ಭಕ್ತಿಯ ಉತ್ಕಟದ ಸ್ಥಿತಿಯು ಹುಟ್ಟಿಸುವ ಸ್ಥಾಯೀಭಾವವನ್ನು ಪರಮಾನಂದ ಸ್ಥಿತಿಯಲ್ಲಿ ಅನುಭವಿಸುವ ಸಂತ ಪರಂಪರೆಯನ್ನು ಭಾರತದಲ್ಲಿ ಮಾತ್ರ ಕಾಣಲು ಸಾಧ್ಯವಿದೆ. ಅಂಥ ಭಕ್ತಿಸಾಹಿತ್ಯದ ಪರಂಪರೆಯೂ ಭಾರತದಲ್ಲೇ ಹುಟ್ಟಿದೆ. ಯಾವ ಸಾಹಿತ್ಯಕ್ಕೂ ಇಲ್ಲದ ದಾಸಸಾಹಿತ್ಯ ಮತ್ತು ವಚನಸಾಹಿತ್ಯವೆಂಬ ವಿಶೇಷವಾದ ವೈಶಿಷ್ಟ್ಯಗಳೆರಡು ಕನ್ನಡ ಸಾಹಿತ್ಯಕ್ಕಿದೆ. ಕನ್ನಡದ ಕನ್ನಡತನವು ಮೆರೆದು ಅದರ ಚರಮಸ್ಥಿತಿಯನ್ನು ಮುಟ್ಟಿದ್ದು ಈವೆರಡೂ ಸಾಹಿತ್ಯದ ಸಂದರ್ಭದಲ್ಲೇ! ಆದ್ದರಿಂದ ಇವು ಕನ್ನಡ ಸಾಹಿತ್ಯದ ಅಮೃತ ಫಲಗಳು. ಕನ್ನಡ ದಾಸವಾಙ್ಮಯದಲ್ಲಿ ಸುಮಾರು ಇನ್ನೂರೈವತ್ತಕ್ಕೂ ಹೆಚ್ಚು ದಾಸರುಗಳು ಬಾಳಿ ಬದುಕಿದ್ದಾರೆ. ಇಂಥ ಹರಿದಾಸ ವಾಙ್ಮಯದಲ್ಲಿ ಅಶ್ವಿನಿ ದೇವತೆಗಳೆಂದೇ ಜನಮಾನಸದಲ್ಲಿ ಅಮರತ್ವವನ್ನು ಪಡೆದವರು ಕನಕದಾಸರು ಮತ್ತು ಪುರಂದರ ದಾಸರು. ಇಷ್ಟೂ ದಾಸರುಗಳಲ್ಲಿ ಕನಕದಾಸರು ಮಾತ್ರ ಶೂದ್ರದಾಸರು. ಪುರಂದರದಾಸರಂತೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನು ನೀಡಿದವರು.
ಇಬ್ಬರ ಜಯಂತಿಯನ್ನೂ ಸರ್ಕಾರದ ಮಟ್ಟದಲ್ಲಿ ಆಚರಣೆ ಮಾಡಲಾಗುತ್ತದೆ. ದುರಂತವೇನೆಂದರೆ, ಕನಕದಾಸರಾಗಲೀ, ಅವರ ಜಯಂತಿಯಾಗಲೀ ರಾಜಕೀಯದ ಬಣ್ಣ ಪಡೆದು ಅವರಿಗಿಂತ ಅವರ ಆಚರಣೆಯನ್ನು ಮಾಡಿದವರೇ ಮೆರೆಯುತ್ತಿರುವುದು! ಇದು ಮತಿಗೆಟ್ಟ ಜಾತಿ ರಾಜಕೀಯದ ಪರಮ ಹೊಲಸು! ಕನಕನ ಜಾತಿಯನ್ನು ಓಲೈಸುವ ತನ್ಮೂಲಕ ಜಾತಿ ಓಟ್ ಬ್ಯಾಂಕ್ ಮಾಡಿಕೊಳ್ಳುವುದು ಕನಕದಾಸರಿಗೆ ಮಾಡುವ ಅತಿದೊಡ್ಡ ಅವಮಾನ. ಯಾವ ಕಾಲಘಟ್ಟದಲ್ಲಿ ಜಾತಿಯ ಕುರಿತಾದ ಸಂಘರ್ಷವನ್ನು ಸ್ವತಃ ಅನುಭವಿಸಿ ಅದರ ವಿರುದ್ಧವೇ ಬಂಡೆದ್ದವರು ಕನಕದಾಸರು. ಅಂಥ ಸಂತ, ಸತ್ಪುರುಷ, ಮಹಾತ್ಮರ ಜಯಂತಿಯನ್ನು ಅವರ ಜಾತಿಯನ್ನೇ ಕಾರಣವಾಗಿಟ್ಟುಕೊಂಡು ಆಚರಿಸುವುದು ಹೊಲಸು ಜಾತಿ ರಾಜಕಾರಣದ ಪ್ರತಿಫಲ! ಐತಿಹಾಸಿಕ ವ್ಯಕ್ತಿಗಳು ಒಂದು ಕಾಲಮಾನಕ್ಕೋ ಕಾಲಘಟ್ಟಕ್ಕೋ ಸೇರಿದವರಲ್ಲ. ಅವರು ವಿಶ್ವಮಾನವರು. ಅವರನ್ನು ವಿಶ್ವಮಾನವ ನೆಲೆಯಲ್ಲೇ ಓದಬೇಕು.
