DINK, Live-in ಮತ್ತು ಬದಲಾಗುತ್ತಿರುವ ಯುವ ಮನಸ್ಸು
- ಮೇಘನಾ ಕಾನೇಟ್ಕರ್, ಲೇಖಕಿ
ಒಂದು ಕಾಲದಲ್ಲಿ ಜೀವನದ ಪಯಣಕ್ಕೆ ಒಂದು ನಿಶ್ಚಿತ ದಾರಿಯಿತ್ತು. ವಿದ್ಯಾಭ್ಯಾಸ, ಉದ್ಯೋಗ, ಮದುವೆ, ಮಕ್ಕಳು, ಕುಟುಂಬ… ಇದೇ ಬದುಕಿನ ಸಹಜ ಕ್ರಮ ಎಂದು ಸಮಾಜ ನಂಬಿತ್ತು. ಆದರೆ ಕಾಲ ಬದಲಾಗಿದೆ. ಇಂದಿನ ಯುವಜನರು ಬದುಕನ್ನು ತಮ್ಮದೇ ರೀತಿಯಲ್ಲಿ ಕಟ್ಟಿಕೊಳ್ಳಲು ಬಯಸುತ್ತಿದ್ದಾರೆ. “ನನ್ನ ಜೀವನ…ನನ್ನ ಆಯ್ಕೆ” ಎಂಬ ಚಿಂತನೆ ಹೆಚ್ಚು ಬಲ ಪಡೆದುಕೊಂಡಿದೆ. ಬದುಕು ಒಂದೇ ಬಾರಿ ಸಿಗುತ್ತದೆ. ಅದನ್ನು ನಮ್ಮಿಷ್ಟದಂತೆ ಬದುಕುವ ಹಕ್ಕು ನಮಗಿದೆ. ಇಂದಿನ ಯುವಜನರ ಈ ಮಾತಿನಲ್ಲಿ ತಪ್ಪೇನೂ ಇಲ್ಲ. ಆದರೆ ಅದರ ಮುಂದಿನ ಪ್ರಶ್ನೆಯೇ ಸಮಾಜವನ್ನು ಯೋಚಿಸುವಂತೆ ಮಾಡುತ್ತಿದೆ. ಈ ಬದಲಾವಣೆಯ ಪ್ರತಿಬಿಂಬವೇ DINK (Double Income, No Kids) ಮತ್ತು Live-in Relationship ಎಂಬ ಎರಡು ಜೀವನಶೈಲಿಗಳು.
ನಮ್ಮ ಆಯ್ಕೆಗಳು ನಮ್ಮಷ್ಟಕ್ಕೇ ಸೀಮಿತವೇ…ಅಥವಾ ಮುಂದಿನ ತಲೆಮಾರಿನ ಮೇಲೂ ಪರಿಣಾಮ ಬೀರುತ್ತದೆಯೇ? ಎಂಬ ಪ್ರಶ್ನೆಯನ್ನು ನಾವೇ ಕೇಳಿಕೊಳ್ಳಬೇಕಿದೆ. ಇತ್ತೀಚಿನ ದಿನಗಳಲ್ಲಿ DINK ಎಂಬ ಪರಿಕಲ್ಪನೆ ಹೆಚ್ಚು ಚರ್ಚೆಗೆ ಒಳಪಡುತ್ತಿದೆ. ಮತ್ತೊಂದೆಡೆ, Live-in ಸಂಬಂಧಗಳ ಕುರಿತು ಭಾರತದಲ್ಲಿ ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಮತ್ತು ಕಾನೂನು ಚರ್ಚೆಗಳು ನಡೆಯುತ್ತಿವೆ. ಸುಪ್ರೀಂ ಕೋರ್ಟ್ ಸಹ ಹಲವು ತೀರ್ಪುಗಳಲ್ಲಿ, ಪರಸ್ಪರ ಒಪ್ಪಿಗೆಯಿಂದ ವಯಸ್ಕರು ಒಟ್ಟಿಗೆ ವಾಸಿಸುವ Live-in ಸಂಬಂಧಗಳು ಕಾನೂನುಬಾಹಿರವಲ್ಲ ಮತ್ತು ಕೆಲವು ಸಂದರ್ಭಗಳಲ್ಲಿ ಕಾನೂನಿನ ರಕ್ಷಣೆಯನ್ನು ಪಡೆಯಬಹುದು ಎಂಬ ನಿಲುವನ್ನು ವ್ಯಕ್ತಪಡಿಸಿದೆ. ಮೊದಲ ನೋಟಕ್ಕೆ ಇವೆರಡೂ ವಿಭಿನ್ನ ವಿಷಯಗಳಂತೆ ಕಾಣುತ್ತವೆ. DINK ಎಂದರೆ ಮದುವೆಯಾದ ದಂಪತಿ ಮಕ್ಕಳನ್ನು ಹೊಂದದಿರಲು ತೆಗೆದುಕೊಳ್ಳುವ ನಿರ್ಧಾರ. Live-in ಎಂದರೆ ಮದುವೆಯ ಮೊದಲು ಅಥವಾ ಮದುವೆಯಾಗದೆ ಒಟ್ಟಿಗೆ ಬದುಕುವ ಜೀವನಶೈಲಿ.
