ಪ್ರೇಮವೆಂಬುದು ಎರಡು ಜೀವಗಳ ನಡುವಿನ ಅತ್ಯಂತ ಪವಿತ್ರವಾದ ಭಾವನಾತ್ಮಕ ಬಂಧ. ಭಾರತೀಯ ಸಮಾಜವು ಶತಮಾನಗಳಿಂದಲೂ ವ್ಯಕ್ತಿಗತ ಆಯ್ಕೆ ಮತ್ತು ವೈವಾಹಿಕ ಸ್ವಾತಂತ್ರ್ಯವನ್ನು ಗೌರವಿಸುತ್ತಾ ಬಂದಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಪವಿತ್ರ ಭಾವನೆಯ ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡು, ವ್ಯವಸ್ಥಿತ ತಂತ್ರಗಾರಿಕೆಯ ಮೂಲಕ ಅಮಾಯಕ ಯುವತಿಯರನ್ನು ಬಲೆಗೆ ಬೀಳಿಸುವ ‘ಲವ್ ಜಿಹಾದ್’ ಎಂಬ ಕರಾಳ ವಾಸ್ತವ ದೇಶದ ಮುಂದೆ ಗಂಭೀರ ಸವಾಲಾಗಿ ಪರಿಣಮಿಸಿದೆ. ಆರಂಭದಲ್ಲಿ ಇದನ್ನು ಕೇವಲ ಕಾಲ್ಪನಿಕ ಕತೆ ಅಥವಾ ಕೋಮು ದ್ವೇಷದ ಅಪಪ್ರಚಾರವೆಂದು ತಳ್ಳಿಹಾಕುವ ಪ್ರಯತ್ನಗಳು ನಡೆದರೂ, ತನಿಖೆಗಳು ಮತ್ತು ಕಾನೂನು ಸಂಸ್ಥೆಗಳ ವರದಿಗಳು ಇದರ ಭೀಕರತೆಯನ್ನು ಜಗಜ್ಜಾಹೇರುಗೊಳಿಸಿವೆ.
ಇದು ತೀರ ಸಾಮಾನ್ಯವಾದ ವೈಯಕ್ತಿಕ ತಿಕ್ಕಾಟವಲ್ಲ; ಬದಲಿಗೆ ಕಾರ್ಪೊರೇಟ್ ಶೈಲಿಯಲ್ಲಿ ಕಾರ್ಯಾಚರಿಸುವ ಬೃಹತ್ ಸಿಂಡಿಕೇಟ್. ಉತ್ತರ ಪ್ರದೇಶದ ಛಂಗೂರ್ ಬಾಬಾ ಪ್ರಕರಣದಲ್ಲಿ ಬಯಲಾದಂತೆ, ಗಲ್ಫ್ ದೇಶಗಳಿಂದ ಹವಾಲಾ ಮೂಲಕ ಕೋಟ್ಯಂತರ ಹಣ ಹರಿದುಬಂದಿರುವುದು ಹಾಗೂ ಹಿಂದೂ ಯುವತಿಯರ ಜಾತಿ ಆಧಾರಿತ ‘ದರ ಪಟ್ಟಿ’ (ರೇಟ್ ಕಾರ್ಡ್) ನಿಗದಿಪಡಿಸಿರುವುದು ಇಡೀ ಸಮಾಜದ ಸಾಕ್ಷಿಪ್ರಜ್ಞೆಯನ್ನು ಬೆಚ್ಚಿಬೀಳಿಸಿದೆ. ನಕಲಿ ಹೆಸರುಗಳಿಂದ ನಂಬಿಸಿ, ಆರಂಭದಲ್ಲಿ ಅತಿಪ್ರೀತಿ ಪ್ರದರ್ಶಿಸಿ, ನಂತರ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ಚಿತ್ರೀಕರಿಸಿ ಬ್ಲ್ಯಾಕ್ಮೇಲ್ ಮಾಡುವ ಮೂಲಕ ಮತಾಂತರಕ್ಕೆ ಒತ್ತಾಯಿಸುವುದು ಈ ಜಾಲದ ನಿತ್ಯದ ಕೃತ್ಯವಾಗಿದೆ. ಹುಬ್ಬಳ್ಳಿಯ ನೇಹಾ ಹಿರೇಮಠ್ ಹತ್ಯೆ ಸೇರಿದಂತೆ ದೇಶದ ವಿವಿಧೆಡೆ ನಡೆದ ನೂರಾರು ಘಟನೆಗಳು ಈ ಸಂಘಟಿತ ಅಪರಾಧದ ವಿಕೃತ ಮುಖವನ್ನು ತೆರೆದಿಟ್ಟಿವೆ.