ಯಾವುದೇ ಜಾತಿ-ಮತ-ಧರ್ಮಕ್ಕೆ ಅವರನ್ನು ಸೀಮಿತಗೊಳಿಸಿದರೆ ಅದು ಅವರ ವ್ಯಕ್ತಿತ್ವಕ್ಕೆ, ಅವರ ಘನತೆಗೆ, ಅವರ ಜೀವನಮೌಲ್ಯಗಳಿಗೆ, ಅವರ ತತ್ತ್ವ ಸಿದ್ಧಾಂತಗಳಿಗೆ, ಅವರ ಒಟ್ಟೂ ಬದುಕಿನ ಅಸ್ಮಿತೆಗೆ ಮಸಿ ಬಳಿದಂತೆ! ಕೇವಲ ಕನಕದಾಸರು ಮಾತ್ರವಲ್ಲ, ಬುದ್ಧ, ಮಹಾವೀರ, ಬಸವಣ್ಣ, ದಾಸವರೇಣ್ಯರು, ಸಂತರು, ಸಾರ್ವಭೌಮರು, ಪರಮಹಂಸ, ಶಾರದಾದೇವಿ, ವಿವೇಕಾನಂದರೇ ಮುಂತಾದ ಅನೇಕ ಮಹಾನುಭಾವರು ಮಹಾನ್ ಮಾನವತಾವಾದಿಯಾಗಿ ಬದುಕಿದವರು. ಇವರು ಕಾಲದೇಶ ಗಡಿಯನ್ನು ಮೀರಿದವರು. ವಿಶ್ವವೇ ಇವರ ಮನೆ. ಜಗತ್ತೇ ಕುಟುಂಬ. ಕನಕದ ಆಸೆಯನ್ನು ಬಿಟ್ಟವರು ಕನಕದಾಸರು. ನಾವೆಲ್ಲ ಕನಕಕ್ಕೆ ದಾಸರಾದ್ದರಿಂದ ನಾವು ಹುಲು ಮಾನವರು ಕೂಡ ಕನಕದಾಸರೇ! ಆದರೆ ಕನಕದಾಸರಂಥಲ್ಲ! ಕನಕದಾಸೆಯನ್ನು ಬಿಟ್ಟು ಕನಕದಾಸರು ಕನಕದಾಸರಾದರೆ, ನಾವು ಕನಕದಾಸೆಯನ್ನು ಬಿಡಲಾಗದೆ ಕನಕದ ದಾಸರಾದವರು. ಕನಕಕ್ಕಾಗಿ ಬದುಕುವವರು.
ಕನಕದಾಸರು ಕೃಷ್ಣನ ಭಕ್ತರು, ಆರಾಧಕರು. ಮಾತ್ರವಲ್ಲದೆ ಕವಿಯೂ ಹೌದು. ಅವರಲ್ಲಿ ವಿನಮ್ರತೆಯಿದೆ. ದೇವರಲ್ಲಿ ಶರಣುಹೋಗುವ ಬುದ್ಧಿ ಮತ್ತು ಮನಸ್ಸಿದೆ. ಅದು ಎಲ್ಲವನ್ನೂ ಎಲ್ಲರನ್ನೂ ತ್ಯಜಿಸಿದ ಭಾವದಲ್ಲಿದೆ. ನ ಕರ್ಮಣಾ, ನ ಪ್ರಜಯಾ, ನ ಧನೇನ ತ್ಯಾಗೇನೈಕೇ ಅಮೃತತ್ವ ಮಾನಷುಃ- ತ್ಯಾಗದಿಂದಲೇ ಅಮೃತತ್ವ ಲಭಿಸುತ್ತದೆ ಎನ್ನುತ್ತದೆ ಉಪನಿಷತ್ತು. ಪರತತ್ವವನ್ನು ಅನುಭವಿಸಲು ಬಾಧಕ ಆಗಿರುವಂಥದ್ದನ್ನೆಲ್ಲ ತ್ಯಾಗ ಮಾಡಿದ ಭಾವದಲ್ಲಿ ಕನಕದಾಸರು ಮಹಾತ್ಮರಾದವರು. ಆದರೆ ಕನಕದಾಸರು ಉಳಿದ ದಾಸರಂತೆ ಕಾಣುವುದಿಲ್ಲ. ಯಾಕೆಂದರೆ ಎಲ್ಲ ದಾಸರುಗಳಿಗೆ ಲೌಕಿಕ ಗುರುವೊಬ್ಬ ಕಾಣುತ್ತಾನೆ. ಕನಕದಾಸರಿಗೆ ಲೌಕಿಕವಾದ ಗುರುವೇ ಇಲ್ಲ. ಶ್ರೀ ಹರಿಯೇ ಅವರಿಗೆ ಲೌಕಿಕ ಗುರುವಾಗಿ ಕಾಣುತ್ತಾನೆ.
