ಅಂಕಣ – ಸಂಚಾರ
- ವೃಷಾಂಕ ಭಟ್ ನಿವಣೆ, ಸಂಪಾದಕರು, ಸಂವಾದ
ಶ್ರೀಧರ ಸ್ವಾಮಿಗಳು ಮೋಕ್ಷದ ಬಗ್ಗೆ ಮಾತನಾಡುವಾಗ “ಚಿಕ್ಕ ಮಗುವನ್ನು ನೀವು ಎತ್ತಿಕೊಂಡರೆ ಒಂದುಕ್ಷಣದ ಕಾಲ ಆ ಮಗುವನ್ನೂ, ನಿಮ್ಮನ್ನೂ ಮರೆಯುತ್ತೀರಿ, ಅದೇ ಆನಂದದ ಸ್ಥಿತಿ” ಎನ್ನುತ್ತಾರೆ. ಮುಂದುವರಿಯುತ್ತಾ “ವ್ಯಕ್ತಿಗಳಿಂದ, ವಸ್ತುಗಳಿಂದ ಸುಖವನ್ನು ಅಪೇಕ್ಷಿಸಿದರೆ ಅದು ಕ್ಷಣಿಕವೂ, ದುಃಖದಾಯಕವೂ ಆದದ್ದು ಎನ್ನುತ್ತಾರೆ. ಹಾಗಾದರೆ ಮುಕ್ತಿ ಎಂದರೆ ಏನು ಎಂಬ ಪ್ರಶ್ನೆ ಮೂಡುತ್ತದೆ. ಸತ್ತ ನಂತರ ಮುಕ್ತಿ ಪಡೆಯಬೇಕು ಎಂಬುದು ಬಹಳ ಜನರ ಇಚ್ಛೆಯಾದರೂ ಸತ್ತ ನಂತರ ಮುಕ್ತಿ ನಿಜಕ್ಕೂ ಇದೆಯೇ ಎಂಬುದು ಗೊತ್ತಿಲ್ಲ. ಸತ್ತವರಿಗೆ ಮುಕ್ತಿ ಸಿಗುತ್ತದೆಯೋ ಇಲ್ಲವೋ ಎಂಬುದನ್ನು ಬದಿಗಿಡಿ. ಇನ್ನೂ ಬದುಕಿರುವವರಿಗೆ ಮುಕ್ತಿಯ ಬಯಕೆ ಏಕೆ? ಏಕೆಂದರೆ ಈಗಿರುವ ಸ್ಥಿತಿಯಲ್ಲಿ ಅವರು ಆನಂದವಾಗಿಲ್ಲ. ಕೆಲಸ, ಸಾಲ, ಸಂಬಂಧಗಳ ನಡುವಿನ ಕಿರಿಕಿರಿ, ಮಕ್ಕಳನ್ನು ದಡ ತಲುಪಿಸುವ ಮೋಹ, ಸಂಬಂಧಿಕರು/ಸ್ನೇಹಿತರಿಗಿಂತ ಚೆನ್ನಾಗಿರಬೇಕೆಂಬ ಒತ್ತಡ, ಅವಮಾನ ಹೀಗೆ ಒಂದಾದ ಮೇಲೊಂದು ವ್ಯೂಹದೊಳಗೆ ವ್ಯಕ್ತಿ ಸಿಕ್ಕಿಕೊಂಡಿದ್ದಾನೆ. ಈ ಜಂಜಾಟಗಳ ನಡುವೆ ಆತನಿಗೆ ಎಲ್ಲಿಯೂ ನೆಮ್ಮದಿ ಸಿಗುತ್ತಿಲ್ಲ. ಕೊಂಚ ನೆಮ್ಮದಿ ಸಿಕ್ಕಿತೆಂದಾದರೂ ಅದು ಕ್ಷಣಿಕ. ನಾಲ್ಕು ದಿನ ರಜೆ ಹಾಕಿ ಪರ್ವತ ಪ್ರದೇಶಕ್ಕೆ ಪ್ರವಾಸ ಹೋದವನು ರಜೆ ಮುಗಿದ ಬಳಿಕ ಮತ್ತೆ ಮೊದಲಿದ್ದಲ್ಲಿಯೇ ಬೀಳಬೇಕು. ಸ್ಥಳಬದಲಾವಣೆಯಲ್ಲಿ ಶಾಶ್ವತ ಪರಿಹಾರ ಸಿಗದು. ಕಾಫಿ ಸಿಗಲಿಲ್ಲವೆಂದು ಚಡಪಡಿಸುವವನು ಕಾಫಿ ಕುಡಿದಾಗ ಸ್ವಲ್ಪ ಹೊತ್ತು ಸಮಾಧಾನದಿಂದಿರಬಹುದಾದರೂ ಎರಡು ಗಂಟೆ ಕಳೆದ ಬಳಿಕ ಮತ್ತೆ ಕಾಫಿ ಬೇಕೆನ್ನುತ್ತಾನೆ. ಸುಖವನ್ನರಸುತ್ತಾ ಕರ್ಮದಲ್ಲಿ ಬೀಳುತ್ತೇವೆ. ಉದಾಹರಣೆಗೆ ಸಿನೆಮಾ, ಮದ್ಯಪಾನ, ಮಾದಕದ್ರವ್ಯ, ಲೈಂಗಿಕತೆ, ಸ್ನೇಹಿತರೊಂದಿಗೆ ಹರಟೆ ಎಲ್ಲವೂ ಮತ್ತೆ ಮತ್ತೆ ಬೇಕೆನಿಸುವಂತದ್ದೇ ವಿನಃ ಒಮ್ಮೆ ಪಡೆದರೆ ಶಾಶ್ವತ ಸುಖ ಸಿಗುವಂತದ್ದಲ್ಲ. ಇವೆಲ್ಲವನ್ನು ಗಮನಿಸುವ ವ್ಯಕ್ತಿಗೆ ಅನಿಸುವುದೇನೆಂದರೆ “ಸತ್ತು ಮೋಕ್ಷ ಪಡೆದರೆ ಎಲ್ಲಾ ತಲೆನೋವುಗಳು, ಬಯಕೆಗಳಿಂದ ಮುಕ್ತನಾಗಬಹುದು” ಎಂದು! ಸತ್ತ ಮೇಲೆ ಮುಕ್ತಿ ಇದೆಯೇ ಇಲ್ಲವೇ ಎಂಬುದು ಗೊತ್ತಿಲ್ಲದಿದ್ದರೂ, ಹಿಂದಿನವರು ಹೇಳಿದ್ದರ ಕಾರಣಕ್ಕೋ, ಈಗಿನ ನೋವು – ಒತ್ತಡಗಳ ಕಾರಣಕ್ಕೋ ಸತ್ತನಂತರ ಮುಕ್ತಿ ಪಡೆಯಬೇಕೆಂದು ಬಯಸುತ್ತಾನೆ. ಹೀಗೆ ಬಯಸುವವರು ಸಾಯಲೂ ತಯಾರಿರುವುದಿಲ್ಲ ಎಂಬುದು ವಾಸ್ತವ. ಅದೇನೇ ಇರಲಿ, ಬಹುತೇಕರು ಬಯಸುವ ಸತ್ತ ನಂತರದ ಮುಕ್ತಿ ಹೇಗಿದೆ ಎಂಬುದು ಗೊತ್ತಿರದ ಕಾರಣ ಬದುಕಿದ್ದಾಗ ಮುಕ್ತಿ ಪಡೆಯುವುದು ಹೇಗೆ ಎಂಬುದನ್ನು ನೋಡುವ ಪ್ರಯತ್ನ ಮಾಡೋಣ.
ಯಾವುದೇ ಪರಿಸ್ಥಿತಿಗೆ ಭಾವನಾತ್ಮಕವಾಗಿ ಸಿಕ್ಕಿಹಾಕಿಕೊಳ್ಳದಿರುವುದೇ ಮುಕ್ತಿ. ಶ್ರೀಧರರ ಮಾತಿನಲ್ಲಿ ಹೇಳುವುದಾದರೆ “ಬಂಧನದಿಂದ ಬಿಡುಗಡೆಯೇ ಮೋಕ್ಷ”. ತೀರ್ಥಕ್ಷೇತ್ರಕ್ಕೆ ಹೋದ ಮಹಿಳೆಯ ತಲೆಯಲ್ಲಿ “ಈ ಯಾತ್ರೆಯಲ್ಲಿ ಯಾವೆಲ್ಲ ದೇವಸ್ಥಾನಕ್ಕೆ ಹೋಗಬೇಕು” ಎಂಬ ಚಿಂತೆಯೇ ಹೆಚ್ಚಿದ್ದರೆ ಯಾವ ದೇವಸ್ಥಾನದಲ್ಲೂ ದೇವರ ದರ್ಶನವನ್ನು ಸರಿಯಾಗಿ ಮಾಡಲಾರರು. ಭವಿಷ್ಯದ ಭಯ ಮತ್ತು ಭೂತಕಾಲದ ನೋವಿನಿಂದ ಹೊರಬಂದವನು ಮಾತ್ರ ಮುಕ್ತ.
