ಅಂಕಣ – ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು
- ದು.ಗು. ಲಕ್ಷ್ಮಣ, ಹಿರಿಯ ಪತ್ರಕರ್ತ
ಅದು 60ರ ದಶಕ. ಕನ್ಯಾಕುಮಾರಿಯ ವಿವೇಕಾನಂದ ಶಿಲಾ ಸ್ಮಾರಕದ ಸಂಕಲ್ಪ ತೊಟ್ಟಿದ್ದ ಆರ್ಎಸ್ಎಸ್ ಅದನ್ನು ಸಾಕಾರಗೊಳಿಸಲು ಆಗ ಸರಕಾರ್ಯವಾಹರಾಗಿದ್ದ ಏಕನಾಥ ರಾನಡೆ ಎಂಬ ಸಮರ್ಥ ವ್ಯಕ್ತಿಯನ್ನು ಆ ಕಾರ್ಯಕ್ಕೆ ಬಿಟ್ಟುಕೊಟ್ಟಿತ್ತು. ಅಂತಹ ಸಮರ್ಥ ಸಾಧಕರೂ ಆ ಸಂದಿಗ್ಧದ ಸಮಯದಲ್ಲಿ ಹಣದ ಬೆಂಬಲ ಸಿಗದೇ ಚಿಂತಿತರಾಗಿದ್ದಾಗ, ಕರ್ನಾಟಕದ ಸಂಘದ ಕಾರ್ಯಕರ್ತರೊಬ್ಬರು ಒಂದು ರೂಪಾಯಿ ಮುಖಬೆಲೆಯ ವಿವೇಕಾನಂದ ಕಾರ್ಡುಗಳ ಮಾರಾಟ ಯೋಜನೆ ರೂಪಿಸಿ, ಶಿಲಾ ಸ್ಮಾರಕಕ್ಕೆ ಮೊದಲ 1 ಲಕ್ಷ ರೂಪಾಯಿ ಮೊತ್ತದ ದೇಣಿಗೆ ಸಂಗ್ರಹಿಸಿ ಕೊಟ್ಟರು. ಪ್ರಾಂತ ಸಮಿತಿಗೆ ಕೆಂಗಲ್ ಹನುಮಂತಯ್ಯನವರಂತಹ ಗಣ್ಯರನ್ನು ಅಧ್ಯಕ್ಷರಾಗುವಂತೆ ಮನವೊಲಿಸಿದ್ದರು. ಕರ್ನಾಟಕದಿಂದ ಸಂಗ್ರಹವಾದ ಬರೋಬ್ಬರಿ 11 ಲಕ್ಷ ರೂ. ದೊಡ್ಡ ಮೊತ್ತ ಇತರ ಪ್ರಾಂತ್ಯಗಳಿಗೂ ಪ್ರಚೋದನೆ ನೀಡಿತ್ತು.
ಸಂಘ ವಿರೋಧಿ ವಾತಾವರಣವೇ ಹೆಪ್ಪುಗಟ್ಟಿದ್ದ ಆ ಕಾಲಘಟ್ಟದಲ್ಲಿ ಇಷ್ಟು ದೊಡ್ಡ ಮೊತ್ತ ಸಂಗ್ರಹಿಸಲು ಕಾರಣಕರ್ತರಾದ, ಪ್ರಸಿದ್ಧಿ ಬಯಸದ ಆ ಕಾರ್ಯಕರ್ತರೇ ಅರಕಲಿ ನಾರಾಯಣ ಅವರು (ಜನನ: 1.08.1934; ನಿಧನ: 22.11.1998). ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಅರಕಲಿ ಗ್ರಾಮದ ಅರಕಲಿ ಪುಟ್ಟಯ್ಯ ಮತ್ತು ಶೇಷಮ್ಮ ದಂಪತಿಯ 11ನೇ ಕುಡಿ ಇವರು. ತಂದೆ ಅಮಲ್ದಾರರಾಗಿ (ಈಗಿನ ತಹಸೀಲ್ದಾರ್) ನಿವೃತ್ತಿ ಬಳಿಕ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಸ್ಥಳಾಂತರಗೊಂಡರು. ಅರಕಲಿ ಅವರು ತಮ್ಮ ಬಿಎಸ್ಸಿ ಪದವಿ ಮುಗಿಸಿದ್ದು ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ. ಪ್ರಜಾಮತ ಪತ್ರಿಕೆಯಲ್ಲಿ ಕೆಲವು ವರ್ಷ ಉದ್ಯೋಗ ನಿರ್ವಹಿಸಿ, ಅನಂತರ ಅವರು ಸೇರಿದ್ದು ವಿಕ್ರಮ ವಾರಪತ್ರಿಕೆಯ ವ್ಯವಸ್ಥಾಪಕರಾಗಿ. ಹೆಸರಿಗೊಂದು ಉದ್ಯೋಗ, ಅಷ್ಟೇ. ಆದರೆ ಇಡೀ ದಿನ ಅವರು ವ್ಯಸ್ತರಾಗಿರುತ್ತಿದ್ದುದು ಸಂಘದ ವಿವಿಧ ಚಟುವಟಿಕೆ, ಬೈಠಕ್, ಕಾರ್ಯ ವಿಸ್ತಾರ ಹಾಗೂ ಇನ್ನಿತರ ಯೋಜನೆಗಳ ಕೆಲಸದಲ್ಲಿ. ದೀರ್ಘಕಾಲ ಕರ್ನಾಟಕ ಪ್ರಾಂತ ಕಾರ್ಯವಾಹರಾಗಿದ್ದ ಅರಕಲಿ ಅವರು ಪ್ರಭಾವಿ ಭಾಷಣಕಾರರಲ್ಲ. ಆದರೆ ಅವರೊಬ್ಬ ಉತ್ತಮ ಸಂಭಾಷಣಕಾರರಾಗಿದ್ದರು. ತಮ್ಮೆದುರು ಕುಳಿತು ಮಾತನಾಡುವ ವ್ಯಕ್ತಿಯ ಮನದಾಳಕ್ಕೆ ಇಳಿದು ಅವರನ್ನು ತನ್ನ ಆತ್ಮೀಯ ತೆಕ್ಕೆಗೆ ಸೆಳೆದುಕೊಳ್ಳುವ ಆಕರ್ಷಕ ಮೋಡಿ ಅವರ ಮಾತುಗಳಲ್ಲಿ ಇರುತ್ತಿತ್ತು.
ಅವರ ಸಂಪರ್ಕ ಶಕ್ತಿಯಂತೂ ಅದ್ಭುತ. ಸಂಘಕಾರ್ಯವನ್ನೇ ಜೀವನವ್ರತವಾಗಿ ಸ್ವೀಕರಿಸಿದ್ದ ಅವರಿಗೆ ಗುರುತಾದವರೆಲ್ಲರೂ ಆತ್ಮೀಯರೇ. ಮಾಗಡಿ ರಸ್ತೆಯಲ್ಲಿನ ಸಾಧಾರಣ ಕಾರ್ಮಿಕ ಸ್ವಯಂಸೇವಕ ತಿಪ್ಪಯ್ಯ, ಗರುಡಪ್ಪ, ವಿಕ್ರಮ ಕಚೇರಿಯ ಕಸಗುಡಿಸುವ ಭಾಸ್ಕರನಿಂದ ಹಿಡಿದು, ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಕೆಂಗಲ್ ಹನುಮಂತಯ್ಯ, ಡಿ. ದೇವರಾಜ ಅರಸ್, ಬಿ.ಡಿ. ಜತ್ತಿ, ಎಸ್.ಆರ್. ಕಂಠಿ, ಗುಂಡುರಾವ್ವರೆಗೆ; ವಿ.ವಿ. ಗಿರಿ, ಜನರಲ್ ಕಾರ್ಯಪ್ಪ, ತಿರುವಾಂಕೂರಿನ ಎಳೆಯರಾಜ, ಉದ್ಯಮಿಗಳಾದ ಜಿಂಡಾಲ್, ಜಯಪ್ರಕಾಶ್, ಗವರ್ನರ್ ಆಗಿದ್ದ ಧರ್ಮವೀರ, ಪ್ರಸಿದ್ಧ ವಕೀಲ ಪಾಲ್ಖಿ ವಾಲಾ, ರಾಜಕಾರಣಿ ವಿ.ಆರ್. ಕೃಷ್ಣಯ್ಯರ್, ವಾಜಪೇಯಿ, ಆಡ್ವಾಣಿ, ದಂಡವತೆ, ನ್ಯಾಯವಾದಿ ರಾಮಾ ಜೋಯಿಸ್, ಕಾರ್ಮಿಕ ನಾಯಕ ಎಸ್. ವೆಂಕಟರಾಮ್… ಹೀಗೆ ಹಲವರು ಅವರ ಆತ್ಮೀಯ ಬಳಗದಲ್ಲಿದ್ದರು.
