ಭಾರತದ ಈಶಾನ್ಯ ರಾಜ್ಯಗಳನ್ನು ತೀರಾ ಇತ್ತೀಚಿನವರೆಗೂ ಸ್ವತಂತ್ರ ಭಾರತದ ಮುಖ್ಯವಾಹಿನಿಯು ಒಂದು ಸುದೂರದ, ದಟ್ಟ ಅರಣ್ಯಗಳಿಂದ ಆವೃತವಾದ, ಹೊರಜಗತ್ತಿನ ಸಂಪರ್ಕವೇ ಇಲ್ಲದ ‘ಪ್ರತ್ಯೇಕಿಸಲ್ಪಟ್ಟ ಸೀಮಾಂತ’ (ಫ್ರಾಂಟಿಯರ್) ಎಂದೇ ಭಾವಿಸುತ್ತಾ ಬಂದಿದೆ. ಆದರೆ, ಆನಂದಿತಾ ಸಿಂಗ್ ಅವರ ಲೇಖನವು ಉಲ್ಲೇಖಿಸುವ ಐತಿಹಾಸಿಕ ದಾಖಲೆಗಳು ಈ ಸಾಂಪ್ರದಾಯಿಕ ಭಾವನೆಯನ್ನು ಸಂಪೂರ್ಣವಾಗಿ ನಿರಾಕರಿಸುತ್ತವೆ. ವಸಾಹತುಶಾಹಿ ಆಡಳಿತ ಮತ್ತು ತದನಂತರದ ರಾಜಕೀಯ ನಿರೂಪಣೆಗಳು ಸೃಷ್ಟಿಸಿದ ‘ಒಂಟಿ ಈಶಾನ್ಯ’ ಎಂಬುದು ಕೇವಲ ಒಂದು ಭ್ರಮೆಯಷ್ಟೇ. ವಾಸ್ತವದಲ್ಲಿ, 1947ರ ಗಡಿರೇಖೆಗಳಿಗಿಂತ ಬಹುಶತಮಾನಗಳ ಮುಂಚೆಯೇ ಈ ಪ್ರದೇಶವು ಜಾಗತಿಕ ವಾಣಿಜ್ಯ, ಜ್ಞಾನ ಮತ್ತು ರಾಜತಾಂತ್ರಿಕ ಜಾಲಗಳೊಂದಿಗೆ ಜೀವಂತ ಸಂಪರ್ಕವನ್ನು ಹೊಂದಿದ್ದ ಒಂದು ಸ್ವಾಯತ್ತ ಭೂಭಾಗವಾಗಿತ್ತು.
ಈಶ್ಯಾನ್ಯದ ಜಾಗತಿಕ ಸಂಪರ್ಕಕ್ಕೆ ಪ್ರಾಚೀನ ಮತ್ತು ಮಧ್ಯಕಾಲೀನ ಇತಿಹಾಸದಲ್ಲಿ ಅಪಾರ ಕುರುಹುಗಳಿವೆ. ಕ್ರಿಸ್ತಪೂರ್ವ 4ನೇ ಶತಮಾನದಲ್ಲೇ ಗ್ರೀಕ್ ಬರಹಗಾರ ಮೆಗಾಸ್ಥನೀಸ್, ಸ್ಟ್ರಾಬೋ ಮತ್ತು ಪ್ಲಿನಿ ತಮ್ಮ ಬರವಣಿಗೆಗಳಲ್ಲಿ ಬ್ರಹ್ಮಪುತ್ರ ನದಿ ಕಣಿವೆ ಹಾಗೂ ಅಸ್ಸಾಂನ ರೇಷ್ಮೆ-ಚಿನ್ನದ ವ್ಯಾಪಾರ ಮಾರ್ಗಗಳನ್ನು ದಾಖಲಿಸಿದ್ದಾರೆ. 7ನೇ ಶತಮಾನದಲ್ಲಿ ಕಾಮರೂಪದ ಅರಸ ಭಾಸ್ಕರವರ್ಮನ ಆಹ್ವಾನದ ಮೇರೆಗೆ ಆಗಮಿಸಿದ್ದ ಚೀನಿ ಪ್ರವಾಸಿ ಹುಯೆನ್ ತ್ಸಾಂಗ್ ಕಂಡಿದ್ದು, ಜ್ಞಾನಿಗಳಿಂದ ಕೂಡಿದ ಮತ್ತು ಬೌದ್ಧಿಕವಾಗಿ ಸಮೃದ್ಧವಾಗಿದ್ದ ಸಾಮ್ರಾಜ್ಯವನ್ನು. ಮಿನ್ಹಾಜ್-ಇ-ಸಿರಾಜ್, ಅಬ್ದುಲ್ ಹಮೀದ್ ಲಾಹೋರಿ ಅವರಂತಹ ಪರ್ಷಿಯನ್ ಚರಿತ್ರಕಾರರು ಕಾಮರೂಪ, ಕೋಚ್ ಮತ್ತು ಅಹೋಮ್ ಸಾಮ್ರಾಜ್ಯಗಳನ್ನು ಭಾರತೀಯ ಉಪಖಂಡದ ಪ್ರಮುಖ ಯುದ್ಧ ಮತ್ತು ರಾಜತಾಂತ್ರಿಕ ಸ್ಪರ್ಧೆಗಳ ಪ್ರಮುಖ ಭಾಗವಾಗಿಯೇ ಚಿತ್ರಿಸಿದ್ದಾರೆ.
