ಅಂಕಣ – ನಗಾರಿ
ಕೋಚಿಂಗ್ ಸೆಂಟರ್ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳು
- ಭೈರೇಗೌಡ ಎಮ್.ಎಸ್., ಎಂಎ ವಿದ್ಯಾರ್ಥಿ, ಕಾಳಿದಾಸ ಮಹಾವಿದ್ಯಾಲಯ, ಬಾದಾಮಿ
ದೇಶಾದ್ಯಂತ ಪ್ರಶ್ನೆಪತ್ರಿಕೆ ಸೋರಿಕೆ, CBSE ಪರೀಕ್ಷಾ ಅಕ್ರಮ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಕುರಿತ ವಿವಾದ ಇತ್ಯಾದಿ ಶಿಕ್ಷಣ ವ್ಯವಸ್ಥೆಯಲ್ಲಿನ ವಿವಾದಗಳು ಇಂದು ನಿನ್ನೆಯದಲ್ಲ.
ಇತ್ತೀಚೆಗೆ ನಡೆದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯೂ ದೇಶದಾದ್ಯಂತ ಚರ್ಚೆಗೆ ಗ್ರಾಸವಾಯಿತು. ಈ ಸಂಬಂಧಿತವಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ವಿರುದ್ಧ ತೀವ್ರವಾದ ಆಕ್ರೋಶ ವ್ಯಕ್ತವಾಗಿ, ಬಹುತೇಕ ವಿದ್ಯಾರ್ಥಿ ಸಂಘಟನೆಗಳು ಅವರ ರಾಜಿನಾಮೆ ಕೇಳಿದವು. ಇನ್ನೊಂದು ಕಡೆ ಬಿಹಾರದಲ್ಲಿರುವ ಸ್ಪರ್ಧಾತ್ಮಕ ಪರೀಕ್ಷೆಗಳ ಅತ್ಯಂತ ಪ್ರಭಾವಿ ಕೋಚಿಂಗ್ ಸೆಂಟರ್ಗಳಲ್ಲಿ ಒಂದಾದ ‘ಖಾನ್ ಗ್ಲೋಬಲ್ ಸ್ಟಡೀಸ್’ ಮೇಲೆ ಗುಂಡಿನ ದಾಳಿ ನಡೆಯಿತು. ಅದರ ಕುರಿತಾಗಿಯೂ ತನಿಖೆ ನಡೆಯುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಸ್ಪರ್ಧಾತ್ಮಕ ಪರೀಕ್ಷೆಗಳು, ಕೋಚಿಂಗ್ ಸೆಂಟರ್ ಮೇಲಿನ ದಾಳಿ, ಪ್ರಶ್ನೆ ಪತ್ರಿಕೆಗಳ ಸೋರಿಕೆ ಇವೆಲ್ಲದರ ಹಿಂದೆ ವಿವಿಧ ಆಯಾಮಗಳಿರುವಂತೆ ಕಂಡುಬರುತ್ತಿದೆ.
ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ ಪರೀಕ್ಷಾ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆಗಳು ಮತ್ತು ವ್ಯವಸ್ಥೆಯಲ್ಲಿರುವ ದೋಷಗಳ ಕುರಿತು ಪ್ರಶ್ನಿಸುವುದು ಹಾಗೂ ತಪ್ಪಿತಸ್ಥರನ್ನು ಕಾನೂನಿನ ಮುಂದೆ ತರುವುದು ಖಂಡಿತವಾಗಿಯೂ ಅಗತ್ಯ. ಆದರೆ ಅಂತಹ ಘಟನೆಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಂಡು ಸಮಾಜದಲ್ಲಿ ಅಶಾಂತಿ ಅಥವಾ ದ್ವೇಷದ ವಾತಾವರಣ ಸೃಷ್ಟಿಸುವುದು ಯಾವುದೇ ರೀತಿಯಲ್ಲೂ ಸಮರ್ಥನೀಯವಲ್ಲ.