ಇಷ್ಟೇ ಅಲ್ಲ, ಪೂಜ್ಯಶ್ರೀ ಚಿನ್ಮಯಾನಂದರು, ಶ್ರೀ ಪೂರ್ಣಾನಂದರು, ಶ್ರೀ ಪರಮಾನಂದ ಭಾರತಿ ಮೊದಲಾದ ಸಾಧುಸಂತರೂ ಅರಕಲಿ ಅವರಿಗೆ ಆಪ್ತರಾಗಿದ್ದರು. ಅರಕಲಿಯವರ ಸಲಹೆ ಪಡೆಯಲು ಅವರಿದ್ದಲ್ಲಿಗೇ ಅವರೆಲ್ಲ ಬರುತ್ತಿದ್ದರು ಎಂದರೆ, ಅರಕಲಿಯವರ ವ್ಯಕ್ತಿತ್ವ ಹೇಗಿತ್ತು ಎಂದು ಊಹಿಸಬಹುದು.
ಇಷ್ಟೆಲ್ಲ ಪ್ರಭಾವಿ ವ್ಯಕ್ತಿಯಾಗಿದ್ದ ಅರಕಲಿಯವರದು ಮಾತ್ರ ಅತ್ಯಂತ ಸರಳ ಬದುಕು. ಪ್ಯಾಂಟು, ಬುಶ್ ಶರ್ಟು, ಕೈಯಲ್ಲೊಂದು ಬ್ರೀಫ್ ಕೇಸು. ಓಡಾಟಕ್ಕೆ ಒಂದು ಹಳೆಯ ಸ್ಕೂಟರ್. ನರಸಿಂಹರಾಜ ಕಾಲೋನಿಯಲ್ಲಿ ವಾಸಕ್ಕೆ ಒಂದು ಸಾಧಾರಣ ಮನೆ. ಆದರೆ ಹಲವರು ಅವರ ಮನೆ ‘ಕೇಶವ ಕೃಪಾ’ ಇರಬೇಕೆಂದು ಭಾವಿಸಿದ್ದರು. ಏಕೆಂದರೆ ಅವರು ಬೆಳಿಗ್ಗೆ, ಸಂಜೆ ಅಲ್ಲೇ ಇರುತ್ತಿದ್ದರು. ರಾತ್ರಿ ಮಾತ್ರ ಮನೆಗೆ ಹೋಗುತ್ತಿದ್ದರು.
ಅರಕಲಿ ಅವರದು ಬಹುಮುಖೀ ವ್ಯಕ್ತಿತ್ವ. ಸೂರ್ಯನಾರಾಯಣನಂತೆ ಅರಕಲಿ ನಾರಾಯಣರು ಮುಂಜಾನೆಯಿಂದ ರಾತ್ರಿಯವರೆಗೆ ಸಂಚಾರಿ. ಸಂಘ ಹಾಗೂ ವಿವಿಧ ಪ್ರಕಲ್ಪಗಳಿಗೆ ಸಂಪನ್ಮೂಲ ಸಂಗ್ರಹಿಸುವುದರಲ್ಲಿ ಅವರದು ಎತ್ತಿದ ಕೈ. ರಾಷ್ಟ್ರೋತ್ಥಾನ, ಜನಸೇವಾ ವಿದ್ಯಾ ಕೇಂದ್ರ ಮುಂತಾದ ಸಂಸ್ಥೆಗಳ ಬೆಳವಣಿಗೆಗೆ ಅವರದು ಅಪಾರ ಪರಿಶ್ರಮದ ಕೊಡುಗೆ. ಸಂಘ ಕಾರ್ಯಕ್ಕೆ ತನ್ನನ್ನು ಒಪ್ಪಿಸಿಕೊಳ್ಳುವುದು ಅಂದರೇನು ಎಂಬುದಕ್ಕೆ ಅರಕಲಿ ಅವರು ಜೀವಂತ ನಿದರ್ಶನವಾಗಿದ್ದರು. ಅವರ ಬದುಕಿನಲ್ಲಿ ಸಂಘವೇ ಸರ್ವಸ್ವ. ಅವರು ಪ್ರಚಾರಕರಾಗಿರಲಿಲ್ಲ. ಆದರೆ ಪ್ರಚಾರಕರಂತೆಯೇ ಸಂಘಕಾರ್ಯ ನಿರ್ವಹಿಸಿದರು. ದೇಶಕ್ಕಾಗಿ ದುಡಿದರು. ಪ್ರಚಾರಕರಿಗೂ ದಾರಿ ತೋರುವ ವ್ಯಾವಹಾರಿಕ ಸಾಮರ್ಥ್ಯ ಅವರಲ್ಲಿತ್ತು. ಪ್ರಚಾರಕರ ಸಾಮರ್ಥ್ಯ ಹೆಚ್ಚಿಸುವ ಕೌಶಲ್ಯ ಅವರ ಮಧುರ ಮಾತುಗಳಲ್ಲಿ ಇರುತ್ತಿತ್ತು.
