ಈಗಿನ ಕಾಲಘಟ್ಟದಲ್ಲಿ ಗಾಂಧೀಜಿ ಮತ್ತು ಅವರು ಪ್ರತಿಪಾದಿಸಿದ ಮೌಲ್ಯಗಳ ಬಗೆಗೆ ಇಂತಹದೊಂದು ಪ್ರಶ್ನೆ ಹಲವರಿಗಾದರೂ ಬಂದಿರಬಹುದು. ಇನ್ನು ಕೆಲವರು ‘ರಾಷ್ಟ್ರಪಿತ’ನ ಬಗೆಗೆ ಇಂತಹ ಪ್ರಶ್ನೆಯಾ ಎಂದು ಹುಬ್ಬೇರಿಸಬಹುದು.
ಗಾಂಧೀಜಿ ನಮ್ಮ ದೇಶದ ಸ್ವಾತಂತ್ರ್ಯದ ಸಂಗ್ರಾಮದ ಮುಂಚೂಣೆಯಲ್ಲಿದ್ದವರು ಎಂದು ಎಲ್ಲರಿಗೂ ಗೊತ್ತಿರುವಂತದೆ. ಅಂದು ಅವರ ಒಂದು ಕರೆಗೆ ದೇಶಕ್ಕೆ ದೇಶವೇ ಹೆಗಲು ಕೊಡುತ್ತಿತ್ತು. ಯಾರಾದರೂ ಕತ್ತಿಯನ್ನೊ, ಚಾಕುವನ್ನೊ ತೋರಿಸಿದರೆ ಹೆದರಿ ದೂರ ಓಡುವವರೇ ಹೆಚ್ಚು. ಅಂತಹುದರಲ್ಲಿ ಶಸ್ತ್ರಾಸ್ತ್ರ ಬಂಡಾರವನ್ನೇ ಹೊಂದಿದ ಕ್ರೂರಿ ಜನರಲ್ ಡೈಯರ್ ನಂತಹವರನ್ನು ಒಳಗೊಂಡಂತಹ ಸೂರ್ಯ ಮುಳಗದ ಸಾಮ್ರಾಜ್ಯವನ್ನು ‘ಉಪವಾಸ’ ಸತ್ಯಾಗ್ರಹ, ಅಹಿಂಸೆ, ನಂತರದಲ್ಲಿ ಅವರ ಊರುಗೋಲಾದ ದೊಣ್ಣೆಯ ಮೂಲಕವೇ ಮಣಿಸಿದ್ದು 19-20ನೆಯ ಶತಮಾನದ ಆಶ್ಚರ್ಯಗಳಲ್ಲೊಂದು. ಸತ್ಯಂವದ ಧರ್ಮಚರ ಎನ್ನುತ್ತಾ, ಸರಳ ಜೀವನ, ಗ್ರಾಮರಾಜ್ಯ, ಹಳ್ಳಿಗಳ ಉದ್ಧಾರದಿಂದ ದೇಶದ ಉನ್ನತಿ, ಯಂತ್ರಕ್ಕಿಂತ ಮನಷ್ಯನ ಕೈಗೆ ಕೆಲಸ, ನೈರ್ಮಲ್ಯ, ಸ್ವದೇಶೀ ಚಿಂತನೆ ಮುಂತಾಗಿ ಬಿತ್ತಿದ ಬೀಜ ಪ್ರಾಯಶಃ ಹೆಚ್ಚು ಅವರು ಬಯಸಿದಂತೆ ಚಿಗುರೊಡಯಲೇ ಇಲ್ಲ. ಸ್ವಾತಂತ್ರ್ಯದ ನಂತರ ಹಲವು ವರ್ಷಗಳ ಕಾಲ ಇದ್ದ ದೇಶದ ಕಾಳಜಿ, ನೈತಿಕತೆ ನಿಧಾನವಾಗಿ ಕಳಚುತ್ತಾ ಅದರಲ್ಲೂ 1990ರ ಜಾಗತೀಕರಣದ ನಂತರ ಸ್ವಾರ್ಥ, ಅಧಿಕಾರದ ಲಾಲಸೆ, ಭ್ರಷ್ಟಾಚಾರ, ಯಾವ ರೀತಿಯಲ್ಲಾದರೂ ಸರಿ ದುಡ್ಡು ಮಾಡಬೇಕೆಂಬ ಹಪಾಹಪಿ, ರಾಜಕೀಯ ಗೂಂಡಾಗಿರಿ, ನಾನು ಮತ್ತು ನನ್ನ ವಂಶಜರೇ ಆಳಬೇಕೆಂಬ ದುರಾಸೆ ಮುತಾಂದವುಗಳು ಜನ ಸಾಮಾನ್ಯರನ್ನು ನಿರಾಸೆಯ ಕೂಪಕ್ಕೆ ತಳ್ಳಿವೆ. 364 ದಿನವೂ ಬೇರಾವುದೊ ಗಾಂಧಿಯನ್ನು ಆರಾಧಿಸುವವರಿಗೆ ಅಕ್ಟೋಬರ್ 2 (ಜನ್ಮದಿನ) ದಿನ ಮಾತ್ರ ಮಹಾತ್ಮನ ಭಜನೆಗೆ ಮೀಸಲು. ಗಾಂಧೀ ಟೋಪಿಯೊಂದಿಗೆ ಜನರನ್ನು ಮರುಳು ಮಾಡಲು ಸಭೆ, ಸಮಾರಂಭ. ಕತ್ತಲಲ್ಲಿ ಒಳಗಿಟ್ಟ ಚರಕಕ್ಕೆ ಧೂಳು ಹೊಡೆದು ಬೆಳಕಿನ ದರ್ಶನ. ಅಧಿಕಾರ ಕಳೆದುಕೊಂಡು ವಿಲವಿಲ ಒದ್ದಾಡುತ್ತಿರುವವರಿಗೆ ಗಾಂಧೀಜಿಯನ್ನು ಕೊಂದಿದ್ದು ಗೂಡ್ಸೆ ಎಂಬ ಅದೇ ಚರ್ವಿತಚರ್ವಣ ಭಜನೆ. ಅವನ ಹೆಸರು ಬಳಸಿಕೊಂಡು ಜನರಲ್ಲಿ ದ್ವೇಷ ಮೂಡಿಸಿ ಅಧಿಕಾರ ಪಡೆಯುವ ಹಂಬಲ.
