ಕಲಬುರಗಿ ಸಾರ್ವಜನಿಕರಿಂದ ಉತ್ತಮ ಸ್ಪಂದನೆ
ಶ್ರೀ ಜೈ ವೀರ ಹನುಮಾನ್ ದೇವಸ್ಥಾನದಲ್ಲಿ ಪಿತೃಪಕ್ಷ ಮಾಸದ ಕಾರ್ಯಕ್ರಮ ಯಶಸ್ವಿ
ಕಲಬುರಗಿ: ನಗರದ ಕರುಣೇಶ್ವರ ನಗರದ ಶ್ರೀ ಜೈ ವೀರ ಹನುಮಾನ್ ದೇವಸ್ಥಾನದಲ್ಲಿ 14 ದಿನಗಳ ಕಾಲ ಆಯೋಜಿಸಲಾಗಿದ್ದ ಪಿತೃಪಕ್ಷ ಮಾಸದ ಧಾರ್ಮಿಕ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.
ಈ ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಕರ್ತೃಗಳು ತಮ್ಮ ಪಿತೃಗಳಿಗೆ ಶ್ರದ್ಧಾಪೂರ್ವಕವಾಗಿ ಪಿತೃಕಾರ್ಯ, ತರ್ಪಣ ಹಾಗೂ ಪಿಂಡಪ್ರದಾನ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು.
ಗೋಪಾಲಾಚಾರ್ಯ ಅಕಮಂಚಿ ಅವರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿವಿಧಾನಗಳು ಸುಸೂತ್ರವಾಗಿ ನಡೆದವು. ಸುರಪುರದ ಪವನ್ ಕುಲಕರ್ಣಿ ಹಾಗೂ ಅವರ ತಂಡದವರು ಪ್ರತಿದಿನ ಪ್ರಸಾದ ವಿತರಿಸುವ ಮೂಲಕ ಮಹತ್ವದ ಕೊಡುಗೆ ನೀಡಿದರು.
ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಭಕ್ತಾದಿಗಳು ದೇವಸ್ಥಾನದಲ್ಲಿ ಕಲ್ಪಿಸಲಾದ ವ್ಯವಸ್ಥೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಪಿತೃಪಕ್ಷದ ಧಾರ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ದೇವಸ್ಥಾನದ ಈ ಸೇವಾ ಕಾರ್ಯವು ಸಾರ್ವಜನಿಕರ ಗಮನ ಸೆಳೆಯಿತು.
ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲ ಕರ್ತೃಗಳು, ಭಕ್ತಾದಿಗಳು, ಸೇವಾಕರ್ತರು ಹಾಗೂ ಪಕ್ಷ ಮಾಸ ಸೇವಾ ಸಮಿತಿಯ ಸದಸ್ಯರಿಗೆ ದೇವಸ್ಥಾನದ ಅಧ್ಯಕ್ಷ ಅವಿನಾಶ್ ಕುಲಕರ್ಣಿ ರೇವೂರ್ ಮತ್ತು ಕಾರ್ಯದರ್ಶಿ ವಿಶ್ವಾಸ್ ಮೊಘೇಕರ್ ಕೃತಜ್ಞತೆ ಸಲ್ಲಿಸಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