ಅದು 1977ರ ಕಾಲ. ಹೊ.ವೆ.ಶೇಷಾದ್ರಿಗಳ ಸಾರಥ್ಯದಲ್ಲಿ ತುರ್ತು ಪರಿಸ್ಥಿತಿ ಕುರಿತ ‘ಭುಗಿಲು’ಗ್ರಂಥರಚನೆಕಾರ್ಯ ಭರದಿಂದ ಸಾಗಿತ್ತು. ಆ ಗ್ರಂಥ ರಚನೆಯಲ್ಲಿ ಭಾಗಿಯಾಗಿದ್ದ ನಾನು ಆಗ ಕೇಶವ ಕೃಪಾದಲ್ಲಿ ಇರುತ್ತಿದ್ದೆ. ಆಗಿನ್ನೂ 25ರ ಹರೆಯದ ಬಿಸಿರಕ್ತ ನನ್ನದು. ಒಂದು ದಿನ ಯಾವುದೋ ವಿಷಯಕ್ಕೆ ಕೊಂಚ ತಲೆಬಿಸಿ ಮಾಡಿಕೊಂಡಿದ್ದೆ. ಅರಕಲಿ ಅವರದು ಎಲ್ಲೇ ಇದ್ದರೂ ಎಲ್ಲರ ಮೇಲೆ ಹದ್ದಿನ ಕಣ್ಣು. ನನ್ನ ಬಳಿ ಬಂದವರೇ ಹೆಗಲ ಮೇಲೆ ಆತ್ಮೀಯವಾಗಿ ಕೈಯಿಟ್ಟು, “ದು.ಗು. (ನನ್ನನ್ನು ಅವರು ಕರೆಯುತ್ತಿದ್ದುದೇ ಹಾಗೆ), ಒಂದು ಮಾತು ಹೇಳ್ತೀನಿ, ನೆನಪಿಟ್ಟುಕೋ. ಯಾವಾಗಲೂ ತಲೆಯನ್ನು ತಂಪಾಗಿಟ್ಟುಕೊಂಡು, ಹೃದಯವನ್ನು ಬೆಚ್ಚಗೆ ಇರುವಂತೆ ನೋಡಿಕೊಳ್ಳಬೇಕು” ಎಂದಿದ್ದರು. ಯಾವುದೋ ಮೂಡ್ನಲ್ಲಿದ್ದ ನನಗೆ ಆಗ ಅವರ ಈ ಮಾತಿನ ಅರ್ಥ ಅಷ್ಟಾಗಿ ಹೊಳೆದಿರಲಿಲ್ಲ. ಆದರೀಗ ಅದನ್ನು ನೆನಪಿಸಿಕೊಂಡರೆ ಅರಕಲಿಯವರ ಆ ಮಾತು ಅದೆಷ್ಟು ಅರ್ಥಪೂರ್ಣವೆನಿಸಿ ಹೃದಯ ತುಂಬಿ ಬರುತ್ತದೆ.
