ಪ್ರತಿವರ್ಷ ನರಕ ಚತುರ್ದಶಿಯನ್ನು ನಾಡಿನ ಎಲ್ಲ ಜನರು ಮನೆಯ ಮುಂದೆ ದೀಪ ಬೆಳಗಿಸಿ, ರಂಗೋಲಿ ಹಾಕಿ, ಹೊಸ ಬಟ್ಟೆಗಳನ್ನು ತೊಟ್ಟು ಬಹು ಸಂಭ್ರಮದಿಂದ ಆಚರಿಸಿದರೆ, ಒಂದು ಸಮುದಾಯ ಮಾತ್ರ ತಮ್ಮ ಪೂರ್ವಿಕರ ಮೇಲೆ ನಡೆದ ಮತಾಂಧತೆಯ ಘೋರ ಇತಿಹಾಸವನ್ನು ನೆನೆದು, ಅಂದಿನ ದಿನವನ್ನು ಕರಾಳ ದಿನವಾಗಿ ಆಚರಿಸುತ್ತದೆ. ಈ ಪೈಶಾಚಿಕ ಕೃತ್ಯಗಳಿಗೆ ಜೀವಂತ ಉದಾಹರಣೆಯಂತೆ ಗೋಚರಿಸುವವನು ಟಿಪ್ಪು ಸುಲ್ತಾನ್.
ದುರದೃಷ್ಟವೆಂದರೆ, ಆತನ ಈ ಅಮಾನವೀಯ ಕೃತ್ಯಗಳನ್ನು ಇಂದಿನ ಪೀಳಿಗೆಗೆ ತಿಳಿಯದಂತೆ ದೀರ್ಘಕಾಲ ಮುಚ್ಚಿಹಾಕುತ್ತಾ ಬರಲಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಚರ್ಚೆಗೆ ಬಂದ ಆತನ ಇತಿಹಾಸವು ಸಾಮಾನ್ಯ ಮನುಷ್ಯನ ಊಹೆಗೂ ನಿಲುಕದ ದೌರ್ಜನ್ಯಗಳನ್ನು ದರ್ಶನ ಮಾಡಿಸಿತು.
’ದೇವಾಲಯಗಳ ನಾಶ, ಭಯೋತ್ಪಾದನೆಯ ಮೂಲಕ ಮತಾಂತರ ಮತ್ತು ಸಾಮೂಹಿಕ ನರಮೇಧ ಇವುಗಳೇ ಆತನ ಆಡಳಿತದ ಪ್ರಮುಖ ನೀತಿಗಳಾಗಿದ್ದವು. ಮಲಬಾರ್ ಹತ್ಯಾಕಾಂಡ, ಮಂಗಳೂರಿನ ಕ್ರಿಶ್ಚಿಯನ್ ಸಮುದಾಯದವರ ಹತ್ಯೆ, ಕೊಡವರ ಮಾರಣಹೋಮ ಮುಂತಾದವು ಮನುಷ್ಯಕುಲವನ್ನೇ ನಾಚಿಸುವಂತಿವೆ.
ಮೂಲತಃ ಮೈಸೂರು ಒಡೆಯರ್ ರಾಜಮನೆತನಕ್ಕೆ ಅತ್ಯಂತ ನಿಷ್ಠಾವಂತರಾಗಿದ್ದ ಮಂಡ್ಯಂ ಅಯ್ಯಂಗಾರ್ ಸಮುದಾಯದವರು ಆಡಳಿತದಲ್ಲಿ ಉನ್ನತ ಹುದ್ದೆಗಳಲ್ಲಿದ್ದರು. ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್ ಮೈಸೂರು ಸಿಂಹಾಸನವನ್ನು ವಶಪಡಿಸಿಕೊಂಡ ನಂತರ, ಒಡೆಯರ್ ರಾಜಮನೆತನದ ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿಯವರು ಮೈಸೂರು ಸಾಮ್ರಾಜ್ಯವನ್ನು ಮರಳಿ ಪಡೆಯಲು ಪ್ರಯತ್ನಿಸುತ್ತಿದ್ದರು.
ಈ ಯೋಜನೆಯ ಭಾಗವಾಗಿ 1783ರಲ್ಲಿ ಮಂಡ್ಯಂ ಅಯ್ಯಂಗಾರ್ ಸಮುದಾಯದ ಪ್ರಮುಖರಾದ ತಿರುಮಲ ರಾವ್ ಮತ್ತು ಅವರ ಸಹೋದರ ನಾರಾಯಣ ರಾವ್ ಬ್ರಿಟಿಷರ (ಈಸ್ಟ್ ಇಂಡಿಯಾ ಕಂಪನಿ) ಜೊತೆ ರಹಸ್ಯವಾಗಿ ಮಾತುಕತೆ ನಡೆಸಿ ಟಿಪ್ಪು ವಿರುದ್ಧ ಸಂಚು ರೂಪಿಸಿದರು. ಆಡಳಿತದಲ್ಲಿದ್ದ ಅಂಚೆ ಶಾಮಯ್ಯ ಹಾಗೂ ಅವರ ಬೆಂಬಲಿಗರು ಈ ಬಂಡಾಯದಲ್ಲಿ ಭಾಗಿಯಾಗಿದ್ದಾರೆಂಬ ಸುಳಿವು ಸಿಕ್ಕ ತಕ್ಷಣ, ಕೋಪಗೊಂಡ ಟಿಪ್ಪು ಸುಲ್ತಾನ್ ತನ್ನ ಸಿಂಹಾಸನಕ್ಕೆ ಎದುರಾದ ಬೆದರಿಕೆಯನ್ನು ಹತೋಟಿಗೆ ತರಲು ಈ ಸಮುದಾಯದ ಮೇಲೆ ಭೀಕರ ಪ್ರತೀಕಾರ ತೀರಿಸಿಕೊಳ್ಳಲು ಮುಂದಾದನು.
