ಹಬ್ಬಗಳು ನಮ್ಮ ಸಂಸ್ಕೃತಿಯ, ಪರಂಪರೆಯ ಒಂದು ಭಾಗ. ಹಬ್ಬಗಳು ಮನೆಮನೆಯಲ್ಲಿ ಅಥವಾ ಸಾಮೂಹಿಕವಾಗಿ ಉತ್ಸಾಹದಿಂದ ಆಚರಿಸುವ ಒಂದು ಸಡಗರದ, ಸಂಭ್ರಮದ ಸಮಾರಂಭ. ಒಂದೇ ತರಹದ ಏಕತಾನತೆಯ ಕೆಲಸದಿಂದ ಬೇಸರವಾದಾಗ ಹಬ್ಬಗಳು ಒಂದು ತರಹ ಟಾನಿಕ್ ಇದ್ದ ಹಾಗೆ. ಜೀವನೋತ್ಸಾಹವನ್ನು ತುಂಬಿ ಸಂಬಂಧಗಳನ್ನು ಗಟ್ಟಿಗೊಳಿಸಿ ಸಮುದಾಯಗಳನ್ನು ಒಗ್ಗೂಡಿಸುವ ಕೆಲಸವನ್ನು ಹಬ್ಬಗಳು ಮಾಡುತ್ತವೆ. ಹಬ್ಬಗಳು ಬಂದಾಗ ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತವೆ.
ಹಬ್ಬ ಬಂತೆಂದರೆ ದೂರದ ಪಟ್ಟಣಗಳಲ್ಲಿ ಓದುತ್ತಿರುವ, ಕೆಲಸ ಮಾಡುತ್ತಿರುವವರ ಜೊತೆಗಿನ ಸಮಾಗಮ. ಬಡವ ಶ್ರೀಮಂತ ಎಂಬ ಭೇದವಿಲ್ಲದೆ ಅವರವರ ಆರ್ಥಿಕತೆಗೆ ಅನುಗುಣವಾಗಿ ಹಬ್ಬಗಳ ಆಚರಣೆಯನ್ನು ಕಾಣಬಹುದು. ಹಿಂದೂ ಹಬ್ಬಗಳೆಂದರೆ ಪೂಜೆ, ಪುನಸ್ಕಾರಗಳು, ಅರಿಸಿನ, ಕುಂಕುಮ, ದೇವರ ಮತ್ತು ಮನೆಯ ಮುಂದೆ ತರತರಹದ ರಂಗೋಲಿ, ವೀಳ್ಯದೆಲೆ, ಮಾವಿನ ಚಂಡೆ ಮತ್ತು ಹೂಗಳ ಶೃಂಗಾರ, ಹಾಡು, ಹೊಸಬಟ್ಟೆ, ಭಕ್ಷ, ರುಚಿರುಚಿಯಾದ ಅಡುಗೆ ಮುಂತಾದವುಗಳ ಮಿಳಿತ. ಹಿಂದುಗಳ ಪ್ರತಿಯೊಂದು ಹಬ್ಬವೂ ತನ್ನದೇ ಆದ ವೈಶಿಷ್ಟ್ಯದಿಂದ ಕೂಡಿದೆ. ಎಲ್ಲಾ ಹಬ್ಬಕ್ಕೂ ತನ್ನದೇ ಆದ ಧಾರ್ಮಿಕ ಮತ್ತು ಪೌರಾಣಿಕ ಹಿನ್ನೆಲೆಯಿದೆ. ನಮ್ಮ ಹಬ್ಬಗಳು ಒಂದಲ್ಲ ಒಂದು ರೀತಿಯಲ್ಲಿ ಪರಿಸರದೊಡನೆ ಬೆಸೆದುಕೊಂಡಿದೆ.
ಅಂತಹ ಹಬ್ಬಗಳ ಸಾಲಿನಲ್ಲಿ ದೀಪಾವಳಿ ಹಬ್ಬವೂ ಒಂದು. ಇದನ್ನು ಮಲೆನಾಡಿನಲ್ಲಿ ‘ದೊಡ್ಡ ಹಬ್ಬ’ ಎಂದು ಕರೆಯುತ್ತಾರೆ. ದೀಪಾವಳಿಯೆಂದರೆ ದೀಪಗಳ ಸಾಲು. ದೀಪಗಳ ಹಬ್ಬ. ದೀಪ ಜ್ಞಾನದ ಸಂಕೇತ. ಕತ್ತಲಿನಿಂದ ಬೆಳಕಿನೆಡೆಗಿನ ಪಯಣ. ಎಲ್ಲರ ಮನೆಯಲ್ಲಿ ಮನೆಯ ಒಳಗೆ, ಹೊರಗಡೆ ದೀಪಹಚ್ಚಿ ಆಚರಿಸಲಾಗುತ್ತದೆ. ಮದುವೆಯಾದ ಹೊಸ ಜೋಡಿಗೆ ಇದು ಹೊಸ ಹಬ್ಬ. ಮಳೆಗಾಲ ಮುಗಿದು ಎಲ್ಲೆಲ್ಲೂ ಹಸಿರು ಸೀರೆ ಹೊದ್ದ ಗದ್ದೆ, ತೋಟ, ಗುಡ್ಡಬೆಟ್ಟಗಳು ಕಣ್ಮನ ಸೆಳೆಯುತ್ತವೆ. ದೀಪಾವಳಿಯ ಹಬ್ಬ ಶುರುವಾಗುವ 2-3 ದಿನ ಮೊದಲೇ ಮನೆಯ ಒಳಗಡೆ ಮತ್ತು ಹೊರಗಡೆ ಸಗಣಿಯಿಂದ ಸಾರಿಸಿ ಸ್ವಚ್ಛಗೊಳಿಸಲಾಗುತ್ತದೆ.
