ಕನ್ನಡ ನಾಡಿನ ದಾಸಸಾಹಿತ್ಯ ಪರಂಪರೆಯಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಹೆಸರು ಕನಕದಾಸರದು. ಯಾವಕುಲದಲ್ಲಿ ಹುಟ್ಟಿದರೇನು, ಯಾವಕುಲದಲ್ಲಿ ಬೇಳೆದರೇನು, ಯಾವಕುಲದಲ್ಲಿ ಜೀವಿಸಿದರೇನು “ಕುಲ ಕುಲ ಕುಲವೆಂದು ಹೊಡೆದಾಡದಿರಿ”, ಭಗವಂತನ ಭಕ್ತಿ ಮಾಡುವವನ ಕುಲವೇ ಶ್ರೇಷ್ಠ ಎಂದು ಭಕ್ತಿ, ಜ್ಞಾನ, ವೈರಾಗ್ಯ ಮತ್ತು ಸಮಾನತೆಯ ಸಂದೇಶವನ್ನು ತಮ್ಮ ಸಾಹಿತ್ಯದ ಮೂಲಕ ಸಾರಿದ ಮಹಾನ್ ಸಂತರು ಕನಕದಾಸರು.
ಕನಕದಾಸರು ಸುಮಾರು 16ನೇ ಶತಮಾನದಲ್ಲಿ ಕರ್ನಾಟಕದಲ್ಲಿ ಜನಿಸಿದರು. ಅವರ ಪೂರ್ವಾಶ್ರಮದ ಹೆಸರು ತಿಮ್ಮಪ್ಪ ನಾಯಕ. ಯೋಧರಾಗಿಯೂ ಆಡಳಿತಗಾರರಾಗಿಯೂ ಜೀವನ ನಡೆಸುತ್ತಿದ್ದ ತಿಮ್ಮಪ್ಪ ನಾಯಕರು, ಯುದ್ಧವೊಂದರಲ್ಲಿ ಅಪಾರ ಸಂಪತ್ತನ್ನು ಪಡೆದು, ಕೇಶವನ ಭವ್ಯವಾದ ಮಂದಿರ ಕಟ್ಟಿಸಿ, ಕನಕರಾದರು. ನಂತರ ಅವರ ಜೀವನದಲ್ಲಿ ಆಧ್ಯಾತ್ಮಿಕ ಪರಿವರ್ತನೆ ಉಂಟಾಯಿತು. ಲೌಕಿಕ ಸಂಪತ್ತು ಮತ್ತು ಅಧಿಕಾರಕ್ಕಿಂತ ಭಗವಂತನ ಭಕ್ತಿಯೇ ಸಂಪತ್ತೇ ದೊಡ್ಡದು, ಅದೇ ಶ್ರೇಷ್ಠವೆಂಬ ಅರಿವು ಅವರಲ್ಲಿ ಮೂಡಿ, ಭಗವಂತನ ಕುರಿತು ಪದ, ಪದ್ಯ ಸುಳಾದಿಗಳನ್ನು ರಚಿಸುತ್ತಾ ಕನಕರು ವೈರಾಗ್ಯದ ದಾರಿ ತುಳಿದರು.