ಹದಿನಾರನೇ ಶತಮಾನದಿಂದೀಚೆಗೆ ಚಿತ್ತಗಾಂಗ್, ಹಾಜೋ ಮತ್ತು ಪಾಂಡು ಮಾರ್ಗವಾಗಿ ಭೇಟಿ ನೀಡಿದ ಪೋರ್ಚುಗೀಸ್, ಜೇಸುಯಿಟ್, ಡಚ್ ಮತ್ತು ಫ್ರೆಂಚ್ ಪ್ರವಾಸಿಗರು ಈ ಪ್ರದೇಶದ ಆರ್ಥಿಕ ಸಂಪತ್ತನ್ನು ಮುಕ್ತವಾಗಿ ಕೊಂಡಾಡಿದ್ದಾರೆ. ಬಂಗಾಳ ಮತ್ತು ಅಸ್ಸಾಂ ನಡುವೆ ಅಸ್ತಿತ್ವದಲ್ಲಿದ್ದ ನಾಲ್ಕು ಪ್ರಮುಖ ಭೂ ಹಾಗೂ ಜಲಸಾರಿಗೆ ಮಾರ್ಗಗಳು ನಿರಂತರ ವ್ಯಾಪಾರಕ್ಕೆ ರಹದಾರಿಯಾಗಿದ್ದವು. ಮುಗಾ ರೇಷ್ಮೆ, ಅರಗು, ಕಪ್ಪು ಮೆಣಸು ಮತ್ತು ನೌಕಾ ನಿರ್ಮಾಣಕ್ಕೆ ಶ್ರೇಷ್ಠ ದರ್ಜೆಯ ಮರಮುಟ್ಟುಗಳು ಜಾಗತಿಕ ಮಾರುಕಟ್ಟೆಯನ್ನು ಆಕರ್ಷಿಸಿದ್ದವು. 1755ರಲ್ಲಿ ಫ್ರೆಂಚ್ ಪ್ರತಿನಿಧಿ ಜೀನ್-ಬ್ಯಾಪ್ಟಿಸ್ಟ್ ಚೆವಾಲಿಯರ್ ಕೈಗೊಂಡ ಅಧ್ಯಯನಗಳು, ಯುರೋಪಿಯನ್ ಶಕ್ತಿಗಳು ಕೇವಲ ಕುತೂಹಲಕ್ಕಾಗಿಯಲ್ಲದೆ, ಅಲ್ಲಿನ ಕಾರ್ಯತಂತ್ರ ಮತ್ತು ಆರ್ಥಿಕ ಸಾಧ್ಯತೆಗಳಿಗಾಗಿಯೇ ಅಪಾರ ಶ್ರಮ ವಹಿಸಿದ್ದವು ಎಂಬುದನ್ನು ಸ್ಪಷ್ಟಪಡಿಸುತ್ತವೆ.
ಇಲ್ಲಿ ಗಮನಿಸಬೇಕಾದ ಅತ್ಯಂತ ಪ್ರಮುಖ ಅಂಶವೆಂದರೆ ಈ ಪ್ರದೇಶದ ‘ರಾಜಕೀಯ ಸ್ವಾಯತ್ತತೆ’. ಹೊರಗಿನಿಂದ ಬಂದ ಸೈನಿಕರು, ವರ್ತಕರು ಮತ್ತು ಪ್ರವಾಸಿಗರನ್ನು ಸ್ವಾಗತಿಸುತ್ತಲೇ, ತಮ್ಮ ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಬಂದ ಯುರೋಪಿಯನ್ ಶಕ್ತಿಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸುವ ಸಾಮರ್ಥ್ಯವನ್ನು ಇಲ್ಲಿನ ಸಾಮ್ರಾಜ್ಯಗಳು ಹೊಂದಿದ್ದವು. ಚೆವಾಲಿಯರ್ನ ವ್ಯಾಪಾರಿ ವಿಸ್ತರಣೆಗೆ ಅಹೋಮ್ ಆಡಳಿತಗಾರರು ಹಾಕಿದ ತಡೆಗೋಡೆಯೇ ಇದಕ್ಕೆ ನಿದರ್ಶನ.