ದೀಪಾವಳಿ ಹಬ್ಬದಲ್ಲಿ ಗೋವುಗಳಿಗೆ ವಿಶೇಷ ಮಹತ್ವ. ಹಾಗಾಗಿ ಮನೆಯ ಅಂಗಳಗಳು, ಗೋಪೂಜೆ ಮಾಡುವ ಕೊಟ್ಟಿಗೆಗಳು ಒಪ್ಪಓರಣಗೊಳ್ಳುತ್ತವೆ. ಆದರೆ ಮಲೆನಾಡಿನ ಹಳ್ಳಿಗಳಲ್ಲಿ ಈ ದೀಪಾವಳಿಯ ಹಬ್ಬದ ಸಮಯದಲ್ಲಿ ನಗರಗಳಲ್ಲಿ ಹೊಡೆಯುವಂತೆ ಪಟಾಕಿ ಸಿಡಿಸುವುದು ಕಡಿಮೆ. ಪಟಾಕಿ ಸಂಭ್ರಮ ಗಣೇಶನ ಹಬ್ಬದಂದು.
ದೀಪಾವಳಿ ಸಾಮಾನ್ಯವಾಗಿ ಮೂರು ದಿನ ಆಚರಿಸಲಾಗುತ್ತದೆ. ನರಕಚತುರ್ಥಿ, ಅಮವಾಸ್ಯೆ ಮತ್ತು ಬಲಿಪಾಡ್ಯಮಿ.
ನರಕಚತುರ್ಥಿ
ಹಬ್ಬದ ಮೊದಲ ದಿನ ನರಕ ಚತುರ್ಥಿ. ಪೌರಾಣಿಕ ಹಿನ್ನೆಲೆಯ ಪ್ರಕಾರ ನರಕಾಸುರ ಒಬ್ಬ ಅಸುರರ ರಾಜ ಮತ್ತು ಭೂದೇವಿಯ ಮಗ. ವಿಷ್ಣು ವರಾವತಾರದಲ್ಲಿದ್ದಾಗ ಅವನ ದೇಹದಿಂದ ಒಂದು ಹನಿ ಬೆವರು ಭೂಮಿಗೆ ಬೀಳುತ್ತದೆ. ಹಾಗೆ ಬಿದ್ದ ಹನಿಯಿಂದ ಭೂತಾಯಿಯ ಗರ್ಭದಲ್ಲಿ ನರಕಾಸುರ ಜನಿಸುತ್ತಾನೆ. ನರಕಾಸುರ ಬ್ರಹ್ಮದೇವನ ಬಳಿ ತನ್ನ ತಾಯಿಯನ್ನು ಹೊರತುಪಡಿಸಿ ಬೇರಾರಿಂದಲೂ ಸಾಯಬಾರದೆಂದು ವರ ಪಡೆದಿರುತ್ತಾನೆ. ಮುಂದೆ ಬೆಳೆದಂತೆಲ್ಲಾ ಅವನು ದೇವತೆಗಳಿಗೆ ಮತ್ತು ಖುಷಿ ಮುನಿಗಳಿಗೆ ಪೀಡಕನಾಗುತ್ತಾನೆ. ಇಂತಹ ನರಕಾಸುರ ಮುಂದೆ ಕೃಷ್ಣ ಮತ್ತು ಸತ್ಯಭಾಮೆಯರ ಕೈಯಲ್ಲಿ ಸಾವನ್ನಪ್ಪುತ್ತಾನೆ. ಸತ್ಯಭಾಮೆ ಭೂಮಿತಾಯಿಯ ಅವತಾರವೆಂದು ಭಾವಿಸಲಾಗುತ್ತದೆ. ನರಕಾಸುರನನ್ನು ಸಂಹಾರ ಮಾಡಿದ ದಿನವನ್ನು ನರಕ ಚತುರ್ಥಿಯೆಂದು ಆಚರಿಸಲಾಗುತ್ತದೆ. ನಂತರದಲ್ಲಿ ಶ್ರೀಕೃಷ್ಣ ಮತ್ತು ಸತ್ಯಭಾಮೆಯರು ಅಭ್ಯಂಜನ ಸ್ನಾನಗೈದರಂತೆ. ಹಾಗಾಗಿ ದೀಪಾವಳಿಯಂದು ಅಭ್ಯಂಜನ ಸ್ನಾನ ಮಾಡುವ ರೂಢಿ ಇದೆ. ಹಿಂದೆಲ್ಲಾ ಬಚ್ಚಲು ಮನೆಯಲ್ಲಿರುವ ಹಂಡೆಗೆ ಶೇಡಿ ಮಣ್ಣು ಮತ್ತು ಕೆಮ್ಮಣ್ಣಿನಿಂದ ಚಿತ್ತಾರ ಬರೆದು ಎಣ್ಣೆ ಹಚ್ಚಿಕೊಂಡು ಬಿಸಿನೀರಿನ ಅಭ್ಯಂಜನ ಸ್ನಾನ ಮಾಡುವ ರೂಢಿ ಇತ್ತು.