ಕನಕರು ಶ್ರೀ ವ್ಯಾಸರಾಜರ ಶಿಷ್ಯತ್ವವನ್ನು ಪಡೆದ ಪ್ರಸಂಗವೂ ವಿಶೇಷವಾಗಿತ್ತು. ಗುರುಶಿಷ್ಯರ ಸಂಭಂದ ಜನ್ಮ ಜನ್ಮಾಂತರದ್ದು ಎಂದು ನಿರೂಪಿಸಿದ ದಿನವದು. ಒಮ್ಮೆ ಶ್ರೀ ವ್ಯಾಸರಾಜರು ಈಗಿನ ಆಂದ್ರಪ್ರದೇಶದ ಕಂದಕೂರಿನಲ್ಲಿ ಬೃಹತ್ತಾದ ಕೆರೆಯೊಂದನ್ನ ಕಟ್ಟಿಸುತ್ತಿದ್ದರು. ಆ ಕೆರೆಯ ತೂಬು (ಅಂದರೆ ನೀರು ಗದ್ದೆಗಳಿಗೆ ಹೊರಹೋಗಲು ಮಾಡಿದ ಒಂದು ಮಾರ್ಗ) ಹಾಕುವ ಜಾಗದಲ್ಲಿ ಒಂದು ಬೃಹದಾಕಾರದ ಬಂಡೆ ಬಂದಿತು. ಆ ಸಮಯಕ್ಕೆ ಸರಿಯಾಗಿ ಕನಕರು ಶ್ರೀ ವ್ಯಾಸರಾಜರಲ್ಲಿ ಬಂದು ದಾಸದೀಕ್ಷೆ ನೀಡಿ ಎಂದು ಪ್ರಾರ್ಥಿಸಿದರು. ನಿನಗೆ ನಾನು ಉಪದೇಶ ಕೊಡುವುದೇನಿದೆ. ನಿಮ್ಮ ಮಂತ್ರವೇ “ಕೋಣ ಮಂತ್ರ” ಎನ್ನುವ ಶ್ರೀ ವ್ಯಾಸರಾಜರ ಮಾತು ಶ್ರೀ ಕನಕರಿಗೆ ತಮ್ಮ ನೈಜ ಸ್ವರೂಪವನ್ನು (ಧರ್ಮರಾಜರು, ಯಮಧರ್ಮರಾಜರು) ಎಂದು ಅರಿತುಕೊಳ್ಳಲು ಸಾಧ್ಯವಾಯಿತು. ಆ ಕ್ಷಣದಲ್ಲೇ ಮನಸ್ಸಿನಲ್ಲೇ ತಮ್ಮ ವಾಹನವಾದ ಕೋಣನನ್ನು ಚಿಂತಿಸಿದರು, ಒಂದು ಬೃಹದಾಕಾರದ ಕೋಣ ಬಂದು ಆ ಕೆರೆಯ ತೂಬಿಗೆ ಅಡ್ಡವಾಗಿದ್ದ ಆ ಬೃಹದಾಕಾರದ ಬಂಡೆಯನ್ನು ಕೇವಲ ಕೋಣ ಹೋದಷ್ಟೇ ಜಾಗ ಹೋಳಾಗಿಹೋಗುವಂತೆ ಮಾಡಿ ನೀರು ಸರಾಗವಾಗಿ ಹೋಗುವಂತೆ ಮಾಡಿತು. ಇಂದಿಗೂ ಆ ತೂಬಿಗೆ ಕೋಣನ ತೂಬು ಎಂಬ ಹೆಸರಿದೆ, ಕಂದಕೂರಿಗೆ ಹೋಗಿ ಕೋಣ ಹೋದಷ್ಟೇ ದಾರಿಯನ್ನು ಇಂದಿಗೂ ವೀಕ್ಷಬಹುದು. ನಂತರದ ಹಂತದಲ್ಲಿ ಮೂಲ ಮಂತ್ರ (ಅಷ್ಟಾಕ್ಷರಿ ಅಥವಾ ತಾರಕ ಮಂತ್ರ) ಹಾಗೂ ಕಾಗಿನೆಲೆಯ ಆದಿಕೇಶವನ ನಾಮಸ್ಮರಣೆಯನ್ನು ಶ್ರೀ ವ್ಯಾಸರಾಜರು ಅನುಗ್ರಹಿಸಿದರು. ಕನಕರಾಗಿದ್ದವರು ಕನಕದಾಸರಾದರು, ಶ್ರೀ ವ್ಯಾಸರಾಜರಿಗೆ ಗುರುಪದೇಶದ ಗುರುಕಾಣಿಕೆಯನ್ನು ತಮ್ಮ ವಾಹನದಿಂದ ಬಂಡೆ ಸರಿಸುವುದರ ಮುಖಾಂತರ ನೀಡಿದರು.
