ತಂತ್ರಜ್ಞಾನದ ಅತಿಯಾದ ವ್ಯಾಮೋಹ ಹಾಗೂ ಸಾಮಾಜಿಕ ಜಾಲತಾಣಗಳ ಅನಿಯಂತ್ರಿತ ಬಳಕೆ ಇಂದು ಎಳೆಯ ಮನಸ್ಸುಗಳ ಮೇಲೆ ಬೀರುತ್ತಿರುವ ದುಷ್ಪರಿಣಾಮ ಸಾರ್ವಜನಿಕ ಆರೋಗ್ಯದ ಗಂಭೀರ ಸಮಸ್ಯೆಯಾಗಿ ಮಾರ್ಪಟ್ಟಿದೆ. 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಯನ್ನು ನಿರ್ಬಂಧಿಸಲು ಫ್ರಾನ್ಸ್ ಸರ್ಕಾರ ಕೈಗೊಂಡಿರುವ ದಿಟ್ಟ ನಿರ್ಧಾರವು ಜಾಗತಿಕ ಮಟ್ಟದಲ್ಲಿ ಹೊಸ ದಾರಿದೀಪವಾಗಿದೆ. 40 ಕೋಟಿಗೂ ಹೆಚ್ಚು ಮಕ್ಕಳನ್ನು ಹೊಂದಿರುವ ಭಾರತಕ್ಕೂ ಈ ಕ್ರಮ ಅತ್ಯಂತ ಪ್ರಸ್ತುತ ಹಾಗೂ ಕಣ್ಣು ತೆರೆಸುವಂತದ್ದಾಗಿದೆ.
ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಹಾಗೂ ಇಂಟರ್ನೆಟ್ ಸಂಪರ್ಕ ಸುಲಭವಾಗಿ ಸಿಗುತ್ತಿರುವುದು ಶೈಕ್ಷಣಿಕವಾಗಿ ನೆರವಾಗುವುದಕ್ಕಿಂತ ಹೆಚ್ಚಾಗಿ ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುತ್ತಿದೆ. ಪುಸ್ತಕ ಓದುವ, ಮೈದಾನದಲ್ಲಿ ಆಟವಾಡುವ ಹಾಗೂ ನೈತಿಕ ಮೌಲ್ಯಗಳನ್ನು ಕಲಿಯಬೇಕಾದ ವಯಸ್ಸಿನಲ್ಲಿ ಸ್ಮಾರ್ಟ್ಫೋನ್ಗಳು ಅವರ ಕೈಸೇರಿವೆ. ಇದರ ಪರಿಣಾಮವಾಗಿ ಏಕಾಗ್ರತೆಯ ಕೊರತೆ, ಖಿನ್ನತೆ, ಸೈಬರ್ ಬುಲ್ಲಿಯಿಂಗ್, ಆನ್ಲೈನ್ ಗೇಮಿಂಗ್ ವ್ಯಸನ ಹಾಗೂ ಆತ್ಮಹತ್ಯೆಯಂತಹ ಘಟನೆಗಳು ನಿರಂತರವಾಗಿ ವರದಿಯಾಗುತ್ತಿವೆ. ದೆಹಲಿಯ ಏಮ್ಸ್ ಮತ್ತು ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಯ ತಜ್ಞರು ಎಚ್ಚರಿಸಿರುವಂತೆ, ಅತಿಯಾದ ಸ್ಕ್ರೀನ್ ಟೈಮ್ ಮಕ್ಕಳ ಮಿದುಳಿನ ಸಹಜ ಬೆಳವಣಿಗೆ ಮತ್ತು ಭಾವನಾತ್ಮಕ ಸಮತೋಲನದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ.