ಅಂದು ದೇಶದ ಜೀವಾಳವೇ ಹಳ್ಳಿಗಳಾಗಿದ್ದವು. ಕೃಷಿ, ಗುಡಿ ಕೈಗಾರಿಕೆ, ಹೈನಗಾರಿಕೆ ಮತ್ತು ಕೃಷಿಗೆ ಸಂಬಂಧಿಸಿದ ಕೆಲಸಗಳು ಜನರ ಮುಖ್ಯ ಉದ್ಯೋಗವಾಗಿದ್ದವು. ಕ್ರಮೇಣ ಕೈಗಾರಿಕೆಗಳಿಗೆ ಒತ್ತು ಕೊಡಲಾಯಿತು. ಮೊದಮೊದಲು ಎಲ್ಲವೂ ಸರಿಯಂತೆ ಕಂಡಿತು. ಯಾಕೆಂದರೆ ಕೈಗಾರಿಕೆಗಳು ಬಹಳಷ್ಟು ಜನಸಂಖ್ಯಾ ಬಲವಿರುವ ಭಾರತಕ್ಕೆ ಉದ್ಯೋಗ ಒದಗಿಸಿದ್ದು ಸುಳ್ಳಲ್ಲ. ಜನ ನಗರದತ್ತ ಮುಖಮಾಡಿದರು. ಬರುಬರುತ್ತಾ ಹಳ್ಳಿ ಮತ್ತು ನಗರಗಳ ಮಧ್ಯದ ಅಂತರ ಹೆಚ್ಚಾಯಿತು. ಎಲ್ಲ ಸರ್ಕಾರಗಳೂ ಕೂಡ ಪೈಪೋಟಿಗೆ ಬಿದ್ದವರಂತೆ ನಗರಗಳನ್ನ ಯದ್ವಾತದ್ವಾ ಬೆಳೆಯಲು ಬಿಟ್ಟರು. ನೋಡುನೋಡುತ್ತಿದ್ದಂತೆಯೇ ಬಡಾವಣೆಗಳ ಮೇಲೆ ಬಡಾವಣೆಗಳು ಮತ್ತು ಮಾಲ್ ಗಳ ಮೇಲೆ ಮಾಲ್ ಗಳು ತಲೆಎತ್ತಿದವು, ಮೇಲುಸೇತುವೆಗಳಾದವು, ಮೆಟ್ರೋಗಳಾದವು, ಟಾರ್ ರಸ್ತೆಗಳು ಸಿಮೆಂಟ್ ರಸ್ತೆಗಳಾಗಿ ಬದಲಾದವು. ಹಾಗೆಯೇ ನಗರಗಳ ಸಮಸ್ಯೆಗಳೂ ದುಪ್ಪಟ್ಟಾಗತೊಡಗಿದವು.
