ಭಾರತವು ಹಬ್ಬಗಳ ನಾಡು, ನಮ್ಮ ದೇಶದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ದೀಪಾವಳಿ ಹಬ್ಬವೂ ಒಂದು. ಇದನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ. ದೀಪಾವಳಿಯನ್ನು ಬೆಳಕಿನ ಹಬ್ಬ ಎಂದು ಕರೆಯುತ್ತಾರೆ. ದೀಪಾವಳಿ ಎಂದರೆ ದೀಪಗಳ ಸಾಲು ಎಂದರ್ಥ. ಈ ಹಬ್ಬವು ಕತ್ತಲೆಯಿಂದ ಬೆಳಕಿನೆಡೆಗೆ, ಅಜ್ಞಾನದಿಂದ ಸುಜ್ಞಾನದ ಕಡೆಗೆ ಮತ್ತು ಕೆಟ್ಟತನದಿಂದ ಒಳ್ಳೆಯತನದ ಕಡೆಗೆ ಸಾಗುವ ಸಂದೇಶವನ್ನು ನೀಡುತ್ತದೆ. ದೀಪಾವಳಿ ಐತಿಹಾಸಿಕ ಹಿನ್ನೆಲೆಯನ್ನು ಒಳಗೊಂಡಿದೆ. ಶ್ರೀ ರಾಮನು ರಾವಣನ ಸಂಹರಿಸಿ, 14 ವರ್ಷಗಳ ವನವಾಸ ಮುಗಿಸಿ ಅಯೋಧ್ಯೆಗೆ ಹಿಂತಿರುಗಿದಾಗ ಪ್ರಜೆಗಳು ದೀಪಗಳನ್ನು ಬೆಳಗಿಸಿ ಸ್ವಾಗತಿಸಿದರು ಎಂಬುವ ಪೌರಾಣಿಕೆ ಹಿನ್ನೆಲೆಗಳನ್ನು ಒಳಗೊಂಡಿದೆ ಮತ್ತು ಶ್ರೀ ಕೃಷ್ಣ ಪರಮಾತ್ಮನು ನರಕಾಸುರನೆಂಬ ರಾಕ್ಷಸರನ್ನು ಸಂಹರಿಸಿ ಲೋಕಕ್ಕೆ ಶಾಂತಿ ಮತ್ತು ನೆಮ್ಮದಿಯನ್ನು ನೀಡಿದ ದಿನವೆಂದು ಪುರಾಣಗಳಲ್ಲಿ ಹೇಳಲಾಗಿದೆ. ಈ ಹಬ್ಬಗಳಲ್ಲಿ ಮನೆಗಳನ್ನು ಸ್ವಚ್ಛಗೊಳಿಸಿ ಬಣ್ಣ ಬಣ್ಣದ ರಂಗೋಲಿಯನ್ನು ಬಿಡಿಸಿ ಸಿಹಿ ಮತ್ತು ಖಾರ ತಿನ್ನಿಸುಗಳನ್ನು ಮಾಡುತ್ತಾರೆ. ಉದಾರಣೆಗೆ ಉತ್ತರ ಕರ್ನಾಟಕದಲ್ಲಿ ಬೇಸನ್ ಲಾಡು, ಚಕ್ಕಲಿ, ಗಿಲಗಂಚಿ, ಮೈಸೂರು ಪಾಕ, ರವೆ ಉಂಡೆ, ಶಂಕರಪೋಳೆ, ಸೇವು, ಬರ್ಫಿ, ಜಾಮೂನು ಮುಂತಾದ ನಾನಾ ವಿಧದ ಪದಾರ್ಥಗಳನ್ನು ಮಾಡುತ್ತಾರೆ. ಮಕ್ಕಳಿಗೆ ದೀಪಾವಳಿ ಎಂದರೆ ಸಂಭ್ರಮವೋ ಸಂಭ್ರಮ.
