ನವದೆಹಲಿ: ಬ್ರೆಜಿಲ್ ಅಧ್ಯಕ್ಷ ಲೂಯಿಜ್ ಇನಾಸಿಯೊ ಲೂಲಾ ಡ ಸಿಲ್ವಾ ಅವರು ಮರು ಆಯ್ಕೆಯಾದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಭಾರತ ಮತ್ತು ಬ್ರೆಜಿಲ್ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ವಿವಿಧ ಕ್ಷೇತ್ರಗಳಲ್ಲಿ ಎರಡೂ ದೇಶಗಳ ಸಹಕಾರವನ್ನು ಹೆಚ್ಚಿಸಲು ಒಟ್ಟಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ.
ಪ್ರಧಾನಿ ಮೋದಿ ಅವರು ಅಕ್ಟೋಬರ್ 26ರಂದು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಈ ಕುರಿತು ಸಂದೇಶ ಹಂಚಿಕೊಂಡಿದ್ದಾರೆ.
“ನನ್ನ ಆತ್ಮೀಯ ಸ್ನೇಹಿತ, ಅಧ್ಯಕ್ಷ ಲೂಲಾ ಅವರಿಗೆ ಅವರ ಗಮನಾರ್ಹ ಮರುಚುನಾವಣೆಯ ಗೆಲುವಿಗಾಗಿ ಹೃತ್ಪೂರ್ವಕ ಅಭಿನಂದನೆಗಳು. ಭಾರತ–ಬ್ರೆಜಿಲ್ ನಡುವಿನ ಬಹುಮುಖ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ವಿಸ್ತರಿಸಲು ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ” ಎಂದು ಮೋದಿ ಹೇಳಿದ್ದಾರೆ.
“ವಿವಿಧ ಕ್ಷೇತ್ರಗಳಲ್ಲಿ ನಮ್ಮ ಸಹಕಾರವನ್ನು ಇನ್ನಷ್ಟು ಬಲಪಡಿಸುವುದು, ಜಾಗತಿಕ ದಕ್ಷಿಣದ ದೇಶಗಳ ಸಾಮಾನ್ಯ ಆಶಯಗಳಿಗೆ ಬೆಂಬಲ ನೀಡುವುದು ಹಾಗೂ ಹೆಚ್ಚು ಒಳಗೊಳ್ಳುವಿಕೆ, ಸಮಾನತೆ ಮತ್ತು ಸುಸ್ಥಿರತೆಯನ್ನು ಹೊಂದಿರುವ ಜಗತ್ತಿನ ನಿರ್ಮಾಣಕ್ಕಾಗಿ ನಾವು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ” ಎಂದೂ ಅವರು ತಿಳಿಸಿದ್ದಾರೆ.
ಬೊಲ್ಸೊನಾರೊ ಅವರನ್ನು ಸೋಲಿಸಿದ ಲೂಲಾ; ನಿರ್ಧಾರಗಳಲ್ಲಿ ಜನರ ಪಾಲ್ಗೊಳ್ಳುವಿಕೆಗೆ ಒತ್ತು
80 ವರ್ಷದ ಮಾಜಿ ಕಾರ್ಖಾನೆ ಕಾರ್ಮಿಕರಾಗಿರುವ ಹಾಗೂ ವರ್ಕರ್ಸ್ ಪಾರ್ಟಿ (PT) ನಾಯಕ ಲೂಲಾ ಅವರು, ತೀವ್ರ ಪೈಪೋಟಿಯಿಂದ ಕೂಡಿದ್ದ ಅಧ್ಯಕ್ಷೀಯ ಚುನಾವಣೆಯ ಅಂತಿಮ ಸುತ್ತಿನಲ್ಲಿ ಫ್ಲಾವಿಯೊ ಬೊಲ್ಸೊನಾರೊ ಅವರನ್ನು ಸೋಲಿಸಿ ಮರು ಆಯ್ಕೆಯಾಗಿದ್ದಾರೆ. ಮೊದಲ ಸುತ್ತಿನಲ್ಲಿ ಇಬ್ಬರೂ ಅಭ್ಯರ್ಥಿಗಳು ಸಮಬಲ ಸಾಧಿಸಿದ್ದರು.