ರೂಪ ಎರಡು- ಆದರೆ ಬದಲಾವಣೆಯ ಬೇರು ಒಂದೇ!
ಇವೆರಡೂ ಒಂದೇ ಪರಿಕಲ್ಪನೆಗಳಲ್ಲ. ಆದರೆ ಇವೆರಡರ ಹಿಂದಿರುವ ಮನೋಭಾವ ಮತ್ತು ಜೀವನದೃಷ್ಟಿಯಲ್ಲಿ ಗಮನಾರ್ಹ ಸಾಮ್ಯವಿದೆ. ವೈಯಕ್ತಿಕ ಸ್ವಾತಂತ್ರ್ಯ, ವೃತ್ತಿಜೀವನಕ್ಕೆ ಆದ್ಯತೆ, ಆರ್ಥಿಕ ಸ್ಥಿರತೆ, ಮಕ್ಕಳ ಪೋಷಣೆ ಸೇರಿದಂತೆ ದೊಡ್ಡ ಜವಾಬ್ದಾರಿಗಳನ್ನು ಮುಂದೂಡುವ ಮನಸ್ಥಿತಿ ಹಾಗೂ “ನನ್ನ ಜೀವನ – ನನ್ನ ಆಯ್ಕೆ” ಎಂಬ ಚಿಂತನೆ ಎರಡರಲ್ಲೂ ಪ್ರತಿಫಲಿಸುತ್ತದೆ.
ಇಲ್ಲಿ DINK ಅಥವಾ Live-in ಅನ್ನು ಸಮರ್ಥಿಸುವುದಾಗಲಿ, ಖಂಡಿಸುವುದಾಗಲಿ ಉದ್ದೇಶ ಅಲ್ಲ. ಬದಲಾಗಿ, ಈ ಹೊಸ ಜೀವನಶೈಲಿಗಳ ಹಿಂದಿರುವ ಕಾರಣಗಳು, ಅವುಗಳ ಪರಿಣಾಮಗಳು ಮತ್ತು ನಮ್ಮ ಸಮಾಜ ಎದುರಿಸುತ್ತಿರುವ ಹೊಸ ಸವಾಲುಗಳ ಕುರಿತು ಒಂದು ಪ್ರಾಮಾಣಿಕ ಸಂವಾದದ ಅಗತ್ಯವಿದೆ. ಜಾಗತಿಕರಣ, ನಗರೀಕರಣ, ಮಹಿಳೆಯರ ಆರ್ಥಿಕ ಸ್ವಾವಲಂಬನೆ, ದುಬಾರಿ ಜೀವನಶೈಲಿ, ಉದ್ಯೋಗದ ಒತ್ತಡ ಮತ್ತು ಭವಿಷ್ಯದ ಅನಿಶ್ಚಿತತೆ – ಇವೆಲ್ಲವೂ ಇಂದಿನ ಯುವಜನರ ನಿರ್ಧಾರಗಳ ಮೇಲೆ ಪ್ರಭಾವ ಬೀರುತ್ತಿವೆ. ಹಿಂದಿನ ತಲೆಮಾರಿನ ಕನಸುಗಳಿಗಿಂತ ಇಂದಿನ ತಲೆಮಾರಿನ ಕನಸುಗಳು ಭಿನ್ನವಾಗಿರುವುದು ಸಹಜ. ಆದರೆ ಕನಸುಗಳು ಭಿನ್ನ ಎಂದ ಮಾತ್ರಕ್ಕೆ ಭಾರತೀಯ ಸಮಾಜದಲ್ಲಿರುವ ಕೌಟುಂಬಿಕ ವಿಷಯಗಳು ಪೂರ್ತಿಯಾಗಿ ತಿರಸ್ಕರಿಸುವಂತಹದಲ್ಲ.