ಹಬ್ಬಗಳಲ್ಲಿ ದೀಪಗಳ ಮಹತ್ವ
ದೀಪಾವಳಿ ಎಂದರೆ ದೀಪಗಳ ಬೆಳಕಿನ ಹಬ್ಬ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ದೀಪಕ್ಕೆ ಅತ್ಯಂತ ಪವಿತ್ರವಾದ ಸ್ಥಾನವಿದೆ. ದೀಪವು ಕೇವಲ ಕತ್ತಲೆಯನ್ನು ಹೋಗಲಾಡಿಸುವ ಸಾಧನವಲ್ಲ, ಅದು ಜ್ಞಾನ, ಭಕ್ತಿ, ಶ್ರದ್ದೆ, ಶಾಂತಿ, ಸಮೃದ್ಧಿ ಮತ್ತು ಸಕಾರಾತ್ಮಕ ಚಿಂತನೆಯ ಸಂಕೇತವಾಗಿದೆ. ದೀಪಾವಳಿಯ ಸಂದರ್ಭದಲ್ಲಿ ಮನೆಗಳಲ್ಲಿ ಮಣ್ಣಿನ ಹಣತೆಗಳನ್ನು ಹಚ್ಚುವುದು ವಿಶೇಷ ಸಂಪ್ರದಾಯವಾಗಿದೆ. ಹಣತೆಯ ಪುಟ್ಟ ಜ್ಯೋತಿಯು ಸುತ್ತಲಿನ ಕತ್ತಲೆಯನ್ನು ದೂರ ಮಾಡುವಂತೆ ನಮ್ಮ ಜೀವನದಲ್ಲಿರುವ ಅಜ್ಞಾನ, ಅಸೂಯೆ ಮತ್ತು ದ್ವೇಷವೆಂಬ ಕತ್ತಲೆಯನ್ನು ದೂರ ಮಾಡಿ ಜ್ಞಾನ, ಪ್ರೀತಿ, ದಯೆ, ಮತ್ತು ಮಾನವೀಯತೆಯ ಬೆಳ ಳಕನ್ನು ಹಂಚಬೇಕು ಎಂಬುದೇ ದೀಪ ಬೆಳಗಿಸುವುದರ ಹಿಂದಿನ ಉದ್ದೇಶವಾಗಿದೆ.*
ತಮಸೋಮ ಜ್ಯೋತಿರ್ಗಮಯ ಅಂದರೆ ಕತ್ತಲೆಯಿಂದ ಬೆಳಕಿನೆಡೆಗೆ ನಮ್ಮನ್ನು ಕರೆದೊಯ್ಯಲಿ ಎಂಬ ಉದಾತ ಸಂದೇಶವನ್ನು ದೀಪಾವಳಿ ಸಾರುತ್ತದೆ. ದೀಪವು ತಾನು ಉರಿದು ಜಗತ್ತಿಗೆ ಬೆಳಕು ನೀಡುವಂತೆ ನಾವು ನಮ್ಮ ಒಳ್ಳೆಯತನದಿಂದ ಸಮಾಜಕ್ಕೆ ಬೆಳಕಾಗೋಣ. ನಮ್ಮ ಸಂಸ್ಕೃತಿಯಲ್ಲಿ ದೀಪಕ್ಕೆ ವಿಶೇಷ ಗೌರವವಿದೆ. ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು ದೀಪ ಬೆಳಗಿಸುವುದು ನಮ್ಮ ಸಂಪ್ರದಾಯ. ಏಕೆಂದರೆ ದೀಪವು ಅಜ್ಞಾನವನ್ನು ದೂರ ಮಾಡಿ ಜ್ಞಾನದ ಮಾರ್ಗವನ್ನು ತೋರಿಸುವ ಸಂಕೇತವಾಗಿದೆ. ದೀಪಾವಳಿಯಲ್ಲಿ ಮನೆಯ ಬಾಗಿಲಿನಲ್ಲಿ, ತುಳಸಿ ಕಟ್ಟೆಯ ಬಳಿ, ದೇವರ ಮನೆಯಲ್ಲಿ ಮತ್ತು ಅಂಗಳದಲ್ಲಿ ದೀಪಗಳನ್ನು ಬೆಳಗಿಸುವುದು ಶುಭ ಸಂಕೇತವೆಂದು ಪರಿಗಣಿಸಲಾಗಿದೆ. ದೀಪಗಳ ಸಾಲು ನಮ್ಮ ಮನೆಗಳಲ್ಲಿ ಸೌಂದರ್ಯವನ್ನು ನೀಡುವುದರ ಜೊತೆಗೆ ಮನಸ್ಸಿನಲ್ಲಿ ಹೊಸ ಉತ್ಸಾಹ ಮತ್ತು ಭರವಸೆಯನ್ನು ಮೂಡಿಸುತ್ತದೆ. ದೀಪಾವಳಿ ಹಬ್ಬವನ್ನು ಎಷ್ಟು ದಿನಗಳವರೆಗೆ ಆಚರಿಸಲಾಗುತ್ತದೆ ಮತ್ತು ಅದರ ವಿಶೇಷತೆ ಏನು ?ಸಾಮಾನ್ಯವಾಗಿ ದೀಪಾವಳಿ ಹಬ್ಬವನ್ನು ಐದು ದಿನಗಳವರೆಗೆ ಆಚರಿಸಲಾಗುತ್ತದೆ ಈ ಐದು ದಿನಗಳಿಗೂ ತನ್ನದೇ ಆದ ಒಂದು ಪೌರಾಣಿಕ, ಧಾರ್ಮಿಕ, ಹಾಗೂ ಆಧ್ಯಾತ್ಮಿಕ ಮಹತ್ವವಿದೆ.