ಎಲ್ಲ ದಾಸರುಗಳ ಅಂಕಿತನಾಮವನ್ನು ಅವಲೋಕಿಸಿ ಮತ್ತು ಕನಕದಾಸರ ಅಂಕಿತನಾಮವನ್ನೂ ಅವಲೋಕಿಸಿ. ವಿಠ್ಠಲ ಎಂಬ ನಾಮಧೇಯ ಉಳಿದ ದಾಸರುಗಳಲ್ಲಿ ಸಾಮಾನ್ಯವಾಗಿ ಕಂಡರೆ, ಕನಕದಾಸರಲ್ಲಿ ಕಾಗಿನೆಲೆಯ ಆದಿಕೇಶವ ಕಾಣುತ್ತಾನೆ. ತನ್ನ ಗುರುವೂ ತನ್ನ ಅಂಕಿತವೂ ಅಮೂರ್ತ ರೂಪದ ಆಧ್ಯಾತ್ಮಿಕ ಗುರುವೂ ಆದ ಶ್ರೀಹರಿಯನ್ನೇ ಅಂಕಿತವನ್ನಾಗಿಯೂ ಹೊಂದಿರುವ ಏಕೈಕ ದಾಸರೆಂದರೆ ಕನಕದಾಸರು ಮಾತ್ರ. ಕನಕದಾಸರು ಕವಿಯೂ ಹೌದು. ಕವಿಯ ಮನೋಧರ್ಮವಾಗಿ ಅವರಲ್ಲಿ ಕ್ರಾಂತಿ ಗುಣಸ್ವಭಾವಗಳು ಅವರಲ್ಲಿ ಕಾಣುತ್ತವೆ.
ಕುಲಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯೇನಾದರೂ ಬಲ್ಲಿರಾ ಎಂದು ಪ್ರಶ್ನಿಸುವಾಗ ಅತ್ಯಂತ ಪಾರಮಾರ್ಥಿಕ ನೆಲೆಯಲ್ಲಿ ಈ ಭವವನ್ನು ವಿಮರ್ಶೆ ಮಾಡಿದಂತೆ ಕಂಡರೂ, ಜಾತಿಯಿಂದ, ಕುಲದಿಂದ ಹುಟ್ಟುವ ಅಸ್ಪೃಶ್ಯತೆಯಂಥ ಅನಿಷ್ಟವನ್ನು ಸಾರಾಸಗಟಾಗಿ ತಿರಸ್ಕರಿಸುವ, ನಿರಾಕರಿಸುವ ಈ ಕೀರ್ತನೆಯಲ್ಲೊಂದು ಅವರೊಳಗಿನ ಕ್ರಾಂತಿಯ ಸ್ವಭಾವ ಸಹಜವಾಗೇ ಇದೆ. ರಾಮಧಾನ್ಯ ಚರಿತ್ರೆಯಂತೂ ಜಾತೀಯತೆಯ ವಿರುದ್ಧವಾಗಿ ನಿಲ್ಲುವ ಅಪ್ಪಟ ಸ್ವ ಬಂಡಾಯ ಕಾವ್ಯವಾಗಿದೆ. ಇದು ಕವಿಯಾಗಿ ಅವರ ಮನೋಧರ್ಮವನ್ನು ಅರಿಯಬೇಕಾದ ಪರಿ. ಈ ನಿಲುವಿನಲ್ಲೇ ಕನಕದಾಸರ ಅಸಾಮಾನ್ಯ ಕಾವ್ಯ ರಚನೆಯ ಕಾರಯತ್ರೀ ಪ್ರತಿಭೆ ಕಾಣುತ್ತದೆ. ದಾಸನೂ, ಕವಿಯೂ ಆಗಿ ಕನ್ನಡ ವಾಙ್ಮಯದಲ್ಲಿ ಕಾಣಿಸಿಕೊಂಡ ದಾಸಸಾಹಿತ್ಯದ ಪ್ರಗಲ್ಬ ಸಂತ ವರೇಣ್ಯರಾದ ಕನಕದಾಸರು ತನ್ನ ಸಮಕಾಲೀನ ಸಮಾಜದ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದರು. ಕನ್ನಡ ಸಾಹಿತ್ಯ ಮತ್ತು ಸಾಮಾಜಿಕ ಕಳಕಳಿಯನ್ನು ಶ್ರೀಮಂತಗೊಳಿಸಿದ ಕನಕದಾಸರನ್ನು ಯಾವ ಪೂರ್ವಗ್ರಹವೂ ಇಲ್ಲದೆ ನೋಡಬೇಕು.