ಬಲೀಂದ್ರನ ಪೂಜೆ:
ಪಾತಾಳಲೋಕದಲ್ಲಿರುವ ಬಲೀಂದ್ರ ವರುಷಕ್ಕೊಮ್ಮೆ ಭೂಮಿಗೆ ಬಂದು ಜನರಿಂದ ಪೂಜಿಸಿಕೊಂಡು ಹೋಗುತ್ತಾನೆ ಎಂದು ನಂಬಲಾಗಿದೆ. ನರಕಚತುರ್ದಶಿಯಂದು ಬಲೀಂದ್ರನನ್ನು ಪ್ರತಿಷ್ಟಾಪಿಸಲಾಗುತ್ತದೆ.
ಕಲಶದಲ್ಲಿ ಅಕ್ಕಿ ತುಂಬಿ, ತೆಂಗಿನ ಕಾಯಿ ಇಟ್ಟು ಪಚ್ಚೆತೆನೆ (ಮಲೆನಾಡಿನ ತೋಟದಲ್ಲಿ ಬೆಳೆಯುವ ಈ ಗಿಡವನ್ನು ಪೂಜೆಗೆ ಮತ್ತು ದನಕರುಗಳ ಕುತ್ತಿಗೆಗೆ ಕಟ್ಟುವುದು ಪದ್ಧತಿ), ಮಾವಿನ ಚಂಡೆ ಕಟ್ಟಿ, ಹೂ ಮಾಲೆ ಹಾಕಿ, ಅಡಿಕೆ ಸಿಂಗಾರದಿಂದ ಸಿಂಗರಿಸಿ ನರಕಚತುರ್ದಶಿಯಂದು ಬಲೀಂದ್ರನನ್ನು ಭೂಮಿಗೆ ಬರಮಾಡಿಕೊಡಲಾಗುತ್ತದೆ. ಅಂದಿನಿಂದ ಬಲಿಪಾಡ್ಯಮಿಯ ರಾತ್ರಿಯವರೆಗೆ ಬಲೀಂದ್ರನಿಗೆ ಮಧ್ಯಾಹ್ನ ಮತ್ತು ರಾತ್ರಿ ಮಂಗಳಾರತಿ ಮಾಡಿ ಪೂಜಿಸಲಾಗುತ್ತದೆ. ಪಾಡ್ಯದ ದಿನ ರಾತ್ರಿ ಪೂಜೆ ಮಾಡಿ ಬಲೀಂದ್ರನಿಗೆ ಮನೆಯ ಮುಂದಿನ ಬೀದಿಯಲ್ಲಿ ದೀಪದ ದೊಂದಿ ಹಚ್ಚಿ ‘ದಿಪ್ಪಡ್ ದಿಪ್ಪಡ್ ದೀವಳಿಗೆಯೊ ಹಬ್ಬಕ್ಕೆ ಮೂರು ಹೋಳಿಗೆಯೊ’ ಎಂದು ಕೂಗುತ್ತಾ ಅವನನ್ನು ಪಾತಾಳಲೋಕಕ್ಕೆ ಕಳುಹಿಸಿಕೊಡಲಾಗುತ್ತದೆ. ಇದನ್ನು ‘ಬಲೀಂದ್ರನನ್ನ ಕಳುಹಿಸಿಕೊಡುವುದು’ ಎಂದು ಕರೆಯುತ್ತಾರೆ.
ಬಲೀಂದ್ರನ ಕಥೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ. ಬಲಿ ಚಕ್ರವರ್ತಿ ರಾಕ್ಷಸರಾಜನಾದರೂ ವಿಷ್ಣು ಭಕ್ತ. ಹಿರಣ್ಯಕಶಿಪುವಿನ ಮರಿಮಗ. ಭಕ್ತ ಪ್ರಹ್ಲಾದನ ಮೊಮ್ಮಗ. ರಾಕ್ಷಸ ಕುಲದಲ್ಲಿ ಹುಟ್ಟಿದರೂ ಸಾತ್ವಿಕ. ಅವನ ದೇಶ ಸುಭಿಕ್ಷವಾಗಿತ್ತು. ಕೊಡುಗೈ ದಾನಿ. ಕೇಳಿದವರಿಗೆ ಇಲ್ಲವೆನ್ನದವ. ಮೊದಲು ತಪ್ಪು ಮಾಡಿದರೂ ಕೊನೆಗೆ ದೈವತ್ವದ ಕಡೆಗೆ ಹೋಗಬಹುದೆಂಬುದಕ್ಕೆ ಬಲಿ ಚಕ್ರವರ್ತಿ ಒಂದು ಉದಾಹರಣೆ.