ದೀಪಾವಳಿ ಐದು ದಿನಗಳ ವಿಶೇಷತೆ
೧ ಧನ ತ್ರಯೋದಶಿ
೨ ನರಕ ಚತುರ್ದಶಿ
೩ ಅಮಾವಾಸ್ಯೆ -ಲಕ್ಷ್ಮಿ ಪೂಜೆ
೪ ಬಲಿಪಾಡ್ಯಮಿ
೫ ಭಾತೃದ್ವಿತೀಯ, ಅಥವಾ ಬಾಯ್ ದೂಜ
ಧನ ತ್ರಯೋದಶಿ: ಧನ್ ತೆರಸ್ ಅಥವಾ ನೀರು ತುಂಬುವ ಹಬ್ಬ ದೀಪಾವಳಿಯ ಮೊದಲನೇ ದಿನ ಈ ದಿನ ತಾಮ್ರದ ಹಾಂಡೆ, ತಪ್ಪೆಲೆಗಳನ್ನು ಶುಭ್ರಗೊಳಿಸಿ ಅದಕ್ಕೆ ಜಾಜಾ ಮತ್ತು ಸುಣ್ಣಗಳಿಂದ ಅಲಂಕರಿಸಿ, ಅದಕ್ಕೆ ನೀರು ತುಂಬಿ ಅರಿಶಿಣ, ಕುಂಕುಮ ಹಚ್ಚಿ ಮಾವಿನ ಎಲೆಯನ್ನು ಇಟ್ಟು ಪೂಜೆ ಮಾಡುವ ಪದ್ಧತಿಯು ಮೊದಲಿನಿಂದಲೂ ನೋಡಿಕೊಂಡು ಬಂದಿದ್ದೇವೆ. ನೀರು ಎಷ್ಟು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ ಎಂಬುದನ್ನು ನಾವು ಇಲ್ಲಿ ಪರಿಗಣಿಸಬಹುದು. ಸಕಲ ಚರಾಚರ ಜೀವ ರಾಶಿಗಳಿಗೂ ನೀರು ಅತ್ಯಂತ ಅವಶ್ಯಕ. ಅದಕ್ಕೆ ಈ ದಿನದಂದು ಜಲದೇವತೆಯನ್ನು ಪೂಜೆ ಮಾಡಲಾಗುತ್ತದೆ. ನೀರು ಸಮೃದ್ಧಿಯ ಸಂಕೇತ ಮನೆಯಲ್ಲಿ ನೀರು ಸದಾಕಾಲ ಮತ್ತು ಆಹಾರ ಸಮೃದ್ಧಿಯಿಂದ ಇರಲಿ ಎಂದು ಬೇಡಿಕೊಳ್ಳಲಾಗುತ್ತದೆ. ಈ ದಿನ ಧನ್ವಂತ್ರಿ ದೇವರನ್ನು ಪೂಜಿಸಲಾಗುತ್ತದೆ ಆರೋಗ್ಯ, ಆಯಸ್ಸು, ಮತ್ತು ಐಶ್ವರ್ಯಕ್ಕಾಗಿ ಪ್ರಾರ್ಥಿಸಲಾಗುತ್ತದೆ. ಚಿನ್ನ, ಬೆಳ್ಳಿ ಮತ್ತು ಹೊಸ ವಸ್ತುವನ್ನು ಖರೀದಿಸುವ ಸಾಂಪ್ರದಾಯವಿದೆ.
