ರಾಷ್ಟ್ರ ಸೇವಿಕಾ ಸಮಿತಿಯ ವಿಜಯದಶಮಿ ಉತ್ಸವ ಹಾಗೂ ಶಸ್ತ್ರಪೂಜೆಯಲ್ಲಿ ಶಕ್ತಿ ಪ್ರದರ್ಶನ
ನಾಗಪುರ: ಮಹಿಳೆಯರು ತಮ್ಮ ಆಂತರಿಕ ಶಕ್ತಿಯನ್ನು ಗುರುತಿಸಿಕೊಂಡು ಅದನ್ನು ಸಮಾಜದ ಒಳಿತಿಗಾಗಿ ಬಳಸಿಕೊಳ್ಳಬೇಕು. ಹಾಗೆಯೇ ಯುವಜನರ ವಿಚಾರ ಹಾಗೂ ಆಚರಣೆಗಳಲ್ಲಿ ಸಕಾರಾತ್ಮಕ ಬದಲಾವಣೆ ತಂದು, ಅವರನ್ನು ಭಾರತೀಯ ಜೀವನ ಮೌಲ್ಯಗಳ ಆಧಾರದ ಮೇಲೆ ವಿಶ್ವ ಕಲ್ಯಾಣದ ಹಾದಿಯಲ್ಲಿ ಮುನ್ನಡೆಸುವತ್ತ ನಾವು ಶ್ರಮಿಸಬೇಕಾಗಿದೆ ಎಂದು ರಾಷ್ಟ್ರ ಸೇವಿಕಾ ಸಮಿತಿಯ ವಂದನೀಯ ಪ್ರಮುಖ ಸಂಚಾಲಿಕಾ ಮಾ. ಶಾಂತಕ್ಕ ಜಿ ತಿಳಿಸಿದರು. ಅವರು ರಾಷ್ಟ್ರ ಸೇವಿಕಾ ಸಮಿತಿ ನಾಗಪುರ ಮಹಾನಗರದ ಶಸ್ತ್ರಪೂಜೆ ಹಾಗೂ ವಿಜಯದಶಮಿ ಕಾರ್ಯಕ್ರಮದ ಪ್ರಸಂಗದಲ್ಲಿ ಮಾತನಾಡುತ್ತಿದ್ದರು.
ಮುಂದಿನ ದಶಕದಲ್ಲಿ ಸಮಿತಿಯು ಕೈಗೊಳ್ಳಲಿರುವ ಕಾರ್ಯಗಳ ಕುರಿತು ಅವರು ಬೆಳಕು ಚೆಲ್ಲಿದರು. ಸಾತ್ವಿಕ ಆಹಾರವು ದೇಹವನ್ನು ಹೇಗೆ ಆರೋಗ್ಯವಾಗಿರಿಸುತ್ತದೆಯೋ, ಅದೇ ರೀತಿ ಶ್ರೇಷ್ಠ ವಿಚಾರಗಳು ಮನಸ್ಸು ಹಾಗೂ ಬುದ್ಧಿಯನ್ನು ಸಂಸ್ಕಾರಯುತವನ್ನಾಗಿಸುತ್ತವೆ ಎಂದು ಅವರು ಹೇಳಿದರು. ಶಾಖೆಗಳ ಮೂಲಕ ಚಾರಿತ್ರ್ಯಸಂಪನ್ನ ಹಾಗೂ ರಾಷ್ಟ್ರನಿಷ್ಠ ನಾಗರಿಕರ ನಿರ್ಮಾಣವಾಗುತ್ತದೆ. ಸಮಾಜದಲ್ಲಿ ಭ್ರಾಂತಿಗಳನ್ನು ಹರಡಿ, ಯುವಪೀಠೆಯನ್ನು ದಾರಿ ತಪ್ಪಿಸುವ ಮೂಲಕ ಭಾರತವನ್ನು ಅಸ್ಥಿರಗೊಳಿಸಲು ಮಾರಕ ಹಾಗೂ ವಿಷಪೂರಿತ ಯೋಚನೆಗಳನ್ನು ಹೊಂದಿರುವ ‘ಬೌದ್ಧಿಕ ನಕ್ಸಲರು’ ಪ್ರಯತ್ನಿಸುತ್ತಿದ್ದು, ಈ ಬಗ್ಗೆ ನಾವೆಲ್ಲರೂ ಎಚ್ಚೆತ್ತುಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು ಅವರು ಕರೆ ನೀಡಿದರು.