ಫ್ರಾನ್ಸ್ ಮಾತ್ರವಲ್ಲದೆ ಆಸ್ಟ್ರೇಲಿಯಾ, ಸ್ಪೇನ್ ಮತ್ತು ಡೆನ್ಮಾರ್ಕ್ ದೇಶಗಳು ಈಗಾಗಲೇ ವಯೋ ಆಧಾರಿತ ನಿರ್ಬಂಧಗಳನ್ನು ತಂದು, ನಿಯಮ ಉಲ್ಲಂಘಿಸುವ ಕಂಪನಿಗಳಿಗೆ ಭಾರಿ ದಂಡ ವಿಧಿಸುವ ವ್ಯವಸ್ಥೆ ಮಾಡಿವೆ. ಆದರೆ 95 ಕೋಟಿಗೂ ಹೆಚ್ಚು ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ ಭಾರತದಲ್ಲಿ ಈ ಸವಾಲು ಮತ್ತಷ್ಟು ಸಂಕೀರ್ಣವಾಗಿದೆ. ಭಾರತದಲ್ಲೂ ಡಿಜಿಟಲ್ ವೈಯಕ್ತಿಕ ದತ್ತಾಂಶ ರಕ್ಷಣಾ ಕಾಯ್ದೆ (DPDP) ಜಾರಿಯಲ್ಲಿದ್ದರೂ, ಮಕ್ಕಳ ಸೋಷಿಯಲ್ ಮೀಡಿಯಾ ಬಳಕೆಯನ್ನು ಕಡ್ಡಾಯವಾಗಿ ನಿಯಂತ್ರಿಸುವ ಕಟ್ಟುನಿಟ್ಟಿನ ‘ವಯಸ್ಸು ಪರಿಶೀಲನೆ’ (Age Verification) ವ್ಯವಸ್ಥೆಯ ಕೊರತೆ ಎದ್ದು ಕಾಣುತ್ತಿದೆ.
ಈ ತಕ್ಷಣವೇ ಭಾರತ ಸರ್ಕಾರವು ಫ್ರಾನ್ಸ್ ಮತ್ತು ಆಸ್ಟ್ರೇಲಿಯಾ ಮಾದರಿಯಲ್ಲಿ ಬಲಿಷ್ಠ ಡಿಜಿಟಲ್ ಕಾಯ್ದೆಯನ್ನು ತರಬೇಕಿದೆ. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಖಾತೆ ತೆರೆಯಲು ಪೋಷಕರ ಅನುಮತಿ ಮತ್ತು ಕಡ್ಡಾಯ ವಯಸ್ಸಿನ ದೃಢೀಕರಣವನ್ನು ಕಡ್ಡಾಯಗೊಳಿಸಬೇಕು. ಸೋಶಿಯಲ್ ಮೀಡಿಯಾ ಕಂಪನಿಗಳು ಮಕ್ಕಳನ್ನು ಸೆಳೆಯಲು ಬಳಸುವ ಅಪಾಯಕಾರಿ ಆಲ್ಗರಿದಮ್ಗಳ ಮೇಲೆ ನಿಯಂತ್ರಣ ಹೇರುವುದು ಅತ್ಯಗತ್ಯ. ಶಾಲೆಗಳಲ್ಲಿ ಡಿಜಿಟಲ್ ಶಿಸ್ತನ್ನು ಕಡ್ಡಾಯಗೊಳಿಸುವುದರ ಜೊತೆಗೆ, ಪ್ರತಿಯೊಂದು ಜಿಲ್ಲೆಯಲ್ಲೂ ಡಿಜಿಟಲ್ ವ್ಯಸನ ಮುಕ್ತಿಗಾಗಿ ಕೌನ್ಸೆಲಿಂಗ್ ಕೇಂದ್ರಗಳನ್ನು ಸ್ಥಾಪಿಸಬೇಕಿದೆ.
‘ತಂತ್ರಜ್ಞಾನದ ಪ್ರಭಾವಕ್ಕಿಂತ ಬಾಲ್ಯದ ರಕ್ಷಣೆಗೆ ಮೊದಲ ಆದ್ಯತೆ’ ಎಂಬ ತತ್ವವನ್ನು ನಾವು ಒಪ್ಪಿಕೊಳ್ಳಲೇಬೇಕಿದೆ. ದೇಶದ ಭವಿಷ್ಯವಾಗಿರುವ 40 ಕೋಟಿ ಮಕ್ಕಳ ಮಾನಸಿಕ ಆರೋಗ್ಯ ಹಾಗೂ ಭದ್ರತೆಯನ್ನು ಕಾಯ್ದುಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಷ್ಟ್ರೀಯ ಮಟ್ಟದ ‘ಸುರಕ್ಷಿತ ಡಿಜಿಟಲ್ ಬಾಲ್ಯ ಮಿಷನ್’ ಅನ್ನು ತಕ್ಷಣವೇ ಪ್ರಾರಂಭಿಸಬೇಕಿದೆ. ವಿಕಸಿತ ಭಾರತದ ನಿರ್ಮಾಣಕ್ಕೆ ಮಕ್ಕಳ ಭವಿಷ್ಯವನ್ನು ಡಿಜಿಟಲ್ ವ್ಯಸನದಿಂದ ರಕ್ಷಿಸುವುದೇ ಮೊದಲ ಹೆಜ್ಜೆಯಾಗಬೇಕು.