ಯಮದೀಪದ ಮಹತ್ವ
ಧನತ್ರಯೋದಶಿಯ ದಿನದಂದು ಮನೆಯ ದಕ್ಷಿಣ ದಿಕ್ಕಿನಲ್ಲಿ ಯಮನ ಹೆಸರಿನಲ್ಲಿ ದೀಪವನ್ನು ಬೆಳಗಿಸುವ ಸಂಪ್ರದಾಯವಿದೆ. ಪುರಾಣಗಳ ನಂಬಿಕೆಯ ಪ್ರಕಾರ ಯಮ ದೇವರು ಮರಣದ ಅಧಿಪತಿಯಾಗಿದ್ದು ಅವರ ಹೆಸರಿನಲ್ಲಿ ದೀಪವನ್ನು ಬೆಳಗಿಸುವುದರಿಂದ ಅಕಾಲಿಕ ಮೃತ್ಯು ಭಯ ನಿವಾರಣೆಯಾಗುತ್ತದೆ ಮತ್ತು ಕುಟುಂಬದ ಎಲ್ಲಾ ಸದಸ್ಯರಿಗೂ ಆಯುಷ್ಯ ಆರೋಗ್ಯ ಹಾಗೂ ಕ್ಷೇಮ ದೊರಕಲಿ ಎಂದು ಈ ದೀಪವನ್ನು ಬೆಳಗಿಸುವ ಸಂಪ್ರದಾಯವಿದೆ.
ನರಕ ಚತುರ್ದಶಿ: ನರಕ ಚತುರ್ದಶಿಯು ದೀಪಾವಳಿಯ 2ನೇ ದಿನವಾಗಿದೆ. ಶ್ರೀಕೃಷ್ಣ ಪರಮಾತ್ಮನು ನರಕಾಸುರನೆಂಬ ರಾಕ್ಷಸನನ್ನು ಸಂಹರಿಸಿ ಲೋಕಕ್ಕೆ ಶಾಂತಿ ಮತ್ತು ನೆಮ್ಮದಿಯನ್ನು ನೀಡಿದ ದಿನವೆಂದು ಪುರಾಣಗಳಲ್ಲಿ ಹೇಳಲಾಗಿದೆ. ಈ ದಿನ ಮುಂಜಾನೆ ಅಂದರೆ ಬೆಳಗಿನ ಜಾವ ಸೂರ್ಯ ಉದಯಕ್ಕಿಂತಲೂ ಮುಂಚೆ ಎದ್ದು ಮನೆಯ ಬಾಗಿಲ ಮುಂದೆ ದೀಪ ಹಚ್ಚಿಟ್ಟು ,ಅವಿಭಕ್ತ ಕುಟುಂಬದಂತೆ ಕುಟುಂಬದಲ್ಲಿರುವಂತಹ ಎಲ್ಲಾ ಸದಸ್ಯರಿಗೆ ಒಟ್ಟಿಗೆ ಕೂಡಿಸಿ ಆರತಿಯನ್ನು ಮಾಡುತ್ತಾರೆ. ನಂತರ ಹಿಂದಿನ ದಿವಸ ಪೂಜೆ ಮಾಡಿದ ನೀರನ್ನು ತೆಗೆದುಕೊಂಡು ಎಲ್ಲಾ ಸದಸ್ಯರು ಅಭ್ಯಂಗ ಸ್ನಾನವನ್ನು ಮಾಡುತ್ತಾರೆ. ಈ ಹಬ್ಬದ ಸ್ನಾನ ಮಾಡುವುದರ ವಿಶೇಷವೇನೆಂದರೆ, ನಮ್ಮಲ್ಲಿರುವ ಅಹಂಕಾರ, ಮದ, ದುರ್ಗುಣಗಳೆಂಬ ನರಕಾಸುರನನ್ನು ನಾಶ ಮಾಡಿ ಒಳ್ಳೆಯ ಗುಣಗಳನ್ನು ಬೆಳಸಿಕೊಳ್ಳಬೇಕು.