ಒಂದು ಕಥೆ- ಎರಡು ದೃಷ್ಟಿಕೋನ
ಬೆಂಗಳೂರು ನಗರದ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುವ ಸೂರ್ಯ ಮತ್ತು ಭೂಮಿ (ಹೆಸರು ಬದಲಾಯಿಸಲಾಗಿದೆ) ಇಬ್ಬರೂ ಪ್ರತಿಭಾವಂತ ವೃತ್ತಿಪರರು. ಮದುವೆಯಾದ ನಂತರ ಅವರು DINK ಜೀವನವನ್ನು ಆಯ್ಕೆ ಮಾಡಿಕೊಂಡರು. “ನಮಗೆ ಈ ಬದುಕು ಒಂದೇ ಬಾರಿ ಸಿಕ್ಕಿದೆ. ನಾಳೆ ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಇಂದು ಬದುಕನ್ನು ಸಂಪೂರ್ಣವಾಗಿ ಅನುಭವಿಸಬೇಕು. ಜಗತ್ತನ್ನು ನೋಡಬೇಕು. ನಮ್ಮ ಕನಸುಗಳನ್ನು ನನಸಾಗಿಸಬೇಕು. ಆರ್ಥಿಕ ಸ್ವಾತಂತ್ರ್ಯ, ಮನಸ್ಸಿನ ನೆಮ್ಮದಿ ಮತ್ತು ಒಬ್ಬರಿಗೊಬ್ಬರು ಸಮಯ ಕೊಡುವುದೇ ಈಗ ನಮ್ಮ ಆದ್ಯತೆ” ಎಂದು ಅವರು ಹೇಳುತ್ತಾರೆ.
ಈ ಮಾತುಗಳಲ್ಲಿ ಸ್ವಾರ್ಥವಿದೆಯೇ? ಎಂದು ಅವಲೋಕಿಸಿದಾಗ ಬಹುಶಃ ಇಲ್ಲ. ಏಕೆಂದರೆ ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಜೀವನವನ್ನು ತನ್ನ ಮೌಲ್ಯಗಳ ಪ್ರಕಾರ ಬದುಕುವ ಹಕ್ಕಿದೆ. ಎಲ್ಲರ ಸಂತೋಷದ ವ್ಯಾಖ್ಯಾನವೂ ಒಂದೇ ಆಗಿರಬೇಕೆಂದಿಲ್ಲ.