ದುಬಾರಿಯಾದ ಜೀವನ ಸೌಕರ್ಯ, ಒಂದೊಂದು ಅಡಿಗೂ ಬಂಗಾರದ ಬೆಲೆ ಬಂದು ಭೂಮಾಫಿಯಾ,ಕೊಲೆ,ದರೋಡೆ, ಸುಲಿಗೆ, ರಾಜಕೀಯ ಗೂಂಡಾಗಿರಿ, ಕಸದ ವಿಲೇವಾರಿ, ಕೊಳೆಗೇರಿ ಇವೆಲ್ಲಾ ನಗರ ಜೀವನದ ಅವಿಭಾಜ್ಯ ಅಂಗಗಳಾಗಿ ಸಮಸ್ಯೆಗಳ ಸೆರೆಮಾಲೆಗಳು ಸೃಷ್ಟಿಯಾದವು. ಇಲ್ಲಿ ದೊಡ್ಡವರಾದವರೆಂದರೆ ರಾಜಕಾರಣಿಗಳು, ದೊಡ್ಡ ದೊಡ್ಡ ಅಧಿಕಾರಿಗಳು ಮತ್ತು ಕೈಗಾರಿಕೋದ್ಯಮಿಗಳು. ಆದರೆ ಇತ್ತ ಎಷ್ಟೋ ಹಳ್ಳಿಗಳಿಗೆ ಇನ್ನೂ ಮಣ್ಣಿನ ರಸ್ತೆಯಿಂದ ಮುಕ್ತಿ ಸಿಗಲೇ ಇಲ್ಲ. ಬಹುಶಃ ನೂರಾರು ವರ್ಷಗಳಿಂದ ನೆಲೆಕಂಡ ಹಳ್ಳಿಗಳಿಗೆ ಇಂದೂ ಟಾರ್ ಕಾಣುವ ಸೌಭಾಗ್ಯ ವಿಲ್ಲ. ಅದೇ ದೊಡ್ಡದೊಡ್ಡ ನಗರಗಳಲ್ಲಿ ಒಂದೊಂದೇ ಬಡಾವಣೆಗಳು ತಲೆ ಎತ್ತತೊಡಗಿದವು.ಅಲ್ಲಿ ಹೆಚ್ಚುಹೆಚ್ಚು ಮನೆ ಅಪಾರ್ಟ್ಮೆಂಟ್ ಗಳು ಬಂದ ಮೇಲೆ ಹಳ್ಳಿಗಳಿಗೆ ಹೋಲಿಸಿದರೆ ಪೂರ್ತಿ ಅಲ್ಲದಿದ್ದರೂ ತಕ್ಕಮಟ್ಟಿಗೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಆಯಿತು. ನಗರಗಳು ಬೆಳೆದಂತೆಲ್ಲಾ ದೂರದ ಯಾವುದೊ ಹಳ್ಳಿ ಹೆಚ್ಚುಕಡಿಮೆ ಬರಿದಾಗತೊಡಗಿತು. ಕೃಷಿ ಕೃಶವಾಗತೊಡಗಿತು. ಬೆಳೆದ ಬೆಳೆಗೆ ಸರಿಯಾದ ಸಿಗದ ಬೆಲೆ, ಕೂಲಿಗಳ ಸಮಸ್ಯೆ, ಅತಿವೃಷ್ಟಿ ಇಲ್ಲ ಅನಾವೃಷ್ಟಿ ಎಂಬ ಮಳೆಯ ಕಣ್ಣು ಮುಚ್ಚಾಲೆ, ರಾಜಕೀಯ ಮೇಲಾಟಕ್ಕಾಗಿ ಮಾಡುತ್ತಿರುವ ಸಾಲಮನ್ನಾ, ಇದರ ಮದ್ಯೆ ಹಳ್ಳಿಹಳ್ಳಿಗೂ ಕಾಲಿಟ್ಟ ಕೆಟ್ಟ ರಾಜಕೀಯ ಹಳ್ಳಿಗಳ ಚಹರೆಯನ್ನೇ ಬದಲು ಮಾಡಿದವು. ಇಂದು ಹಳ್ಳಿಗಳಲ್ಲಿ ಹೆಚ್ಚಾಗಿ ಕಾಣಬಹುದಾದ ಮುಖಗಳೆಂದರೆ ಮದ್ಯವಯಸ್ಸಿನವರು ಹಾಗು ವಯಸ್ಸಾದವರು. ಅಲ್ಲಿರುವ ಕೂಲಿಗಳು ಕೂಡ ನಗರದೆಡೆಗೆ ಮುಖ ಮಾಡತೊಡಗಿದರು.
ಹಿಂದೆ ಹಳ್ಳಿಗಳಿಗೆ ಜೀವಕಳೆ ತುಂಬುತ್ತಿದ್ದ ದೇವಸ್ಥಾನಗಳು, ಅರಳೀಕಟ್ಟೆ ಇಂದು ಬರಿದೋಬರಿದು. ಹಿಂದೆ ಕೂಡುಕುಟಂಬವಾಗಿದ್ದ ಎಷ್ಟೋ ಕುಟುಂಬಗಳು ಒಡೆದು ಇಂದು ಎಷ್ಟೋ ಮನೆಗಳು ಬೀಗ ಹಾಕಿಕೊಂಡಿವೆ. ಮಕ್ಕಳಿರಲವ್ವಾ ಮನೆತುಂಬಾ ಎಂಬ ದಿನಗಳು ಹೋಗಿ ಆರತಿಗೊಂದು ಕೀರುತಿಗೊಂದು/ನಾವಿಬ್ಬರು ನಮಗಿಬ್ಬರು ಆಯಿತು. ಈಗಂತೂ ಅದೂ ಒಂದು ಮಗುವಿಗೆ ಸೀಮಿತಗೊಂಡಿದೆ.
