಮ ನೃತ್ಯ ಪ್ರತಿಭೆಗೆ ಅನೇಕ ರಾಜ್ಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವುಗಳಲ್ಲಿ ಪ್ರಮುಖವಾದವು:
- ಮಲೇಷ್ಯಾ ಅಂತರರಾಷ್ಟ್ರೀಯ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ.
- ರಷ್ಯಾದ ಮಾಸ್ಕೋ ಅಂತರರಾಷ್ಟ್ರೀಯ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ.
- ಓಜಸ್ ರಾಷ್ಟ್ರೀಯ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ.
- ತರಂಗಂ ಅಂತರರಾಷ್ಟ್ರೀಯ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ.
- ಶುಕ್ರ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಹಾಗೂ “ಶುಕ್ರ ಬಾಲಸಿರಿ” ಪ್ರಶಸ್ತಿ.
- ಡ್ಯಾನ್ಸ್ ಜಾತ್ರೆ ರಾಷ್ಟ್ರೀಯ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ.
- ಗೋಪಿನಾಥ ದಾಸ್ ನ್ಯಾಸ ರಾಷ್ಟ್ರೀಯ ಮಟ್ಟದ ಭರತನಾಟ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ.
- ಶ್ರೀಕಂಠೇಶ್ವರ ನೃತ್ಯಾಲಯ ವತಿಯಿಂದ ಶುಕ್ರ ಬಾಲ ಸಿರಿ ಪ್ರಶಸ್ತಿ
- ನಟರಾಜ ನೃತ್ಯ ಅಕಾಡೆಮಿ ನವದೆಹಲಿ ವತಿಯಿಂದ ಇಂಡಿಯಾ ಸ್ಟಾರ್ ಐಕಾನ್ ಪ್ರಶಸ್ತಿ
- ಚೆನ್ನೈನ ನಂಗನಲ್ಲೂರು ಸಭಾ ವತಿಯಿಂದ 2024ರ ಅತ್ಯುತ್ತಮ ಕಲಾವಿದೆ (Best Performer) ಪ್ರಶಸ್ತಿ.
- ಕರ್ನಾಟಕ ಸರ್ಕಾರ ಬಾಲ ಭವನದ ವತಿಯಿಂದ ಕಲಾಶ್ರೀ ಪ್ರಶಸ್ತಿ
ತಮ್ಮ ಪ್ರತಿಭೆ, ಶ್ರದ್ಧೆ ಮತ್ತು ನಿರಂತರ ಸಾಧನೆಯ ಮೂಲಕ ಭರತನಾಟ್ಯ ಕ್ಷೇತ್ರದಲ್ಲಿ ಭರವಸೆಯ ಯುವ ನೃತ್ಯಗಾರ್ತಿಯಾಗಿ ಕುಮಾರಿ ತನ್ಮಯಿ ಚಂದ್ರಶೇಖರ್ ಅವರು ಬೆಳೆಯುತ್ತಿದ್ದಾರೆ.
ವಿದ್ಯಾನಿಕೇತನ್ ಪಬ್ಲಿಕ್ ಶಾಲೆ, ಉಲ್ಲಾಳ ಇಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