ಬಲಿ 100ನೇ ಅಶ್ವಮೇಧಯಾಗವನ್ನು ತನ್ನ ಗುರುಗಳಾದ ಶುಕ್ಲಾಚಾರ್ಯರ ನೇತೃತ್ವದಲ್ಲಿ ಪ್ರಾರಂಭ ಮಾಡಿ ಇಂದ್ರನಾಗಲು ಹವಣಿಸುತ್ತಾನೆ. ಇದನ್ನು ತಡೆಯಲು ವಿಷ್ಣು ವಾಮನ ರೂಪದಲ್ಲಿ ಬರುತ್ತಾನೆ. ಬಲಿ ಚಕ್ರವರ್ತಿ ಈ ಮಹಾಯಾಗ ಮಾಡುವಾಗ ಎಲ್ಲರಿಗೂ ದಾನ ಕೊಡುತ್ತಿರುವ ಸಂದರ್ಭದಲ್ಲಿ ವಾಮನರೂಪದ ವಿಷ್ಣು ಯಾಗ ನಡೆಯುವ ಸ್ಥಳಕ್ಕೆ ಬಂದಾಗ ಬಲಿ “ಏನು ಬೇಕು” ಎಂದಾಗ ವಾಮನ ಕೇವಲ ತನ್ನ ಪಾದದ ಮೂರು ಹೆಜ್ಜೆ ದಾನ ಕೇಳುತ್ತಾನೆ. ಇದನ್ನು ತಮ್ಮ ಜ್ಞಾನದಿಂದ ತಿಳಿದ ಗುರು ಶುಕ್ರಾಚಾರ್ಯರು ಬಲಿಗೆ ಮಾತುಕೊಡಬೇಡವೆನ್ನುತ್ತಾರೆ. ಆದರೆ ಕೊಟ್ಟ ಮಾತಿಗೆ ತಪ್ಪದ ಬಲೀಂದ್ರನು ದಾನ ನೀಡಲು ಕಮಂಡಲದಿಂದ ನೀರನ್ನು ದಾನ ಸ್ವೀಕರಿಸುವ ವಾಮನನ ಹಸ್ತಕ್ಕೆ ಹಾಕುವಾಗ ಶುಕ್ರಾಚಾರ್ಯರು ಕಮಂಡಲದ ನೀರು ಬರುವ ರಂದ್ರದಲ್ಲಿ ಕಪ್ಪೆಯ ರೂಪದಲ್ಲಿ ಸೇರಿಕೊಳ್ಳುತ್ತಾರೆ. ವಿಷ್ಣುವಿಗೆ ಇದು ಗೊತ್ತಾಗಿ ನೀರು ಬರುವ ರಂದ್ರದಲ್ಲಿ ಕಸ ಸಿಕ್ಕಿಹಾಕಿಕೊಂಡಿದೆ. ಅದನ್ನು ತೆಗೆಯುತ್ತೇನೆಂದು ದರ್ಭೆಯಿಂದ ರಂದ್ರವನ್ನು ಚುಚ್ಚಿದಾಗ ಕಪ್ಪೆಯ ರೂಪದಲ್ಲಿದ್ದ ಶುಕ್ರಾಚಾರ್ಯರು ತಮ್ಮ ಒಂದು ಕಣ್ಣನ್ನು ಕಳೆದುಕೊಳ್ಳುತ್ತಾರೆ. ಮುಂದೆ ಬಲೀಂದ್ರನಿಂದ ವಾಮನಮೂರ್ತಿಗೆ ದಾನ ಕೊಡಲ್ಪಡುತ್ತದೆ. ದಾನವಾಗಿ ತನಗೆ ಕೊಟ್ಟ ಮೂರು ಹೆಜ್ಜೆಗಳಲ್ಲಿ ವಿಷ್ಣುವು ತ್ರಿವಿಕ್ರಮನಾಗಿ ಬೆಳೆದು ಮೊದಲ ಹೆಜ್ಜೆಯನ್ನು ಇಡೀ ಭೂಮಂಡಲದ ಮೇಲೆ ಇಡುತ್ತಾನೆ. ಅವನ ಎರಡನೇ ಹೆಜ್ಜೆ ಆಕಾಶವನ್ನು ಆಕ್ರಮಿಸುತ್ತದೆ. ಮೂರನೆಯ ಹೆಜ್ಜೆ ಎಲ್ಲಿಡಲೆಂದು ಕೇಳಿದಾಗ ಅಳುಕದ ಬಲಿ ತನ್ನ ತಲೆಯ ಮೇಲಿಡಲು ಕೇಳಿಕೊಳ್ಳುತ್ತಾನೆ. ವಿಷ್ಣು ಹೀಗೆ ತನ್ನ ಪಾದವನ್ನು ಅವನ ತಲೆಯ ಮೇಲಿಟ್ಟು ಬಲಿಯನ್ನು ಅವನ ಸಂಗಡಿಗರೊಂದಿಗೆ ಪಾತಾಳಲೋಕಕ್ಕೆ ತಳ್ಳಿ ನಂತರ ಆ ಲೋಕವನ್ನು ಆಳುವಂತೆ ಆಶೀರ್ವದಿಸಿ ವರುಷದಲ್ಲಿ ಮೂರುದಿನ ಭೂಲೋಕಕ್ಕೆ ಬಂದು ಜನರನ್ನು ನೋಡಲು ಮತ್ತು ಅವರಿಂದ ಪೂಜೆ ಸ್ವೀಕರಿಸುವಂತೆ ವರ ನೀಡುತ್ತಾನೆ.