ಮುಂದೊಮ್ಮೆ, ಶ್ರೀ ವ್ಯಾಸರಾಜರು ತಮ್ಮ ಅಪಾರ ಶಿಷ್ಯರೊಂದಿಗೆ ಹಂಪಿಯಲ್ಲಿ ನೆಲೆಸಿದ್ದಾಗ ಒಮ್ಮೆ ಪೂಜಾ ಸಮಯದಲ್ಲಿ ತಮ್ಮ ಕೈಯಲ್ಲಿ ಒಂದು ವಸ್ತುವನ್ನು ಹಿಡಿದು, ನಮ್ಮ ಕೈಯಲ್ಲಿ ಇರುವುದು ಏನು ಎಂದು ಅಲ್ಲಿದ್ದ ಪಂಡಿತರಿಗೆಲ್ಲರಿಗೂ ಕೇಳಿದರು. ಒಬ್ಬರು, ಸಾಲಿಗ್ರಾಮ, ಮತ್ತೊಬ್ಬರು, ಹಣ್ಣು, ಮಗದೊಬ್ಬರು ಉದ್ಧರಣೆ ಹೀಗೆ ಉತ್ತರಿಸಿದರು. ದೂರದಲ್ಲಿದ್ದ ಕನಕದಾಸರನ್ನು ಕುರಿತು ಶ್ರೀ ವ್ಯಾಸರಾಜರು ಕನಕ ನಮ್ಮ ಕೈಯಲ್ಲಿ ಇರುವುದು ಏನು ಎಂದು ಕೇಳಿದರು. ಆ ಕ್ಷಣದಲ್ಲೇ ಕನಕದಾಸರು “ಈತನೀಗ ವಾಸುದೇವನು” ಎಂಬ ಕೀರ್ತನೆಯನ್ನು ರಚಿಸಿದರು. ಶ್ರೀ ವ್ಯಾಸರಾಜರು ತಮ್ಮ ಮುಷ್ಟಿ ತೆಗೆದಾಗ ಸುವರ್ಣಮಯವಾದ ವಾಸುದೇವ ಮೂರ್ತಿ ದರ್ಶನ ವಿತ್ತದ್ದು ಎಲ್ಲರಿಗೂ ಆಶ್ಚರ್ಯ. ಪ್ರಕಾಂಡ ಪಂಡಿತರೂ ಉತ್ತರಿಸಲಾಗದ ಪ್ರಶ್ನೆಯನ್ನು ದೂರದಲ್ಲಿ ನಿಂತಿದ್ದ ಕನಕದಾಸರು ತಮ್ಮ ದೇವರನಾಮದ ಮೂಲಕ ಶ್ರೀ ವ್ಯಾಸರಾಜರ ಕೈಯಲ್ಲಿದ್ದ ಸುವರ್ಣದ ಉಂಡೆಯನ್ನು, ವಾಸುದೇವನಾಗಿ ಪರಿವರ್ತಿಸಿದ್ದು ಪವಾಡವೇ ಆಗಿತ್ತು. ಅಂದಿನ ಕಾಲಕ್ಕೆ ಬೇರೆ ಕುಲದಲ್ಲಿ ಜನಿಸಿದ್ದರೂ ತಮ್ಮ ಪೂಜಾ ಸಮಯದಲ್ಲಿ ಕನಕದಾಸರಿಗೆ ಮನ್ನಣೆ ನೀಡಿ, ಭಕ್ತಿಪಂಥವನ್ನು ಬೆಳೆಸಲು ಮಾರ್ಗದರ್ಶಕರಾಗಿ ಶ್ರೀ ವ್ಯಾಸರಾಜರು ಕನಕದಾಸರ ಮಹತ್ವವನ್ನು ಜಗತ್ತಿಗೆ ತಿಳಿಸಿಕೊಟ್ಟರು.