ಶೂದ್ರರನ್ನು ಮೈಲಿಗೆಯೆಂದು ಅಪ್ಪಟ ಬ್ರಾಹ್ಮಣರಾಗಿ ನೋಡಿದರೆ ಕನಕದಾಸರು ಅರ್ಥವಾಗುವುದಿಲ್ಲ. ಬ್ರಾಹ್ಮಣರನ್ನು ಹೀಗಳೆಯುವುದೇ ಋಜುಮಾರ್ಗವೆಂದುಕೊಂಡ ಶೂದ್ರರಾಗಿ ನೋಡಿದರೂ ಕನಕದಾಸರು ಅರ್ಥವಾಗುವುದಿಲ್ಲ. ಕನಕದಾಸರು ಮತ್ತು ಪುರಂದರದಾಸರನ್ನು ಪೂರ್ವಗ್ರಹಬದ್ಧ ಚಿಂತನೆಯಿಂದ ಹೊರಗಿದ್ದೇ ಅವರ ಬದುಕನ್ನು ಅವಲೋಕಿಸಿ ಅರಿಯಬೇಕು. ಹಾಗೆ ನೋಡುವಾಗ ಜಾತಿಯ ಭೂತ ನಮ್ಮನ್ನು ಕಾಡಬಾರದು.
ಸಂಪ್ರದಾಯದ ಪರಿಧಿಯೊಳಗೇ ಅದರ ನ್ಯೂನತೆಗಳನ್ನು ದೋಷಗಳನ್ನು ಕನಕದಾಸರು ವಿರೋಧಿಸಿದರು. ತಿದ್ದಲೆತ್ನಿಸಿದರು. ಹಾಗಂತ ಯಾವ ಚಿಂತನೆಯ ಪಂಥಕ್ಕೂ, ಮತಕ್ಕೂ ಆತುಕೊಳ್ಳದೆ, ಅಂಟಿಕೊಳ್ಳದೆ ಸ್ವತಂತ್ರ ಚಿಂತಕರಾಗಿ ಬದುಕನ್ನು ಬಾಳಿದ ಇವರು ಶ್ರೀವೈಷ್ಣವರಾಗಿಯೂ ಕಾಣುತ್ತಾರೆ. ಮಾಧ್ವರಾಗಿಯೂ ಕಾಣುತ್ತಾರೆ. ಕಾರಣ ಅವರು ಮಧ್ವಾಚಾರ್ಯರ ಪ್ರಭಾವಕ್ಕೂ ಒಳಗಾದಂತೆ ರಾಮಾನುಚಾರ್ಯರ ವೈಷ್ಣವ ಧರ್ಮದ ಪ್ರಭಾವಕ್ಕೂ ಒಳಗಾಗಿದ್ದರು. ಆದ್ದರಿಂದ ಯಾರೂ ಅವರನ್ನು ತಮ್ಮವರೆಂದೂ ತಮ್ಮ ಮತ, ಪಂಥ, ಸಿದ್ಧಾಂತಗಳಿಗೇ ಸೀಮಿತಗೊಳಿಸಿ ಕಟ್ಟಿಹಾಕುವುದು ಅವರಿಗೆ ಮಾಡುವ ದೊಡ್ಡ ಅಪಮಾನವೂ, ಮಹಾಪರಾಧವೂ ಆಗುತ್ತದೆ. ಜಾತಿಯ ಹಿನ್ನೆಲೆಯಿಂದ ಅವರನ್ನು ತಮ್ಮ ಜಾತಿ, ಜಾತಿಯವನೆಂದು ಪರಿಗಣಿಸಿ ಆ ಜಾತಿಗೆ ಮಾತ್ರ ಸೀಮಿತಗೊಳಿಸಿ ಅವರ ಜೀವನವನ್ನು ಅವರೇ ಬದುಕಿ ತೋರಿದ ಮೌಲ್ಯಗಳಿಂದ ಬೇರ್ಪಡಿಸುವುದು ಒಬ್ಬ ಸಂತನಿಗೆ, ಕವಿಗೆ ಮಾಡುವ ಅವಹೇಳನವಾಗುತ್ತದೆ.