ಆದರೆ ಜೀವನದಲ್ಲಿ ಮತ್ತೊಂದು ಮುಖವೂ ಇದೆ. ಒಮ್ಮೆ ಸ್ನೇಹಿತೆಯ ಮಗಳ ಹುಟ್ಟುಹಬ್ಬದಲ್ಲಿ ಮಕ್ಕಳ ನಗು, ಮನೆಯ ಸಂಭ್ರಮ ಮತ್ತು ಮೂರು ತಲೆಮಾರುಗಳು ಒಂದಾಗಿ ನಗುತ್ತಿರುವ ದೃಶ್ಯವನ್ನು ಕಂಡ ಭೂಮಿ ಮನೆಗೆ ಬಂದು ಸೂರ್ಯನ ಬಳಿ ಹೇಳಿದಳು – “ಬಹುಶಃ…ಜೀವನದಲ್ಲಿ ಪ್ರತಿಯೊಂದು ಆಯ್ಕೆಯೂ ಸರಿಯೇ ಇರಬಹುದು. ಆದರೆ ಪ್ರತಿಯೊಂದು ಆಯ್ಕೆಯೂ ತನ್ನದೇ ಆದ ಬೆಲೆಯನ್ನು ಕೇಳುತ್ತದೆ”. ಈ ಮಾತು ಪಶ್ಚಾತ್ತಾಪದಿಂದ ಬಂದಿದ್ದಲ್ಲ. ಬದಲಾಗಿ ಅದು ಜೀವನದ ಪರಿಪಕ್ವತೆಯ ಪ್ರತಿಬಿಂಬ.
ಹೌದು. DINK ಜೀವನದಲ್ಲಿ ಸ್ವಾತಂತ್ರ್ಯವಿದೆ. ಪ್ರವಾಸದ ಮೋಜು – ಆಹ್ಲಾದಕರ ಅನುಭವವಿದೆ. ಆರ್ಥಿಕ ಭದ್ರತೆಯಿದೆ. ದಂಪತಿಗಳು ಪರಸ್ಪರ ಹೆಚ್ಚು ಸಮಯ ನೀಡುವ ಅವಕಾಶವಿದೆ. ಅದೇ ಸಮಯದಲ್ಲಿ, ಮಕ್ಕಳನ್ನು ಬೆಳೆಸುವ ಅನುಭವ, ಒಂದು ಹೊಸ ಜೀವದೊಂದಿಗೆ ಬೆರೆಯುವ ಬೆಸೆಯುವ – ಬೆಳೆಯುವ ಸಂತೋಷ, ತಲೆಮಾರುಗಳನ್ನು ಜೋಡಿಸುವ ಬಾಂಧವ್ಯ ಮುಂತಾದ ಅನುಭವಗಳಿಂದ ದೂರ ಉಳಿಯುವ ಸಾಧ್ಯತೆಯೂ ಇದೆ.
ಯಾವುದು ಸರಿ? ಯಾವುದು ತಪ್ಪು ಎಂದು ಪ್ರಶ್ನಿಸಿಕೊಂಡರೆ ಪ್ರಾಯಶಃ ಈ ಪ್ರಶ್ನೆಗೆ ಒಂದೇ ಉತ್ತರ ಇರಲಿಕ್ಕಿಲ್ಲ. ಭಾರತೀಯ ಸಮಾಜದಲ್ಲಿ ಕುಟುಂಬ ಎನ್ನುವುದು ಕೇವಲ ಗಂಡ-ಹೆಂಡತಿಯ ಸಂಬಂಧವಲ್ಲ. ಅದು ತಲೆಮಾರುಗಳನ್ನು ಜೋಡಿಸುವ ವ್ಯವಸ್ಥೆ. ಅಜ್ಜ – ಅಜ್ಜಿ, ಅಪ್ಪ – ಅಮ್ಮ, ಮಕ್ಕಳು ಕೇವಲ ಸಂಬಂಧಗಳಲ್ಲ; ಜೀವನದ ಪಾಠಶಾಲೆಗಳು. ಹಾಗೆಯೇ ಇಲ್ಲಿ ‘ಮಗು’ ಎನ್ನುವುದು ಕೇವಲ ಜವಾಬ್ದಾರಿಯಲ್ಲ. ಅದು ತಾಳ್ಮೆಯನ್ನು ಕಲಿಸುತ್ತದೆ. ತ್ಯಾಗವನ್ನು ಕಲಿಸುತ್ತದೆ. ನಿಸ್ವಾರ್ಥ ಪ್ರೀತಿಯ ಅರ್ಥವನ್ನು ತಿಳಿಸುತ್ತದೆ. ಮಗುವಿನ ಮೊದಲ ನಗು, ಮೊದಲ ಹೆಜ್ಜೆ, ಮೊದಲ ಮಾತು ಇವೆಲ್ಲಾ ಹಣದಿಂದ ಖರೀದಿಸಲಾಗದ ಅನುಭವಗಳು.
