‘ವಿಕಸಿತ ಭಾರತ@2047’ರ ಭವ್ಯ ಭಾರತದ ಕನಸು ಸಾಕಾರಗೊಳ್ಳಬೇಕಾದರೆ ಕೇವಲ ಆರ್ಥಿಕ ಸೂಚ್ಯಂಕಗಳು ಏರಿದರೆ ಸಾಲದು; ದೇಶದ ಅತ್ಯಂತ ಕ್ರಿಯಾಶೀಲ ಮಾನವ ಸಂಪನ್ಮೂಲವಾದ ಯುವಜನರ ಸಾಮರ್ಥ್ಯ ಸರಿಯಾದ ದಿಕ್ಕಿನಲ್ಲಿ ವಿನಿಯೋಗವಾಗಬೇಕಿದೆ. ಆದರೆ, ನೀತಿ ಆಯೋಗದ ಇತ್ತೀಚಿನ ವರದಿ ತೆರೆದಿಟ್ಟಿರುವ ಅಂಕಿ-ಅಂಶಗಳು ದೇಶದ ಭವಿಷ್ಯದ ಕುರಿತು ಆಳವಾದ ಚಿಂತನೆಗೆ ಹಚ್ಚಿವೆ. 15ರಿಂದ 29 ವರ್ಷ ವಯೋಮಾನದ ಸುಮಾರು 8.7 ಕೋಟಿ ಯುವಜನರು ಶಿಕ್ಷಣ, ಉದ್ಯೋಗ ಅಥವಾ ಕೌಶಲ ತರಬೇತಿಯಿಂದ ಸಂಪೂರ್ಣವಾಗಿ ಹೊರಗುಳಿದು ‘ನೀಟ್’ (NEET – Not in Education, Employment or Training) ವರ್ಗಕ್ಕೆ ಸೇರಿರುವುದು ಸಣ್ಣ ವಿಷಯವೇನಲ್ಲ. ಈ ಅಂಕಿ-ಅಂಶವು ಕೇವಲ ನಿರುದ್ಯೋಗದ ಲಕ್ಷಣವಲ್ಲ, ಬದಲಿಗೆ ನಮ್ಮ ಶಿಕ್ಷಣ ವ್ಯವಸ್ಥೆ ಮತ್ತು ಉದ್ಯೋಗ ಮಾರುಕಟ್ಟೆಯ ನಡುವೆ ಇರುವ ಬೃಹತ್ ಕಂದಕಕ್ಕೆ ಹಿಡಿದ ಕನ್ನಡಿಯಾಗಿದೆ.
ಭಾರತದಲ್ಲಿ ಯುವ ನಿರುದ್ಯೋಗದ ಪ್ರಮಾಣ ಶೇ.15ರಷ್ಟಿದ್ದರೆ, ಕೇರಳ (ಶೇ.29.9), ನಾಗಾಲ್ಯಾಂಡ್ (ಶೇ.27.4) ಹಾಗೂ ಮಣಿಪುರ (ಶೇ.22.9)ನಂತಹ ರಾಜ್ಯಗಳಲ್ಲಿ ಪರಿಸ್ಥಿತಿ ಇನ್ನಷ್ಟು ಆತಂಕಕಾರಿಯಾಗಿದೆ. ಪದವೀಧರರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದರೂ, ತಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಪಡೆಯುತ್ತಿರುವವರ ಪ್ರಮಾಣ ಕೇವಲ ಶೇ.8.25ರಷ್ಟಿದೆ ಎಂಬುದು ಅತ್ಯಂತ ಖೇದಕರ ಸಂಗತಿ. ಇದು ‘ಪದವಿ ಇದೆ, ಆದರೆ ಕೌಶಲವಿಲ್ಲ’ ಅಥವಾ ‘ಕೌಶಲವಿದ್ದರೂ ಸೂಕ್ತ ಅವಕಾಶವಿಲ್ಲ’ ಎಂಬ ವೈರುಧ್ಯವನ್ನು ಎತ್ತಿ ತೋರಿಸುತ್ತದೆ. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಇದು ಕೇವಲ ವೈಯಕ್ತಿಕ ಹಿನ್ನಡೆಯಾಗಿ ಉಳಿಯದೆ, ಇಡೀ ಕುಟುಂಬವನ್ನು ಬಡತನದ ಸುಳಿಗೆ ತಳ್ಳುವ ಸಾಮಾಜಿಕ ಅಭದ್ರತೆಯಾಗಿ ಮಾರ್ಪಡುತ್ತಿದೆ.