ಕನಕದಾಸರು ಲೌಕಿಕದ ನೆಲೆಯಲ್ಲಿ ಕವಿಯಾದರೆ, ಅಲೌಕಿಕವಾಗಿ ಹರಿದಾಸರಾಗಿ ಕಾಣುತ್ತಾರೆ. ತನಗೆ ಉಚಿತವಲ್ಲದ್ದನ್ನು ಯಾರೇ ಹೇಳಿದರೂ ನಿರಾಕರಿಸುವ ಧಾರ್ಷ್ಟ್ಯ ಕನಕದಾಸರಿಗಿತ್ತು. ಇದು ಕವಿಯೊಬ್ಬನ ನಿಜ ಮನೋಧರ್ಮ. ದಾಸಪಂಥದೊಳಗೆ ಬಹುದೊಡ್ಡ ಕವಿಯಾಗಿ ಕನಕದಾಸರು ಕಾಣಿಸಲು ಕಾರಣ ಅವರ ಈ ಕವಿಯ ನಿಜ ಮನೋಧರ್ಮ. ಹಾಗಂತ ಅವರು ಲೌಕಿಕದ ಬದುಕನ್ನು ತಿರಸ್ಕರಿಸಲಿಲ್ಲ. ಈ ಸಮಾಜದ ಓರೆಕೋರೆಗಳನ್ನು ಉಸಿರಿರುವವರೆಗೂ ತಿದ್ದಲೆತ್ನಿಸಿದರು. ಹರಿಭಕ್ತಿಯನ್ನು ತನ್ನೊಳಗೂ ಬೆಳೆಸಿಕೊಳ್ಳುತ್ತ ಸಮಾಜದೊಳಗೂ ವಿಸ್ತರಿಸುತ್ತ ಆ ಮೂಲಕ ‘ಇಹ’ ದ ಬದುಕನ್ನು ಸಾರ್ಥಕಗೊಳಿಸಲು ಪ್ರಯತ್ನಿಸಿದರು. ಭಕ್ತಿಯ ಉತ್ಕಟತೆಯಲ್ಲಿ ಈ ಬದುಕನ್ನು ತನ್ನದಲ್ಲವೆಂಬಂತೆ ‘ಪರ’ದ ಹಂಬಲದಲ್ಲಿ ಬದುಕಿದರು. ಎಲ್ಲ ಇದ್ದೂ ಎಲ್ಲರೊಡನೆಯೂ ಇದ್ದು ಎಲ್ಲವನ್ನೂ ತ್ಯಜಿಸಿದ ಬದುಕಿಗೆ ಕನಕದಾಸೆ ಇರಲು ಹೇಗೆ ಸಾಧ್ಯ? ಸಂಪ್ರದಾಯ ವಿರೋಧಿಯಲ್ಲದ ಕನಕದಾಸರು ಮೌಢ್ಯ ತುಂಬಿದ ಸಂಪ್ರದಾಯವನ್ನು ವಿರೋಧಿಸಿದರು. ಸಮಾಜದಲ್ಲಿ ಬೆಳೆದು ಬಂದ ಕಂದಾಚಾರಗಳ ವಿರುದ್ಧ ಬಂಡಾಯದ ಸೊಲ್ಲನ್ನು ಎತ್ತಿದರು. ಕುಲದ ಬಗ್ಗೆ ಅವರಾಡಿದ ಮಾತುಗಳಲ್ಲಿ ಇಂಥ ಬಂಡಾಯವು ಕಾಣುತ್ತದೆ. ಮತ್ತು ಇದೆಲ್ಲ ತೀವ್ರತರವಾದ ಲೌಕಿಕದ ಬಂಧನಗಳಿಗೆ ತೀಕ್ಷ್ಣ ಪ್ರತಿಕ್ರಿಯೆಯಾಗಿಯೂ ಕಾಣುತ್ತದೆ.
ರಾಮಧಾನ್ಯ ಚರಿತೆಯಂತೂ ಇಪ್ಪತ್ನಾಕು ಕ್ಯಾರಟಿನ ಶುದ್ಧ ಚಿನ್ನದ ಆಭರಣದಂತೆ ರಚನೆಯಾದ ಕಾವ್ಯ. ಒಂದು ಕಾಲಘಟ್ಟದ ಐತಿಹಾಸಿಕ ಜಾತಿಗಳ ಕುರಿತಾದ ಸಂಘರ್ಷವನ್ನು ಮುಖಾಮುಖಿಯಾಗಿಸುತ್ತ ರಾಗಿಯ ಶ್ರೇಷ್ಠತೆಯನ್ನು ಇದು ಬಿತ್ತರಿಸುತ್ತದೆ. ರಾಗಿಯನ್ನು ಉಂಬವನು ನಿರೋಗಿಯಾಗುವನು ಎಂದ ಸರ್ವಜ್ಞನ ಮಾತು ಕೂಡ ಇದನ್ನೇ ಬೆಂಬಲಿಸುತ್ತದೆ.
ಭತ್ತ (ಅಕ್ಕಿ) ವು ಮೇಲ್ವರ್ಗದವರ ಆಹಾರದ ಪ್ರತಿನಿಧಿಯಾದರೆ, ರಾಗಿಯು ಕೆಳವರ್ಗದವರ ಆಹಾರದ ಪ್ರತಿನಿಧಿಯಾಗಿ ಇಬ್ಬರಲ್ಲೂ ಯಾರು ಶ್ರೇಷ್ಠ ಎಂಬುದನ್ನು ನಿರೂಪಿಸುತ್ತದೆ. ಭಾರತದಲ್ಲಿ ಬಹು ಬೆಳೆಯನ್ನು ಬೆಳೆಯುವ ಕೃಷಿ ಪದ್ಧತಿಯಿದೆ. ಇದು ಬಹು ಸಂಸ್ಕೃತಿಗಳನ್ನು ಸೃಷ್ಟಿಸಿದ ಆರ್ಥಿಕ ನೆಲೆಯೂ ಆಗಿದೆ. ಯಾವುದೇ ಒಂದು ಸಂಸ್ಕೃತಿಯ ಬೇರು ಇರುವುದು ಮಣ್ಣಿನ ಸತ್ವದಲ್ಲಿ. ಮಣ್ಣಿನಿಂದ ಹುಟ್ಟಿದ ಸಂಸ್ಕೃತಿ ಮಣ್ಣಿನಿಂದ ಬೆಳೆಯುವ ಬೆಳೆಗಳನ್ನೇ ಆಧರಿಸುತ್ತವೆ. ಆದ್ದರಿಂದ ರಾಗಿ ಮತ್ತು ಭತ್ತದ ಕುರಿತಾದ ಅವರ ಜಿಜ್ಞಾಸೆಯು ಜಾತಿ ಸಂಘರ್ಷವನ್ನೇ ಪ್ರಧಾನವಾಗಿ ಇರಿಸಿಕೊಂಡರೂ ಬೆಳೆಗಳ ಮೂಲಕ ಅದನ್ನು ತಿರಸ್ಕರಿಸುವ ಚೆಂದದ ರೂಪಕವಾಗಿ ಬಳಸಿಕೊಳ್ಳುತ್ತಾರೆ. ದಾಸನೂ ಆಗಿ, ಕವಿಯೂ ಆಗಿ ನಿರೂಪಿಸಿದ ಈ ಕೀರ್ತನೆಯಲ್ಲಿ ಕನಕದಾಸರು ಜಾತಿಯ ಕುರಿತಾಗಿ ಎದುರಿಸಿದ ಸಂಘರ್ಷವನ್ನು ಬಹು ಮಾರ್ಮಿಕವಾಗಿ ವಿಡಂಬನೆ ಮಾಡಿದ್ದಾರೆ.
ಕನಕದಾಸರು ಶಬ್ದಾರ್ಥಗಳನ್ನು ಬಳಸುವ ಪರಿಯೇ ಅತ್ಯದ್ಭುತ, ಅಮೋಘ. ಬರಿಯ ಲೌಕಿಕದ ಚಿಂತನೆಯನ್ನಷ್ಟೇ ಅಲ್ಲದೆ ಆಧ್ಯಾತ್ಮದ ಗಾಢ ಚಿಂತನೆಯನ್ನು ಮಾಡಿದ ಸಂತ ಈ ಕನಕದಾಸರು. ಇದಕ್ಕೆ ಉದಾಹರಣೆಯಾಗಿ ಅವರ ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ/ನೀ ದೇಹದೊಳಗೋ ನಿನ್ನೊಳು ದೇಹವೋ ಹರಿಯೆ- ಮಾಯೆ ಮತ್ತು ದೇಹಗಳ ನಡುವಿನ ಸಂಬಂಧವನ್ನು ಹರಿಯ ಮೂಲಕ ಕಾಣುವ ಹಂಬಲ. ಜಗತ್ತೇ ಮಾಯೆಯೆಂದ ಮೇಲೆ ಈ ದೇಹವೂ ಮಾಯೆಯೇ. ಹರಿಯೂ ಮಾಯೆಯೇ.
ಮಾಯಮಯವಾದ ಈ ಜಗತ್ತನ್ನು ಸೃಷ್ಟಿಸಿದ ದೇವ ದೇವೋತ್ತಮವಾದ ಶ್ರೀ ಹರಿಯೂ ಮಾಯೆಯೇ! ಮಾಯೆಯೊಳಗೂ ಭಗವಂತ ಇದ್ದಾನೆ. ಮಾಯೆಯ ಹೊರಗೂ ಭಗವಂತನಿದ್ದಾನೆ. ಮಾಯೆಯ ಪರದೆಯನ್ನು ಸರಿಸಿಬಿಟ್ಟರೆ ಜಗನ್ನಿಯಾಮಕ ಭಗವಂತ ಕಾಣಿಸಲೇಬೇಕು. ಆದರೆ ಪರದೆಯನ್ನು ಸರಿಸುವವರು ಯಾರು? ನಾವು ಶಕ್ತರೇ? ಹರಿಯಿಲ್ಲದೆ ಮಾಯೆಯೂ ಇಲ್ಲ, ದೇಹವೂ ಇಲ್ಲ. ಈ ಸೃಷ್ಟಿಯನ್ನಾವರಿಸಿದ ಮಾಯೆಯೊಳಗೆ ಹರಿಯೂ ಬಂಧಿತನಾಗಿದ್ದಾನೆ! ಅಥವಾ ಹರಿಯೇ ಮಾಯೆಯಾಗಿ ಈ ಜಗತ್ತನ್ನು ನಿಯಂತ್ರಿಸುತ್ತಿದ್ದಾನೆ! ಮಾಯೆಯನ್ನು ಹರಿದು ಮುಕ್ತಿಯನ್ನು ಕಾಣುವ ತವಕದಲ್ಲಿ ಕನಕದಾಸರು ಇದ್ದಂತಿದೆ.