ಇಂದಿನ ಪರಿಸ್ಥಿತಿಯಲ್ಲಿ ನಾವು ಕೇವಲ ಪರೀಕ್ಷಾ ಅಕ್ರಮಗಳ ಬಗ್ಗೆ ಮಾತ್ರವಲ್ಲ, ನಮ್ಮ ಶಿಕ್ಷಣ ವ್ಯವಸ್ಥೆಯ ಮೂಲ ಉದ್ದೇಶದ ಬಗ್ಗೆಯೂ ಗಂಭೀರವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಶಿಕ್ಷಣವೆಂದರೆ ಕೇವಲ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸುವ ಸಾಧನವಾಗಿರದೆ, ವಿದ್ಯಾರ್ಥಿಯ ಸರ್ವಾಂಗೀಣ ವ್ಯಕ್ತಿತ್ವ ವಿಕಾಸಕ್ಕೆ ಭದ್ರ ಅಡಿಪಾಯವಾಗಬೇಕು. ಅದು ಚಿಂತನಶೀಲತೆ, ತಾರ್ಕಿಕತೆ, ಸಮಸ್ಯೆ ಪರಿಹರಿಸುವ ಸಾಮರ್ಥ್ಯ, ಜೀವನ ಕೌಶಲ್ಯಗಳು ಮತ್ತು ಉತ್ತಮ ಮೌಲ್ಯಗಳನ್ನು ಬೆಳೆಸುವ ಪ್ರಕ್ರಿಯೆಯಾಗಿರಬೇಕು. ಪರೀಕ್ಷೆಗಳು ಜ್ಞಾನ ಮತ್ತು ಕೌಶಲ್ಯಗಳನ್ನು ಅಳೆಯುವ ಸಾಧನವಾಗಿರಬೇಕೇ ಹೊರತು ಶೈಕ್ಷಣಿಕ ಪಠ್ಯಕ್ಕಿರುವ ಗುರಿಯಾಗಬಾರದು.
ಒಬ್ಬ ವಿದ್ಯಾರ್ಥಿಯ ಯಶಸ್ಸನ್ನು ಕೇವಲ ಅಂಕಗಳ ಆಧಾರದ ಮೇಲೆ ನಿರ್ಧರಿಸದೆ, ಅವನ ವೈಯಕ್ತಿಕ ಗುರಿಗಳು, ಆಸಕ್ತಿಗಳು ಮತ್ತು ಜೀವನದಲ್ಲಿ ಸಾಧಿಸಿರುವ ಪ್ರಗತಿಯ ಆಧಾರದ ಮೇಲೆ ಮೌಲ್ಯಮಾಪನ ಮಾಡಬೇಕಾಗಿದೆ. ದುರದೃಷ್ಟವಶಾತ್, ಇಂದಿನ ಶಿಕ್ಷಣ ವ್ಯವಸ್ಥೆ ಇನ್ನೂ ಬಹುಮಟ್ಟಿಗೆ ಬ್ರಿಟಿಷರ ಮೆಕಾಲೆ ಶಿಕ್ಷಣ ಮಾದರಿಯ ಪ್ರಭಾವದಲ್ಲೇ ಉಳಿದಿದ್ದು, ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ವಿಶ್ಲೇಷಣಾತ್ಮಕ ಚಿಂತನೆ, ಭಾವನಾತ್ಮಕ ಪ್ರಬುದ್ಧತೆ, ವೃತ್ತಿಪರ ಕೌಶಲ್ಯಗಳು, ಸಾಮಾಜಿಕ ಹೊಣೆಗಾರಿಕೆ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸುವ ಬದಲು, ಪಾಠಗಳನ್ನು ಕಂಠಪಾಠ ಮಾಡಿ ಪರೀಕ್ಷೆಯಲ್ಲಿ ಪುನರಾವರ್ತಿಸುವ ಸಂಸ್ಕೃತಿಯನ್ನು ಉತ್ತೇಜಿಸುತ್ತಿದೆ. ಇದರ ಪರಿಣಾಮವಾಗಿ ಶಿಕ್ಷಣದ ನಿಜವಾದ ಉದ್ದೇಶ ಮರೆಯಾಗುತ್ತಿದ್ದು, ಅಂಕಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳೇ ಶಿಕ್ಷಣದ ಕೇಂದ್ರಬಿಂದುವಾಗಿ ಪರಿಣಮಿಸಿವೆ. ಇದೇ ಇಂದಿನ ಅನೇಕ ಸಮಸ್ಯೆಗಳ ಮೂಲ ಕಾರಣವೆಂದರೂ ತಪ್ಪಾಗದು.
