ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಗಡಿ ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿಕೊಂಡಿರುವ ಚಿತ್ರಕೂಟ ಪುಣ್ಯಭೂಮಿಯಲ್ಲಿ ಭಗವಾನ್ ಶ್ರೀರಾಮ 11 ವರ್ಷ ಆರು ತಿಂಗಳು ನೆಲೆಸಿದ್ದರು ಎಂಬ ನಂಬಿಕೆಯಿದೆ.
ಸನಾತನ ಶೋಧ ಸಂಸ್ಥಾನ, ಚಿತ್ರಕೂಟ ಹಾಗೂ ಪರ್ಯಾವರಣ ಸಂರಕ್ಷಣಾ ಗತಿವಿಧಿಯ ಧಾರ್ಮಿಕ ಕಾರ್ಯ ವಿಭಾಗದ ವತಿಯಿಂದ ಇಲ್ಲಿ ಮೂರು ದಿನಗಳ ಕಾರ್ಯಾಗಾರವನ್ನು ಜಂಟಿಯಾಗಿ ಆಯೋಜಿಸಲಾಗಿತ್ತು.
ನವೆಂಬರ್ 13, 14 ಮತ್ತು 15ರಂದು ನಡೆದ ಈ ಕಾರ್ಯಾಗಾರದ ಮೊದಲ ದಿನವಾದ ನವೆಂಬರ್ 13ರಂದು ಚಿತ್ರಕೂಟದ ಪ್ರಮುಖ ಸಾಧು-ಸಂತರು ಹಾಗೂ ಕಥಾವಾಚಕರಿಗಾಗಿ ‘ಹರಿತ್ ಸಂತ ಸಮ್ಮೇಳನ’ ಮತ್ತು ‘ಅನುಭೂತಿ ಭ್ರಮಣ’ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಮೊದಲ ದಿನ ಪರಿಸರಸ್ನೇಹಿ ಸಮ್ಮೇಳನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಾಮದಗಿರಿಯಲ್ಲಿ ಶ್ರೀರಾಮ, ಮಾತೆ ಸರಸ್ವತಿ ಹಾಗೂ ಗೋಸ್ವಾಮಿ ತುಳಸೀದಾಸರ ಸ್ತುತಿಯೊಂದಿಗೆ ಸಂತರು ಸಮ್ಮೇಳನವನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಸನಾತನ ಶೋಧ ಸಂಸ್ಥಾನದ ಅಧ್ಯಕ್ಷರಾದ ಶ್ರೀ ಗೋವಿಂದ ತ್ರಿಪಾಠಿ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಮನೋಜ್ ತ್ರಿಪಾಠಿ ಸೇರಿದಂತೆ ಸಂತರು ಒಕ್ಕೊರಲಿನಿಂದ ಚಿತ್ರಕೂಟ ಧಾಮವನ್ನು ಕೇಂದ್ರಾಡಳಿತ ಪ್ರದೇಶವಾಗಿ ರೂಪಿಸಿ, ವಿಶ್ವಮಟ್ಟದಲ್ಲಿ ಪ್ರಸಿದ್ಧಿಗೊಳಿಸಬೇಕು ಹಾಗೂ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಆಡಳಿತದಿಂದ ಮುಕ್ತಗೊಳಿಸಿ ಕೇಂದ್ರಾಡಳಿತಕ್ಕೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಈ ಸಮ್ಮೇಳನದಲ್ಲಿ ಚಿತ್ರಕೂಟವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ಸಂಕಲ್ಪ ಮಾಡಲಾಯಿತು. ಅಲ್ಲದೆ, ಈಗಾಗಲೇ ಸಂತರು ಈ ನಿಟ್ಟಿನಲ್ಲಿ ಕೈಗೊಂಡಿರುವ ಪ್ರಯತ್ನಗಳನ್ನು ಹಂಚಿಕೊಳ್ಳಲಾಯಿತು. ಚಿತ್ರಕೂಟದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ ಸಂತರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಚಿತ್ರಕೂಟದ ಪ್ರಸಿದ್ಧ ಕಥಾವಾಚಕರಾದ ಆಚಾರ್ಯ ನವಲೋಕ ಜೀ, ಕಾಮದಗಿರಿ ಧಾಮದ ಪೂಜ್ಯ ಸಂತ ಡಾ. ಮದನ್ ಗೋಪಾಲ್ ಜೀ ಹಾಗೂ ಗಾಯತ್ರಿ ಪರಿವಾರದ ಪ್ರಮುಖರಾದ ಶ್ರೀ ಅನಿಲ್ ಜೀ ಉಪಸ್ಥಿತರಿದ್ದರು. ದೇಶದ 20 ರಾಜ್ಯಗಳಿಂದ 48 ಪ್ರಮುಖ ಕಾರ್ಯಕರ್ತರು ಹಾಗೂ ಅಖಿಲ ಭಾರತೀಯ ಪ್ರಾಂತ ಪ್ರಮುಖರು ‘ಅನುಭೂತಿ ಭ್ರಮಣ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನವೆಂಬರ್ 14: ಅನುಭೂತಿ ಭ್ರಮಣ
ನವೆಂಬರ್ 14ರಂದು ಬೆಳಿಗ್ಗೆ ಚಿತ್ರಕೂಟದ ಸ್ಥಾನ ದೇವತೆಯಾದ ಮಾತಂಗನಾಥ ಭೋಲೆ ಶಂಕರ ಜೀ ಅವರ ಉಪಾಸನೆ ಹಾಗೂ ಮಂದಾಕಿನಿ ಪೂಜೆಯೊಂದಿಗೆ ಅನುಭೂತಿ ಭ್ರಮಣ ಆರಂಭವಾಯಿತು.