ನಮ್ಮನ್ನು ನಾವು ಎಷ್ಟೆಲ್ಲ ಬಂಧನಗಳಿಗೆ ಸಿಲುಕಿಸಿಕೊಳ್ಳುತ್ತೇವೆಯೋ ಮುಕ್ತಿಯಿಂದ ಅಷ್ಟು ದೂರ ಹೋಗುತ್ತೇವೆ. ಊಟಕ್ಕೆ ಮೊಸರು ಕಡಿಮೆಯಾದರೆ, ತಿಂಡಿ ಸ್ವಲ್ಪ ತಡವಾದರೆ ಹೆಂಡತಿಯೊಂದಿಗೆ ಜಗಳವಾಡುವಷ್ಟು ಬಂಧನಕ್ಕೆ ಸಿಲುಕಿಕೊಂಡವನು ಎಂದೂ ಮೋಕ್ಷಕ್ಕೆ ಅರ್ಹನಲ್ಲ. ಹಣ, ಆಸ್ತಿಯನ್ನು ದಾನ ಮಾಡಿ “ದಾನ ಮಾಡಿದ್ದೇನೆ” ಎಂಬ ನೆನಪಿನಲ್ಲಿ ಉಳಿಯುವುದು ಬಂಧನವೇ ಆಗಿದೆ. ಬಂಧನದಿಂದ ಮುಕ್ತನಾಗುವುದೆಂದರೆ ಸವಾಲುಗಳಿಗೆ ಬೆನ್ನುತೋರಿಸುವುದಲ್ಲ. ಹಾಗೆಯೇ ತ್ಯಾಗ ಮಾಡಿದ್ದೇನೆ ಎಂಬ ಭಾವ ಉಳಿದರೂ ಮುಕ್ತಿಯಿಲ್ಲ. ಶಾಲೆ ಕಟ್ಟಬೇಕೆಂದು ಬಯಸುವವನಿಗೆ ಅದು ಸಾಧ್ಯವಾಗದೇ ಹೋದಾಗ ಅದನ್ನು ಬಿಟ್ಟುಬಿಡುವುದು ಬಿಡುಗಡೆಯಲ್ಲ. ಹೇಡಿತನ. ಶಾಲೆ ಕಟ್ಟಬೇಕೆಂಬ ಚಿಂತನೆಯನ್ನು ಮೂಲದಲ್ಲೇ ನಾಶಗೊಳಿಸುವುದು ಮುಕ್ತಿ. ಇಚ್ಛೆಯನ್ನು ನಾಶಗೊಳಿಸುವುದು ಮತ್ತು ಅಭ್ಯಾಸಗಳನ್ನು ಮತ್ತೆ ಮಾಡದಿರುವುದು ತ್ಯಾಗ. ನಮ್ಮ ಬದುಕಿನಲ್ಲಿ ನಾವು ಕಾಣುವ ಸೋಲು, ನಿರಾಸೆ, ಭಯ, ಅವಮಾನ ಇವೆಲ್ಲವುಗಳು ಮನುಷ್ಯನನ್ನು ಮುಕ್ತಿಯ ಬಗ್ಗೆ ಚಿಂತಿಸುವಂತೆ ಮಾಡುತ್ತವೆ. ಜಿಡ್ಡು ಕೃಷ್ಣಮೂರ್ತಿ ಹೇಳುವಂತೆ “ಭಯ ಒಂದು ಅತ್ಯುತ್ತಮ ಆಭರಣ. ನಮ್ಮಲ್ಲಿ ಭಯದ ಭಾವ ಉಂಟಾದಾಗ ಅದನ್ನು ಜಾಗರೂಕರಾಗಿ ನೋಡಬೇಕು. ಆಗ ಭಯದ ಮೂಲ ಅರಿವಾಗುತ್ತದೆ”. ಆ ಭಯದ ಮೂಲ ಅರಿವಾದಾಗ ವ್ಯಕ್ತಿಯು ಬಂಧನದಿಂದ ಮುಕ್ತನಾಗುವನು. ಮೋಕ್ಷ ಕಾಣುವನು.