ಹಾಗಾಗಿ ದೀಪಾವಳಿಯಲ್ಲಿ ಮೂರು ದಿನ ಬಲೀಂದ್ರನ ಪೂಜೆ ನಡೆಯುತ್ತದೆ. ಪಾಡ್ಯದ ದಿನದಂದು ರಾತ್ರಿ ಬಲೀಂದ್ರ ತನ್ನ ಲೋಕವಾದ ಪಾತಾಳಕ್ಕೆ ತೆರಳುತ್ತಾನೆ.
ಬಲಿಪಾಡ್ಯಮಿ
ಮಲೆನಾಡಿಗರು ಈ ದಿನವನ್ನು ತಮ್ಮ ದೈನಂದಿನ ಜೀವನದಲ್ಲಿ ಹಾಸುಹೊಕ್ಕಾಗಿರುವ ಹಸುಗಳಿಗೆ ಮೀಸಲಿಡುತ್ತಾರೆ. ಬಹುಶಃ ನಮ್ಮ ಸಂಸ್ಕೃತಿಯ ಭಾಗವಾಗಿರುವ ಗೋವುಗಳಿಗೆ ಒಂದು ದಿನವನ್ನು ಮೀಸಲಿಟ್ಟು ಪೂಜಿಸಿ ಆರಾಧಿಸುವ ಶ್ರೇಷ್ಠ ಪರಂಪರೆ ನಮ್ಮದು. ಮನೆಯಲ್ಲಿರುವ ಹಸು, ಎಮ್ಮೆಗಳನ್ನು ಬೆಳ್ಳಂಬೆಳಿಗ್ಗೆಯೇ ಮೈ ತೊಳೆದು ಮತ್ತು ಅವುಗಳ ಮೈಗೆ, ಕೋಡುಗಳಿಗೆ ಬಣ್ಣ ಬಳಿದು ಅಲಂಕರಿಸಲಾಗುತ್ತದೆ. ಚೆಂಡು ಹೂ, ಅಡಿಕೆ ಸಿಂಗಾರ, ಪಚ್ಚೆತೆನೆ, ಗೋಟು ಅಡಿಕೆ ಎಲ್ಲ ಸೇರಿ ಮಾಲೆ ಮಾಡಿ ಎಲ್ಲಾ ಹಸುಗಳ ಕೊರಳಿಗೆ ಕಟ್ಟಲಾಗುತ್ತದೆ. ಅವುಗಳ ಕೊರಳಿಗೆ ಕಟ್ಟಿದ ಗಂಟೆಯ ಶಬ್ದ ಎಲ್ಲೆಡೆ ಮಾರ್ಧನಿಸುತ್ತದೆ. ನಂತರ ಮನೆಮಂದಿ ಸೇರಿಕೊಂಡು ಜಾಗಟೆಯ ಸದ್ದಿನೊಂದಿಗೆ ಗೋಪೂಜೆ ನೆರವೇರಿಸುತ್ತಾರೆ. ಗೋಪೂಜೆ ಮಾಡುವ ಗೋವಿಗೆ ಅರಿಶಿನ ಕುಂಕುಮ ಹಚ್ಚಿ ಆರತಿ ಬೆಳಗಿ ನಮಸ್ಕರಿಸುತ್ತಾರೆ. ಎಲ್ಲಾ ಹಸುಗಳಿಗೂ ಅನ್ನದ ರೊಟ್ಟಿ ಸಮರ್ಪಣೆಯಾಗುತ್ತದೆ.
