ದೀಪಾವಳಿ ಹಬ್ಬವನ್ನು ಬೆಳಕಿನ ಹಬ್ಬ ಎಂದು ಕರೆಯಲಾಗುತ್ತದೆ. ಕತ್ತಲೆಯ ಮೇಲೆ ಬೆಳಕು ,ಅಜ್ಞಾನದ ಮೇಲೆ ಜ್ಞಾನ ಕೆಡುಕಿನ ಮೇಲೆ ಒಳ್ಳೆಯತನ ,ಹಾಗೂ ಹತಾಶೆಯ ಮೇಲೆ ಭರವಸೆ ,ಸೋಲಿನ ಮೇಲೆ ಗೆಲುವಿನ ಸಂಕೇತವನ್ನು ದೀಪಾವಳಿಯು ಸೂಚಿಸುತ್ತದೆ.
ದೀಪಾವಳಿ ಹಬ್ಬವನ್ನು ಆಚರಿಸುವ ಹಿಂದೆ ಅನೇಕ ಪುರಾಣ ಕಥೆಗಳು ಇವೆ. ಶ್ರೀ ಕೃಷ್ಣನು ನರಕಾಸುರನನ್ನು ಸಂಹಾರ ಮಾಡಿ ಆತನ ಬಂಧನದಲ್ಲಿದ್ದ ಅನೇಕ ಕನ್ಯೆಯರನ್ನು ಬಂಧಮುಕ್ತ ಮಾಡುತ್ತಾನೆ. ಹಾಗಾಗಿ ಈ ದಿನವನ್ನು ನರಕ ಚತುರ್ದಶಿ ಎಂದು ಆಚರಿಸಲಾಗುತ್ತದೆ. ದುಷ್ಟ ಸಂಹಾರದ ಸಂಕೇತವಾಗಿ ಈ ದಿನದಂದು ಪಟಾಕಿಗಳನ್ನು ಸಿಡಿಸಿ ವಿಜಯವನ್ನು ಸಂಭ್ರಮಿಸಲಾಗುತ್ತದೆ.
ಈ ದಿನದಂದು ಹೊಸದಾಗಿ ಮದುವೆಯಾಗಿರುವ ಮಗಳು ಅಳಿಯನನ್ನು ತವರು ಮನೆಗೆ ಆಹ್ವಾನಿಸಿ ವಿಶೇಷವಾಗಿ ಉಪಚರಿಸುವ ಸಂಪ್ರದಾಯ ನಮ್ಮಲ್ಲಿದೆ. ಕನ್ಯಾ ಸೆರೆ ಬಿಡಿಸಿದ ಅಳಿಯನನ್ನು ಶ್ರೀಕೃಷ್ಣ ಸ್ವರೂಪಿ ಎಂದು ಭಾವಿಸಿ ಆದರಿಸುವ ಸಂಪ್ರದಾಯವನ್ನು ಪಾಲಿಸಲಾಗುತ್ತದೆ.