ಒಂದು ಕಾಲದಲ್ಲಿ ಶಾಲೆಗಳಲ್ಲಿ ಶಿಕ್ಷಕರು ಎಲ್ಲ ವಿದ್ಯಾರ್ಥಿಗಳಿಗೂ ಒಟ್ಟಾಗಿ ಬೋಧಿಸುತ್ತಿದ್ದಾಗ, ಕೆಲ ವಿದ್ಯಾರ್ಥಿಗಳಿಗೆ ವಿಷಯಗಳು ಸಂಪೂರ್ಣವಾಗಿ ಅರ್ಥವಾಗದ ಕಾರಣ ಪೋಷಕರು ವೈಯಕ್ತಿಕವಾಗಿ ಮನೆಪಾಠ ಅಥವಾ ಖಾಸಗಿ ಬೋಧನೆಯ ವ್ಯವಸ್ಥೆ ಮಾಡುತ್ತಿದ್ದರು. ಕಾಲಕ್ರಮೇಣ ಈ ವ್ಯವಸ್ಥೆಯೇ ವಾಣಿಜ್ಯೀಕರಣಗೊಂಡು, ಇಂದು ಬಹುಬಿಲಿಯನ್ ರೂಪಾಯಿಗಳ ಕೋಚಿಂಗ್ ಉದ್ಯಮವಾಗಿ ಬೆಳೆದಿರುವುದು ವಿಷಾದನೀಯ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸುವ ಒತ್ತಡ ಮತ್ತು ಉತ್ತಮ ಶ್ರೇಯಾಂಕ ಪಡೆಯುವ ಪೈಪೋಟಿಯೇ ಈ ಪರಿಸ್ಥಿತಿಗೆ ಪ್ರಮುಖ ಕಾರಣವಾಗಿದೆ. ಪರಿಣಾಮವಾಗಿ ದೇಶಾದ್ಯಂತ ನಾಯಿಕೊಡೆಗಳಂತೆ ಕೋಚಿಂಗ್ ಕೇಂದ್ರಗಳು ತಲೆ ಎತ್ತಿದ್ದು, ಶಿಕ್ಷಣವು ಜ್ಞಾನಾರ್ಜನೆಯ ಪ್ರಕ್ರಿಯೆಯಾಗಿರದೆ, ಅಂಕಗಳ ಸ್ಪರ್ಧೆಯಾಗಿ ರೂಪಾಂತರಗೊಂಡಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.
ಇದರೊಂದಿಗೆ ಪ್ರಶ್ನೆಪತ್ರಿಕೆ ಸೋರಿಕೆ, ಅಕ್ರಮ ಮೌಲ್ಯಮಾಪನ, ಅಸಮರ್ಪಕ ಪರೀಕ್ಷಾ ಪದ್ಧತಿಗಳು ನಡೆಯುತ್ತಿರುವುದು ಆತಂಕಕಾರಿ ಸಂಗತಿ. ಪರೀಕ್ಷಾ ಅಕ್ರಮಗಳ ವಿರುದ್ಧದ ಹೋರಾಟವು ಕೇವಲ ವ್ಯಕ್ತಿಗಳು ಅಥವಾ ಸರ್ಕಾರಗಳ ವಿರುದ್ಧದ ಹೋರಾಟವಾಗಿರದೆ, ಶಿಕ್ಷಣ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ, ಗುಣಮಟ್ಟಯುತ ಮತ್ತು ವಿದ್ಯಾರ್ಥಿ ಕೇಂದ್ರಿತವಾಗಿಸುವ ದಿಕ್ಕಿನಲ್ಲಿ ಸಾಗಬೇಕಾಗಿದೆ. ಶಿಕ್ಷಣದಲ್ಲಿ ಭಾರತೀಯತೆಯನ್ನು ಎತ್ತಿಹಿಡಿಯುವ ಸಲುವಾಗಿ 2026ರ ಜುಲೈ-ಆಗಸ್ಟ್ ಅವಧಿಯಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಪ್ರಮುಖ ನಿರ್ಧಾರಗಳು ಸಂಸತ್ತಿನಲ್ಲಿ ಚರ್ಚೆಗೆ ಬರಲಿವೆ.
- NCERT ಹೊಸ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳು: 9ರಿಂದ 12ನೇ ತರಗತಿಯವರೆಗಿನ ಹೊಸ ಪಠ್ಯಪುಸ್ತಕಗಳಲ್ಲಿ ಭಾರತೀಯ ಜ್ಞಾನ ಪರಂಪರೆ, ಸೂತ್ರಗಳು ಹಾಗೂ ಭಾರತೀಯ ಗಣಿತದ ಕೊಡುಗೆಗಳ ಕುರಿತು ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇತಿಹಾಸ ಪಠ್ಯಕ್ರಮದಲ್ಲಿಯೂ ಸಿಂಧು-ಸರಸ್ವತಿ ನಾಗರಿಕತೆ, ಭಾರತೀಯ ನಾಗರಿಕತೆಯ ಮೂಲಗಳು ಹಾಗೂ ಭಾರತೀಯ ದೃಷ್ಟಿಕೋನಕ್ಕೆ ಹೆಚ್ಚು ಸ್ಥಾನ ನೀಡುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಚರ್ಚೆಗಳು ಕೇಳಿಬರುತ್ತಿವೆ.