ಈ ಸವಾಲನ್ನು ಮೆಟ್ಟಿ ನಿಲ್ಲಲು ಶಿಕ್ಷಣ – ಕೌಶಲ – ಉದ್ಯೋಗಗಳ ನಡುವೆ ಬಲವಾದ ಕೊಂಡಿಯನ್ನು ನಿರ್ಮಿಸುವುದು ಇಂದಿನ ತುರ್ತು ಅಗತ್ಯ. ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆ (PMKVY), ಸ್ಕಿಲ್ ಇಂಡಿಯಾ ಡಿಜಿಟಲ್ ಹಬ್ ಹಾಗೂ PM-SETUನಂತಹ ಯೋಜನೆಗಳು ಕೌಶಲ್ಯಪೂರ್ಣ ಭಾರತಕ್ಕೆ ದಾರಿ ಮಾಡಿಕೊಡುತ್ತಿವೆಯಾದರೂ, ಇವು ಕೇವಲ ತರಬೇತಿ ಹಾಗೂ ಪ್ರಮಾಣಪತ್ರ ವಿತರಣೆಗೆ ಸೀಮಿತವಾಗಬಾರದು. ತರಬೇತಿಯಿಂದ ಅಪ್ರೆಂಟಿಸ್ಷಿಪ್, ಅಲ್ಲಿಂದ ಖಾಯಂ ಉದ್ಯೋಗ ಅಥವಾ ಸ್ವಉದ್ಯೋಗದವರೆಗಿನ ಪೂರ್ಣ ಪ್ರಮಾಣದ ಚಕ್ರ ಪೂರ್ಣಗೊಳ್ಳಬೇಕು. ಕೃತಕ ಬುದ್ಧಿಮತ್ತೆ, ಡಿಜಿಟಲ್ ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ ಹಾಗೂ ಕೃಷಿ ಸಂಸ್ಕರಣೆಯಂತಹ ಉದಯೋನ್ಮುಖ ಕ್ಷೇತ್ರಗಳಿಗೆ ತಕ್ಕಂತೆ ಯುವಕರನ್ನು ಸಜ್ಜುಗೊಳಿಸಬೇಕಿದೆ.
ಇದೇ ವೇಳೆ, ಯುವಜನರು ಕೇವಲ ಉದ್ಯೋಗ ಹುಡುಕುವವರಾಗದೆ ‘ಉದ್ಯೋಗ ಸೃಷ್ಟಿಸುವವರಾಗುವ’ತ್ತ (Entrepreneurs) ಚಿಂತಿಸಬೇಕಿದೆ. ಗ್ರಾಮೀಣ ಮಟ್ಟದಲ್ಲಿ ಯಶಸ್ವಿಯಾಗಿರುವ RUDSETI ಮತ್ತು RSETI ಮಾದರಿಗಳು ತರಬೇತಿಯ ಜೊತೆಗೆ ಹಣಕಾಸಿನ ಸಂಪರ್ಕ (ಬ್ಯಾಂಕ್ ಸಾಲ) ಮತ್ತು ನಿರಂತರ ಮಾರ್ಗದರ್ಶನ ನೀಡಿ ಶೇ.72ರಷ್ಟು ಯುವಕರನ್ನು ಸ್ವಾವಲಂಬಿಗಳನ್ನಾಗಿ ಮಾಡಿರುವುದು ಮಾದರಿಯಾಗಿದೆ. ಸ್ವಸಹಾಯ ಸಂಘಗಳ (SHGs) ಸಂಘಟಿತ ಶಕ್ತಿ, PMEGP ಹಾಗೂ ಮುದ್ರಾ ಯೋಜನೆಗಳನ್ನು ಇಂತಹ ಕೌಶಲ ತರಬೇತಿಗಳೊಂದಿಗೆ ಬೆಸೆದಾಗ ಮಾದರಿ ಉದ್ಯಮಗಳು ರೂಪುಗೊಳ್ಳಲು ಸಾಧ್ಯ.
ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳು ಕೇವಲ ‘ಪದವಿ ಮುದ್ರಿಸುವ ಯಂತ್ರ’ಗಳಾಗುವುದನ್ನು ಬಿಟ್ಟು, ವಿದ್ಯಾರ್ಥಿಗಳಿಗೆ ಓದಿನ ಜೊತೆ ಜೊತೆಗೇ ಗಳಿಸುವ ಇಂಟರ್ನ್ಷಿಪ್ ಹಾಗೂ ವೃತ್ತಿ ಮಾರ್ಗದರ್ಶನ ನೀಡುವ ಕೇಂದ್ರಗಳಾಗಬೇಕು. ಯುವಜನತೆಯಲ್ಲಿರುವ ‘ನೀಟ್’ ಸ್ಥಿತಿಯನ್ನು ಅವರ ವೈಯಕ್ತಿಕ ವೈಫಲ್ಯವೆಂದು ನೋಡದೆ, ಅವರಿಗೆ ಸಿಗದ ಅವಕಾಶಗಳ ಕೊರತೆ ಎಂದು ಪರಿಗಣಿಸಿ ಧನಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕಿದೆ.
ಭಾರತ ಹೊಂದಿರುವ ‘ಜನಸಂಖ್ಯಾ ಲಾಭ’ (Demographic Dividend) ನಮಗೆ ಶಕ್ತಿಯಾಗಬೇಕೇ ವಿನಃ ಅಭಿವೃದ್ಧಿಗೆ ಹೊರೆಯಾಗಬಾರದು. 2047ರ ‘ವಿಕಸಿತ ಭಾರತ’ದ ಕನಸು ನನಸಾಗಬೇಕಾದರೆ ಪ್ರತಿಯೊಬ್ಬ ಯುವಕ-ಯುವತಿಯ ಕೈಗೆ ಸೂಕ್ತ ಕೌಶಲ, ಮನಸ್ಸಿಗೆ ಆತ್ಮವಿಶ್ವಾಸ ಮತ್ತು ಬದುಕಿಗೆ ಆರ್ಥಿಕ ಭದ್ರತೆ ಸಿಗಲೇಬೇಕು. ಯುವಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸಿದಾಗ ಮಾತ್ರವೇ ‘ನೀಟ್’ ಸವಾಲು ‘ಸಮೃದ್ಧ ಭಾರತ’ದ ಮಹಾನ್ ಶಕ್ತಿಯಾಗಿ ಮಾರ್ಪಡಲು ಸಾಧ್ಯ.
ಶ್ರೀಕೃಷ್ಣ ಜನ್ಮಾಷ್ಟಮಿ: ಕರ್ಮಯೋಗದ ಮೂಲಕ ಧರ್ಮಾಚರಣೆ
ಶ್ರೀಕೃಷ್ಣ ಜನ್ಮಾಷ್ಟಮಿಯು ಕೇವಲ ಕೃಷ್ಣನ ಜನ್ಮದ ಆಚರಣೆಯಷ್ಟೇ ಅಲ್ಲ; ಅದು ಅಧರ್ಮದ ವಿರುದ್ಧ ಧರ್ಮದ ವಿಜಯವನ್ನು ಸಾರುವ ಸಂಕೇತ. ಕಂಸನ ಕಾರಾಗೃಹದ ಕತ್ತಲೆಯಲ್ಲಿ ಹುಟ್ಟಿದ ಕೃಷ್ಣ, ಜಗತ್ತಿಗೆ ಭಗವದ್ಗೀತೆಯ ಮೂಲಕ ಕರ್ಮಯೋಗದ ದಿವ್ಯ ಸಂದೇಶ ನೀಡಿದನು. ಇಂದಿನ ಕಷ್ಟ-ಸವಾಲುಗಳ ನಡುವೆ, ಶ್ರೀಕೃಷ್ಣನ ಜೀವನ ಹಾಗೂ ಬೋಧನೆಗಳು ನಮಗೆ ಸತ್ಯ, ಪ್ರೀತಿ ಮತ್ತು ಧೈರ್ಯದಿಂದ ಬಾಳಲು ಸದಾ ದಾರಿದೀಪವಾಗಿವೆ.

ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
