ಅಗರ್ತಲಾ: ತ್ರಿಪುರಾದ ಬುಡಕಟ್ಟು ಗ್ರಾಮ ಪರಿಷತ್ ಚುನಾವಣೆಯಲ್ಲಿ ಬಿಜೆಪಿಗೆ ಮತ್ತು ಅದರ ಮಿತ್ರಪಕ್ಷಗಳಿಗೆ ಮತ್ತೊಮ್ಮೆ ಭರ್ಜರಿ ಜಯ ಲಭಿಸಿದ್ದು, ಎಡಪಕ್ಷಗಳು (Left) ಹಾಗೂ ಕಾಂಗ್ರೆಸ್ ಪಕ್ಷಗಳು ತೀವ್ರ ಮುಖಭಂಗ ಅನುಭವಿಸಿವೆ.
ಅಂತಿಮ ಮತಎಣಿಕೆಯ ಫಲಿತಾಂಶದ ಪ್ರಕಾರ, ತ್ರಿಪುರ ಬುಡಕಟ್ಟು ಪ್ರದೇಶಗಳ ಸ್ವಾಯತ್ತ ಜಿಲ್ಲಾ ಪರಿಷತ್ (TTAADC) ವಲಯದ ಗ್ರಾಮ ಸಮಿತಿ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ-NDA) ಸುಮಾರು ಶೇಕಡಾ 94ರಷ್ಟು ಸ್ಥಾನಗಳನ್ನು ಪಡೆದುಕೊಂಡು ಭಾರಿ ಗೆಲುವು ಸಾಧಿಸಿದೆ. ಒಟ್ಟು 4,597 ಸ್ಥಾನಗಳಲ್ಲಿ ಎನ್ಡಿಎ ಬರೋಬ್ಬರಿ 4,320 ಸ್ಥಾನಗಳನ್ನು ಬಾಚಿಕೊಂಡಿದೆ.
ರಾಜವಂಶಸ್ಥ ಪ್ರದ್ಯುತ್ ಮಾಣಿಕ್ಯ ದೆಬ್ಬರ್ಮನ್ ನೇತೃತ್ವದ ‘ಟಿಪ್ರ ಮೊಥಾ ಪಾರ್ಟಿ’ (TMP) 3,428 ಸ್ಥಾನಗಳನ್ನು ಗೆದ್ದುಕೊಂಡಿದೆ. ಗಮನಾರ್ಹ ಸಂಗತಿಯೆಂದರೆ, ಬುಡಕಟ್ಟು ಪರಿಷತ್ ಚುನಾವಣೆಯಲ್ಲಿ ಪ್ರತಿ ಐದು ಸ್ಥಾನಗಳಲ್ಲಿ ಸುಮಾರು ನಾಲ್ಕು ಸ್ಥಾನಗಳನ್ನು ಎನ್ಡಿಎ ಅಭ್ಯರ್ಥಿಗಳೇ ಗೆದ್ದುಕೊಂಡಿದ್ದಾರೆ. ಮೈತ್ರಿಕೂಟದೊಳಗೆ ಬಿಜೆಪಿ 859 ಸ್ಥಾನಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರೆ, ಅದರ ಮಿತ್ರಪಕ್ಷವಾದ ‘ಇಂಡಿಜೆನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ’ (IPFT) 33 ಸ್ಥಾನಗಳನ್ನು ಗಳಿಸಿದೆ. ಈ ಮೂರೂ ಮಿತ್ರಪಕ್ಷಗಳು ಪ್ರಮುಖ ವಿರೋಧ ಪಕ್ಷಗಳಾದ ಎಡಪಕ್ಷಗಳು ಮತ್ತು ಕಾಂಗ್ರೆಸ್ಗಿಂತ ಬಹಳ ಮೇಲುಗೈ ಸಾಧಿಸಿವೆ.
ವಿರೋಧ ಪಕ್ಷಗಳಿಗೆ ದಕ್ಕಿದ್ದು ಕೇವಲ ಚೂರುಪಾರು ಸ್ಥಾನಗಳು:
ದಶಕಗಳ ಕಾಲ ರಾಜ್ಯವನ್ನು ಆಳಿದ ಸಿಪಿಐ(ಎಂ) ಕೇವಲ 87 ಸ್ಥಾನಗಳನ್ನು ಗಳಿಸಲಷ್ಟೇ ಶಕ್ತವಾಯಿತು ಮತ್ತು ಕಾಂಗ್ರೆಸ್ ಕೇವಲ 14 ಸ್ಥಾನಗಳನ್ನು ಮಾತ್ರ ಪಡೆದುಕೊಂಡಿತು. ಉಳಿದ ಸರಿಸುಮಾರು 176 ಸ್ಥಾನಗಳು ಪಕ್ಷೇತರರು ಮತ್ತು ಇತರ ಅಭ್ಯರ್ಥಿಗಳ ಪಾಲಾಗಿವೆ. ಇದು ಈ ಎರಡು ರಾಷ್ಟ್ರೀಯ ಪಕ್ಷಗಳ ಒಟ್ಟು ಗಳಿಕೆಗಿಂತ ಬಹಳ ಹೆಚ್ಚಾಗಿದೆ.