- ಮೂರು ಭಾಷಾ ನೀತಿ: CBSE ಶಾಲೆಗಳಲ್ಲಿ 9ನೇ ತರಗತಿಯಿಂದ ಮೂರು ಭಾಷೆಗಳ ಅಧ್ಯಯನಕ್ಕೆ ಹೆಚ್ಚಿನ ಒತ್ತು ನೀಡುವ ಪ್ರಸ್ತಾವನೆಗಳ ಬಗ್ಗೆ ಚರ್ಚೆಗಳು ನಡೆದಿವೆ. ಭಾರತೀಯ ಭಾಷೆಗಳ ಬಳಕೆ ಮತ್ತು ಪ್ರೋತ್ಸಾಹದ ಉದ್ದೇಶದಿಂದ ಈ ಕ್ರಮಗಳನ್ನು ಪರಿಗಣಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
- NTA ಸುಧಾರಣೆಗಳು: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ಹೆಚ್ಚಿಸುವುದು, ಪರೀಕ್ಷಾ ಕೇಂದ್ರಗಳ ವಿಕೇಂದ್ರೀಕರಣ, ತಾಂತ್ರಿಕ ಭದ್ರತೆಯನ್ನು ಬಲಪಡಿಸುವುದು ಹಾಗೂ ಅಕ್ರಮಗಳಿಗೆ ಅವಕಾಶ ಕಡಿಮೆ ಮಾಡುವ ಉದ್ದೇಶದಿಂದ ಹಲವು ಸುಧಾರಣೆಗಳ ಪ್ರಸ್ತಾವನೆಗಳು ಚರ್ಚೆಯಲ್ಲಿವೆ.
ಈ ಸುಧಾರಣೆಗಳು ಜಾರಿಗೆ ಬಂದರೆ ಶಿಕ್ಷಣ ಕ್ಷೇತ್ರದ ಅನೇಕ ಭಾಗಗಳಲ್ಲಿ ಪರಿಣಾಮ ಉಂಟಾಗಬಹುದು.
● ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳು
● ವಿದೇಶಿ ವಿಶ್ವವಿದ್ಯಾನಿಲಯಗಳ ಪ್ರವೇಶ ವ್ಯವಸ್ಥೆಗಳು
● ಖಾಸಗಿ ಕೋಚಿಂಗ್ ಉದ್ಯಮ
● ಪರೀಕ್ಷಾ ತರಬೇತಿ ಮಾರುಕಟ್ಟೆ
● ಶಿಕ್ಷಣ ನೀತಿಗಳ ಸುತ್ತ ರೂಪುಗೊಂಡಿರುವ ವಿವಿಧ ಚಿಂತನಾ ಗುಂಪುಗಳು
ಇವುಗಳೆಲ್ಲವೂ ತಮ್ಮದೇ ಆದ ಹಿತಾಸಕ್ತಿಗಳನ್ನು ಹೊಂದಿದ್ದು, ಶಿಕ್ಷಣದಲ್ಲಿನ ಸುಧಾರಣೆಗಳ ಕುರಿತ ಚರ್ಚೆ ಕೇವಲ ಶೈಕ್ಷಣಿಕ ವಿಷಯವಾಗಿರದೆ, ರಾಜಕೀಯ, ಆರ್ಥಿಕ ಮತ್ತು ಸೈದ್ಧಾಂತಿಕ ಆಯಾಮಗಳನ್ನೂ ಒಳಗೊಂಡಿದೆ.
ಇಷ್ಟೆಲ್ಲಾ ಭದ್ರತೆಯ ನಡುವೆಯೂ ಕಳೆದ ವರ್ಷ ಮತ್ತು ಈ ವರ್ಷವೂ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಭಾರತದ ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ನಡೆದ ಘಟನೆಗಳು ಝೆನ್ ಜೀ ವಿದ್ಯಾರ್ಥಿಗಳು ಅಲ್ಲಿನ ಸರ್ಕಾರದ ವಿರುದ್ಧ ದಂಗೆ ಎದ್ದು ಸರ್ಕಾರವನ್ನು ಕೈವಶ ಮಾಡಿಕೊಳ್ಳುವಂತೆ ಮಾಡಿತು. ನಮ್ಮ ದೇಶದಲ್ಲೂ ವಿದ್ಯಾರ್ಥಿಗಳನ್ನೇ ಗುರಿಯಾಗಿಟ್ಟುಕೊಂಡು ಈ ರೀತಿಯ ಕುಕೃತ್ಯಗಳನ್ನು ಮಾಡಿಸುತ್ತಿರುವುದು ದೇಶದ ಹಿತದೃಷ್ಟಿಯಿಂದ ಮಾರಕವಾಗಿದೆ.