ದೀಪಾವಳಿಯಲ್ಲಿ ಗೋವಿನ ಪೂಜೆಗೂ ಒಂದು ಪೌರಾಣಿಕ ಹಿನ್ನೆಲೆ ಇದೆ. ವೃಂದಾವನದ ಜನರು ಮಳೆ ಮತ್ತು ಉತ್ತಮ ಬೆಳಗಾಗಿ ಮಳೆ ದೇವರು ಇಂದ್ರನನ್ನು ಪೂಜಿಸುತ್ತಿದ್ದರು. ಶ್ರೀ ಕೃಷ್ಣನು ಇಂದ್ರನಿಗೆ ಮಾಡುವ ಪೂಜೆಯನ್ನು ನಿರಾಕರಿಸಿ ಸಕಲವನ್ನು ಕೊಡುವ ಗೋವರ್ಧನ ಗಿರಿಯನ್ನು ಪೂಜಿಸಲು ಗೊಲ್ಲರಿಗೆ ಸಲಹೆ ನೀಡಿದನು. ಇದರಿಂದ ಇಂದ್ರನು ಸಿಟ್ಟಾಗಿ ವೃಂದಾವನದ ಮೇಲೆ ಗುಡುಗು, ಬಿರುಗಾಳಿ, ಚಂಡಮಾರುತ ಸಹಿತವಾದ ಧಾರಾಕಾರ ಮಳೆಯನ್ನು ಸುರಿಸಲಾರಂಭಿಸಿದನು. ಆದರೆ ಶ್ರೀ ಕೃಷ್ಣನು ತನ್ನ ಕಿರು ಬೆರಳಿನಿಂದ ಬೃಹತ್ ಗೋವರ್ಧನ ಗಿರಿಯನ್ನು ಏಳು ದಿನಗಳ ಕಾಲ ಎತ್ತಿ ಹಿಡಿದು ಗೋವರ್ಧನ ಗಿರಿಯ ಅಡಿಯಲ್ಲಿ ತನ್ನೆಲ್ಲ ಜನರಿಗೆ ಮತ್ತು ಗೋವುಗಳಿಗೆ ಆಶ್ರಯ ನೀಡಿದನು. ಕೃಷ್ಣನ ಪವಾಡ ಸದೃಶವಾದ ಈ ಶಕ್ತಿಯನ್ನು ಕಂಡ ಇಂದ್ರನು ನನ್ನ ಅಹಂಕಾರವನ್ನು ತೊಡೆದು ಮಳೆಯನ್ನು ನಿಲ್ಲಿಸಿದನು. ಗೋವುಗಳನ್ನು ರಕ್ಷಿಸಲು ಗೋವರ್ಧನ ಹಿರಿಯನ್ನು ಎತ್ತಿದ ನೆನಪಲ್ಲಿ ದೀಪಾವಳಿಯಂದು ಗೋಪೂಜೆಯನ್ನು ಆಚರಿಸಲಾಗುತ್ತದೆ.
ಆಯುಧ ಪೂಜೆ
ಗೋಪೂಜೆಯ ಜೊತೆಗೆ ಅಂದು ಮಧ್ಯಾನ್ಹ ತೋಟ, ಗದ್ದೆಗಳಿಗೆ ಉಪಯೋಗಿಸುವ ಉಪಕರಣಗಳಿಗೆ ಪೂಜೆ ಸಲ್ಲುತ್ತದೆ. ಅಂದರೆ ತೋಟದ ಕೆಲಸಕ್ಕೆ ಬಳಕೆಯಾಗುವ ಗುದ್ದಲಿ, ಹಾರೆ, ಬುಟ್ಟಿ, ಕತ್ತಿ, ಕೊಡಲಿ, ಹಗ್ಗ ಮತ್ತು ಅಡುಗೆ ಮನೆಯಲ್ಲಿ ಉಪಯೋಗಿಸುವ ಕತ್ತಿ, ಒರಳುಗುಂಡು, ಒನಕೆ ಮುಂತಾದವುಗಳನ್ನು ಒಂದೆಡೆ ತಂದಿಟ್ಟು ಪೂಜೆ ಮಾಡುತ್ತಾರೆ. ಇದನ್ನು “ಗಡಿಮೆಟ್ಲು” ಪೂಜೆ ಅನ್ನುತ್ತಾರೆ. ಮಲೆನಾಡಿನಲ್ಲಿ ಸಾಮಾನ್ಯವಾಗಿ ವಾಹನಗಳ ಪೂಜೆಯನ್ನು ಕೂಡ ದೀಪಾವಳಿಯಂದೇ ಮಾಡುತ್ತಾರೆ.
ಇದಲ್ಲದೆ ಊರಿನ ಚೌಡಿ, ಭೂತ ಮತ್ತು ಊರಿನ ದೇವಸ್ಥಾನದ ದೇವರಿಗೆ ತೆಂಗಿನ ಕಾಯಿ ಒಡೆದು ಊರಿನ ನಮ್ಮೆಲ್ಲರಿಗೂ ಒಳ್ಳೆಯದಾಗಲೆಂದು ಬೇಡಿಕೊಂಡು ಪೂಜೆ ಮಾಡುತ್ತಾರೆ. ಎಲ್ಲ ಕಡೆಯೂ ತೆಂಗಿನಕಾಯಿ ಒಡೆಯುವುದರಿಂದ ತೆಂಗಿನಕಾಯಿಯಿಂದ ತಯಾರಿಸುವ “ಕಾಯಿ ಹೋಳಿಗೆ” ಮಲೆನಾಡಿನ ದೀಪಾವಳಿಯ ವಿಶೇಷ ತಿನಿಸೆಂದು ಪ್ರಸಿದ್ಧಿ ಪಡೆದಿದೆ.