ಹಾಗೆಯೇ, ಪ್ರತಿಯೊಬ್ಬ ದಂಪತಿಯೂ ಮಕ್ಕಳನ್ನು ಹೊಂದಲೇಬೇಕು ಎಂಬ ಸಾಮಾಜಿಕ ಒತ್ತಡವೂ ಸರಿಯಲ್ಲ. ಕೆಲವರು ವೈದ್ಯಕೀಯ ಕಾರಣಗಳಿಂದ, ಕೆಲವರು ವೈಯಕ್ತಿಕ ಆಯ್ಕೆಯಿಂದ, ಇನ್ನೂ ಕೆಲವರು ಪರಿಸ್ಥಿತಿಯಿಂದ DINK ಜೀವನವನ್ನು ಆರಿಸಿಕೊಳ್ಳಬಹುದು. ಆ ನಿರ್ಧಾರಗಳನ್ನು ಅರ್ಥಮಾಡಿಕೊಳ್ಳುವ ಸಂವೇದನೆಯೂ ಸಮಾಜದಲ್ಲಿರಬೇಕು. ಆದರೆ ಯಾವುದೇ ನಿರ್ಧಾರ ತೆಗೆದುಕೊಳ್ಳುವಾಗ ಅದರ ದೀರ್ಘಕಾಲೀನ ಭಾವನಾತ್ಮಕ ಮತ್ತು ಸಾಮಾಜಿಕ ಪರಿಣಾಮಗಳ ಬಗ್ಗೆ ಯೋಚಿಸುವುದು ಕೂಡ ಅಷ್ಟೇ ಮುಖ್ಯ.
ಸ್ವಾತಂತ್ರ್ಯ ಮತ್ತು ಜವಾಬ್ದಾರಿ
ಸ್ವಾತಂತ್ರ್ಯ ಎಂದರೆ ಜವಾಬ್ದಾರಿಯಿಂದ ದೂರ ಹೋಗುವುದು ಅಲ್ಲ. ಜವಾಬ್ದಾರಿ ಎಂದರೆ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವುದೂ ಅಲ್ಲ. ಈ ಎರಡರ ನಡುವೆ ಸಮತೋಲನ ಸಾಧಿಸಿದಾಗ ಮಾತ್ರ ಬದುಕು ಪರಿಪೂರ್ಣವಾಗುತ್ತದೆ. ಇಂದು ನಾವು ವೃತ್ತಿಜೀವನದಲ್ಲಿ ಯಶಸ್ಸನ್ನು ಪ್ರಾಪಂಚಿಕ ವಸ್ತುಗಳಿಂದ ಅಳೆಯುತ್ತಿದ್ದೇವೆ. ಬ್ಯಾಂಕ್ ಖಾತೆಯಲ್ಲಿರುವ ಮೊತ್ತ, ಆಸ್ತಿ, ಪ್ರವಾಸ, ಹುದ್ದೆ ಇವೆಲ್ಲವೂ ಜೀವನದ ಸಾಧನೆಗಳೇ.
ಆದರೆ, ನಾವಿಲ್ಲಿ ಯೋಚಿಸಬೇಕಾದ್ದೇನೆಂದರೆ ಇಂದಿನ ಪೀಳಿಗೆಯವರು ಜೀವನವನ್ನು ಸುಲಭಗೊಳಿಸುವ ಪ್ರಯತ್ನದಲ್ಲಿ ಅದನ್ನು ಸುಂದರಗೊಳಿಸುವ ಸಂಬಂಧಗಳನ್ನು ಕಳೆದುಕೊಳ್ಳುತ್ತಿದ್ದೇವೆಯೇ? ಬಹುಶಃ ಈ ಪ್ರಶ್ನೆಗೆ ಉತ್ತರ ಇಂದೇ ಸಿಗದಿರಬಹುದು. ಆದರೆ ಕಾಲವೇ ಅದರ ಉತ್ತರವನ್ನು ಹೇಳುತ್ತದೆ. ಇಂದು ನಗರ ಜೀವನದಲ್ಲಿ ಒಂಟಿತನ, ಆತಂಕ ಮತ್ತು ಖಿನ್ನತೆ ಹೆಚ್ಚುತ್ತಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಹಲವು ಕಾರಣಗಳಿವೆ; ಸಂಬಂಧಗಳ ಸ್ವರೂಪದಲ್ಲಿ ಆಗುತ್ತಿರುವ ಬದಲಾವಣೆಗಳೂ ಅವುಗಳಲ್ಲಿ ಒಂದು. ಮಾನವನು ಕೇವಲ ಯಶಸ್ಸಿನಿಂದ ಬದುಕುವುದಿಲ್ಲ; ಅವನಿಗೆ ಸಂಬಂಧಗಳೂ ಅಗತ್ಯ.