ಇಂಗ್ಲಿಷ್ ಪ್ರಾಬಲ್ಯದ ಪರೀಕ್ಷೆಗಳನ್ನು ವಿಸರ್ಜಿಸಿ, NTA ವಿಕೇಂದ್ರೀಕರಿಸಿ, ಭಾರತೀಯ ಭಾಷೆಗಳನ್ನು ವಿಸ್ತರಿಸಿದಾಗ ಈ ಎಲ್ಲಾ ಶಿಕ್ಷಣ ಸಂಸ್ಥೆಗಳು ಮತ್ತು ಕೋಚಿಂಗ್ ಸೆಂಟರ್ಗಳ ಆರ್ಥಿಕತೆಯು ಅಲುಗಾಡಲು ಪ್ರಾರಂಭಿಸುತ್ತದೆ. ಭಾರತದ ಮಕ್ಕಳಿಗೆ ತಮ್ಮದೇ ಆದ ಇತಿಹಾಸವನ್ನು ನಿಖರವಾಗಿ ಕಲಿಸಿಕೊಟ್ಟಲ್ಲಿ, ಶೈಕ್ಷಣಿಕವಾಗಿ ಮುಂದುವರಿದ ದೇಶಗಳ ನಡುವೆ ಭಾರತ ಯಾವುದಕ್ಕೂ ಕಡಿಮೆಯಾಗದೇ ಇದ್ದಲ್ಲಿ ಈ ಎಲ್ಲಾ ಸಂಸ್ಥೆಗಳೂ ಹೊಸ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಅದೇ ರೀತಿಯಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಿ ವಿಶ್ವವಿದ್ಯಾನಿಲಯಗಳಿಗೆ ಹೋಗುವುದೂ ತಪ್ಪುತ್ತದೆ. ನೀಟ್ ವಿರುದ್ಧ ಹೋರಾಟ ತೀವ್ರತರವಾಗಿ ಆರಂಭವಾಗಿದ್ದು ಭಾರತಕ್ಕಿಂತಲೂ ದೂರದ ಬೋಸ್ಟನ್ ಮತ್ತು ಜರ್ಮನಿಯಲ್ಲಿ ಕುಳಿತಂತಹ ವ್ಯಕ್ತಿಗಳಿಂದ ಎಂಬುದನ್ನು ಅರಿತಲ್ಲಿ, ಈ ಸಮಸ್ಯೆಯ ಗಂಭೀರತೆ ಅರಿವಾಗುತ್ತದೆ.
ಸುಪ್ರೀಂ ಕೋಟರ್ಸ್ ಮುಖ್ಯನ್ಯಾಯಮೂರ್ತಿ ಬಾಯಿಮಾತಿನಲ್ಲಿ ಹೇಳಿದ ಜಿರಳೆಯನ್ನೇ ಇಟ್ಟುಕೊಂಡು CJP ಕಟ್ಟಿ, ಚಾಟ್ ಬಾಟ್ಗಳನ್ನು ಬಳಸಿಕೊಂಡು ರಾತ್ರೋರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಕೋಟ್ಯಂತರ ಸದಸ್ಯರನ್ನು ಪಡೆದುಕೊಂಡಿದ್ದನ್ನೂ ಗಮನಿಸಬೇಕಾಗಿದೆ.