ನಾಗಪುರದ ಮಹಾತ್ಮ ಗಾಂಧಿ ಸೆಂಟೆನಿಯಲ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಲಕ್ಷ್ಯ ಫೌಂಡೇಶನ್ನ ಅಧ್ಯಕ್ಷರಾದ ಶ್ರೀಮತಿ ಅನುರಾಧಾ ಪ್ರಭುದೇಸಾಯಿ ಆಗಮಿಸಿದ್ದರು. ಅವರು ತಮ್ಮ ಉತ್ಸಾಹಭರಿತ ಉಪನ್ಯಾಸದಲ್ಲಿ, “ಸಂತಾನವು ಒಂದು ಅಕ್ಷರವಾದರೆ, ತಾಯಿ ಕಾವ್ಯ ಸಂಗ್ರಹ; ಅದರಲ್ಲಿಯೂ ಸೈನಿಕನ ತಾಯಿಯಂತೂ ಮಹಾಕಾವ್ಯ” ಎಂದು ಬಣ್ಣಿಸಿದರು. ಸಮಿತಿಯ ಸೇವಿಕೆಯರು ಪ್ರದರ್ಶಿಸಿದ ಸಾಂಸ್ಕೃತಿಕ ಹಾಗೂ ಶಾರೀರಿಕ ಪ್ರತ್ಯಕ್ಷಿಕೆಗಳಿಂದ ಪ್ರಭಾವಿತರಾದ ಅವರು, ಈ ಯುವತಿಯರೇ ಮುಂದಿನ ದಿನಗಳಲ್ಲಿ ಸಮಾಜಕ್ಕೆ ನೇತೃತ್ವ ನೀಡಲಿದ್ದಾರೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ವಂದನೀಯ ಪ್ರಮುಖ ಸಂಚಾಲಿಕಾ ಮಾ. ಶಾಂತಕ್ಕ ಜಿ ಹಾಗೂ ಮುಖ್ಯ ಅತಿಥಿಗಳು ಶಸ್ತ್ರಪೂಜೆ ನೆರವೇರಿಸಿದರು. ವಿಶೇಷವೆಂದರೆ, ವಿಜಯದಶಮಿಯ ಈ ದಿನದಂದು ರಾಷ್ಟ್ರ ಸೇವಿಕಾ ಸಮಿತಿಯು ತನ್ನ ಸ್ಥಾಪನೆಯ 90ನೇ ವರ್ಷಕ್ಕೆ ಕಾಲಿಡುತ್ತಿದೆ. ಕಾರ್ಯಕ್ರಮದಲ್ಲಿ ಸೇವಿಕೆಯರು ಯೋಗಾಸನ, ಡಂಬಲ್ಸ್, ತಾಲಯೋಗ, ದಂಡ, ಗೋಫ, ವ್ಯಾಯಾಮ ಯೋಗ ಹಾಗೂ ಘೋಷ್ (ಬ್ಯಾಂಡ್) ಪ್ರದರ್ಶನಗಳನ್ನು ನೀಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ಅಖಿಲ ಭಾರತೀಯ ಸಹ ಕಾರ್ಯವಾಹಿಕಾ ಮಾ. ಚಿತ್ರಾತಾಯಿ ಜೋಶಿ ಸೇರಿದಂತೆ ಇತರ ಅಖಿಲ ಭಾರತೀಯ ಹಾಗೂ ಕ್ಷೇತ್ರೀಯ ಅಧಿಕಾರಿಗಳು, ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಇತರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಮಾಜದ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವು ಸಂಪೂರ್ಣ ವಂದೇ ಮಾತರಂ ಗೀತೆಯೊಂದಿಗೆ ಮುಕ್ತಾಯಗೊಂಡಿತು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