ಆದರೆ ಇದು ಒಂದು ವರ್ಗಕ್ಕೆ ಸೀಮಿತವಾಗಿದೆ. ಇದೇ ದುರಂತ. ಇದು ಸಾಲದೆಂಬಂತೆ ಹಳ್ಳಿಯಲ್ಲಿರುವವರಿಗೆ ಕಂಕಣ ಭಾಗ್ಯವೂ ಕಗ್ಗಂಟಾಗಿದೆ. ಮತ್ತೊಂದು ವರ್ಗದ ಜನಸಂಖ್ಯೆ ಏರುಗತಿಯಲ್ಲಿ ಸಾಗಿದೆ.
ಅಂತೂ ಗಾಂಧೀಜಿ ಕನಸುಕಂಡ ಹಳ್ಳಿಗಳು, ಕೃಷಿ ಮತ್ತು ಗುಡಿಕೈಗಾರಿಕೆಗಳು ಅವಸಾನದತ್ತ ಮುಖಮಾಡಿವೆ. ಇವೆಲ್ಲಾ ಗಮನಿಸಿದಾಗ ಗಾಂಧೀಜಿ ಪ್ರತಿಪಾದಿಸಿದ ಮೌಲ್ಯಗಳು ಕುಸಿಯುತ್ತಿರುವಂತೆ ಭಾಸವಾಗುವುದಿಲ್ಲವಾ?
ಗಾಂಧೀಜಿ ಗೋಹತ್ಯೆ ಮತ್ತು ಗೋಸಂರಕ್ಷಣೆಯ ಬಗೆಗೂ ಸ್ಪಷ್ಟ ನಿಲುವು ಹೊಂದಿದ್ದರು. ಗೋರಕ್ಷಣೆಯು ಹಿಂದೂ ಧರ್ಮದ ಪ್ರಮುಖ ಅಂಗ ಮತ್ತು ದೇವರ ಸೃಷ್ಟಿಯಲ್ಲಿರುವ ಅಸಹಾಯಕ ಮೂಕ ಜೀವಿಗಳ ರಕ್ಷಣೆ ಅಂದಿದ್ದರು. ಈಗ ದೇಶದಲ್ಲಿ ಹಸು ವಿಷಯದಲ್ಲಿ ಏನಾಗುತ್ತಿದೆ ಎಂದು ನೋಡುತ್ತಿದ್ದೇವೆ. ಮೊದಲೆಲ್ಲಾ ಹಳ್ಳಿಗಳಲ್ಲಿ ಜಮೀನು ಇರುವವರ ಮನೆಯಲ್ಲಿ ಹಿಂಡು ಹಿಂಡು ಗೋವುಗಳಿದ್ದವು. ಹಾಲಿನ ಜೊತೆ ಗದ್ದೆತೋಟಗಳಿಗೆ ಹಸುವಿನ ಗೊಬ್ಬರ ಸಾಕಷ್ಟು ದೊರಕುತ್ತಿತ್ತು. ಬೆಟ್ಟಗುಡ್ಡಗಳಲ್ಲಿ, ಗೋಮಾಳಗಳಲ್ಲಿ ಮೇಯಲು ಬಿಡುವುದರಿಂದ ಗೋಮೂತ್ರ, ಅವು ಹಾಕುವ ಸಗಣಿಯಿಂದ ಭೂಮಿಯ ಫಲವತ್ತತೆ ಜಾಸ್ತಿಯಾಗುತ್ತಿತ್ತು. ಸಂಜೆಹೊತ್ತು ಗೋಪಾಲಕರು ಗೋವುಗಳನ್ನು ಬೆಟ್ಟಗಳಲ್ಲಿ ಮೇಯಿಸಿಕೊಂಡು ಮುಳುಗುತ್ತಿರುವ ಸೂರ್ಯನ ಮಂದ ಬೆಳಕಿನಲ್ಲಿ ಮನೆಗೆ ಹೊಡೆದುಕೊಂಡು ಬರುವಾಗ ದೃಶ್ಯ ಎಂತವರನ್ನೂ ಮನೆಸೆಳೆಯುವಂತಹದು. ಅವುಗಳ ಗೊರಸಿನಿಂದ ಎದ್ದೇಳುವ ಧೂಳಿನ ದೃಶ್ಯ ಎಷ್ಟು ಕವಿಗಳಿಗೆ, ಛಾಯಾಗ್ರಾಹಕರಿಗೆ ಚೈತನ್ಯದ ಚಿಲುಮೆ ಯಾಗಿತ್ತೊ ಗೊತ್ತಿಲ್ಲ!. ಆದರೆ ಈಗ ಮನೆಯಲ್ಲಿ ಇರುವವರ ಜನಸಂಖ್ಯೆ ವಿರಳವಾಗಿ ಗೋವು ಸಾಕಣೆ ದುಬಾರಿಯಾಗಿದೆ. ದೇಶೀಯ ಗೋವುಗಳ ಸಂಖ್ಯೆಯಂತೂ ಗಾಬರಿ ಹುಟ್ಟಿಸುವಂತಿದೆ.