ಅಮಾವಾಸ್ಯೆ: ಮೂರನೇ ದಿನ ದೀಪಾವಳಿಯ ಪ್ರಮುಖ ದಿನವಾಗಿದೆ. ಈ ದಿನ ಮಹಾಲಕ್ಷ್ಮಿ ಪೂಜೆಯನ್ನು ಮಾಡಲಾಗುತ್ತದೆ. ಮನೆ, ಅಂಗಡಿ, ಕಚೇರಿ, ಮುಂತಾದ ಕಡೆಗಳಲ್ಲೆಲ್ಲ ತಾಯಿ ಮಹಾಲಕ್ಷ್ಮಿಯ ಪೂಜೆ ಮಾಡಲಾಗುತ್ತದೆ. ಇದರಿಂದ ಎಲ್ಲರಿಗೂ ಸುಖ, ಶಾಂತಿ,ಸಂಪತ್ತು ಮತ್ತು ಸಮೃದ್ಧಿಯನ್ನು ತಾಯಿ ಮಹಾಲಕ್ಷ್ಮಿಯು ನೀಡಲೆಂದು ಪ್ರಾರ್ಥಿಸಲಾಗುತ್ತದೆ.
ಬಲಿಪಾಡ್ಯಮಿ: ಈ ದಿನ ದಾನಶೀಲತೆಯ ಮಹತ್ವದ ಬಗ್ಗೆ ತಿಳಿದುಕೊಳ್ಳಬಹುದು. ಬಲಿಪಾಡ್ಯಮಿಯು ಮಹಾಬಲಿ ಚಕ್ರವರ್ತಿಯ ನೆನಪಿನ ದಿನವಾಗಿದೆ. ಪುರಾಣದ ಪ್ರಕಾರ, ವಾಮನ ಅವತಾರದಲ್ಲಿ ಶ್ರೀ ಮಹಾವಿಷ್ಣು ಬಲಿ ಚಕ್ರವರ್ತಿಯ ಬಳಿಗೆ ಬಂದು ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳಿದನು. ಆಗ ವಾಮನನು ಮೊದಲನೇ ಹೆಜ್ಜೆ ಇಂದ ಇಡೀ ಭೂಮಿಯನ್ನು, ಎರಡನೇ ಹೆಜ್ಜೆ ಇಂದ ಆಕಾಶವನ್ನು ತುಳಿದು ಮೂರನೇ ಹೆಜ್ಜೆ ಎಲ್ಲಿಡಲಿ ಎಂದು ಕೇಳಿದಾಗ ಬಲಿ ಚಕ್ರವರ್ತಿಯು ತನ್ನ ಶಿರದ ಮೇಲೆ ಮೂರನೇ ಹೆಜ್ಜೆ ಇಡಬೇಕೆಂದು ವಾಮನನಿಗೆ ಕೇಳಿಕೊಂಡು ತನ್ನ ಮಾತನ್ನು ಉಳಿಸಿಕೊಂಡು ಮಹಾನ್ ದಾನ ಶೂರನಾಗಿ ಪ್ರಸಿದ್ಧನಾದನು. ಆದ್ದರಿಂದ ಈ ದಿನ ಬಲಿಚಕ್ರವರ್ತಿಯನ್ನು ಸ್ಮರಿಸಿ ಪೂಜೆ ಸಲ್ಲಿಸುತ್ತಾರೆ. ಅಧಿಕಾರ ಮತ್ತು ಐಶ್ವರ್ಯಕ್ಕಿಂತ ದಾನ, ವಿನಯ, ಸತ್ಯ, ನಿಷ್ಠೆ ಮತ್ತು ಕೊಟ್ಟ ಮಾತನ್ನು ಉಳಿಸಿಕೊಳ್ಳುವುದನ್ನು ನಾವಿಲ್ಲಿ ಕಾಣಬಹುದಾಗಿದೆ.