ಹಲವಾರು ಸಂಘ ಸಂಸ್ಥೆಗಳ ಹಣಕಾಸು ವ್ಯವಹಾರದಲ್ಲಿ ಪಾತ್ರ ವಹಿಸಬೇಕಾಗಿದ್ದರೂ ಸ್ವಂತದ ಬದುಕನ್ನು ನಿರ್ಮಲವಾಗಿ, ಪಾರದರ್ಶಕವಾಗಿ ಇಟ್ಟುಕೊಂಡಿದ್ದ ಆದರ್ಶ ಸ್ವಯಂಸೇವಕ ಅವರಾಗಿದ್ದರು. ಸಂಘದ ಶಿಬಿರ, ಬೈಠಕ್, ಕಾರ್ಯಕ್ರಮಗಳಿಗೆ ಚಾಮರಾಜಪೇಟೆಯ ಪ್ರಸಿದ್ಧ ಆರ್ಎನ್ಆರ್ ಸಂಸ್ಥೆಯಿಂದ ಶಾಮಿಯಾನ, ಕುರ್ಚಿ, ಪಾತ್ರೆ ಇತ್ಯಾದಿ ಬಾಡಿಗೆಗೆ ತರುವ ಕೆಲಸ ಅವರೇ ನಿರ್ವಹಿಸುತ್ತಿದ್ದರು. ಪ್ರತಿಬಾರಿ ಲೆಕ್ಕಾಚಾರದ ಸಂದರ್ಭದಲ್ಲಿ ಬಾಡಿಗೆ ಮೊತ್ತ ಕಡಿಮೆ ಮಾಡುವಂತೆ ಅರಕಲಿಯವರ ಆಗ್ರಹ ಇರುತ್ತಿತ್ತು. ಒಮ್ಮೆ ಮಾತ್ರ ಅವರು ಬಾಡಿಗೆ ಮೊತ್ತ ಕಡಿಮೆ ಮಾಡುವಂತೆ ಆಗ್ರಹಿಸಲೇ ಇಲ್ಲ. ಆರ್ಎನ್ಆರ್ ಮಾಲೀಕರಿಗೆ ಆಶ್ಚರ್ಯ! ಈ ಬಾರಿ ಯಾಕೆ ನಿಮ್ಮ ಚೌಕಾಶಿ ಇಲ್ಲವಲ್ಲ ಎಂದು ಅವರು ಕೇಳಿದಾಗ, ಅದಕ್ಕೆ ಅವರು ತಣ್ಣಗೆ ಹೇಳಿದ್ದು: “ಪ್ರತಿ ಬಾರಿ ಸಂಘದ ಕಾರ್ಯಕ್ರಮಗಳಿಗೆಂದು ಸಾಮಗ್ರಿಗಳನ್ನು ಬಾಡಿಗೆಗೆ ಪಡೆದಾಗ ಸಂಘಕ್ಕೆ ಹೆಚ್ಚಿನ ಹೊರೆ ಬೀಳದಿರಲಿ ಎಂದು ನಾನು ಹಾಗೆ ಚೌಕಾಸಿ ಮಾಡುತ್ತಿದ್ದೆ. ಆದರೆ ಈ ಬಾರಿ ಸಾಮಗ್ರಿಗಳನ್ನು ಬಾಡಿಗೆಗೆ ಪಡೆದಿರುವುದು ಸಂಘಕ್ಕಲ್ಲ, ನನ್ನ ಮನೆಯ ಕಾರ್ಯಕ್ರಮಕ್ಕೆ. ಹಾಗಾಗಿ ನಾನು ಚೌಕಾಸಿ ಮಾಡಲಾರೆ”.