ಜಾಗತೀಕರಣಕ್ಕೆ ತೆರೆದುಕೊಂಡ ನಂತರವಂತೂ ದೇಶಕ್ಕೆ ಕೈಗಾರಿಕಾಕರಣ ಬಹಳಷ್ಟು ಲಾಭದಾಯಕದಂತೆ ಕಂಡರೂ ಕ್ರಮೇಣ ಅಭಿವೃದ್ಧಿ ಶೀಲ ದೇಶಗಳ ಎದುರು ಸ್ಪರ್ಧಿಸಲಾರದೆ ನಮ್ಮ ದೊಡ್ಡದೊಡ್ಡ ಕೈಗರಿಕೆಗಳು (ಉದಾ: ಸರ್ಕಾರದ ಅಧೀನಕ್ಕೆ ಒಳಪಟ್ಟ HMT,NGEF,BSNL ಮುಂತಾವುಗಳೂ ಸೇರಿದಂತೆ) ಸೋತು ಮೂಲೆಗುಂಪಾಗಿವೆ/ಆಗುತ್ತಿವೆ ಅಥವಾ ಮುಚ್ಚುವ ಸ್ಥಿತಿಗೆ ಬಂದಿವೆ. ಇವು ಮೂಲೆಗುಂಪಾಗಲು ರಾಜಕೀಯ ಮತ್ತು ರಾಜಕೀಯೇತರ ಕಾರಣಗಳು ಹಲವಾರು. ಬಹುರಾಷ್ಟ್ರೀಯ ಕಂಪನಿಗಳೊಡನೆ ಸ್ಪರ್ಧೆ ಮಾಡಿ ಗೆಲ್ಲುವುದು ಇವುಗಳಿಗೆ ಕಠಿಣವಾಗುತ್ತಿದೆ. ಸ್ವಾತಂತ್ರ್ಯಾಪೂರ್ವದಲ್ಲಿ ಬ್ರಿಟಿಷರ ಇಲ್ಲೇ ಬಂದು ಶಸ್ತ್ರಾಸ್ತ್ರಗಳಿಂದ ಬೆದರಿಸಿ ದೇಶವನ್ನಾಳಿದರೆ ಇಂದು ಜಗತ್ತಿನ ದೊಡ್ಡಣ್ಣ ಅಮೆರಿಕಾವೊ ಅಥವಾ ಜಗತ್ತಿನ ಮೂಲೆಯಲ್ಲಿರುವ ಇನ್ನಾವುದೋ ತೈಲ ಹೊಂದಿರುವ ದೇಶಗಳು ಅಲ್ಲಿಂದಲೇ ನಮ್ಮನ್ನು ಬುಗುರಿಯಂತೆ ಆಡಿಸುತ್ತಿವೆ. ಬೇರಾವುದೊ ದೇಶದಲ್ಲಿ ಮಳೆಯಾದರೆ ಥಂಡಿ, ಶೀತವಾಗುವುದು ಭಾರತದಲ್ಲಿ. ಎಲ್ಲದರಲ್ಲೂ ವಿದೇಶಿ ಬಂಡವಾಳದ ಆಹ್ವಾನ. ಬಂಡವಾಳ ಹೂಡಿದವರು ಅವರ ಲಾಭಕ್ಕಾಗಿ ಏನೂ ಮಾಡಬಲ್ಲರು.. ನಾವು ಬಯಸುವ ಹೆಚ್ಚಿನ ಎಲ್ಲ ವಸ್ತುಗಳೂ ವಿದೇಶಿ ವಸ್ತುಗಳು. ಒಂದೋ ಆ ವಸ್ತುಗಳು ಭಾರತದ ಕಂಪನಿಗಳಿಂದ ಲಭ್ಯವಿಲ್ಲ ಅಥವಾ ಲಭ್ಯವಿದ್ದರೂ ಭಾರತೀಯ ವಸ್ತುಗಳಿಗಿಂತ ಅವು ಅಗ್ಗ. ಹೀಗೆ ನಾನಾ ಕಾರಣಿಗಳಿಗಾಗಿ ಜನರಿಗೆ ದೇಶೀ ವಸ್ತುಗಳಿಗಿಂತ ವಿದೇಶಿ ವಸ್ತುಗಳೇ ಹೆಚ್ಚು ಪ್ರಿಯವಾಗುತ್ತಿವೆ. ಹೀಗಾಗಿ ಸ್ವದೇಶಿ ಚಿಂತನೆ, ಭಾರತೀಯ ಸಂಸ್ಕಾರ, ಸಂಸ್ಕೃತಿ ಮೂಲೆಗುಂಪಾಗಿ ತುಕ್ಕಹಿಡಿಯುವ ಹಾದಿಯಲ್ಲಿದ್ದು ಅಡ್ಡ ಕತ್ತರಿಯಲ್ಲಿ ಸಿಕ್ಕು ಹಾಕಿಕೊಂಡಿವೆ