ಇನ್ನು ಬಿಹಾರದ ಪಾಟ್ನಾದಲ್ಲಿ ನೆಲೆಸಿರುವ ಅತ್ಯಂತ ಜನಪ್ರಿಯ ಶಿಕ್ಷಣತಜ್ಞ ಮತ್ತು ಸುಮಾರು 2 ಕೋಟಿ ರೂ.ಗೂ ಅಧಿಕ ಯೂಟ್ಯೂಬ್ ಫಾಲೋವರ್ಸ್ ಅನ್ನು ಹೊಂದಿರುವ ಫೈಸಲ್ ಖಾನ್, ಎಲ್ಲರ ಪ್ರೀತಿಯ ಖಾನ್ ಸರ್ ಅವರ ಪ್ರಸಂಗ ಕೋಚಿಂಗ್ ದಂಧೆಯ ಮತ್ತೊಂದು ಕರಾಳ ಮುಖವನ್ನು ಪರಿಚಯಿಸುತ್ತದೆ. ಉತ್ತರ ಪ್ರದೇಶದ ಡಿಯೋರಿಯಾದಲ್ಲಿ 1993ರಲ್ಲಿ ಜನಿಸಿದ ಫೈಸಲ್ ಖಾನ್ ಬಿ.ಎಸ್ಸಿ ಮತ್ತು ಭೂಗೋಳದಲ್ಲಿ ಎಂ.ಎ ಪದವಿಯನ್ನು ಪಡೆದು ಕೆಲವು ವೃತ್ತಿಪರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಮ್ಮ ಅದೃಷ್ಟವನ್ನು ಪರೀಕ್ಷಿಸಿ ಅದರಲ್ಲಿ ಸಫಲರಾಗದೇ ಹೋದಾಗ ಬಿಹಾರದ ಪಾಟ್ನಾದಲ್ಲಿ ಕೇವಲ ಆರು ವಿದ್ಯಾರ್ಥಿಗಳೊಂದಿಗೆ 2010ರಲ್ಲಿ ‘ಖಾನ್ ಜಿಎಸ್ ಸಂಶೋಧನಾ ಕೇಂದ್ರ’ ಎಂಬ ತಮ್ಮ ತರಬೇತಿ ಸಂಸ್ಥೆಯನ್ನು ಔಪಚಾರಿಕವಾಗಿ ಸ್ಥಾಪಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೈಗೆಟುಕುವ ಬೆಲೆಯಲ್ಲಿ ತರಬೇತಿಯನ್ನು ನೀಡುವ ಬೋಧನಾ ವೃತ್ತಿಯನ್ನು ಪ್ರಾರಂಭಿಸಿದರು.
ಹಿಂದಿಯಲ್ಲಿ ಸಂಕೀರ್ಣ ವಿಷಯಗಳನ್ನು ವಿಭಜಿಸುವ ಅವರ ವಿಶಿಷ್ಟ, ಹಾಸ್ಯಮಯ ಮತ್ತು ಸಾಪೇಕ್ಷ ವಿಧಾನದಿಂದಾಗಿ ಅವರಲ್ಲಿ ಕಲಿತ ಅನೇಕರು ಸ್ಪರ್ಥಾತ್ಮಕ ಪರೀಕ್ಷೆಯಲ್ಲಿ ಉತ್ತಮವಾದ ಅಂಕಗಳನ್ನು ಪಡೆದು ಉನ್ನತ ಮಟ್ಟದ ಸರ್ಕಾರೀ ಅಧಿಕಾರಿಗಳಾಗುತ್ತಿದ್ದಂತೆಯೇ ಬಿಹಾರದಾದ್ಯಂತ ಭಾರಿ ಜನಪ್ರಿಯತೆಯನ್ನು ಗಳಿಸಿದ ಪರಿಣಾಮ ದೇಶಾದ್ಯಂತ ಇರುವ ವಿದ್ಯಾರ್ಥಿಗಳನ್ನು ತಲುಪಲು ತಮ್ಮ ಅತ್ಯಂತ ಯಶಸ್ವಿ ಯೂಟ್ಯೂಬ್ ಚಾನೆಲ್ ಪ್ರಾರಂಭಿಸಿ, ಆರಂಭದಲ್ಲಿ ಬಿಹಾರ ಪೊಲೀಸ್ನಂತಹ ಸ್ಥಳೀಯ ನೇಮಕಾತಿ ಪರೀಕ್ಷೆಗಳಿಗೆ ಭೌಗೋಳಿಕತೆ ಮತ್ತು ಸಾಮಾನ್ಯ ಅಧ್ಯಯನದ ಬಗ್ಗೆ ಪಾಠ ಮಾಡುತ್ತಿದ್ದವರು ನಂತರ ತಮ್ಮ ಖಾನ್ ಜಿಎಸ್ ಸಂಶೋಧನಾ ಕೇಂದ್ರದ ಮೂಲಕ ಯುಪಿಎಸ್ಸಿ, ಎಸ್ಎಸ್ಸಿ, ರೈಲ್ವೆ, ಎನ್ಡಿಎ ಮತ್ತು ರಕ್ಷಣಾ ಸೇರಿದಂತೆ ಬಹುತೇಕ ಪ್ರಮುಖ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವ್ಯಾಪಕ ಶ್ರೇಣಿಯ ವಿಷಯಗಳನ್ನು ಕಲಿಸುತ್ತಿದ್ದಾರೆ.