ಅತ್ರಿ ಋಷಿ ಆಶ್ರಮದಿಂದ ಪ್ರಾರಂಭವಾದ ಈ ಭ್ರಮಣದಲ್ಲಿ ಭಗವಾನ್ ಶ್ರೀರಾಮ ಮತ್ತು ಸಮಾಜಜೀವನಕ್ಕೆ ಸಂಬಂಧಿಸಿದ 11 ಪ್ರಮುಖ ಸ್ಥಳಗಳಿಗೆ ಭೇಟಿ ನೀಡಲಾಯಿತು.
- ಸತಿ ಅನುಸೂಯಾ ಮಾತಾ
- ರಾಮ ದರ್ಶನ ಪ್ರಕಲ್ಪ
- ಸದ್ಗುರು ಸೇವಾ ಜಾನಕಿ ಚಿಕಿತ್ಸಾಲಯ
- ಸಿಯಾರಾಮ್ ಕುಟೀರ
- ಡಿಆರ್ಐ ಪ್ರಕಲ್ಪ
- ನಾನಾಜಿ ದೇಶಮುಖ ನಿವಾಸ ಮತ್ತು ಮಾಲ್ಯಾರ್ಪಣೆ
- ಸ್ಫಟಿಕ ಶಿಲಾ
- ಭರತ್ಕೂಪ್
- ರಾಮಶಯ್ಯಾ
- ಶ್ರೀ ಕಾಮದಗಿರಿ ಆರತಿ
- ಗಾಯತ್ರಿ ಶಕ್ತಿ ಪೀಠ
ಸದ್ಗುರು ನೇತ್ರ ಚಿಕಿತ್ಸಾಲಯ ಹಾಗೂ ನಾನಾಜಿ ದೇಶಮುಖ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಸೇವಾ ಪ್ರಕಲ್ಪಗಳ ಅನುಭವ ವಿಶೇಷವಾಗಿತ್ತು. ಭ್ರಮಣದ ಮಾರ್ಗದಲ್ಲಿ ಅಲ್ಲಲ್ಲಿ ಸ್ವಚ್ಛತಾ ಅಭಿಯಾನವನ್ನೂ ನಡೆಸಲಾಯಿತು.
ಕೊನೆಯಲ್ಲಿ ಗಾಯತ್ರಿ ಶಕ್ತಿ ಪೀಠದಲ್ಲಿ ಅನುಭವ ಹಂಚಿಕೆ ಮತ್ತು ಭೋಜನದೊಂದಿಗೆ ಅನುಭೂತಿ ಭ್ರಮಣ ಸಮಾಪನಗೊಂಡಿತು.
ನವೆಂಬರ್ 15: ಕಾಮದಗಿರಿ ಪರಿಕ್ರಮ
ನವೆಂಬರ್ 15ರಂದು ಬೆಳಿಗ್ಗೆ ಭೋಲೆನಾಥ ಶಂಕರನ ಉಪಾಸನೆಯ ನಂತರ ಕಾಮದಗಿರಿ ಪರಿಕ್ರಮ ನಡೆಯಿತು. ಈ ಸಂದರ್ಭದಲ್ಲಿ ಯಾತ್ರೆಯ ಮಾರ್ಗದುದ್ದಕ್ಕೂ ಕಾರ್ಯಕರ್ತರು ಪಾಲಿಥಿನ್ ತ್ಯಾಜ್ಯವನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು.
ಕೊನೆಯಲ್ಲಿ ಕಾಮತಾನಾಥ ಪೀಠದ ಡಾ. ಮದನ್ ಗೋಪಾಲ್ ದಾಸ್ ಜೀ ಅವರ ಮಾರ್ಗದರ್ಶನದೊಂದಿಗೆ ಮೂರು ದಿನಗಳ ಕಾರ್ಯಕ್ರಮ ಸಂಪನ್ನಗೊಂಡಿತು.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