ಇನ್ನು ಭ್ರಷ್ಟಾಚಾರ ನಮ್ಮ ಜೀವನದ ಅವಿಭಾಜ್ಯ ಅಂಗವೇ ಆಗಿ ಸರ್ವಂ ಭ್ರಷ್ಟಮಯಂ ಎಂಬಂತಾಗಿ ಬಿಟ್ಟಿದೆ. ನಮ್ಮನ್ನಾಳುವ ರಾಜಕೀಯ ನಾಯಕರ ಆಸ್ತಿಪಾಸ್ತಿ ಹಿಮಾಲಯ ಪರ್ವತದ ಹಾಗೆ ಬೆಳೆಯುತ್ತಿದೆ. ಲೋಕಸಭಾ, ವಿಧಾನಸಭಾ ಸದಸ್ಯರಾಗಿರುವುದಕ್ಕೆ ಮುಂಚೆ ಇದ್ದ ಅವರ, ಅವರ ಮನೆಯವರ ವ್ಯವಹಾರ, ಆಸ್ತಿ ಈಗ ಕೋಟಿಕೋಟಿಗಳನ್ನ ಮೀರಿದೆ. ಇದು ಅವರು ಲಂಚದ ರೂಪದಲ್ಲಿ ಅಧಿಕಾರವನ್ನು ದುರ್ಭಳಿಕೆ ಮಾಡಿಕೊಂಡು ಸಂಪಾದಿಸಿದ್ದೆಂದು ಎಲ್ಲಾ ಜನಸಾಮಾನ್ಯರಿಗೂ ಅರಿವಿದ್ದರೂ ಅವರ ಅಧಿಕಾರದ ಮುಂದೆ ಯಾರೂ ಏನೂ ಮಾಡಲಾಗದ ಸ್ಥಿತಿ ತಲುಪಿದ್ದೇವೆ. ಕೆಲವೇ ವರ್ಷಗಳಲ್ಲಿ ಇಷ್ಟು ಕೋಟಿ (ನ್ಯಾಯವಾಗಿ ಸಂಪಾದಿಸಿದರೆ ಇದು ಸಾಧ್ಯವೇ ಇಲ್ಲ) ಹಣ ಮಾಡಿದ್ದರೂ ಅವರವರ ಪಾರ್ಟಿಗಳು, ಅವರ ಜಾತಿಯವರು, ಮಠಾಧೀಶರು ಅವರನ್ನೇ ಬೆಂಬಲಿಸಿ ‘ಇವ ನಮ್ಮವ ಇವ ನಮ್ಮವ’ ಎಂದು ಅವನ ಪರವಾಗಿ ಧರಣಿ ನಡೆಸುತ್ತವೆ. ಅಧಿಕಾರ, ಹಣದ ಮುಂದೆ ನ್ಯಾಯದೇವತೆ ಕುರುಡಾಗಿದ್ದಾಳೆ. ಯಾರು ತಪ್ಪು ಮಾಡಿದರೂ ಹಣ, ಅಧಿಕಾರ ಜಾತಿಯಿಂದ ಬಚಾವಾಗಬಹುದೆಂಬ ಹುಂಬತನ ಡಾಳಾಗಿ ಕಣ್ಣಿಗೆ ರಾಚುತ್ತಿದೆ.
ಇನ್ನೂ ಒಂದು ಗಾಂಧೀಜಿ ಪ್ರತಿಪಾದಿಸಿದ್ದು ಜನರು ಕುಡಿತದಿಂದ ದೂರವಿರಬೇಕೆಂದು. ಇದನ್ನು ಪರಿಹಾಸ್ಯ ಮಾಡಲೋ ಎಂಬಂತೆ ಎಲ್ಲ ಸರ್ಕಾರಗಳಿಗೂ ಸೇಂದಿ, ಸರಾಯಿಯೇ ರಾಜ್ಯದ ಮುಖ್ಯ ಆದಾಯವಾಗಿದೆ. ಬೀದಿಬೀದಿಗಳಲ್ಲಿ, ಹಳ್ಳಿಹಳ್ಳಿಗಳಲ್ಲಿ ಔಷಧಿ ಅಂಗಡಿಗಳಿಗಿಂತಲೂ, ಸ್ಕೂಲುಗಳಿಗಿಂತಲೂ ಜಾಸ್ತಿಯಾಗಿ ಸಾರಾಯಿ ಅಂಗಡಿಗಳು, ಬಾರ್ ಗಳು ತಲೆ ಎತ್ತಿವೆ. ಹಿಂದೊಮ್ಮೆ ಡ್ರಿಂಕ್ಸ್ ಅನ್ನು ಕಿರಾಣಿ ಅಂಗಡಿಗಳಲ್ಲೂ ಮಾರಾಟಮಾಡಲು ಸರ್ಕಾರ ತಯಾರಾಗಿತ್ತು ಎಂಬುದನ್ನು ನೆನಪು ಮಾಡಿಕೊಂಡರೆ ಇಂದಲ್ಲ ನಾಳೆ ಅದೂ ಬರಬಹುದು ಎನಿಸುತ್ತದೆ. ಹಾಗಾಗಿ ಈ ವಿಷಯದಲ್ಲೂ ಗಾಂಧೀಜಿ ಅಪ್ರಸ್ತುತ ಎಂಬುದಂತೂ ನಿಜ.