ಬದಲಾಗುತ್ತಿರುವ ಜಗತ್ತು, ನಾಯಕತ್ವದ ಹಾದಿಯಲ್ಲಿ ಭಾರತ
ದಿಶಾ ಭಾರತ್ ಆಯೋಜಿಸಿದ್ದ ‘ಮೈಭಾರತ್’ ಸರಣಿಯ ಉಪನ್ಯಾಸ ಮಾಲಿಕೆಯಲ್ಲಿ, ಹೆಸರಾಂತ ಚಿಂತಕ ಡಾ. ರಾಮ್ ಮಾಧವ್ ಅವರು ಬದಲಾಗುತ್ತಿರುವ ಜಾಗತಿಕ ವ್ಯವಸ್ಥೆಯಲ್ಲಿ ಭಾರತದ ಕಾರ್ಯತಂತ್ರದ ಕುರಿತು ಮಹತ್ವದ ವಿಚಾರ ಮಂಡಿಸಿದರು. ಪಾಶ್ಚಿಮಾತ್ಯ ಆಧಿಪತ್ಯ ಕ್ಷೀಣಿಸುತ್ತಿರುವ ಈ ಮಧ್ಯಂತರ ಕಾಲಘಟ್ಟದಲ್ಲಿ, ಜಾಗತಿಕ ಪ್ರಭಾವದ ಕೇಂದ್ರಬಿಂದು ಇಂಡೋ-ಪೆಸಿಫಿಕ್ ಪ್ರದೇಶಕ್ಕೆ ಸ್ಥಳಾಂತರಗೊಳ್ಳುತ್ತಿದೆ. ಈ ಸಂದರ್ಭದಲ್ಲಿ ಭಾರತವು ಮುಕ್ತ ಹಾಗೂ ಸಮಗ್ರ ಜಾಗತಿಕ ಪಾಲುದಾರಿಕೆಯನ್ನು ಪ್ರತಿಪಾದಿಸುತ್ತಿದೆ.
ಮಧ್ಯಪ್ರಾಚ್ಯದ ಅಸ್ಥಿರತೆ, ಚೀನಾದ ಆಧಿಪತ್ಯ ಮತ್ತು ವ್ಯಾಪಾರ ಕೊರತೆಯ ಸವಾಲುಗಳನ್ನು ಎದುರಿಸಲು ನಮಗೆ ತಾಂತ್ರಿಕ ನಾವೀನ್ಯತೆ ಹಾಗೂ ಯುವಜನತೆಗೆ ಸೂಕ್ತ ಕೌಶಲ್ಯಪೂರ್ಣ ಶಿಕ್ಷಣ ನೀಡುವುದು ಅತ್ಯಗತ್ಯ. ಸಂಘರ್ಷಗಳಿಂದ ದೂರವಿದ್ದು ಪ್ರಬುದ್ಧ ರಾಜತಾಂತ್ರಿಕತೆ ಮೆರೆಯುತ್ತಿರುವ ಭಾರತಕ್ಕೆ ಮುಂಬರುವ ಎರಡು ದಶಕಗಳು ಅತ್ಯಂತ ನಿರ್ಣಾಯಕವಾಗಿವೆ. 2047ರ ವೇಳೆಗೆ ಜವಾಬ್ದಾರಿಯುತ ಹಾಗೂ ಪ್ರಭಾವಶಾಲಿ ಜಾಗತಿಕ ಶಕ್ತಿಯಾಗಿ ‘ವಿಕಸಿತ ಭಾರತ’ವನ್ನು ನಿರ್ಮಿಸಲು ಸಮಾಜ ಮತ್ತು ಸರ್ಕಾರ ಒಂದಾಗಿ ಶ್ರಮಿಸಬೇಕಿದೆ.

ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
