Gen Z ಯ ಡಿಜಿಟಲ್ ಯುಗ ತಂತ್ರಜ್ಞಾನದ ಬಳಕೆ ಹೆಚ್ಚಾಗಿ, ಎಲ್ಲವನ್ನೂ ಕೃತಕಗೊಳಿಸಿದೆ ಎಂದರೆ ಸುಳ್ಳಲ್ಲ. ಸಮಯವಿಲ್ಲದ ಬದುಕು. ನಮ್ಮ ಬಗ್ಗೆ ನಾವೇ ಕಾಳಜಿ ಮರೆತು ದೌಡಾಯಿಸುತ್ತಿರುವ ಒತ್ತಡದ ಬದುಕಿಗೆ ಬೇಕೇ ಬೇಕು ನವಚೈತನ್ಯದ, ಹೊಸ ಉಲ್ಲಾಸ, ಬೆಳಕು ಮತ್ತು ಉರಿದುಂಬಿಸುವ ಕ್ಷಣಗಳು. ಖುಷಿಯಾಗಿ ಇರಬೇಕೆಂದರೆ ಎಲ್ಲವೂ ಸುಂದರವಾಗಿರಬೇಕು. ಬದುಕನ್ನು ನೆಮ್ಮದಿಯಿಂದ ಜೀವಿಸಲು ಹಣವೊಂದೇ ಸಾಲದು. ಚೈತನ್ಯ ತುಂಬುವ ಕೆಲವು ಪ್ರವಾಸಗಳು, ಮಾತುಗಳು, ಸಾಲುಗಳು ಕೂಡ ಬದುಕನ್ನು ಬದಲಾಯಿಸಬಲ್ಲವು; ಬದುಕುವ ರೀತಿಯನ್ನೇ ಬದಲಿಸಬಹುದು.
‘ಇವತ್ತು ಮಾಡ್ತೀನಿ, ಇಲ್ಲ ನಾಳೆ ಮಾಡಿದರೆ ಆಯ್ತು’ ಎಂದು ಮುಂದೂಡುವ ಆಲಸ್ಯ, ಆರೋಗ್ಯದ ಬಗ್ಗೆ ಕಾಳಜಿ ವಹಿಸದಿರುವುದು ಸೇರಿದಂತೆ ಕೆಲವು ಅಂಶಗಳನ್ನು ದೂರವಿಡುವಂತಹ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಲು ಈ ಪುಸ್ತಕ ಪ್ರೇರಣೆ ನೀಡುತ್ತದೆ.
“ನಿತ್ಯ ಚೇತನ್ಯಕ್ಕೆ ಸರಳ ಸೂತ್ರಗಳು” ಪುಸ್ತಕವು ಬದುಕು ಪೂರ್ಣವಾಗಲು ಭರವಸೆ, ಸ್ಫೂರ್ತಿ ಮತ್ತು ನಂಬಿಕೆ ಮಾತ್ರವಲ್ಲದೆ, ಶಾರೀರಿಕ ಶಕ್ತಿ, ಮನಃಶಕ್ತಿ, ಪ್ರೀತಿಯ ಸಂಭಾಷಣೆ, ಸಂಬಂಧಗಳಲ್ಲಿನ ಸಾಮರಸ್ಯ ಹಾಗೂ ಸ್ವಯಂಶಕ್ತಿಯ ವಿಶ್ಲೇಷಣೆಯನ್ನು ಪರಿಚಯಿಸುತ್ತದೆ. ಅಷ್ಟೇ ಅಲ್ಲದೆ, ಮಾನಸಿಕ ಮತ್ತು ಭಾವನಾತ್ಮಕ ಶಕ್ತಿ, ಕಾರ್ಯಸಿದ್ಧತೆ, ಪ್ರೇರಣೆ ಹಾಗೂ ನಗುವಿನ ಶಕ್ತಿಯ ಮಹತ್ವವನ್ನು ತಿಳಿಸುತ್ತದೆ.
ಬದುಕಲು ಅವಶ್ಯಕವಾದ ಗಾಳಿ, ನೀರು, ಉಸಿರಾಟ, ನಗು, ಅನ್ನ, ಚಲನೆಗಳ ಜೊತೆಗೆ ಯೋಚನೆ, ಕೃತಜ್ಞತೆ, ಡಿಜಿಟಲ್ ವಿಶ್ರಾಂತಿ, ಸಂಗೀತವೆಂಬ ಧ್ಯಾನ, ಮನಸ್ಸನ್ನು ಬದಲಾಯಿಸುವ ವಿಧಾನ, ಸಣ್ಣ ಗುರಿಗಳು, ಮಾನಸಿಕ ಮತ್ತು ಭಾವನಾತ್ಮಕ ಶಕ್ತಿ, ಪರಿಶೀಲನೆ ಮತ್ತು ಪ್ರೇರಣೆ, ನಗುವಿನ ಶಕ್ತಿ, ಸೇವೆಯ ಶಕ್ತಿ, ಸ್ವಚ್ಛತೆ, ಹವ್ಯಾಸಗಳಿಗೆ ಸಮಯ ನೀಡುವುದು, ಸಣ್ಣ ವಿರಾಮಗಳ ಮಹತ್ವ ಹಾಗೂ ಕೆಲವೊಂದು ವಿಚಾರಗಳನ್ನು ತಪ್ಪಿಸುವುದರಿಂದ ದೊರೆಯುವ ಶಕ್ತಿಯ ಬಗ್ಗೆ ಸರಳ ಸೂತ್ರಗಳನ್ನು ಈ ಪುಸ್ತಕದಲ್ಲಿ ತಿಳಿಸಲಾಗಿದೆ.