ಚುನಾವಣೆಯು ಒಟ್ಟು 587 ಗ್ರಾಮ ಸಮಿತಿಗಳನ್ನು ಒಳಗೊಂಡಿತ್ತು. ಸ್ಪರ್ಧೆ ಏರ್ಪಟ್ಟಿದ್ದ ಸ್ಥಾನಗಳಿಗೆ ಸೆಪ್ಟೆಂಬರ್ 28 ರಂದು ಮತದಾನ ನಡೆದಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ತಕ್ಕಂತೆ ಸುಮಾರು ಶೇಕಡಾ 81ರಷ್ಟು ಉತ್ತಮ ಮತದಾನವಾಗಿತ್ತು. ಬಿಗಿ ಭದ್ರತೆಯ ನಡುವೆ ಅಕ್ಟೋಬರ್ 5 ರಂದು ಮತಎಣಿಕೆ ಆರಂಭವಾಯಿತು.
ರಾಜಕೀಯ ಮಹತ್ವ:
ಈ ಸಂಖ್ಯೆಗಳ ಆಚೆಗೂ ಈ ಫಲಿತಾಂಶವು ಪ್ರಮುಖ ರಾಜಕೀಯ ಮಹತ್ವವನ್ನು ಹೊಂದಿದೆ. TTAADC ಪ್ರದೇಶಗಳು ತ್ರಿಪುರಾದ ಭೌಗೋಳಿಕ ವಿಸ್ತೀರ್ಣದ ಸುಮಾರು ಮೂರನೇ ಎರಡರಷ್ಟು ಭಾಗವನ್ನು ಒಳಗೊಂಡಿವೆ ಮತ್ತು 60 ಸದಸ್ಯ ಬಲದ ರಾಜ್ಯ ವಿಧಾನಸಭೆಗೆ 20 ಶಾಸಕರನ್ನು ಕಳುಹಿಸುತ್ತವೆ. ಹೀಗಾಗಿ ಗ್ರಾಮ ಮಟ್ಟದ ಸಂಸ್ಥೆಗಳ ಮೇಲಿನ ನಿಯಂತ್ರಣವು ತಳಮಟ್ಟದಲ್ಲಿ ಭದ್ರತೆಯನ್ನು ತಂದುಕೊಡಲಿದೆ. ಕಳೆದ ಒಂದು ದಶಕದಲ್ಲಿ ಈ ಪರಿಷತ್ ಪ್ರದೇಶಗಳಲ್ಲಿ ನಡೆದ ಮೊದಲ ಗ್ರಾಮ ಸಮಿತಿ ಚುನಾವಣೆ ಇದಾಗಿದೆ.
ಮೈತ್ರಿಕೂಟದ ಸಮೀಕರಣದಲ್ಲೂ ಬದಲಾವಣೆಯಾಗಿದೆ. ಕಳೆದ ಏಪ್ರಿಲ್ನಲ್ಲಿ ನಡೆದ TTAADC ಚುನಾವಣೆಯಲ್ಲಿ ‘ಟಿಪ್ರ ಮೊಥಾ’ ಮತ್ತು ಬಿಜೆಪಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಆದರೆ ಈ ಬಾರಿ ಎನ್ಡಿಎ ಬ್ಯಾನರ್ ಅಡಿಯಲ್ಲಿ ಒಟ್ಟಾಗಿ ಸ್ಪರ್ಧಿಸಿದ್ದು, ಈ ಗೆಲುವಿನ ಅಂತರವು ಆ ಮೈತ್ರಿ ಎಷ್ಟು ಮುಖ್ಯವಾಗಿತ್ತು ಎಂಬುದನ್ನು ತೋರಿಸುತ್ತದೆ.
ಈಗ ಮೈತ್ರಿಕೂಟವು ಆರನೇ ಶೆಡ್ಯೂಲ್ (Sixth Schedule) ಪ್ರದೇಶಗಳಲ್ಲಿ ಸಂಪೂರ್ಣ ಹಿಡಿತ ಸಾಧಿಸಿರುವುದರಿಂದ, 2028ರ ವಿಧಾನಸಭಾ ಚುನಾವಣೆಗಳಿಗೆ ಪಕ್ಷಗಳು ಸಿದ್ಧತೆ ನಡೆಸುತ್ತಿರುವ ಈ ಸಂದರ್ಭದಲ್ಲಿ ಈ ಫಲಿತಾಂಶವು ರಾಜಕೀಯ ಲೆಕ್ಕಾಚಾರಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆಯಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