ಇತ್ತೀಚೆಗೆ ಬಿಹಾರ ಸರ್ಕಾರ ತನ್ನ ಪೊಲೀಸ್ ಇಲಾಖೆಯ 16000 ಜನರನ್ನು ಆಯ್ಕೆಮಾಡಿಕೊಂಡಾಗ, ಅಲ್ಲಿ ಆಯ್ಕೆಯಾದ ಬಹುತೇಕರು ತಮ್ಮ ಕೋಚಿಂಗ್ ಸೆಂಟರಿನವರು ಎಂದು ಖಾನ್ ಸರ್ ಪತ್ರಿಕಾ ಪ್ರಕಟಣೆ ನೀಡಿದ್ದರ ವಿರುದ್ಧ ಅವರ ಪ್ರತಿಸ್ಪರ್ಧಿ ಕೋಚಿಂಗ್ ಸೆಂಟರ್ ಆಕ್ಷೇಪ ಎತ್ತಿದ್ದು, ಇದೇ ವಿಷಯದ ಕುರಿತಾಗಿ ಜೂನ್ 2ರಂದು ಪಾಟ್ನಾದ ಮುಸಲ್ಲಾಪುರ್ ಹ್ಯಾಟ್ ಪ್ರದೇಶದಲ್ಲಿರುವ ಖಾನ್ ಅವರ ಕೋಚಿಂಗ್ ಇನ್ಸ್ಟಿಟ್ಯೂಟ್ ಹೊರಗೆ ಸುಮಾರು 15-20 ಜನರ ಗುಂಪಿನೊಂದಿಗೆ ಖಾನ್ ಸರ್ ಮತ್ತು ಅವರ ಕೋಚಿಂಗ್ ಇನ್ಸ್ಟಿಟ್ಯೂಟ್ ನ ಸಿಬ್ಬಂದಿ ನಡುವೆ ಕಲ್ಲು ತೂರಾಟ ಮತ್ತು ಘರ್ಷಣೆ ನಡೆಯಿತು.
ಈ ಕುರಿತಾಗಿ ಖಾನ್ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ದೂರಿನಲ್ಲಿ, ಅವರ ಪ್ರತಿಸ್ಪರ್ಧಿ ಕೋಚಿಂಗ್ ಸೆಂಟರ್ಗೆ ಸೇರಿದ ಗುಂಪು ಖಾನ್ ಅವರ ಸಿಬ್ಬಂದಿ – ಚುನ್ ಚುನ್ ಕುಮಾರ್ ಅವರನ್ನು ಕ್ರೂರವಾಗಿ ಥಳಿಸಿದ್ದಾರೆ ಎಂದು ಆರೋಪಿಸಿದ್ದ ಪರಿಣಾಮ ಖಾನ್ ಪ್ರತಿಸ್ಪರ್ಧಿ ಕೋಚಿಂಗ್ ಸೆಂಟರ್ನ ಮಾಲಿಕ ಮತ್ತು ಕೆಲವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಇಂದಿನ ಆಧುನಿಕ ಕಾಲದಲ್ಲಿ ಸುಳ್ಳನ್ನೇ ಸತ್ಯವಾಗಿಸಲಾರದು ಎನ್ನುವಂತೆ ಈ ಘಟನೆಯ ಕುರಿತಾಗಿ ವೈರಲ್ ಆದ 38 ಸೆಕೆಂಡ್ಗಳ ವಿಡಿಯೋದಲ್ಲಿ ಖಾನ್ ಅವರೇ ತಮ್ಮ ಅಂಗರಕ್ಷಕರಿಗೆ ಗುಂಡಿನ ದಾಳಿಯನ್ನು ನಡೆಸಿ, ಮುಂದಿನದನ್ನು ತಾನು ನೋಡಿಕೊಳ್ಳುತ್ತೇನೆ ಎಂದು ಹೇಳಿರುವುದು ಸ್ಪಷ್ಟವಾಗಿ ಕಾಣಿಸುತ್ತಿದ್ದರಿಂದ, ಪಾಟ್ನಾ ಪೊಲೀಸರು ಖಾನ್ ಮತ್ತು ಇತರರ ವಿರುದ್ಧ ಕೊಲೆ ಯತ್ನ ಮತ್ತು ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ, ಅವರ ಸಿಬ್ಬಂದಿಯನ್ನು ಬಂಧಿಸುವುದು ಸೇರಿದಂತೆ ಗಂಭೀರ ಆರೋಪಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಬಿಹಾರದಲ್ಲಿ ಈ ರೀತಿಯಾದ ಕೋಚಿಂಗ್ ಸಂಸ್ಥೆಗಳ ನಡುವಿನ ಘರ್ಷಣೆಯನ್ನು ತಡೆಗಟ್ಟಲು ಬಿಹಾರ ಸರ್ಕಾರವು ಹೊಸ ನೀತಿಯನ್ನು ರೂಪಿಸಲು ಮುಂದಾಗಿದ್ದ ವೇಳೆಯಲ್ಲಿ ಇಂತಹ ಘಟನೆ ನಡೆದಿದ್ದು, ಶಿಕ್ಷಣ ಕಲಿಸಬೇಕಾದ ಸಂಸ್ಥೆಗಳೇ ಹೀಗೆ ಹಿಂಸೆಗೆ ಇಳಿದಲ್ಲಿ ಅಲ್ಲಿನ ಶಿಕ್ಷಣ ವ್ಯವಸ್ಥೆ ಹೇಗಿರಬಹುದು ಎಂಬ ಪ್ರಶ್ನೆ ಸಹಜವಾಗಿ ಎಲ್ಲರಲ್ಲೂ ಮೂಡುತ್ತದೆ.