ಬಯಲು ಆಲಯದೊಳಗೋ ಆಲಯವು ಬಯಲೊಳಗೋ- ಇಲ್ಲಿ ಬಯಲು ಅಂದರೆ ಎಲ್ಲವನ್ನೂ ಕಳಚಿಕೊಂಡ ಸ್ಥಿತಿ. ಬಯಲು ಎಂಬುದು ಮನುಷ್ಯ ಸಂವೇದನೆಯ ಒಂದಂಶವಾಗಿಯೇ ಇದೆ. ಇದೊಂದು ಎಲ್ಲ ಬಂಧನಗಳಿಂದ ಬಿಡುಗಡೆಯಾದ ಅವಸ್ಥೆ. ಬಯಲು ಅಂದರೆ ನಿರಾಳ. ದುಃಖದ ಅಂತ್ಯ. ಜ್ಞಾನ ಗಳಿಕೆಯ ಹೆಜ್ಜೆ. ಮನುಷ್ಯ ಜೀವ ಪಡೆಯಬಹುದಾದ ಅವಸ್ಥೆ. ಬಯಲು ಅಂದರೆ ಈ ಸೃಷ್ಟಿಗೆ; ನಮ್ಮೊಳಗಿನ ಸೃಷ್ಟಿಶೀಲತೆಗೆ ಆಸ್ಪದವನ್ನೀಯುವ ಅವಕಾಶ. ಬಯಲು ಅಂದರೆ ನಿರ್ಲಿಪ್ತ, ತಾದಾತ್ಮ್ಯ, ನಿರಾಳ. ಪ್ರಜ್ಞೆಯೊಂದು ಅವ್ಯಾಹತವಾಗಿ ಯಾವ ನಿಯಂತ್ರಣವೂ ಇಲ್ಲದೆ ಹರಿಯುವ ಸ್ಥಿತಿ. ದೇಹ ಮತ್ತು ಮನಸ್ಸು ಕೊನೆಯವರೆಗೂ ನಿರಾತಂಕವಾಗಿ ಚಲಿಸುವುದು ಬಯಲು ಎಂಬುದರ ತಾತ್ವಿಕವಾದ ವಿಸ್ತಾರವಾದ ತಾಕತ್ತಿನಿಂದ! ಬಯಲು ಯಾರಿಗೆ ಬೇಡ ಹೇಳಿ? ಕನಕದಾಸರ ಮನೋಧರ್ಮವು ಬಯಸಿದ್ದೇ ಇಂಥದ್ದೇ ನಿರಾಳವಾದ ಬಯಲಿನ ಸ್ಥಿತಿ. ಯಾವ ಬಂಧನವೂ ಇಲ್ಲದ ಬಯಲು ಕೂಡ ಒಂದು ಆಲಯವೇ. ಅಂದಮೇಲೆ ಇಡಿಯ ವಿಶ್ವವೆಂಬ ಆಲಯವೂ ಕೂಡ ಒಂದು ಬಯಲಲ್ಲವೆ?
ಬಯಲು ಆಲಯದೊಳಗೆ, ಆಲಯವು ಬಯಲೊಳಗೆ ಎಂಬಲ್ಲಿ ರೂಪದ ಮಾತಿನೊಂದಿಗೆ ಆರಂಭವಾಗಿ ಆಮೇಲಾಮೇಲಿನ ಮಾತಿನಲ್ಲಿ ರಸ, ಗಂಧ, ಸ್ಪರ್ಶ, ಶಬ್ದದ ಪ್ರಜ್ಞೆಗಳು ಈ ಕೀರ್ತನೆಯಲ್ಲಿ ಮಾಯೆಯೂ ಜಗತ್ತನ್ನು ಆವರಿಸಿದ್ದನ್ನು ವಿವರಿಸುತ್ತಾರೆ. ಜಗತ್ತೇ ಈಶ್ವರ ಮಯವಾಗಿದೆ. ಯಾವುದೂ ಮಾಯೆಯಿಂದ ಹೊರತಾಗಿಲ್ಲ. ಎಷ್ಟೆಂದರೆ ಈ ಉಸಿರು ಕೂಡ! ಉಸುರೆನ್ನಳವೆ ಎಂಬಲ್ಲಿ ನನ್ನ ದೇಹದ ಉಸಿರಾದರೂ ನನ್ನ ಅಧೀನದಲ್ಲಿದೆಯೇ ಎಂದು ಕೇಳುತ್ತಾರೆ. ಉಸಿರು ನಿಂತರೆ ನಾನೂ ನಿಲ್ಲಬೇಕು. ಈ ನಿಲ್ಲುವ ಕ್ರಿಯೆಯೂ ನಿನ್ನ ಅಧೀನವೇ ಆಗಿದೆ. ಬದುಕಿದ್ದಾಗ ರೂಪ, ರಸ, ಗಂಧ, ಸ್ಪರ್ಶ, ಶಬ್ದಗಳನ್ನು ಅನುಭವಿಸಿದೆ. ಅವುಗಳ ಬಗ್ಗೆ ವ್ಯಾಖ್ಯಾನಿಸಲು ನನ್ನಿಂದಾಗಲೇ ಇಲ್ಲ. ಅನುಭವಿಸಿದ್ದೆಲ್ಲವನ್ನೂ ಹೇಳಲು ನನ್ನ ಹತ್ತಿರ ಸಾಧ್ಯವಾಗದಿರುವುದಕ್ಕೆ ಕಾರಣ ನನ್ನೀ ಉಸಿರು ನಿನ್ನ ಅಧೀನದಲ್ಲಿದೆ. ಇದು ನಿಂತ ಮೇಲೆ ನಾನು ಈ ಮಾಯೆಯಿಂದ ಬಿಡುಗಡೆ ಪಡೆಯಬಹುದೇನೋ ನೀನೊಲಿದರೆ! ನೀನು ಪಂಚೇಂದ್ರಿಯಗಳನ್ನು ಕೊಟ್ಟಿದ್ದರಿಂದ ಈ ಜಗತ್ತನ್ನು ನೋಡಿದೆ. ಯಾವುದನ್ನೂ ನೀನು ಕೊಡದೆ ಹೋಗಿದ್ದರೆ ಯಾವುದನ್ನೂ ನೀನು ಉಸುರಿದಂತೆ ನಾನು ಬದುಕಬೇಕಿತ್ತು. ಈಗಲೂ ಅಷ್ಟೇ. ಆಗಲೂ ಅಷ್ಟೇ!