ಹಾಗೆಯೇ ತ್ರೇತಾಯುಗದಲ್ಲಿ ಶ್ರೀ ರಾಮನು ರಾವಣನನ್ನು ವಧಿಸಿ ಸೀತೆಯೊಂದಿಗೆ ಅಯೋಧ್ಯೆಗೆ ಹಿಂತಿರುಗಿದ ದಿನ ಎಂಬ ಪ್ರತೀತಿ ಇದೆ. ಈ ದಿನದಂದು ಇಡೀ ಅಯೋಧ್ಯೆಯನ್ನು ಬಣ್ಣ ಬಣ್ಣದ ದೀಪಗಳಿಂದ ಅಲಂಕರಿಸಿ ಶ್ರೀರಾಮನನ್ನು ಸ್ವಾಗತಿಸಲಾಯಿತು ಎಂದು ಹೇಳಲಾಗುತ್ತದೆ. ಮಹಾಭಾರತದಲ್ಲಿ ಪಾಂಡವರು ತಮ್ಮ ವನವಾಸವನ್ನು ಮುಗಿಸಿ ಹಸ್ತಿನಾವತಿಗೆ ಹಿಂದಿರುಗಿದ ದಿನ ಎಂದು ಭಾವಿಸಲಾಗುತ್ತದೆ. ಇಂದ್ರದೇವನ ದುರಹಂಕಾರದಿಂದ ಲಕ್ಷ್ಮೀದೇವಿಯು ದೈವಿಕ ಶಕ್ತಿಯನ್ನು ಕಳೆದುಕೊಂಡು ಕ್ಷೀರಸಾಗರದಲ್ಲಿ ಆಶ್ರಯ ಪಡೆದಿದ್ದಳು. ಆಗ ಜಗತ್ತು ಕತ್ತಲೆಯಿಂದ ಮುಳುಗಿತ್ತು ಸಮುದ್ರ ಮಂಥನ ಮಾಡಿದಾಗ ಲಕ್ಷ್ಮಿಯು ಮರುಜನ್ಮವನ್ನು ಪಡೆದು ಜಗತ್ತಿಗೆ ಬೆಳಕಿನೊಂದಿಗೆ ಸಮೃದ್ಧಿ ಮತ್ತು ಅದೃಷ್ಟದ ಆಶೀರ್ವಾದವನ್ನು ದಯಪಾಲಿಸುತ್ತಾಳೆ. ಆದ್ದರಿಂದ ದೀಪಾವಳಿಯಂದು ಲಕ್ಷ್ಮಿ ಪೂಜೆಯನ್ನು ಮಾಡಲಾಗುತ್ತದೆ ಎಂಬ ಪ್ರತೀತಿ ಕೂಡ ಇದೆ.
ದೀಪಾವಳಿ ಹಬ್ಬದ ಕಥೆಗಳು ಸಮೃದ್ಧಿ ಮತ್ತು ದೈವತ್ವದ ಹಾಗೂ ಅಂಧಕಾರವನ್ನು ಅಳಿಸಿ ಜ್ಞಾನದ ಬೆಳಕನ್ನು ಹರಡುವುದನ್ನು ಸಂಕೇತಿಸುತ್ತದೆ.
ದೀಪಾವಳಿ ಹಬ್ಬವನ್ನು ಕೆಲವು ಭಾಗಗಳಲ್ಲಿ ಐದು ದಿನ ಆಚರಿಸಲಾಗುತ್ತದೆ ನಮ್ಮ ಮಲೆನಾಡಿನ ಭಾಗದಲ್ಲಿ ಈ ಹಬ್ಬವನ್ನು ಮೂರು ದಿನಗಳವರೆಗೆ ಆಚರಿಸುತ್ತೇವೆ.
ಆಶ್ವೀಜ ಕೃಷ್ಣ ಚತುರ್ದಶಿಯ ಹಿಂದಿನ ದಿನ ಬಚ್ಚಲು ಮನೆಯ ಹಂಡೆಯನ್ನು ಚೆನ್ನಾಗಿ ತೊಳೆದು ಅದರ ಸುತ್ತ ಕೆಮ್ಮಣ್ಣಿನ ಚಿತ್ತಾರ ಬಿಡಿಸಿ, ಶಿಂಡೇಕಾಯಿ ಬಳ್ಳಿಯನ್ನು ಕಟ್ಟಿ, ಹೊಸ ನೀರನ್ನು ತುಂಬುತ್ತೇವೆ. ಇದನ್ನು ನೀರು ತುಂಬುವ ಹಬ್ಬ ಎಂದೇ ಆಚರಿಸಲಾಗುತ್ತದೆ. ಆ ನೀರನ್ನು ಮಾರನೆಯ ದಿನ ಅಭ್ಯಂಜನದ ವೇಳೆಯೇ ತೆಗೆಯಬೇಕು ಎಂಬ ಸಂಪ್ರದಾಯವಿದೆ. ಹಬ್ಬದ ಮೊದಲ ದಿನ ಬೆಳಗ್ಗೆ ಮನೆಯ ಹಿರಿಯವರು(ಅಜ್ಜಿ) ದೇವರ ಮುಂದೆ ಮನೆ ಮಂದಿಯನ್ನು ಕುಳ್ಳಿರಿಸಿ ಎಣ್ಣೆಯನ್ನು ಹಚ್ಚಿ ಅಭ್ಯಂಜನ ಸ್ನಾನವನ್ನು ಮಾಡಿಸುತ್ತಾರೆ.ಎಣ್ಣೆ ಹಚ್ಚಲು ತಕರಾರು ಮಾಡುವ ಮಕ್ಕಳನ್ನು ಕೆರೆಕೋ ” ಎಂದು ತಮಾಷೆ ಮಾಡುತ್ತಾ ಎಣ್ಣೆ ಸ್ನಾನದ ಈ ಹಬ್ಬವನ್ನು ಕೆರೆದುಕೊಳ್ಳುವ ಹಬ್ಬ ಎಂದೇ ಕರೆಯಲಾಗುತ್ತದೆ.
ಶ್ರೀ ವಿಷ್ಣು ಅಮೃತ ಕಳಸದೊಂದಿಗೆ ಧನ್ವಂತರಿ ಅವತಾರ ಎತ್ತಿದ ಈ ದಿನ ನೀರಿನಲ್ಲಿ ಗಂಗೆ, ಎಣ್ಣೆಯಲ್ಲಿ ಲಕ್ಷ್ಮಿ ಇರುತ್ತಾಳೆ ಎಂಬ ಭಾವನೆ ಇದೆ
.ಈ ರೀತಿ ಎಣ್ಣೆ ಸ್ನಾನ ಮಾಡುವುದರಿಂದ ಆಯುಷ್ಯ ಆರೋಗ್ಯ ವೃದ್ಧಿಯಾಗಿ ಮಾಡಿದ ಪಾಪ ಕರ್ಮಗಳು ನಾಶವಾಗುತ್ತದೆ ಎಂಬ ನಂಬಿಕೆ ಇದೆ. ನರಕಾಸುರನ ಕೊಂದ ನಂತರ ಶ್ರೀಕೃಷ್ಣ ಆ ಕರ್ಮ ತೊಳೆದುಕೊಳ್ಳಲು ಎಣ್ಣೆ ಸ್ನಾನ ಮಾಡಿದ ಎಂದು ಶಾಸ್ತ್ರ ಹೇಳುತ್ತದೆ. ವೈಜ್ಞಾನಿಕವಾಗಿ ಕಾರ್ತಿಕ ಮಾಸದಲ್ಲಿ ಚಳಿ ಆರಂಭವಾಗುತ್ತದೆ. ಎಣ್ಣೆ ಹಚ್ಚಿ ಸ್ನಾನ ಮಾಡುವುದರಿಂದ ದೇಹಕ್ಕೆ ಚರ್ಮದ ಸಂರಕ್ಷಣೆಗೆ ಹಾಗೂ ರೋಗ ನಿವಾರಣೆಗೆ ಸಹಕಾರಿಯಾಗುತ್ತದೆ.
ದೀಪಾವಳಿಯ ಎರಡನೇ ದಿನ ಅಮವಾಸ್ಯೆ ಆ ದಿನ ಅಂಗಡಿಗಳಲ್ಲಿ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ.