ಮಲೆನಾಡಿನ ದೀಪಾವಳಿಯ ಇನ್ನೊಂದು ವಿಶೇಷ ಅಂದರೆ “ಅಂಟಿಕೆ-ಪಂಟಿಗೆ” ಎಂಬ ಜಾನಪದ ಕಲೆ. ಮಲೆನಾಡಿಗರು ಅವರು ಭಾಷೆಯಲ್ಲಿ ಇದನ್ನು “ಹಬ್ಬ ಹಾಡುವುದು” ಎನ್ನುತ್ತಾರೆ. ದೀಪಾವಳಿ ಮತ್ತು ಅದರ ಮಾರನೆಯ ದಿನಗಳಂದು ಕೆಲವೊಂದು ಪಂಗಡಗಳು ತಂಡ ಕಟ್ಟಿಕೊಂಡು ರಾತ್ರಿಯಲ್ಲಿ ಊರಿನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಜ್ಯೋತಿಯನ್ನು ಹಚ್ಚಿಕೊಂಡು ‘ಧಿಮಿಸಾಲೆನಿರಣ್ಣಾ ಧಿಮಿಸಾಲನಿರೊ’ ಎಂದು ರಾಗವಾಗಿ ಕೂಗುತ್ತಾ ಅದಕ್ಕೆ ಉಳಿದವರು ‘ಹುಯ್ಯೋ’ ಎಂದು ಕೋರಸ್ ನಲ್ಲಿ ಕೂಗಿ ಮನೆಯವರನ್ನು ಎಚ್ಚರಗೊಳಿಸಿ ಜಾನಪದ ಹಾಡುಗಳನ್ನು ಹಾಡುತ್ತಾ ಊರಿನ ಮನೆಮನೆಗೂ ತೆರಳಿ ಮನೆಯವರಿಗೆ ಜ್ಯೋತಿಯನ್ನು ನೀಡಿ ಅವರು ಕೊಡುವ ದುಡ್ಡು, ತೆಂಗಿನಕಾಯಿ, ದೀಪಕ್ಕೆ ಎಣ್ಣೆ, ಭಕ್ಷ ಮುಂತಾದವುಗಳನ್ನು ಸ್ವೀಕರಿಸುತ್ತಾರೆ. ರಾತ್ರಿಯಲ್ಲಿ ಮನೆಯ ಬಾಗಿಲು ತೆಗೆಸುವ, ದೀಪಕ್ಕೆ ಎಣ್ಣೆ ಹಾಕುವ, ಹೊಸ ಜೋಡಿಯ, ಹೆಣ್ಣುಮಕ್ಕಳನ್ನು ನವಿರಾಗಿ ಕೀಟಲೆ ಮಾಡುವ ಹಾಡುಗಳನ್ನು ತಂಡದ ಒಬ್ಬಿಬ್ಬರು ಹಾಡುತ್ತಾರೆ. ತಂಡದ ಉಳಿದವರು ರಾಗವಾಗಿ ದನಿಗೂಡಿಸುವ ಇಂತಹ ಹಾಡುಗಳು ತಂಪಾದ ರಾತ್ರಿಯ ನೀರವತೆಯಲ್ಲಿ ಮನಸ್ಸಿಗೆ ಮುದಕೊಡುತ್ತದೆ.
ಆದರೆ ಈ ಕಲೆಯೂ ಕೂಡ ಇತರೆ ಜಾನಪದ ಕಲೆಗಳಂತೆ ನಾನಾ ಕಾರಣಗಳಿಂದಾಗಿ ನಮ್ಮಿಂದ ಮರೆಯಾಗುತ್ತಿದೆ.
ವಿಷಾದದ ಸಂಗತಿಯೆಂದರೆ ಮೊದಲಿನ ಹಾಗೆ ಹಳ್ಳಿಗಳಲ್ಲಿ ಜನಗಳೂ ಇಲ್ಲ ಜಾನುವಾರುಗಳೂ ಇಲ್ಲ. ಜನಸಂಖ್ಯೆಯೂ ಕಡಿಮೆಯಾಗಿ ಓದಿಗಾಗಿ, ಕೆಲಸಕ್ಕಾಗಿ ಯುವಕರು ಪಟ್ಟಣಗಳ ಕಡೆ ಮುಖ ಮಾಡಿದ್ದಾರೆ. ವಲಸೆಯಿಂದಾಗಿ ಮಲೆನಾಡಿನ ಹಳ್ಳಿಗಳಲ್ಲಿ ಹಿಂದೆ ಕಾಣುತ್ತಿದ್ದ ಇಂತಹ ಹಬ್ಬಗಳ ಉತ್ಸಾಹ, ಖುಷಿ, ಸಡಗರ ಕಳೆಗುಂದಿದೆ. ಮನೆಯಲ್ಲಿ ವಯಸ್ಸಾದವರೇ ಜಾಸ್ತಿ ಇರುವುದರಿಂದ ಗೋವುಗಳ ಸಾಕುವಿಕೆಯೂ ಬಹಳಷ್ಟು ಮನೆಗಳಲ್ಲಿ ನಿಂತುಹೋಗಿದೆ. ಈ ವರ್ಷ ಎಲ್ ನಿನೋ ಪರಿಣಾಮವಾಗಿ ನಮ್ಮ ರಾಜ್ಯದಲ್ಲಿ ಮಳೆ ಪ್ರಮಾಣ ಸುಮಾರು 30-35% ಗಿಂತ ಕಡಿಮೆಯಾಗಿದೆ. ರಾಷ್ಟ್ರದ ಮಳೆಪ್ರಮಾಣವೂ ಸುಮಾರು 13% ಕಡಿಮೆ ಎಂದು ಹೇಳಲಾಗಿದೆ. ಇದರಿಂದ ಮುಂದೆ ತಾಪಮಾನವೂ ಗಣನೀಯವಾಗಿ ಏರಿಕೆಯಾಗಬಹುದು ಎಂದು ಊಹಿಸಲಾಗಿದೆ. ಹಾಗಾಗಿ ಮುಂದೆ ನೀರಿಗಾಗಿ ಹಾಹಾಕಾರ, ಆಹಾರ ವಸ್ತುಗಳ ಬೆಲೆ ಏರಿ ಜನಜೀವನ ದುಸ್ತರವಾಗುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ. ಇದರ ಜೊತೆಗೆ ಸರ್ಕಾರ ಹಾಲು ಮತ್ತು ಡೈರಿ ಉತ್ಪನ್ನಗಳ (ಮೊಸರು, ಪನ್ನೀರ್, ತುಪ್ಪ, ಬೆಣ್ಣೆ), ಬಸ್ ದರಗಳನ್ನು ಯದ್ವಾತದ್ವಾ ಏರಿಕೆ ಮಾಡಿ ಗಾಯದ ಮೇಲೆ ಬರೆ ಎಳೆದಿದೆ. ರೈತರ ಹೆಸರೇಳಿಕೊಂಡು ಮೊದಲು 8 ರೂಗಳನ್ನು ಏರಿಸುತ್ತೇವೆಂದು ಹೇಳಿ ಏರಿಸಿದ್ದು ಮಾತ್ರ ನಾನಾ ತರಹದ ಹಾಲಿಗೆ ರೂ. 8-12. ಹಾಲಿನ ದರದ ಏರಿಕೆಯಲ್ಲಿ ರೂ. 7 ರೈತರಿಗೆ ಕೊಡುತ್ತೇವೆ ಎಂದಿದ್ದಾರೆ. ರೈತರಿಗೆ ಕೊಡುವುದಾದರೆ ಕೇಂದ್ರ ಸರ್ಕಾರದ ಪಿಎಮ್-ಕಿಸಾನ್ ಯೋಜನೆಯಡಿಯಲ್ಲಿ ಪ್ರತಿವರ್ಷ ರೂ.6000 ರೈತರಿಗೆ ಅವರ ಖಾತೆಗೆ ನೇರವಾಗಿ ಹಾಕುವಂತೆ (DBT- Direct Benefit Transfer) ರೈತರ ಖಾತೆಗೆ ನೇರವಾಗಿ ಹಾಕಬೇಕಿತ್ತು. ಆಗ ಭ್ರಷ್ಟಾಚಾರಕ್ಕೂ ಅವಕಾಶವಿರುತ್ತಿರಲಿಲ್ಲ. ಆದರೆ ಪ್ರಸಿದ್ಧ Robbing Peter to pay Paul ನಾಣ್ಣುಡಿಯಂತೆ ಇದನ್ನು ಜನರ ಮೇಲೆ ಹೇರಿದ್ದಲ್ಲದೆ ದಿನವೊಂದಕ್ಕೆ ಕೋಟಿ ಹಣ ಸರ್ಕಾರದ ಖಜಾನೆ ತುಂಬಿಸುವ ಕೆಲಸ ಮಾಡಿದ್ದಾರೆ. ಜೊತೆಗೆ ಹಾಲಿನ ದರ ರೂ. 8-12 ಜಾಸ್ತಿಯಾದರೆ ಹೋಟೆಲಿನವರು ಒಂದು ಕಪ್ ಕಾಫಿಗೆ 5 ರೂಪಾಯಿ ಏರಿಸಿಬಿಟ್ಟಿದ್ದಾರೆ !.
ಒಟ್ಟಾರೆ ಪ್ರಾದೇಶಿಕತೆಗೆ ತಕ್ಕಂತೆ ದೀಪಾವಳಿಯ ಆಚರಣೆಗಳು ವಿಭಿನ್ನವಾಗಿ ನಡೆದರೂ, ದೀಪವಾಳಿಯ ಉದ್ದೇಶ ಮಾತ್ರ ಕತ್ತಲಿನಿಂದ ಬೆಳಕಿನೆಡೆಗೆ ಎನ್ನುವ ತತ್ವ. “ದೀಪದಿಂದ ದೀಪವ ಹಚ್ಚಬೇಕು ಮಾನವಾ …” ಎಂಬ ಹಾಡಿನಂತೆ ಮನಸ್ಸಿನಲ್ಲಿರುವ ಅಜ್ಞಾನವೆಂಬ ಕತ್ತಲನ್ನು ದೂರ ಸರಿಸಿ ಜ್ಞಾನವೆಂಬ ಬೆಳಕನ್ನು ಎಲ್ಲೆಡೆ ಚೆಲ್ಲುವ ಹಬ್ಬ. ಮನದ ಅಂಧಕಾರವನ್ನು ಕಳೆಯುವ ಹಬ್ಬವಾಗಿ ದೀಪಾವಳಿಯು ಎಲ್ಲರಿಗೂ ಸುಖ, ಶಾಂತಿ ಸಮೃದ್ಧಿಯನ್ನು ತರಲಿ.
– ಕಮಲಾಕರ ಕೆ ಆರ್, ತಲವಾಟ
9448343367
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