ಕನಕದಾಸರು ದ್ವೈತ ತತ್ವದೀಕ್ಷೆ ಪಡೆದ ನಂತರ ಅನೇಕ ಅಮೂಲ್ಯ ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಹರಿಭಕ್ತಿಸಾರ, ನಳಚರಿತ್ರೆ, ಮೋಹನತರಂಗಿಣಿ, ರಾಮಧಾನ್ಯಚರಿತ್ರೆ ಮತ್ತು ನೃಸಿಂಹಸ್ತವ ಪ್ರಮುಖವಾಗಿವೆ. ಅವರ ಕೀರ್ತನೆಗಳಾದ ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ, ಬಾರೋ ಕೃಷ್ಣಯ್ಯ, ತಲ್ಲಣಿಸದಿರು ಕಂಡ್ಯ ತಾಳು ಮನವೇ ಮುಂತಾದವು ಇಂದಿಗೂ ಭಕ್ತರ ಮನಸ್ಸಿನಲ್ಲಿ ನೆಲೆಸಿವೆ. ಅವರ ಸಾಹಿತ್ಯದ ವಿಶೇಷತೆಯೆಂದರೆ ಭಕ್ತಿಯ ಜೊತೆಗೆ ಸಾಮಾಜಿಕ ಕಳಕಳಿಯೂ ಬೆರೆತಿರುವುದು. ಜಾತಿ, ಕುಲ, ಅಂತಸ್ತು ಮತ್ತು ಸಂಪತ್ತಿನ ಆಧಾರದ ಮೇಲೆ ಮನುಷ್ಯರನ್ನು ಅಳೆಯಬಾರದು; ನಡತೆ, ಭಕ್ತಿ ಮತ್ತು ಅಂತರಂಗದ ಶುದ್ಧತೆಯೇ ನಿಜವಾದ ಶ್ರೇಷ್ಠತೆಯ ಮಾನದಂಡವೆಂದು ಸಾರಿದರು. ರಾಮಧಾನ್ಯಚರಿತ್ರೆಯ ಮೂಲಕ ಅಕ್ಕಿ ಮತ್ತು ರಾಗಿಯ ರೂಪಕದಲ್ಲಿ ಸಾಮಾಜಿಕ ಸಮಾನತೆಯ ಮಹತ್ವವನ್ನು ಅದ್ಭುತವಾಗಿ ವಿವರಿಸಿದರು. ತಮ್ಮ ಹಿಂದಿನ ಜನ್ಮದಲ್ಲೇ ಪಡೆದ ಜ್ಞಾನ ವೇದ, ಉಪನಿಷತ್, ಪುರಾಣಗಳ ರಹಸ್ಯವನ್ನು ಒಗಟುಗಳ ರೂಪದಲ್ಲಿ ಕನ್ನಡದಲ್ಲಿ ಅದ್ಭುತ ದೇವರ ನಾಮವನ್ನು ರಚಿಸಿದರು. ಅವು ಮುಂಡಿಗೆಗಳು ಎಂದೇ ಇಂದಿಗೂ ಪ್ರಸಿದ್ಧ ಹಾಗೂ ಅವುಗಳ ಅರ್ಥೈಸಲು ಇಂದಿಗೂ ಶಸ್ತ್ರಾಧ್ಯಯನದ ಪರಿಶ್ರಮ ಇದ್ದವರಿಗೆ ಮಾತ್ರ ಸಾಧ್ಯ.
ಮುಂಡೆಗೆಯ ಒಂದು ಉದಾಹರಣೆ:
ಮರವ ನುಂಗುವ ಪಕ್ಷಿ
ಮನೆಯೊಳಗೆ ಬಂದಿದೆ,
ಇದರ ಕುರುಹು ಪೇಳಿ
ಕುಳಿತಿರುವ ಜನರು,
ಒಂಟಿ ಕೊಂಬಿನ ಪಕ್ಷಿ
ಒಡಲೊಳಗೆ ಕರುಳಿಲ್ಲ
ಗಂಟಲು ಮೂರು
ಉಂಟು ಮೂಗಿಲ್ಲ
ಕುಂಟು ಮನುಜನ ತೆರದಿ
ಕುಳಿತಿಹುದು ಮನೆಯೊಳಗೆ
ಎಂಟು ಹತ್ತರ ಭಕ್ಷ್ಯ ಭಕ್ಷಿಸುವುದು.
ಅರ್ಥ: ಬೀಸುವ ಕಲ್ಲನ್ನು ಹಿಡಿದು ಬೀಸುವ ಮರದ ಗೂಟವೇ ಒಂಟಿ ಕೊಂಬು. ಹೊಟ್ಟೆಯಲ್ಲಿ ಏನೂ ಇಲ್ಲ. ಖಾಲಿ ಶರೀರ. ಬೀಸುವ ಕಲ್ಲಿನ ಮೇಲ್ಭಾಗದ ಕಲ್ಲಿನಿಂದ ಧಾನ್ಯ ಇಳಿಯಲು ಮಾಡಿರುವ ಮೂರು ರಂದ್ರಗಳು. ಉಸಿರಾಟಕ್ಕೆ ಮೂಗು ಇಲ್ಲ. ಎಲ್ಲಿಯೂ ಚಲಿಸದೇ ಇರುವುದು. ಹತ್ತು ಹಲವಾರು ಧಾನ್ಯಗಳನ್ನು ಅದರ ಬಾಯಲ್ಲಿಟ್ಟಾಗ ತಿಂದು ಹಾಕುವುದು. ಇದು ಸಾಮಾನ್ಯವಾದ ಮೇಲುನೋಟದ ಅರ್ಥ.