ಮಾಧ್ಯಮಗಳಲ್ಲಿ ಪ್ರಕಟವಾಗಿ ಬೆಳಕಿಗೆ ಬಂದ ಇಂತಹ ‘ಲವ್ ಜಿಹಾದ್’ ಪ್ರಕರಣಗಳು ಕೆಲವೇ ಕೆಲವು. ಆದರೆ ಬೆಳಕಿಗೆ ಬಾರದೆ ಇರುವ ಹಲವಾರು ಪ್ರಕರಣಗಳು ಇನ್ನೂ ಇರಬಹುದು. ಪ್ರಸ್ತುತ ಕಾಲಘಟ್ಟದ ಹಿಂದೂ ಸಮಾಜ ಎದುರಿಸುತ್ತಿರುವ ಅತಿ ಗಂಭೀರ ಸಮಸ್ಯೆ ಇದು. ಬರೀ ಹಿಂದೂ ಸಮಾಜವಷ್ಟೇ ಅಲ್ಲ, ಕ್ರೈಸ್ತ ಸಮುದಾಯದ ಹೆಣ್ಣುಮಕ್ಕಳೂ ಇಂತಹ ಲವ್ ಜಿಹಾದ್ಗೆ ಬಲಿಯಾದ ಪ್ರಕರಣಗಳು ಕೇರಳದಲ್ಲಿ ಬಹಳಷ್ಟು ದಾಖಲಾಗಿವೆ.
ಈ ಸಮಸ್ಯೆಯ ಬಹು ಆಯಾಮಗಳನ್ನು ಗಮನಿಸಿದಾಗ, ಇಲ್ಲಿ ಕೇವಲ ಯುವಕನಷ್ಟೇ ಅಲ್ಲದೆ ಆತನ ಇಡೀ ಕುಟುಂಬ ಹಾಗೂ ಪ್ರಭಾವಿ ಜಾಲಗಳು ಹಿನ್ನೆಲೆಯಲ್ಲಿ ಕೆಲಸ ಮಾಡುತ್ತಿರುವುದು ಕಂಡುಬರುತ್ತದೆ. ದುರಂತವೆಂದರೆ, ನೊಂದ ಪೋಷಕರು ಠಾಣೆಯ ಮೆಟ್ಟಿಲೇರಿದಾಗ ರಾಜಕೀಯ ತುಷ್ಟೀಕರಣ ಮತ್ತು ಮತಬ್ಯಾಂಕ್ ರಾಜಕಾರಣದಿಂದಾಗಿ ಆಡಳಿತ ಯಂತ್ರ ಹಾಗೂ ಪೊಲೀಸರು ಕೆಲವೊಮ್ಮೆ ನಿಷ್ಕ್ರಿಯರಾಗುತ್ತಿದ್ದಾರೆ.
ಈ ಗಂಭೀರ ಸಮಸ್ಯೆಗೆ ಪರಿಹಾರೋಪಾಯಗಳು ಅತ್ಯಾವಶ್ಯಕವಾಗಿವೆ. ಸಾಮಾನ್ಯ ಅಪರಾಧ ತಡೆ ಕಾಯ್ದೆಗಳಿಂದ ಇಂತಹ ಸಂಘಟಿತ ಜಾಲಗಳನ್ನು ಮಟ್ಟಹಾಕುವುದು ಅಸಾಧ್ಯವಾದ್ದರಿಂದ, ಸರ್ಕಾರಗಳು ಪ್ರತ್ಯೇಕವಾದ ಮತ್ತು ಕಠಿಣವಾದ ‘ಟೈಲರ್-ಮೇಡ್’ (tailor-made) ಕಾನೂನನ್ನು ರೂಪಿಸಿ ಜಾರಿಗೆ ತರಬೇಕು.