ಗೋವುಗಳು ಲಕ್ಷ್ಮಿ ಸ್ವರೂಪವಾಗಿರುವುದರಿಂದ ಬಲಿಪಾಡ್ಯಮಿಯ ದಿನ ಅವುಗಳಿಗೆ ಸ್ನಾನ ಮಾಡಿಸಿ ಕೆಂಪು ಮಣ್ಣು ಹಾಗೂ ಜೇಡಿ ಮಣ್ಣಿನಿಂದ ಪಟ್ಟಿಗಳನ್ನು ಬರೆದು ಸಿಂಗರಿಸಿ ಅಡಿಕೆ ,ಬಾಳೆಹಣ್ಣು, ಶೃಂಗಾರ, ಪಚ್ಚೇತೆನೆ ,ವಿಳ್ಳೆದೆಲೆ ಉಗುಣೆಕಾಯಿ, ಹೂವು ಸೇರಿಸಿ ಮಾಲೆ ಮಾಡಿ ಗೋವಿನ ಕೊರಳಿಗೆ ಕಟ್ಟಿ ಅವುಗಳಿಗೆ ಮಂಗಳಾರತಿ ಮಾಡಿ ಪೂಜಿಸುತ್ತೇವೆ. ಹಾಗೆ ಮೇಳದೇವರು ಅಂದರೆ ಕೃಷಿ ಉಪಕರಣಗಳು, ತುಳಸಿ, ಹೊಸಲು, ಕಡಗೋಲು, ಅಡಿಕೆ ಅಕ್ಕಿ ತುಂಬುವ ಪತಾಸು, ಆಭರಣದ ಪೆಟ್ಟಿಗೆ,ಮುಂಡಿಗೆ ಕಂಬ, ದ್ವಾರ ಬಾಗಿಲು ಹಾಗೂ ಮಣ್ಣಿನಲ್ಲಿ ಮಾಡಿದ ಬಲಿಂದ್ರನನ್ನು ಸ್ಥಾಪಿಸಿ ಪೂಜಿಸಲಾಗುತ್ತದೆ.
ಮನೆ ಮುಂದೆ ರಂಗೋಲಿಯನ್ನು ಹಾಕಿ ದೀಪಗಳನ್ನು ಹಚ್ಚಿ ನೈವೇದ್ಯದೊಂದಿಗೆ ಪೂಜೆಯನ್ನು ನೆರವೇರಿಸಲಾಗುತ್ತದೆ. ಸಂಜೆ ಗೋವುಗಳು ಮನೆಗೆ ಬಂದ ಮೇಲೆ ಅವುಗಳಿಗೂ ಆರತಿ ಮಾಡಿ ಸ್ವಾಗತಿಸುತ್ತೇವೆ. ಹಾಗೆಯೇ ನಮ್ಮ ಜಮೀನಿನ ಫಸಲು ಚೆನ್ನಾಗಿ ಬರಲೆಂದು ಸಂಜೆ ದೊಂದಿ(ದೀಪದ ಕೋಲು)ಗಳನ್ನು ಮಾಡಿ ಮನೆಮಂದಿಯೆಲ್ಲ ಹೋಗಿ ‘ದೀಪ್ ದೀಪ್ ಹೋಳಿಗೆ ಹಂಡ್ ಹಂಡ್ಹೋಳಿಗೆ’ “ದೀಪೊಳಿಗೆ” ಎಂದು ಕೂಗುತ್ತಾ ದೀಪವನ್ನು ಹಚ್ಚುತ್ತೇವೆ. ಹೀಗೆ ಮನೆಯ ಹೊರಗೂ ಒಳಗೂ ಬೆಳಕು ಜ್ಞಾನ ಪ್ರಜ್ವಲಿಸಲಿ ಎಂದು ದೀಪವನ್ನು ಹಚ್ಚಿ ಇಡುತ್ತೇವೆ. ಹಬ್ಬದ ದಿನ ಸಂಜೆಯೇ ಬಲಿಂದ್ರನನ್ನು ವಿಸರ್ಜಿಸಲಾಗುತ್ತದೆ.
ಈ ಹಬ್ಬದ ದಿನಗಳಲ್ಲಿ ವಿಶೇಷವಾದ ಸಿಹಿ ತಿಂಡಿ ಮಾಡಿ ಮನೆಯವರೆಲ್ಲಾ ಕೂಡಿ ಹೊಸ ಬಟ್ಟೆ ಧರಿಸಿ ದೇವರಿಗೆ ನೈವೇದ್ಯ ಮಾಡಿ ಎಲ್ಲರೂ ಸೇರಿ ಮೃಷ್ಠಾನ್ನ ಭೋಜನವನ್ನು ಮಾಡಿ ಹಬ್ಬವನ್ನು ಸಂಭ್ರಮಿಸಲಾಗುತ್ತದೆ.