ತಮ್ಮನ್ನು ಬೆಂಬಲಿಸಿದ ಬ್ರೆಜಿಲ್ನ ಜನರಿಗೆ ಲೂಲಾ ಕೃತಜ್ಞತೆ ಸಲ್ಲಿಸಿದ್ದಾರೆ. “ಬ್ರೆಜಿಲ್ನ ಜನರಿಗೆ, ಪ್ರಜಾಪ್ರಭುತ್ವದ ರಕ್ಷಣೆಗಾಗಿ ಬೀದಿಗಿಳಿದ ಯುವಜನರಿಗೆ ಹಾಗೂ ಮತ ಚಲಾಯಿಸಿ ನಮ್ಮ ದೇಶದ ಭವಿಷ್ಯವನ್ನು ರಕ್ಷಿಸಲು ಅಪಾರ ಪ್ರಯತ್ನ ಮಾಡಿದ ಪ್ರತಿಯೊಬ್ಬರಿಗೂ ನಾನು ಸದಾ ಕೃತಜ್ಞನಾಗಿರುತ್ತೇನೆ. ನಿಮ್ಮೆಲ್ಲರ ಬೆಂಬಲ ನನಗೆ ಹೊಸ ಭರವಸೆ ನೀಡಿದೆ. ಹೆಚ್ಚು ನ್ಯಾಯಯುತ, ಸ್ವತಂತ್ರ ಮತ್ತು ಪ್ರಜಾಸತ್ತಾತ್ಮಕ ಬ್ರೆಜಿಲ್ ನಿರ್ಮಾಣದ ಕನಸನ್ನು ನಂಬುವ, ಅದಕ್ಕಾಗಿ ಹೋರಾಡುವ ಮತ್ತು ಎಂದಿಗೂ ಕೈಬಿಡದ ಜನರಿಗೆ ಈ ಗೆಲುವು ಸೇರಿದೆ” ಎಂದು ಲೂಲಾ ಹೇಳಿದ್ದಾರೆ.
ಡಿಜಿಟಲ್ ವೇದಿಕೆಗಳ ಮೂಲಕ ನಡೆದ ವಿದೇಶಿ ಹಸ್ತಕ್ಷೇಪವನ್ನು ತಮ್ಮ ಪ್ರಚಾರ ಅಭಿಯಾನ ಎದುರಿಸಿ ಗೆದ್ದಿದೆ ಎಂದೂ ಲೂಲಾ ತಿಳಿಸಿದ್ದಾರೆ. ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವುದಾಗಿ ಅವರು ಹೇಳಿದ್ದಾರೆ.
“ಬ್ರೆಜಿಲ್ನಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತದಾನ ಅತ್ಯಂತ ಮುಖ್ಯ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಲು ನಮಗೆ ಸಾಧ್ಯವಾಯಿತು. ಡಿಜಿಟಲ್ ವೇದಿಕೆಗಳ ಮೂಲಕ ನಡೆದ ವಿದೇಶಿ ಹಸ್ತಕ್ಷೇಪವನ್ನು ನಾವು ಸೋಲಿಸಿದ್ದೇವೆ. ಬ್ರೆಜಿಲ್ ಯಾರ ಹಿತ್ತಲೂ ಅಲ್ಲ. ದೇಶವನ್ನು ನಡೆಸುವ ವಿಧಾನವನ್ನು ನಾವು ಬದಲಿಸುತ್ತೇವೆ; ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಜನರು ಹೆಚ್ಚು ಪಾಲ್ಗೊಳ್ಳುವಂತೆ ಮಾಡುತ್ತೇವೆ” ಎಂದು ಲೂಲಾ ಹೇಳಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