ಎಲ್ಲವೂ ನಿನ್ನ ಅಧೀನವೆಂದ ಮೇಲೆ ನಾನು ಯಂತ್ರವಲ್ಲದೇ ಇನ್ನೇನು? ಆದರೂ ನಾನೇ ಎಲ್ಲವೂ ಎಂದು ಮೆರೆಯುವವರಿಗೆ ಕನಕದಾಸರು ಈ ಹಾಡಿನ ಮೂಲಕ ಸ್ಥಿರವಲ್ಲವೀ ಈ ದೇಹ ಎಂದು ಎಚ್ಚರಿಸಿದ್ದಾರೆ. ಹೀಗೆ ಕನಕದಾಸರ ಕೀರ್ತನೆಗಳ ಒಳ ಮಗ್ಗುಲುಗಳನ್ನು ಅದು ನಿರ್ವಚಿಸುವ ಅರ್ಥವನ್ನು ಸಂದೇಶವನ್ನು ಎಷ್ಟು ತಿಳಿದರೂ ತಿಳಿಯುವುದಕ್ಕೆ ಮತ್ತೂ ಇದ್ದೇ ಇರುತ್ತದೆ.
ಕನಕದಾಸರಲ್ಲಿ ಇರುವ ಭಕ್ತಿಯೊಳಗಿನ ದೈನ್ಯತೆ ಉಳಿದ ದಾಸರುಗಳಲ್ಲಿ ಇರುವಂತೆ ಕಾಣಿಸುವುದಿಲ್ಲ. ದೇವರನ್ನು ಎಲ್ಲ ಬಗೆಯ ಸಂಘರ್ಷಗಳಿಂದ ಕಾಪಿಡುವಂತೆ ಕಾಡಿ ಬೇಡುವುದರಲ್ಲೂ ಈ ಬದುಕನ್ನು ಸಾಯುವವರೆಗೆ ಬದುಕಬೇಕಲ್ಲ ಎಂಬ ಲೌಕಿಕದ ಬಗೆಗಿನ ತಿರಸ್ಕಾರ ಭಾವವಿಲ್ಲ. ಎಲ್ಲವನ್ನೂ ಅನುಭವಿಸಿಯೇ ಶ್ರೀಹರಿಯ ಚರಣ ಕಮಲವನ್ನು ಸ್ಪರ್ಶಿಸಬೇಕು. ಅಂದರೆ ಗೆಲ್ಲಬೇಕು. ಈ ಜೀವನವೆಂಬ ಸಾಗರವನ್ನು ಈಸಿ ದಡವನ್ನು ಸೇರಬೇಕು. ಅದೂ ತನ್ನ ಸ್ವಂತ ಬಲದಿಂದಲೇ. ಸಮಾಜವೊಂದು ತನ್ನ ಗ್ರಹಿಕೆಗಳೆಲ್ಲವನ್ನೂ ತತ್ವ- ಸತ್ವಗಳಿಂದ ಬೇರ್ಪಡೆಯಾದಾಗ ಕನಕದಾಸರಂಥವರು ಮತ್ತೆ ಅವಕ್ಕೆ ಚಾಲನೆಯನ್ನು ಕೊಡುವ ಶಕ್ತಿಯುಳ್ಳ ಸಂತರು. ನಿಂತ ನೀರಾದ ಸಮಾಜವನ್ನು ಮತ್ತೆ ಹರಿಯುವಂತೆ ಮಾಡುವ ಅಸಾಮಾನ್ಯ ಬೌದ್ಧಿಕ ಪ್ರೌಢಿಮೆಯುಳ್ಳವರು. ನಚ್ಚಿದ, ನೆಚ್ಚಿದ ದೇವರಲ್ಲಿ ತನ್ನ ಆಂತರ್ಯದ ಭಕ್ತಿಗೆ ಅನನ್ಯತೆಯನ್ನು ಜೋಡಿಸುತ್ತ ಬದುಕಿನ ಔನ್ನತ್ಯವನ್ನು ಕಂಡವರು.
- ಟಿ. ದೇವಿದಾಸ್
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