ಭಾಯ್ ದೂಜ್_ಅಥವಾ ಭ್ರಾತೃ ದ್ವಿತೀಯ ಐದನೇ ದಿನ ಸಹೋದರ ಮತ್ತು ಸಹೋದರಿಯರ ಬಾಂಧವ್ಯದ ಸಂಕೇತವನ್ನು ನೋಡಬಹುದು. ಸಹೋದರಿಯರು ಸಹೋದರರಿಗೆ ಆರತಿ ಮಾಡಿ ತಿಲಕವಿಟ್ಟು ಸಹೋದರರಿಗೆ ಸಿಹಿತಿನಿಸಗಳನ್ನು ತಿನಿಸಿ ಅವರ ಆಯುಷ್ಯ, ಆರೋಗ್ಯ ಮತ್ತು ಕ್ಷೇಮಕ್ಕಾಗಿ ದೇವರಲ್ಲಿ ಪ್ರಾರ್ಥಿಸುತ್ತಾರೆ. ಈ ಹಬ್ಬವು ಅಣ್ಣ ತಂಗಿ ಹಾಗೂ ಅಕ್ಕ ತಮ್ಮಂದಿರ ಪ್ರೀತಿಯ ಸಂಕೇತವಾಗಿದೆ. ಸಹೋದರರು ಸಹೋದರಿಯರಿಗೆ ಉಡುಗೊರೆಯನ್ನು ಕೂಡ ಕೊಡುತ್ತಾರೆ.
ದೀಪಾವಳಿಯ ಐದು ದಿನಗಳು ನಮಗೆ ಐದು ವಿಭಿನ್ನ ಜೀವನದ ಮೌಲ್ಯಗಳನ್ನು ಕಲಿಸುತ್ತದೆ. ಆರೋಗ್ಯ, ಐಶ್ವರ್ಯ, ದಾನ ಧರ್ಮ, ಕುಟುಂಬದ ಪ್ರೀತಿಯ ಮಹತ್ವವನ್ನು ತಿಳಿಸಿಕೊಡುತ್ತದೆ.
ದೀಪದಿಂದ ದೀಪ ಬೆಳಗಲಿ, ಮನದಿಂದ ಮನ ಬೆಸೆಯಲಿ, ಪ್ರೀತಿಯ ಬೆಳಕು ಎಲ್ಲರ ಬಾಳಿನಲ್ಲಿ ಚೆಲ್ಲಲಿ. ದೀಪಾವಳಿಯ ಈ ಐದು ದಿನಗಳ ಸಂಭ್ರಮ ಎಲ್ಲರ ಬದುಕಿನಲ್ಲಿಯೂ ಸುಖ ಶಾಂತಿ ಮತ್ತು ಸಮೃದ್ಧಿಯನ್ನು ತರಲಿ.
ದೀಪಾವಳಿ ಹಬ್ಬದಲ್ಲಿ ಪಟಾಕಿಗಳಿಂದ ಆಗುವ ದುಷ್ಪರಿಣಾಮಗಳು
ದೀಪಾವಳಿ ಬೆಳಕಿನ ಹಬ್ಬ ಈ ಹಬ್ಬವನ್ನು ಎಲ್ಲರೂ ಸಂತೋಷ ಸಡಗರದಿಂದ ಆಚರಿಸುತ್ತಾರೆ. ಈ ಹಬ್ಬದಲ್ಲಿ ಅನೇಕರು ಸಂತೋಷದಿಂದ ಪಟಾಕಿಗಳನ್ನು ಸಿಡಿಸುತ್ತಾರೆ. ಆದರೆ ಪಟಾಕಿಗಳಿಂದ ಮನುಷ್ಯರ, ಪ್ರಾಣಿಗಳ ಮತ್ತು ಪರಿಸರದ ಮೇಲೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತವೆ.
ಪಟಾಕಿಗಳ ಹೊಗೆಯಿಂದ ಗಾಳಿ ಕಲುಷಿತಗೊಳ್ಳುತ್ತದೆ. ಇದರಿಂದ ಉಸಿರಾಟದ ತೊಂದರೆ ಉಂಟಾಗಬಹುದು. ಎಷ್ಟೋ ಜನರು, ವಯೋವೃದ್ಧರು, ಅಸ್ತಮಾ ಕಾಯಿಲೆಯಿಂದ ಪೀಡಿತರಾದವರು ಇದರಿಂದ ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪಟಾಕಿಗಳ ಹೊಗೆ ಮದ್ದು ಸಿಡಿಯುವಾಗ ಹೊರಬರುವ ಕಿರಣಗಳಿಂದ ಕಣ್ಣಿನ ಉರಿ ಉಂಟಾಗಬಹುದು.