ಬೆಂಗಳೂರಿನ ಮಹಾತ್ಮಾ ಗಾಂಧಿ ರಸ್ತೆಗೆ ಹೋದರೆ ಯಾಕಾಗಿ ರಸ್ತೆಗೆ ಈ ಹೆಸರಿಟ್ಟರೊ ಎಂದು ಮನಸ್ಸು ವಿಚಲಿತವಾಗುತ್ತದೆ. ಕಾರಣ ಗಾಂಧೀಜಿಯ ಎಲ್ಲ ಆದರ್ಶಗಳನ್ನೂ ಇಲ್ಲಿ ಗಾಳಿಗೆ ತೂರಲಾಗಿದೆ(ಫಕೀರನ ತುಂಡು ಬಟ್ಟೆ ಬಿಟ್ಟು!). ಮದಿರೆ,ಮಾನಿನಿಯರ ಜೊತೆ ಆಮೋದ, ಕಿವಿಗಡಚ್ಚಿಕ್ಕುವ ಪಾಚ್ಯಾತ್ಯ ಸಂಗೀತ ಇವೆಲ್ಲ ಇಲ್ಲಿ ಸಾಮಾನ್ಯವಾಗಿದೆ. ಅದರಲ್ಲೂ ವರ್ಷಾರಂಭದ ಆಚರಣೆ ನೋಡಿದರೆ ಗಾಂಧೀಜಿ & ಅವರ ಪ್ರತಿಪಾದಿಸಿದ ಮೌಲ್ಯಗಳು ದೂರಾಗಿ ಅವನ್ನೆಲ್ಲಾ ಮ್ಯೂಸಿಯಂನಲ್ಲಿ ಈಗಾಗಲೆ ಇಟ್ಟಾಗಿದೆಯೆಂಬ ಸಂಶಯ ಬಂದರೆ ಆಶ್ಚರ್ಯವಿಲ್ಲ.
ಇವೆಲ್ಲಗಳ ನಡುವೆ ಬಾಪುವನ್ನ ಹಾಗೂ ಅವನ ಸಿದ್ಧಾಂತಗಳನ್ನ ಎಂದೂ ಪೂರ್ಣವಾಗಿ ಮರೆಯಲು ಸಾಧ್ಯವಿಲ್ಲವೆಂಬಂತೆ ಮತ್ತು ಎಂದೂ ಅಪ್ರಸ್ತುತ ಅಲ್ಲವೆಂಬಂತೆ ಅವರ ಪ್ರತಿಪಾದಿಸಿದ ಮೌಲ್ಯಗಳಲ್ಲಿ ಒಂದಾದ ‘ಸ್ವಚ್ಛತಾ ಆಂಧೋಲನ’ ದೇಶವ್ಯಾಪಿಯಾಗಿ ಜನರನ್ನು ಎಚ್ಚರಿಸುತ್ತಿರುವುದೇ ಸಾಕ್ಷಿ. ಗಾಂಧೀಜಿ ಅಂದೇ ದೇಶದ ಈ ತರಹದ ಹಲವಾರು ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಿದ್ದನ್ನು ಯೋಚನೆ ಮಾಡಿದರೆ ಅವರು ಎಂದೆಂದೂ ಅಪ್ರಸ್ತುತರಾಗಲು ಸಾಧ್ಯವಿಲ್ಲ ಎಂದೆನಿಸುತ್ತದೆ. ಬಹುಶಃ ಮೋದಿಯಂತವರಿಂದ ಜನ ಭ್ರಷ್ಟಾಚಾರಕ್ಕೆ ಕಡಿವಾಣ, ರಾಜಕೀಯದಲ್ಲಿ ನೈತಿಕತೆ, ದೇಶದ ಸಂಸ್ಕೃತಿಗಳ ಉಳಿಯುವಿಕೆ, ಕೃಷಿಗೆ ಕಾಯಕಲ್ಪ ಮುಂತಾದ ವಿಷಯದಲ್ಲಿ ಸಾಕಷ್ಟು ನೀರೀಕ್ಷೆ ಮಾಡುತ್ತಿದ್ದು ಆಕಾಶದಲ್ಲಿ ಎಲ್ಲೋ ಸ್ವಲ್ಪ ಕೋಲ್ಮಿಂಚು ಗೋಚರಿಸುತ್ತಿದೆ.