ಇದರರ್ಥ DINK ಅಥವಾ Live-in ತಪ್ಪು ಎಂಬುದಲ್ಲ. ಹಾಗೆಯೇ ಸಂಪ್ರದಾಯಬದ್ಧ ಕುಟುಂಬ ಜೀವನವೇ ಎಲ್ಲರಿಗೂ ಸರಿಯಾದ ಆಯ್ಕೆ ಎಂದೂ ಹೇಳಲು ಸಾಧ್ಯವಿಲ್ಲ. ಪ್ರತಿಯೊಬ್ಬರ ಜೀವನ ಪರಿಸ್ಥಿತಿ ವಿಭಿನ್ನ. ಮಕ್ಕಳಾಗದಿರಲು ವೈದ್ಯಕೀಯ ಕಾರಣಗಳಿರಬಹುದು, ವೈಯಕ್ತಿಕ ಆದ್ಯತೆಗಳಿರಬಹುದು ಅಥವಾ ಬೇರೆ ಜೀವನ ಗುರಿಗಳಿರಬಹುದು. ಆದ್ದರಿಂದ ಯಾವುದೇ ವ್ಯಕ್ತಿಯ ಆಯ್ಕೆಯನ್ನು ತೀರ್ಪು ನೀಡುವ ಬದಲು, ಅದರ ಹಿಂದಿನ ಕಾರಣವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಆದರೆ ಸಮಾಜವಾಗಿ ನಾವು ಒಂದು ಪ್ರಶ್ನೆಯನ್ನು ಕೇಳಿಕೊಳ್ಳಲೇಬೇಕು. ವೈಯಕ್ತಿಕ ಸ್ವಾತಂತ್ರ್ಯ ಮತ್ತು ಕುಟುಂಬದ ಜವಾಬ್ದಾರಿಗಳ ನಡುವೆ ಸಮತೋಲನ ಸಾಧ್ಯವೇ? ಆರ್ಥಿಕ ಯಶಸ್ಸಿನ ಜೊತೆಗೆ ಭಾವನಾತ್ಮಕ ಶ್ರೀಮಂತಿಕೆಯನ್ನೂ ಉಳಿಸಿಕೊಳ್ಳಬಹುದೇ? ತಂತ್ರಜ್ಞಾನ ಮತ್ತು ಆಧುನಿಕತೆ ನಮ್ಮ ಜೀವನವನ್ನು ಸುಲಭಗೊಳಿಸಬಹುದು; ಆದರೆ ಪ್ರೀತಿ, ಮಮತೆ, ತ್ಯಾಗ ಮತ್ತು ಒಡನಾಟವನ್ನು ಅವು ಸೃಷ್ಟಿಸಲಾರವು.