‘ಸರಳ’ ಎನ್ನುವ ಚಿಕ್ಕ ಪದವೇ ಬದುಕಿನಲ್ಲಿ ದೊಡ್ಡ ತಿರುವನ್ನು ಪಡೆದುಕೊಳ್ಳಬಹುದು. “ಹನಿ ಹನಿಗೂಡಿದರೆ ಹಳ್ಳ, ತೆನೆ ತೆನೆಗೂಡಿದರೆ ಬಳ್ಳ” ಎನ್ನುವ ಗಾದೆಯಂತೆ, ಆರೋಗ್ಯ ಮತ್ತು ನೆಮ್ಮದಿಯಿಂದ ಬದುಕಲು ಅನುಸರಿಸುವ ಸಣ್ಣ-ಸರಳ ಸೂತ್ರಗಳು ನಿತ್ಯ ಚೈತನ್ಯಕ್ಕೆ ಜೀವ ತುಂಬುತ್ತವೆ ಎಂಬುದನ್ನು ಈ ಪುಸ್ತಕ ತಿಳಿಸುತ್ತದೆ.
ಬದುಕಿನಲ್ಲಿ ಆಗುವ ಕೆಲವು ಹತಾಶೆ ಮತ್ತು ಬೇಸರವನ್ನು ಮರೆತು ಅಭ್ಯಾಸಗಳ ಜೊತೆಗೆ ರಾಜಿ ಆಗುವುದು ಸುಲಭವೇ..? ಎಲ್ಲವು ಸುಲಭವೇ! ಆದರೆ, ಅದನ್ನು ಕಾರ್ಯ ರೂಪಕ್ಕೆ ತರುವುದು ಮನಸ್ಥಿತಿ. ಆ ಮನಸ್ಥಿತಿಯ ಸುಧಾರಣೆಯ ವಿಸ್ತರವನ್ನು ಅದ್ಭುತವನ್ನು ಈ ಕೃತಿ ಪರಿಚಯ ಮಾಡಿಕೊಡುತ್ತದೆ. ಮನಸು ಚೈತನ್ಯವಾಗಿದ್ದರೆ, ಜಗತ್ತು ಸುಂದರವಾಗಿ ಕಾಣುತ್ತದೆ. ಮನಸ್ಸನ್ನು ಖುಷಿಯಾಗಿ ಇಡಲು ನಾವು ಯಾವ ಅಭ್ಯಾಸ ಮಾಡಿಕೊಂಡರೆ ಖುಷಿಯಾಗಿ ಇರುತ್ತದೆ ಎನ್ನುವ ಭಾವನೆ ಈ ಪುಸ್ತಕ ಓದಿದಾಗ ತಿಳಿದುಕೊಳ್ಳಬಹುದು.
ಪ್ರತಿಯೊಂದು ಪುಟವನ್ನು ತಿರುವಿದಂತೆ, ಪುಸ್ತಕದಲ್ಲಿ ತಿಳಿಸಿರುವ ವಿಚಾರಗಳನ್ನು ಭೌತಿಕವಾಗಿ ಪ್ರಯೋಗಿಸಿದ ಅನುಭವ ಸಿಗುತ್ತದೆ. ಜೀವನವನ್ನು ಸುಂದರವಾಗಿ, ಆರೋಗ್ಯಕರವಾಗಿ ಮತ್ತು ನೆಮ್ಮದಿಯಿಂದ ನಡೆಸಲು ಬೇಕಾದ ಹಲವು ಸರಳ ಮಾರ್ಗಗಳನ್ನು ಈ ಕೃತಿ ಪರಿಚಯಿಸುತ್ತದೆ. ಜೀವನೋತ್ಸಾಹವನ್ನು ತುಂಬುವ ಈ ಸರಳ ಸೂತ್ರಗಳು ಓದುಗರ ಬದುಕಿನಲ್ಲೂ ಸಕಾರಾತ್ಮಕ ಬದಲಾವಣೆಯನ್ನು ತರಬಲ್ಲವು ಎಂಬುದರಲ್ಲಿ ಸಂದೇಹವಿಲ್ಲ.
ಪುಸ್ತಕದ ಹೆಸರು: ನಿತ್ಯ ಚೇತನ್ಯಕ್ಕೆ ಸರಳ ಸೂತ್ರಗಳು
ಲೇಖಕಿ: ಶ್ವೇತಾ ಭಿಡೆ
ಪ್ರಕಾಶಕರು: ಸಾವಣ್ಣ ಎಂಟರ್ಪ್ರೈಸಸ್, ಬೆಂಗಳೂರು
ಬೆಲೆ: ₹180/-
– ವಾಣಿ, ಮೈಸೂರು
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