ಕುಟುಂಬದ ಪಾತ್ರ ಮತ್ತು ಸಂವಾದ: ಮನೆಗಳಲ್ಲಿ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯದ ಜತೆಗೆ ಎಚ್ಚರಿಕೆಯ ಪಾಠಗಳನ್ನು ಹೇಳಿಕೊಡಬೇಕು. ಪೋಷಕರ ಎಚ್ಚರಿಕೆಗಳನ್ನು ನಿರ್ಬಂಧ ಎಂದು ಭಾವಿಸದೆ ರಕ್ಷಣಾ ಕವಚವೆಂದು ತಿಳಿಯುವ ಸಂಸ್ಕೃತಿ ಬೆಳೆಯಬೇಕು.
ಯುವತಿಯರು ವಿವೇಚನೆಯಿಂದ ನಡೆದುಕೊಳ್ಳಬೇಕು. ಆಧುನಿಕ ಯುವತಿಯರು ಸ್ನೇಹಿತರನ್ನು ಅಥವಾ ಸಂಗಾತಿಯನ್ನು ಆಯ್ಕೆ ಮಾಡುವಾಗ ಅವರ ಹಿನ್ನೆಲೆ, ಸಾಮಾಜಿಕ ಜಾಲತಾಣಗಳ ನೈಜತೆ ಹಾಗೂ ಗುರುತಿನ ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವುದು ಜಾಣತನ. ಯಾವುದೇ ಬ್ಲ್ಯಾಕ್ಮೇಲ್ ಅಥವಾ ಬೆದರಿಕೆಗೆ ಹೆದರದೆ ತಕ್ಷಣವೇ ಹೆತ್ತವರ ಅಥವಾ ಕಾನೂನು ನೆರವು ಪಡೆದುಕೊಳ್ಳಬೇಕು.
ಸಾಮಾಜಿಕ ಬೆಂಬಲವೂ ಅಷ್ಟೇ ಮುಖ್ಯ. ಸಂಕಷ್ಟಕ್ಕೀಡಾದ ಕುಟುಂಬಗಳಿಗೆ ಕೇವಲ ಪೊಲೀಸರಷ್ಟೇ ಅಲ್ಲದೆ, ಇಡೀ ಸಮಾಜ ಮತ್ತು ಸಂಘಟನೆಗಳು ಬಂಡೆಯಂತೆ ಬೆನ್ನಿಗೆ ನಿಲ್ಲಬೇಕು.
ಮತಬ್ಯಾಂಕ್ ರಾಜಕಾರಣವನ್ನು ಬದಿಗಿಟ್ಟು, ಹೆಣ್ಣುಮಕ್ಕಳ ರಕ್ಷಣೆ ಮತ್ತು ಕುಟುಂಬಗಳ ಘನತೆಗೆ ಮೊದಲ ಆದ್ಯತೆ ನೀಡುವ ಬದ್ಧತೆಯನ್ನು ಬೆಳೆಸಿಕೊಳ್ಳದಿದ್ದರೆ, ನಾಗರಿಕ ಸಮಾಜ ದೊಡ್ಡ ಬೆಲೆ ತೆರಬೇಕಾಗುತ್ತದೆ. ಪ್ರೇಮವೆನ್ನುವುದು ಜನಸಂಖ್ಯಾ ಸಮರದ ಆಯುಧವಾಗದೆ, ಪರಸ್ಪರ ನಂಬಿಕೆಯ ಪವಿತ್ರ ಸಂಗಮವಾಗಿ ಉಳಿಯಬೇಕು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