1975ರ ತುರ್ತು ಪರಿಸ್ಥಿತಿ ಅವಧಿಯಲ್ಲಿ ಅರಕಲಿಯವರು ಬಂಧನಕ್ಕೆ ಒಳಗಾಗಿ 18 ತಿಂಗಳ ಸೆರೆವಾಸವನ್ನು ಅನುಭವಿಸಿದ್ದರು. ಆ ಅವಧಿಯಲ್ಲಿ ಅವರ ಆರ್ಥಿಕ ಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಅವರು ಉದ್ಯೋಗ ನಿರ್ವಹಿಸುತ್ತಿದ್ದ ‘ವಿಕ್ರಮ’ ಪತ್ರಿಕೆಗೂ ಬೀಗ ಮುದ್ರೆ ಬಿದ್ದಿತ್ತು. ಆರಕಲಿಯವರಿಗೆ ನಿಕಟ ಪರಿಚಯವಿದ್ದ ಸುಪ್ರಸಿದ್ಧ ವೈದ್ಯರೊಬ್ಬರು, ತುರ್ತುಪರಿಸ್ಥಿತಿ ಮುಗಿಯುವವರೆಗೂ ಅವರ ಮನೆಯ ಖರ್ಚುವೆಚ್ಚ ಭರಿಸುವುದಾಗಿ ಹೇಳಿದ್ದರು. ಅರಕಲಿ ಅವರ ಬಳಿ ಈ ವಿಷಯ ಪ್ರಸ್ತಾಪಿಸಿದಾಗ ವೈದ್ಯರ ಸಹಕಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ಆದರೆ ಅವರ ಸಹಾಯವನ್ನು ವಿನಯಪೂರ್ವಕವಾಗಿ ನಿರಾಕರಿಸಿದರು. ಅರಕಲಿಯವರ ಈ ನಿರ್ಧಾರ ತಿಳಿದು ಆ ವೈದ್ಯಮಿತ್ರರಿಗೆ ಇವರೊಬ್ಬ ‘ಅಸಾಮಾನ್ಯ ವ್ಯಕ್ತಿ’ ಎನಿಸಿ, ಅರಕಲಿ ಅವರ ಬಗೆಗಿದ್ದ ಗೌರವಾದರ ಇಮ್ಮಡಿಯಾಗಿತ್ತು.
ಕೋಲಾರ ಕಡೆಯ ಪ್ರಾಮಾಣಿಕರಾಗಿದ್ದ ವಿಕ್ರಮ ಏಜೆಂಟರೊಬ್ಬರಿಗೆ ಸಕಾಲದಲ್ಲಿ ವಿಕ್ರಮ ಪತ್ರಿಕೆಯ ಮೊತ್ತ ಪಾವತಿಸಲಾಗಿರಲಿಲ್ಲ. ವಿಕ್ರಮ ಕಚೇರಿಗೆ ಬಂದು “ಈ ತಿಂಗಳು ನನಗೆ ಪಾವತಿಸಲಾಗುತ್ತಿಲ್ಲ” ಎಂದು ವಿನಂತಿಸಿದರು. ತುಂಬಾ ಖಡಕ್ ವ್ಯಕ್ತಿ ಎನಿಸಿದ್ದ ಆಗಿನ ವಿಕ್ರಮ ಪ್ರಸರಣ ಮುಖ್ಯಸ್ಥರು “ಹಣ ಪಾವತಿಸದಿದ್ದರೆ ನಿಮ್ಮ ಏಜೆನ್ಸಿ ರದ್ದಾಗುತ್ತದೆ” ಎಂದು ಎಚ್ಚರಿಸಿದರು. ಏನು ಮಾಡುವುದೆಂದು ತೋಚದೆ, ಆ ಏಜೆಂಟರು ವಿಕ್ರಮ ಕಚೇರಿಯ ಬಾಗಿಲು ದಾಟಿ ಹೊರಬರುತ್ತಿದ್ದರು. ಇವರ ಮಾತುಕತೆ ಕೇಳಿಸಿಕೊಂಡಿದ್ದ, ಅಲ್ಲೇ ಇದ್ದ ಅರಕಲಿಯವರು ತಕ್ಷಣ ಆ ಏಜೆಂಟರ ಬಳಿ ಬಂದು, ಬಾಕಿ ಎಷ್ಟಿದೆ ಎಂದು ವಿಚಾರಿಸಿ, ತಿಳಿದುಕೊಂಡರು. ತಮ್ಮ ಜೇಬಿನಿಂದ ಅಷ್ಟೂ ಹಣ ತೆಗೆದು, “ಇದನ್ನು ಮತ್ತೆ ವಿಕ್ರಮ ಕಚೇರಿಗೆ ಹೋಗಿ ಪಾವತಿಸಿ. ನಿಮ್ಮ ಏಜೆನ್ಸಿ ಉಳಿಸಿಕೊಳ್ಳಿ. ನಾನು ಹಣಕೊಟ್ಟೆನೆಂದು ಮಾತ್ರ ಹೇಳಬೇಡಿ” ಎಂದು ಹೇಳಿ ತಮ್ಮ ಕೆಲಸದಲ್ಲಿ ನಿರತರಾದರು. ಹಣ ಬಾಕಿಯಾದ ಕಾರಣಕ್ಕೆ ಒಬ್ಬ ಪ್ರಾಮಾಣಿಕ ಏಜೆಂಟರನ್ನು ಕಳೆದುಕೊಳ್ಳಬಾರದೆಂಬ ಕಾಳಜಿ ಅವರದಾಗಿತ್ತು. ಅವರ ಲೋಕ ಸಂಗ್ರಹ ವೈಖರಿಗೆ ಇದೊಂದು ಚಿಕ್ಕ ಉದಾಹರಣೆ.