ಪ್ರಶ್ನೆಪತ್ರಿಕೆ ಸೋರಿಕೆ, ಪರೀಕ್ಷಾ ಅಕ್ರಮಗಳು ಅಥವಾ ಭ್ರಷ್ಟಾಚಾರ ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ. ಆದರೆ ಪ್ರತಿಯೊಂದು ಘಟನೆಯನ್ನು ರಾಜಕೀಯ ಕಣ್ಣಿನಿಂದ ಮಾತ್ರ ನೋಡುವುದೂ ಸರಿಯಲ್ಲ. ಹಾಗೆಯೇ ಎಲ್ಲವನ್ನೂ ಕೇವಲ ಆಡಳಿತಾತ್ಮಕ ವೈಫಲ್ಯ ಎಂದು ತಳ್ಳಿಹಾಕುವುದೂ ಸಮಂಜಸವಲ್ಲ. ಪರೀಕ್ಷಾ ವ್ಯವಸ್ಥೆಯಲ್ಲಿ ತಂತ್ರಜ್ಞಾನ, ಪಾರದರ್ಶಕತೆ ಮತ್ತು ಜವಾಬ್ದಾರಿತನವನ್ನು ಹೆಚ್ಚಿಸುವ ಮೂಲಕವೇ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು.
ಯಾವುದೇ ವ್ಯಕ್ತಿ, ಪಕ್ಷ ಅಥವಾ ಸಿದ್ಧಾಂತಕ್ಕಿಂತ ದೇಶದ ಭವಿಷ್ಯ ಮುಖ್ಯ. ಇಂದಿನ ವಿದ್ಯಾರ್ಥಿಗಳೇ ನಾಳಿನ ಪ್ರಜೆಗಳು. ಆದ್ದರಿಂದ ಶಿಕ್ಷಣ ವ್ಯವಸ್ಥೆಯ ಉದ್ದೇಶ ವಿದ್ಯಾರ್ಥಿಗಳಲ್ಲಿ ಜ್ಞಾನ, ಕೌಶಲ್ಯ, ಆತ್ಮವಿಶ್ವಾಸ ಮತ್ತು ರಾಷ್ಟ್ರದ ಬಗ್ಗೆ ಸಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸುವುದಾಗಿರಬೇಕು. ಶಿಕ್ಷಣವು ವ್ಯಾಪಾರ, ರಾಜಕೀಯ ಅಥವಾ ಸೈದ್ಧಾಂತಿಕ ಸಂಘರ್ಷಗಳ ಸಾಧನವಾಗದೆ, ಸಮಾಜ ನಿರ್ಮಾಣದ ಶಕ್ತಿಯಾಗಿ ಉಳಿಯಬೇಕು. ಆಗ ಮಾತ್ರ ಭಾರತವು ಜ್ಞಾನ, ಸಂಶೋಧನೆ ಮತ್ತು ಮಾನವ ಸಂಪನ್ಮೂಲಗಳ ಕ್ಷೇತ್ರದಲ್ಲಿ ವಿಶ್ವದ ಮುಂಚೂಣಿಯ ರಾಷ್ಟ್ರವಾಗಿ ಹೊರಹೊಮ್ಮಲು ಸಾಧ್ಯ.