ಪಾರಮಾರ್ಥಿಕ ಅರ್ಥದಲ್ಲಿ ಮರವ ನುಂಗುವ ಪಕ್ಷಿ ಮನೆಯೊಳಗೆ ಬಂದಿದೆ ಎಂದರೆ ಮಾಯೆಯನ್ನು ನುಂಗುವ ಚೈತನ್ಯ ರೂಪಿ ಪರಮಾತ್ಮ ದೇಹವೆಂಬ ಮನೆಯೊಳಗೆ ಬಂದು ಕುಳಿತಿದ್ದಾನೆ. ಓಂ ಎಂಬಲ್ಲಿ ಓ ಅಕ್ಷರದ ಮೇಲೆ ದೀರ್ಘ ಸ್ವರದ ಕೊಂಬಿದೆ. ಸಾಂಸಾರಿಕ ವ್ಯಾಮೋಹದ ಕರುಳು ಒಡಲಿನಲ್ಲಿಲ್ಲ. ಓಂಕಾರದ ಅ ಉ ಮ ಮೂರಕ್ಷರಗಳೇ ಮೂರು ರಂದ್ರಗಳು. ವಿಷಯ ವಾಸನೆಯ ಗುಂಗಿಲ್ಲವೆಂಬುದೇ ಮೂಗಿಲ್ಲವೆಂಬುದರ ಅರ್ಥ. ಪಂಚಭೂತಗಳು, ಮನ, ಬುದ್ಧಿ, ಅಹಂಕಾರಗಳೂ ಸೇರಿ ಎಂಟು ಹಾಗೂ ಜ್ಞಾನೇಂದ್ರಿಯಗಳು ಹಾಗೂ ಕರ್ಮೇಂದ್ರಿಯಗಳೂ ಸೇರಿ ಹತ್ತು ಇವುಗಳ ಮೂಲಕ ಎಲ್ಲಾ ವಿಷಯಗಳನ್ನೂ ಅರಗಿಸಿಕೊಳ್ಳುವುದು ಅಂದರೆ ನಿರ್ಲಿಪ್ತತೆಯನ್ನು ತಂದುಕೊಳ್ಳುವುದು ಎಂದಾಗುತ್ತದೆ.
ಹೀಗೆ ಕನಕದಾಸರ ಮುಂಡಿಗೆಗಳು ಎಂದರೆ ಕಠಿನವಾದ ತೆಂಗಿನಚಿಪ್ಪಿನೊಳಗಿರುವ ತಿರುಳು ಮತ್ತು ಎಳನೀರಿನಂತೆ ಹಿತವಾದದ್ದು ಎಂಬುದು ಸರ್ವ ಸಮ್ಮತವಾದ ವಿಚಾರ.
ಕನಕದಾಸರು ಕೇವಲ ದಾಸಕವಿಗಳಲ್ಲ; ಅವರು ಸಮಾಜಕ್ಕೆ ದಾರಿದೀಪವಾದ ಸಂತರು, ತತ್ತ್ವಜ್ಞಾನಿಗಳು ಮತ್ತು ಸಮಾನತೆಯ ಹರಿಕಾರರು. ಅವರ ಜಯಂತಿಯಂದು ಅವರ ಕೀರ್ತನೆಗಳನ್ನು ಹಾಡುವುದರ ಜೊತೆಗೆ ಅವರು ಬೋಧಿಸಿದ ಭಕ್ತಿ, ವಿನಯ, ಸಮಾನತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳೋಣ. ಅದುವೇ ಕನಕದಾಸರಿಗೆ ನಾವು ಸಲ್ಲಿಸುವ ನಿಜವಾದ ಗೌರವ ಮತ್ತು ಭಕ್ತಿಪೂರ್ವಕ ನಮನ.
-ಪ್ರಭಂಜನ ಮುತ್ತಿಗಿ
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