ಪಟಾಕಿ ಮದ್ಧಿನ ಸಂಪರ್ಕದಿಂದ ಚರ್ಮಕ್ಕೆ ಅಲರ್ಜಿ ಮತ್ತು ಪುಟ್ಟ ಗಾಯಗಳು ಉಂಟಾಗಬಹುದು. ಪಟಾಕಿಗಳ ಸಿಡಿತದಿಂದ ಕಿವಿಗಳಿಗೆ ತೊಂದರೆ ಉಂಟಾಗಬಹುದು. ಪ್ರಾಣಿ ಪಕ್ಷಿಗಳು ಭಯಭೀತ ವಾಗುತ್ತವೆ. ಅಲ್ಲದೆ ಪಟಾಕಿಗಳಲ್ಲಿರುವ ವಿವಿಧ ರಾಸಾಯನಿಕ ವಸ್ತುಗಳು ಗಾಳಿ ಮತ್ತು ಮಣ್ಣಿನ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ.
ಪಟಾಕಿಗಳನ್ನು ಅಜಾಗರೂಕತೆಯಿಂದ ಬಳಸುವುದರಿಂದ ಸುಟ್ಟ ಗಾಯಗಳು ಮತ್ತು ಕಣ್ಣಿನ ಗಾಯಗಳು ಉಂಟಾಗಬಹುದು. ಪಟಾಕಿಗಳಿಂದ ಬೆಂಕಿ ಅವಗಡಗಳು ಸಂಭವಿಸಿ ಮನೆ ಅಂಗಡಿ ಮತ್ತು ಆಸ್ತಿಪಾಸಿಗಳಿಗೆ ಹಾನಿಯಾಗಬಹುದು.
ಪಟಾಕಿಗಳ ಹೊಗೆಯಿಂದ ಕೆಮ್ಮು, ಉಸಿರಾಟದ ಸಮಸ್ಯೆ ಉಂಟಾಗಬಹುದು. ಹಣದ ವ್ಯರ್ಥ_ಪಟಾಕಿಗಳಿಗೆ ಹೆಚ್ಚು ಹಣ ಖರ್ಚು ಮಾಡುವ ಬದಲು ಆ ಹಣವನ್ನು ಬಡವರಿಗೆ ಸಿಹಿ ತಿನಿಸುಗಳನ್ನು ಕೊಡಿಸಲು ಬಳಸುವುದು ಉತ್ತಮ. ಇದರಿಂದ ಅವರು ದೀಪಾವಳಿಯನ್ನು ಸಂಭ್ರಮಿಸುತ್ತಾರೆ.
ದೀಪಾವಳಿ ಎಂದರೆ ಕೇವಲ ಪಟಾಕಿಗಳ ಹಬ್ಬವಲ್ಲ ಅದು ಅಜ್ಞಾನ ಮತ್ತು ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ಹೊರಡುವ ಹಬ್ಬವಾಗಿದೆ. ಆದ್ದರಿಂದ ಮಣ್ಣಿನ ದೀಪಗಳನ್ನು ಹಚ್ಚಿ, ಸಿಹಿ ಹಂಚಿ ಪರಿಸರ ಸ್ನೇಹಿಯಾಗಿ ಹಬ್ಬವನ್ನು ಆಚರಿಸೋಣ. ಪಟಾಕಿ ಬೇಡ ಪರಿಸರ ಮಾಲಿನ್ಯವೂ ಬೇಡ. ದೀಪಗಳ ಬೆಳಕು ಇರಲಿ ಸಂತೋಷದ ನಗು ಇರಲಿ. ಹಸಿರು ಪರಿಸರ ಆರೋಗ್ಯಕರ ಜೀವನ ನಮ್ಮದಾಗಲಿ.
ಸರ್ವರಿಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
- ಸುಜಾತ ಆರ್, ಜೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