ಇಂದಿನ ಯುವಜನರನ್ನು ಟೀಕಿಸುವುದೂ ಸರಿಯಲ್ಲ, ಹೊಗಳುವುದೂ ಸರಿಯಲ್ಲ. ಅವರ ಕನಸುಗಳನ್ನು ಅರ್ಥಮಾಡಿಕೊಳ್ಳಬೇಕು. ಅದೇ ಸಮಯದಲ್ಲಿ ಸಂಬಂಧಗಳ ಮೌಲ್ಯ, ಕುಟುಂಬದ ಶಕ್ತಿ ಮತ್ತು ತಲೆಮಾರುಗಳ ಬಂಧದ ಮಹತ್ವವನ್ನು ನೆನಪಿಸಬೇಕು. ಏಕೆಂದರೆ ಕುಟುಂಬವು ಕೇವಲ ಒಂದು ಸಾಮಾಜಿಕ ವ್ಯವಸ್ಥೆಯಲ್ಲ; ಅದು ಮನುಷ್ಯನಿಗೆ ಸಂಕಷ್ಟದ ಸಮಯದಲ್ಲಿ ಆಸರೆ ನೀಡುವ ಮೊದಲ ನೆಲೆ.
ಕಾಲ ಬದಲಾಗುತ್ತದೆ. ಜೀವನಶೈಲಿಗಳು ಬದಲಾಗುತ್ತವೆ. ಆಲೋಚನೆಗಳು ಬದಲಾಗುತ್ತವೆ. ಆದರೆ ಮನುಷ್ಯನ ಹೃದಯದ ಕೆಲವು ಅಗತ್ಯಗಳು ಎಂದಿಗೂ ಆತ್ಮೀಯತೆ ಮತ್ತು ಬಾಂಧವ್ಯವೇ ಆಗಿದೆ. ಆಧುನಿಕತೆ ಎಂದರೆ ಸಂಸ್ಕೃತಿಯನ್ನು ತ್ಯಜಿಸುವುದಲ್ಲ. ಹೊಸ ಆಲೋಚನೆಗಳನ್ನು ಸ್ವೀಕರಿಸುತ್ತಾ, ಸಂಬಂಧಗಳ ಬೇರುಗಳನ್ನು ಉಳಿಸಿಕೊಳ್ಳುವುದೇ ನಿಜವಾದ ಪ್ರಗತಿ. ಯಾಕೆಂದರೆ ಮನೆ ಎಂದರೆ ಕೇವಲ ಕಟ್ಟಡವಲ್ಲ. ಕುಟುಂಬ ಎಂದರೆ ಕೇವಲ ರಕ್ತಸಂಬಂಧಗಳಲ್ಲ. ನಮ್ಮ ಜೀವನದಲ್ಲಿ ‘ನಾನು’ ಎನ್ನುವ ಪದ ನಿಧಾನವಾಗಿ ‘ನಾವು’ ಆಗುವ ಕ್ಷಣವೇ ನಿಜವಾದ ಬದುಕಿನ ಆರಂಭ.
ಹಣ ಬದುಕನ್ನು ಆರಾಮದಾಯಕವಾಗಿಸಬಹುದು. ಯಶಸ್ಸು ಹೆಸರನ್ನು ತಂದುಕೊಡಬಹುದು. ಆದರೆ ವಯಸ್ಸಾದಾಗ ನಮ್ಮ ಕೈ ಹಿಡಿಯುವುದು ಬ್ಯಾಂಕ್ ಬ್ಯಾಲೆನ್ಸ್ ಅಲ್ಲ… ನಮ್ಮ ಸಂಬಂಧಗಳೇ. ಕುಟುಂಬಗಳನ್ನು ಕಟ್ಟುವುದು ಸುಲಭವಲ್ಲ; ಆದರೆ ಅವು ಕುಸಿದರೆ ಸಮಾಜವೂ ನಿಧಾನವಾಗಿ ತನ್ನ ಆತ್ಮವನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಆಯ್ಕೆ ನಮ್ಮದೇ ಆಗಿರಲಿ, ಆದರೆ ಅದರ ಪರಿಣಾಮ ಮುಂದಿನ ತಲೆಮಾರಿನ ಮೇಲೂ ಬೀಳುತ್ತದೆ.
ಸಂಬಂಧಗಳು ಉಳಿದರೆ ಸಮಾಜ ಉಳಿಯುತ್ತದೆ; ಸಮಾಜ ಉಳಿದರೆ ಸಂಸ್ಕೃತಿ ಉಳಿಯುತ್ತದೆ.