ಮೈಸೂರು ಅರಸು ಮನೆತನಕ್ಕೆ ನಿಷ್ಠರಾಗಿದ್ದ ಈ ಮಂಡ್ಯಂ ಅಯ್ಯಂಗಾರ್ ಸಮುದಾಯದ ಮೇಲೆ ಟಿಪ್ಪು ನಡೆಸಿದ ಆಕ್ರಮಣವು ಜಗತ್ತಿನ ಇತಿಹಾಸದಲ್ಲೇ ಅತ್ಯಂತ ಕರಾಳ ಘಟನೆಗಳಲ್ಲಿ ಒಂದಾಗಿದೆ. ಅದು ನರಕ ಚತುರ್ದಶಿಯ ದಿನವಾಗಿತ್ತು. ಇಡೀ ಮೇಲುಕೋಟೆ ಮತ್ತು ಶ್ರೀರಂಗಪಟ್ಟಣದಲ್ಲಿ ಹಬ್ಬದ ಸಂಭ್ರಮವಿತ್ತು. ನರಸಿಂಹಸ್ವಾಮಿಯ ಅಭಿಷೇಕದಲ್ಲಿ ಪಾಲ್ಗೊಳ್ಳಲು ಸುತ್ತಮುತ್ತಲಿನ ಊರುಗಳಿಂದ ಸಾವಿರಾರು ಶ್ರೀವೈಷ್ಣವರು, ಅದರಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಂಡ್ಯಂ ಅಯ್ಯಂಗಾರರು ಸೇರಿದ್ದರು.
ಆದರೆ ‘ಕಾಫೀರರ ಹಬ್ಬ’ದ ದಿನಕ್ಕಾಗಿಯೇ ಕಾದಿದ್ದವನಂತೆ ಟಿಪ್ಪು ತನ್ನ ಸೈನ್ಯದೊಂದಿಗೆ ನುಗ್ಗಿ ಭೀಕರ ದಾಳಿ ನಡೆಸಿದನು. ಅಂದು ನೂರಾರು ಕುಟುಂಬಗಳು ಜೀವಭಯದಿಂದ ಊರು ತೊರೆಯಬೇಕಾಯಿತು, ಸಾವಿರಾರು ಜನರು ಕೊಲ್ಲಲ್ಪಟ್ಟರು.
ಟಿಪ್ಪುವಿನ ಆ ಕ್ರೂರ ದಾಳಿಯಿಂದ ಮೃತಪಟ್ಟವರ ಸ್ಮರಣಾರ್ಥ, ಅಂದಿನಿಂದ ಇಂದಿನವರೆಗೂ ಸಂತ್ರಸ್ತ ಕುಟುಂಬಗಳು ನರಕ ಚತುರ್ದಶಿ ಹಬ್ಬದ ಆಚರಣೆಯನ್ನೇ ನಿಲ್ಲಿಸಿವೆ. ಕೇವಲ ಮೇಲುಕೋಟೆಯಷ್ಟೇ ಅಲ್ಲದೆ, ಶ್ರೀರಂಗಪಟ್ಟಣ, ಮಂಡ್ಯ, ಬೆಂಗಳೂರು ಸೇರಿದಂತೆ ಹಲವಾರು ಕಡೆ ನೆಲೆಸಿರುವ ಆ ಸಮುದಾಯದವರು ಇಂದಿಗೂ ಆ ದಿನದಂದು ಯಾವುದೇ ಹಬ್ಬದ ಸಂಭ್ರಮವನ್ನು ಆಚರಿಸುವುದಿಲ್ಲ. ಇತಿಹಾಸದ ಪುಟಗಳಲ್ಲಿ ಎಷ್ಟೇ ಮರೆಮಾಚಲು ಯತ್ನಿಸಿದರೂ, ಆ ಕರಾಳ ನರಕಚತುರ್ದಶಿಯ ಗಾಯಗಳು ಮಂಡ್ಯಂ ಅಯ್ಯಂಗಾರ್ ಸಮುದಾಯದ ಮನಸ್ಸಿನಲ್ಲಿ ಇಂದಿಗೂ ಹಸಿಯಾಗಿಯೇ ಇವೆ. ಅಂದು ಬಲಿದಾನಗೊಂಡ ಪೂರ್ವಿಕರ ನೆನಪು ಮತ್ತು ಆ ನೋವಿನ ಇತಿಹಾಸವನ್ನು ಮುಂದಿನ ಪೀಳಿಗೆಗೆ ದಾಟಿಸುತ್ತಾ, ಆ ಸಮುದಾಯವು ಪ್ರತಿವರ್ಷವೂ ದೀಪಗಳ ಬದಲು ಮೌನಾಚರಣೆಯ ಮೂಲಕ ಕರಾಳ ದಿನವನ್ನು ಸ್ಮರಿಸುತ್ತದೆ. ಟಿಪ್ಪುವಿನ ಕ್ರೌರ್ಯದ ಆ ದುರಂತ ದಿನವನ್ನು ಮರೆಯಲು ಸಾಧ್ಯವಿಲ್ಲ, ಮರೆಯಬಾರದು ಕೂಡ!
ಅಗ್ನಿಹೋತ್ರಿಲೋಕೇಶ್ ಶರ್ಮಾ,
ಬೆಂಗಳೂರು
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