ಅರಕಲಿ ಅವರು ತಾವೇ ಎಲ್ಲ ಕೆಲಸವನ್ನು ಮೈಮೇಲೆಳೆದುಕೊಂಡು ಮಾಡುತ್ತಿರಲಿಲ್ಲ. ಅಂತಹ ಆಸೆಯೂ ಅವರಿಗಿರಲಿಲ್ಲ. ಪ್ರತಿ ಕ್ಷೇತ್ರದ ಕಾರ್ಯಕರ್ತರು ತಮ್ಮ ಬಲದ ಮೇಲೆ ಬೆಳೆಯಬೇಕು. ಅವರೇ ಬೆಳೆದು, ಕಾರ್ಯವನ್ನು ಬೆಳೆಸಿ ಅನುಭವಗಳಿಸಬೇಕು ಎಂಬ ಬಗ್ಗೆ ವಿಶೇಷ ಗಮನ ಅವರದ್ದು. ಕಾರ್ಯಕರ್ತರು ತನ್ನ ಅಪೇಕ್ಷೆಯಂತೆ ಬೆಳೆದು, ಅನುಭವಶಾಲಿಗಳಾದಾಗ ಸಂತಸಪಡುವ ಸರದಿ ಮಾತ್ರ ಅವರದಾಗಿತ್ತು.
ಇಂತಹ ಒಬ್ಬ ಕುಶಲ ಸಂಘಟಕ, ಸಂಘ ಪರಿವಾರದ ಅನರ್ಘ್ಯ ರತ್ನದಂತಹ ಕ್ರಿಯಾಶೀಲ ಕಾರ್ಯಕರ್ತನನ್ನು ಕೊನೆಯ ದಿನಗಳಲ್ಲಿ ಕಾಡಿದ್ದು ಭಯಾನಕವಾದ ಎಲುಬಿನ ಕ್ಯಾನ್ಸರ್ ಕಾಯಿಲೆ. ಶರೀರವನ್ನು ಕೊಂಚ ಅಲುಗಾಡಿಸಿದರೂ ಯಾವುದಾದರೂ ಒಂದು ಎಲುಬು ಮುರಿದು ಹೋಗುವ ದುಸ್ಥಿತಿ. ಆದರೆ ಅವರ ಮನೋಬಲ ಮಾತ್ರ ಅದಮ್ಯವಾಗಿತ್ತು. ಅವರಿಗಾಗಿದ್ದ ಆ ಕಾಯಿಲೆಗೆ ಕಿಮೋಥೆರಪಿ ಎಂಬ ಯಾತನಾಮಯ ಚಿಕಿತ್ಸೆ ಅನಿವಾರ್ಯವಾಗಿತ್ತು. ತಲೆ ಕೂದಲು ಉದುರುವುದು, ಮುಖ ಕಪ್ಪುಗಾಗುವುದು, ಕೊನೆ ಕೊನೆಗೆ ಜೀವನದ ಕುರಿತೇ ಬೇಸರ ಬರುವುದು- ಈ ಚಿಕಿತ್ಸೆಯ ದುಷ್ಪರಿಣಾಮಗಳು. ಆದರೆ ಅರಕಲಿಯವರಿಗೆ ಒಂದೆರಡು ಅಲ್ಲ, ಬರೋಬ್ಬರಿ 110 ಬಾರಿ ಈ ಕಿಮೋಥೆರಪಿ ಕೊಡಲಾಗಿತ್ತು. ಅರಕಲಿಯವರಿಗೆ ಅದೆಷ್ಟು ಯಾತನೆ ಆಗುತ್ತಿತ್ತೋ … ಆದರೆ ಅವರ ಮುಖಭಾವದಲ್ಲಿ ಮಾತ್ರ ಯಾವುದೇ ಬದಲಾವಣೆ ಇರಲಿಲ್ಲ. ತನಗೇನೂ ಆಗಿಯೇ ಇಲ್ಲವೇನೋ ಎಂಬಂತೆ ಎಲ್ಲರೊಂದಿಗೆ ಮಾತುಕತೆ. ಅವರನ್ನು ಪರೀಕ್ಷಿಸುತ್ತಿದ್ದ ಡಾ. ಲಲಿತಾ ಅವರಿಗೆ ಆಶ್ಚರ್ಯದ ಆಘಾತವಾಗಿತ್ತು. ವೈದ್ಯಕೀಯ ಇತಿಹಾಸದಲ್ಲೇ ಇದೊಂದು ಪವಾಡವಾಗಿತ್ತು.