ಇದರೊಂದಿಗೆ ಇಂದು ಸರಳ ಸಜ್ಝನಿಕೆಯ, ಗಟ್ಟಿ ಗುಂಡಿಗೆಯ,ದೇಶ ಕಂಡ ಅಪ್ರತಿಮ, ಜೈಜವಾನ್ ಜೈ ಕಿಸಾನ್ ಘೋಷಣೆಯ ಶಾಸ್ತ್ರೀಜಿಯವರ ಜನ್ಮದಿನವೂ ಹೌದು. ಆದರೆ ಪಠ್ಯಪುಸ್ತಕಗಳಲ್ಲಿ ಅವರ ಬಗೆಗೆ ಮಕ್ಕಳಿಗೆ ತಿಳುವಳಿಕೆ, ಅವರಿಗೆ ಸಿಗಬೇಕಾದ ಗೌರವ ಮುಂತಾಗಿ ಹಲವಾರು ರಾಜಕೀಯ ಕಾರಣಗಳಿಂದ ಅವರಿಗೆ ಸಿಗಲೇ ಇಲ್ಲ ಎಂಬದರ ಹೊರತಾಗೀಯೂ ಅವರನ್ನ ನೆನಪುಮಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ಅಲ್ಲವಾ? ಅವರು ನಾಯಕತ್ವದಲ್ಲಿ 1965ರ ಪಾಕಿಸ್ತಾನ ಜೊತೆಗಿನ ಯುದ್ಧದಲ್ಲಿ ದೇಶ ವಿಜಯಪತಾಕೆ ಹಾರಿಸಿತು. ಆದರೆ 1966ರಲ್ಲಿ ತಾಷ್ಕೆಂಟ್ ನಲ್ಲಿ ಅವರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದರು. ಆ ನಿಗೂಢತೆ ಇಂದಿಗೂ ಹಾಗೆಯೇ ಉಳಿದಿದೆ. ಆದರೆ ಅವರ ನಂತರ ಆಡಳಿತಕ್ಕೆ ಬಂದ ಸರ್ಕಾರ ಬೇಕಂತಲೇ ಅವರನ್ನು ಮೂಲೆಗುಂಪು ಮಾಡಿತು ಎಂಬುದು ಸರ್ವವೇದ್ಯ.
ಮಹಮದ್ ಘಜ್ನಿ ನಮ್ಮ ದೇಶದ ಮೇಲೆ 17 ಬಾರಿ ದಾಳಿ ಮಾಡಿದ್ದನ್ನು ದೊಡ್ಡದಾಗಿ ಬಿಂಬಿಸಿ ಮಕ್ಕಳಿಗೆ ಕಂಠಪಾಠ ಮಾಡಿಸಿದರೇ ಹೊರತು ನಮ್ಮ ದೇಶದವರೇ ಆದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸರಳತೆಯನ್ನು, ದೇಶಪ್ರೇಮವನ್ನು, ನಾಯಕತ್ವವನ್ನು ಸರಿಯಾಗಿ ತಿಳಿಸಲೇ ಇಲ್ಲ. ಶಾಸ್ತ್ರೀಜಿ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ, ದೇಶದ ಎರಡನೇ ದಕ್ಷ ಮತ್ತು ಪ್ರಾಮಾಣಿಕ, ಸರಳ ಪ್ರ.ಮ. ಯಾಗಿ ‘ನ ಭೂತೊ ನ ಭವಿಷ್ಯತಿ’ ಎಂಬಂತೆ ಬಾಳಿದರು. ಇಂದು ಎಲ್ಲ ರಾಜಕೀಯ ಪಕ್ಷಗಳ ರಾಜಕಾರಣಿಗಳು ಶಾಸಕರಾಗಲು, ಮಂತ್ರಿಯಾಗಲು ಎಲ್ಲ ಬಿಟ್ಟು ಏನೂ ಮಾಡಲು ತಯಾರಾಗಿರುವುದನ್ನ ಗಮನಿಸಿದಾಗ ರೈಲು ದುರಂತಕ್ಕೆ ನೈತಿಕ ಹೊಣೆಹೊತ್ತು ತಮ್ಮ ಮಂತ್ರ ಪದವಿಯನ್ನೇ ತ್ಯಜಿಸಿದ, ಪ್ರ. ಮ. ಯಾದರೂ ತಮಗಾಗಿ ಮತ್ತು ತಮ್ಮ ಸಂಸಾರಕ್ಕಾಗಿ ಏನೂ ಆಸ್ತಿ ಮಾಡಿಕೊಳ್ಳದ ಸಫೂರ ದೇಹದ ಶಾಸ್ತ್ರಿ ಶಿಖರಪ್ರಾಯರಾಗಿ ನಮ್ಮೆದುರು ನಿಲ್ಲುತ್ತಾರೆ.
- ಕಮಲಾಕರ ಕೆ.ಆರ್
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