ಹಬ್ಬದ ಮರುದಿನ ಹೊಸತೊಡಕು ಹಬ್ಬದ ಕರಿ ಎಂದು ಆ ದಿನವನ್ನು ಆಚರಿಸುತ್ತಾರೆ. ಕೆಲವು ಕಡೆ ಈ ದಿನವನ್ನು ಯಮ ದ್ವಿತೀಯ ಎಂದು ಕರೆಯುತ್ತಾರೆ. ದೀಪಾವಳಿಯ ಅಮಾವಾಸ್ಯೆಯ ಎರಡನೇ ದಿನ ಯಮನ ಸಹೋದರಿ ಯಮಿಯು ತನ್ನ ಸಹೋದರನ ಶ್ರೇಯೋಭಿವೃದ್ಧಿಗಾಗಿ ತಿಲಕವನ್ನಿಟ್ಟು ಪೂಜೆ ಮಾಡಿದಳು ಎಂಬ ಕಥೆ ಇದೆ.
ದೀಪಾವಳಿ ಹಬ್ಬವು ಮಲೆನಾಡಿನ ಜಾನಪದ ಭಂಡಾರದ ಅನಾವರಣವೂ ಹೌದು. ಕಲೆಗಳು ಜನಪದ ಆಟೋಟ ಸ್ಪರ್ಧೆಗಳು ನಡೆಯುತ್ತವೆ.
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಂಟಿಗೆ ಪಿಂಟಿಗೆ ಎಂಬ ಜನಪದ ಸಾಂಪ್ರದಾಯವಿದೆ. ಇತ್ತೀಚೆಗೆ ಈ ಜಾನಪದ ವೈವಿಧ್ಯಗಳು ಇಲ್ಲವೇ ಇಲ್ಲ ಎಂಬುವಂತೆ ಮರೆಯಾಗಿದೆ. ಹಬ್ಬದಂದು ಹಳ್ಳಿಗಳಲ್ಲಿ ಊರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ತಾವು ತಂದಿದ್ದ ದೀಪವನ್ನು ಹಚ್ಚಿಕೊಂಡು ಜನಪದ ಶೈಲಿಯಲ್ಲಿ “ಸುವಿರು ಸಂಗಯ್ಯ ಸುವಿರು ರಂಗಯ್ಯ ಶೋಭಾನೆ ಬಾರೋ ಬಸವಯ್ಯ” ಎಂದು ಹಾಡುಗಳನ್ನು ಕಟ್ಟಿಕೊಂಡು ಪದಗಳನ್ನು ಹೇಳುತ್ತಾ ಒಂದು ತಂಡವಾಗಿ ಮನೆ ಮನೆಗೆ ತೆರಳುತ್ತಾರೆ. ಮನೆಯವರು ಆ ದೀಪಕ್ಕೆ ಎಣ್ಣೆ ಎರೆದು ತಮಗೆ ಸಾಧ್ಯವಾದಷ್ಟು ಹಣ ಧವಸವನ್ನು ಆ ತಂಡಕ್ಕೆ ನೀಡುತ್ತಾರೆ. ಈ ರೀತಿ ಸಂಗ್ರಹವಾದ ಮೊತ್ತವನ್ನು ಊರಿನ ಅಭಿವೃದ್ಧಿಗೆ ಸಾಮಾಜಿಕ ಕಾರ್ಯಗಳಿಗೆ ಶಾಲಾ ಅಭಿವೃದ್ಧಿಗೆ ಬಳಸಲಾಗುತ್ತದೆ. ಈ ಅಂಟಿಗೆ ಪೆಂಟಿಗೆ ಮಲೆನಾಡು ಭಾಗದಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ.
ಮನಸ್ಸಲ್ಲಿರುವ ಅಂಧಕಾರವನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ಎಲ್ಲೆಡೆ ಚೆಲ್ಲುವ ವಿಶೇಷವೇ ದೀಪಾವಳಿ ಹಬ್ಬದ ಮೂಲಭೂತ ಅಂಶವಾಗಿದೆ
- ಚೇತನ ಭಾರ್ಗವ
ಅರಮನೆತೋಟ
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