ಸತತ 13 ವರ್ಷಗಳಷ್ಟು ದೀರ್ಘಕಾಲ ಕ್ಯಾನ್ಸರ್ ಕಾಯಿಲೆ ಹೊತ್ತುಕೊಂಡೇ ಬದುಕಿದರು. ಅತ್ತಿತ್ತ ಒಂದಿನಿತೂ ಅಲುಗಾಡದೆ ಮಲಗಿದಲ್ಲೇ ಕಾರ್ಯಕರ್ತರು, ಸ್ವಯಂಸೇವಕರು, ಗಣ್ಯರು, ಆಪ್ತರೊಂದಿಗೆ ಕುಶಲೋಪರಿ ನಡೆಸಿ, ಸೂಕ್ತ ಮಾರ್ಗದರ್ಶನ ಮಾಡಿದರು. ಭೀಷ್ಮ ಪಿತಾಮಹ ಬಾಣಗಳ ಹಾಸಿಗೆಯಲ್ಲಿ ಮಲಗಿ ಪಾಂಡವರಿಗೆ ನೀತಿ ಬೋಧನೆ, ಮಾರ್ಗದರ್ಶನ ಮಾಡಿದ್ದರಂತೆ. ಸಂಘ ಪರಿವಾರದ ಈ ಭೀಷ್ಮ ಪಿತಾಮಹ ಕ್ಯಾನ್ಸರ್ ಹಾಸಿಗೆಯಲ್ಲೇ ಪವಡಿಸಿ, ಕಾರ್ಯಕರ್ತರ ಮನೋಬಲ ಬೆಳೆಸಿದರು.
ಶರೀರ ಅತ್ಯಂತ ದುರ್ಬಲವಾಗಿತ್ತು. ಅಂತಹ ದಾರುಣ ಸ್ಥಿತಿಯಲ್ಲೇ 1992ರಲ್ಲಿ ಮಂಗಳೂರಿನಲ್ಲಿ ನಡೆದ 32 ಸಾವಿರ ಗಣವೇಶಧಾರಿ ಸ್ವಯಂಸೇವಕರ ಬೃಹತ್ ತರುಣ ಸಮಾವೇಶಕ್ಕೆ ಹೋಗಿ ಬಂದಿದ್ದರು. ಶರೀರಕ್ಕಾದ ತೀವ್ರ ಬಳಲಿಕೆ, ಯಾತನೆ, ಸಂಕಟ ಮರೆತು ಸಹಕಾರಿಗಳಿಗೆ ಪ್ರೇರಣೆ ತುಂಬಿದ್ದರು. ಕಹಿ ನುಂಗಿ, ಸಿಹಿ ಹಂಚಿದ ಅಪೂರ್ವ ವ್ಯಕ್ತಿ ಅವರು.
“ಅರಕಲಿಯವರಂತಹ ಪ್ರಾಮಾಣಿಕರು, ವಿಶ್ವಾಸಾರ್ಹರು. ಇನ್ನಿಬ್ಬರು ನನಗೆ ಸಿಕ್ಕರೆ ಇಡೀ ರಾಜ್ಯದ ಚಿತ್ರಣವನ್ನೇ ಬದಲಾಯಿಸಬಲ್ಲೆ” ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರು ಹೆಮ್ಮೆಯಿಂದ ಒಮ್ಮೆ ಹೇಳಿದ್ದರಂತೆ. ವಿವೇಕಾನಂದ ಶಿಲಾಸ್ಮಾರಕ ಸಮಿತಿಯ ಅಧ್ಯಕ್ಷರಾಗಿದ್ದ ಕೆಂಗಲ್ ಅವರ ಮೇಲೆ ಅರಕಲಿ ಅವರು ಬೀರಿದ್ದ ಅದ್ಭುತ ಪ್ರಭಾವ ಅಂತಹದಾಗಿತ್ತು.
