ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕದಿಂದ ನಾಳೆ ಪ್ರಶಸ್ತಿ ಪ್ರದಾನ ಸಮಾರಂಭ
ಬೆಂಗಳೂರು: ಸಾಮಾಜಿಕ ಕಳಕಳಿ ಹಾಗೂ ರಾಷ್ಟ್ರೀಯ ದೃಷ್ಟಿಕೋನವುಳ್ಳ ಹಿರಿಯ ಸಾಹಿತ್ಯ ಸಾಧಕರಿಗೆ ನೀಡಲಾಗುವ ‘ಆದಿಕವಿ ಪುರಸ್ಕಾರ’ ಮತ್ತು ಯುವ ಸಾಹಿತ್ಯ ಸಾಧಕರಿಗೆ ನೀಡಲಾಗುವ ‘ವಾಗ್ದೇವಿ ಪುರಸ್ಕಾರ’ ಪ್ರದಾನ ಸಮಾರಂಭವು ನಾಳೆ (ಭಾನುವಾರ, ನವೆಂಬರ್ 15, 2026) ಬೆಂಗಳೂರಿನಲ್ಲಿ ನಡೆಯಲಿದೆ.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ (ನೋಂದಾಯಿತ) ವತಿಯಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮವು ಬಸವನಗುಡಿಯ ನ್ಯಾಷನಲ್ ಕಾಲೇಜಿನ ಹೆಚ್. ಎನ್. ಮಲ್ಟಿಮೀಡಿಯಾ ಸಭಾಂಗಣದಲ್ಲಿ ಬೆಳಿಗ್ಗೆ 10.30ರಿಂದ 12.30ರವರೆಗೆ ಜರುಗಲಿದೆ.
ಈ ಬಾರಿ ಹಿರಿಯ ಸಾಹಿತಿ ಶ್ರೀ ಶಾ. ಮಂ. ಕೃಷ್ಣರಾಯ ಅವರಿಗೆ ‘ಆದಿಕವಿ ಪುರಸ್ಕಾರ’ ಹಾಗೂ ಲೇಖಕಿ ಶ್ರೀಮತಿ ಸಹನಾ ವಿಜಯಕುಮಾರ್ ಅವರಿಗೆ ‘ವಾಗ್ದೇವಿ ಪುರಸ್ಕಾರ’ ನೀಡಿ ಗೌರವಿಸಲಾಗುತ್ತಿದೆ. ಆದಿಕವಿ ಪುರಸ್ಕೃತ ಹಿರಿಯ ಸಾಹಿತಿ ಡಾ. ಬಾಬು ಕೃಷ್ಣಮೂರ್ತಿ ಅವರು ಪುರಸ್ಕಾರ ಪ್ರದಾನ ಮಾಡಲಿದ್ದಾರೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉದ್ಯಮಿ ಹಾಗೂ ಸಮಾಜ ಸೇವಕ ಶ್ರೀ ಎಸ್. ಜಯರಾಮ (ಆದಿಕವಿ ಪುರಸ್ಕಾರದ ಪ್ರಾಯೋಜಕರು) ಮತ್ತು ನಿವೃತ್ತ ಇಸ್ರೋ ವಿಜ್ಞಾನಿ ಹಾಗೂ ವಾಗ್ದೇವಿ ವಿಲಾಸ ಶಿಕ್ಷಣ ಸಮೂಹದ ಅಧ್ಯಕ್ಷ ಶ್ರೀ ಕೆ. ಹರೀಶ್ (ವಾಗ್ದೇವಿ ಪುರಸ್ಕಾರದ ಪ್ರಾಯೋಜಕರು) ಭಾಗವಹಿಸಲಿದ್ದಾರೆ. ಅಭಾಸಾಪ ಕರ್ನಾಟಕದ ಅಧ್ಯಕ್ಷ ಶ್ರೀ ಎಸ್. ಜಿ. ಕೋಟಿ ಅವರು ಉಪಸ್ಥಿತರಿರುವರು.
ಪುರಸ್ಕೃತರ ಪರಿಚಯ:

ಶಾ. ಮಂ. ಕೃಷ್ಣರಾಯ: ಬೆಳಗಾವಿಯಲ್ಲಿ ಜನಿಸಿದ ಇವರು ಬಹುಭಾಷಾ ಕೋವಿದರು, ಅಧ್ಯಾಪಕರು, ಕೃತಿಗಳ ಸಂಪಾದಕರು ಹಾಗೂ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದಾರೆ. ಗೋವಾದ ನೆಲದಲ್ಲಿ ಕನ್ನಡದ ಅಸ್ತಿತ್ವವನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಏಳು ನಾಟಕಗಳು, ಕಥೆಗಳು, ಶೋಧಸಾಹಿತ್ಯ, ಮಕ್ಕಳ ಸಾಹಿತ್ಯ, ಪ್ರವಾಸ ಸಾಹಿತ್ಯ, ಜೀವನಚರಿತ್ರೆ, ವ್ಯಕ್ತಿಚಿತ್ರ, ಅನುವಾದ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಒಟ್ಟು 318 ಕೃತಿಗಳು ಪ್ರಕಟಗೊಂಡಿದ್ದು, ಇವರ ಕುರಿತು ಐದು ಕೃತಿಗಳು ಹೊರಬಂದಿವೆ.

ಸಹನಾ ವಿಜಯಕುಮಾರ್: ಮೂಲತಃ ಮೈಸೂರಿನವರಾದ ಇವರು ಪ್ರಸ್ತುತ ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಇಂಜಿನಿಯರ್ ಹಾಗೂ ಕಾದಂಬರಿಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಪತ್ರಿಕೆಗಳಲ್ಲಿ ಅಂಕಣ ಬರಹಗಳ ಮೂಲಕ ಬರವಣಿಗೆ ಆರಂಭಿಸಿದ ಇವರು ನಂತರ ಕಾದಂಬರಿ ಕ್ಷೇತ್ರಕ್ಕೆ ಕಾಲಿರಿಸಿದರು. ಇವರ ಅಂಕಣ ಲೇಖನಗಳು ಪುಸ್ತಕರೂಪದಲ್ಲಿ ಪ್ರಕಟವಾಗಿದ್ದು, ಕ್ಷಮೆ (2016), ಕಶೀರ (2018), ಅವಸಾನ (2020), ಮಾಗಧ (2024) ಮತ್ತು ಅಪರೋಕ್ಷ (2026) ಕಾದಂಬರಿಗಳನ್ನು ರಚಿಸಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