ಆದ್ದರಿಂದ, ಬ್ರಿಟಿಷರ ಆಗಮನದೊಂದಿಗೆ ಸಂಭವಿಸಿದ್ದು ‘ಒಂಟಿಯಾಗಿದ್ದ ಪ್ರದೇಶದ ಶೋಧನೆ’ಯಲ್ಲ, ಬದಲಾಗಿ ಈಗಾಗಲೇ ಅಸ್ತಿತ್ವದಲ್ಲಿದ್ದ ನೈಸರ್ಗಿಕ ಸಂಪರ್ಕಶೀಲತೆಯನ್ನು ವಸಾಹತುಶಾಹಿ ನಿಯಂತ್ರಣವಾಗಿ ರೂಪಾಂತರಿಸಿದ ಪ್ರಕ್ರಿಯೆ. ಇತಿಹಾಸವನ್ನು ಭೌಗೋಳಿಕ ಗಡಿಗಳ ಹಿಮ್ಮುಖ ಚೌಕಟ್ಟಿನಲ್ಲಿ ನೋಡುವುದನ್ನು ಬಿಟ್ಟು, ಈಶಾನ್ಯ ಭಾರತವು ಅನಾದಿ ಕಾಲದಿಂದಲೂ ತನ್ನದೇ ಆದ ಸ್ವಾಯತ್ತತೆ, ರಾಜಕೀಯ ಪ್ರಬುದ್ಧತೆ ಮತ್ತು ಜಾಗತಿಕ ಬಾಂಧವ್ಯ ಹೊಂದಿದ್ದ ಶಕ್ತಿಯುತ ಕೇಂದ್ರವಾಗಿತ್ತು ಎಂಬುದನ್ನು ಒಪ್ಪಿಕೊಳ್ಳುವುದೇ ನಾವು ಆ ಪ್ರದೇಶಕ್ಕೆ ನೀಡಬಹುದಾದ ನಿಜವಾದ ಐತಿಹಾಸಿಕ ನ್ಯಾಯ.
ಈಶಾನ್ಯದ ಗಡಿ ಭದ್ರತೆ ಮತ್ತು ವಿದೇಶಿ ತಂತ್ರಜ್ಞಾನದ ಸವಾಲು
ಮ್ಯಾನ್ಮಾರ್ನ ವಿದ್ರೋಹಿ ಗುಂಪುಗಳಿಗೆ ಡ್ರೋನ್ ತಂತ್ರಜ್ಞಾನ ಮತ್ತು ಮಿಲಿಟರಿ ತರಬೇತಿ ನೀಡುತ್ತಿದ್ದ ಅಮೆರಿಕದ ಮ್ಯಾಥ್ಯೂ ವ್ಯಾಂಡೈಕ್ ಹಾಗೂ ಉಕ್ರೇನ್ ಪ್ರಜೆಗಳ ವಿರುದ್ಧ ಎನ್ಐಎ (NIA) ತನಿಖೆ ನಡೆಸಿ ಚಾರ್ಜ್ಶೀಟ್ ಸಲ್ಲಿಸಿರುವುದು ಭಾರತದ ರಾಷ್ಟ್ರೀಯ ಭದ್ರತೆಗೆ ಎದುರಾಗಿರುವ ಗಂಭೀರ ಸವಾಲನ್ನು ತೋರಿಸುತ್ತದೆ.
ಪೂರ್ವ ಗಡಿಪ್ರದೇಶ ಹಾಗೂ ಈಶಾನ್ಯ ರಾಜ್ಯಗಳಲ್ಲಿ ನೆಮ್ಮದಿ ಕಾಯ್ದುಕೊಳ್ಳುವುದು ಭಾರತದ ಆದ್ಯತೆಯಾಗಿದೆ. ವಿದೇಶಿ ಕೂಲಿ ಸೈನಿಕರು (Mercenaries) ಭಾರತದ ಗಡಿಯನ್ನು ಬಳಸಿಕೊಂಡು ನೆರೆರಾಷ್ಟ್ರದ ಉಗ್ರಗಾಮಿ ಗುಂಪುಗಳಿಗೆ ಆಧುನಿಕ ಡ್ರೋನ್ ಮತ್ತು ಯುದ್ಧ ತರಬೇತಿ ನೀಡುವುದು ದೇಶದ ಆಂತರಿಕ ರಕ್ಷಣೆಗೆ ಬಹುದೊಡ್ಡ ಬೆದರಿಕೆಯಾಗಿದೆ.
ಸದ್ಯ ಎನ್ಐಎ ವಿದೇಶಿಯರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರೂ, ಇದರ ಹಿಂದಿರುವ ಸಶಸ್ತ್ರ ಜಾಲ ಮತ್ತು ಉಗ್ರರ ಸಂಪರ್ಕದ ಕುರಿತು ಯುಎಪಿಎ (UAPA) ಅಡಿಯಲ್ಲಿ ಕಠಿಣ ತನಿಖೆ ಮುಂದುವರಿಸಬೇಕಿದೆ. ತಾಂತ್ರಿಕ ಯುದ್ಧತಂತ್ರಗಳು ಗಡಿದಾಟಿ ಬೆಳೆಯುತ್ತಿರುವ ಈ ಸಮಯದಲ್ಲಿ, ಭಾರತವು ತನ್ನ ಗಡಿ ಕಾವಲು ಮತ್ತು ವಲಸೆ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸುವುದು ಅತ್ಯಗತ್ಯ.

ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
