ಅಂಕಣ – ದೃಶ್ಯ
ಚಿತ್ರಕಲಾ ಪರಿಷತ್ನಲ್ಲಿ ಹೋರ್ ಶತಮಾನೋತ್ಸವ ಕಲಾಪ್ರದರ್ಶನ
- ಗಣಪತಿ ಅಗ್ನಿಹೋತ್ರಿ, ದೃಶ್ಯ ಕಲಾವಿದ, ಕಲಾವಿಮರ್ಶಕ, ಪತ್ರಕರ್ತ
ಅಪ್ಪಟ ಕಮ್ಯುನಿಸ್ಟ್ ವಾದಿ. ಒಂದಷ್ಟು ವರ್ಷಗಳ ಕಾಲ ಭಾರತೀಯ ಕಮ್ಯುನಿಸ್ಟ್ ಚಳವಳಿಯಲ್ಲೂ ಪಾಲ್ಗೊಂಡವರು. ಕಮ್ಯುನಿಸ್ಟ್ ಪಕ್ಷದ ಸದಸ್ಯರಾಗಿ, ಸಕ್ರಿಯ ರಾಜಕಾರಣದಲ್ಲಿಯೂ ಗುರುತಿಸಿಕೊಂಡವರು. ಚಿಕ್ಕ ವಯಸ್ಸಿನಲ್ಲೇ ರಾಜಕಾರಣದಲ್ಲಿ ಆಸಕ್ತಿ ಹೊಂದಿರುವುದರ ಜೊತೆಗೆ, ಸ್ವಾತಂತ್ರ್ಯ ಪೂರ್ವ ಸಂದರ್ಭದಲ್ಲೇ ಸಾಮಾಜಿಕ ಸಮಸ್ಯೆಗಳಿಗೆ ಧ್ವನಿಯಾದವರು. 1943ರ ಬಂಗಾಳ ಕ್ಷಾಮದ (Bengal Famine) ಕಾಲಘಟ್ಟದಲ್ಲಿ ಸಮಾಜದಲ್ಲಾಗುವ ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಮೂಲಕ ಪ್ರಬಲ ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಅಂಟಿಕೊಂಡರು. ಆದರೆ, ಕಲಾಶಿಕ್ಷಣ ಕ್ಷೇತ್ರದಲ್ಲಿ ಗುರುತಿಸಿಕೊಂಡ ಬಳಿಕ ಸಾಮಾಜಿಕ ಕಾರ್ಯದಿಂದ ಕೊಂಚ ದೂರವೇ ಉಳಿದರು. ಆದರೆ, ಕಲಾಕ್ಷೇತ್ರದ ಬಲುದೊಡ್ಡ ಆಸ್ತಿಯಾದರು!.
ತನ್ನೊಳಗೊಬ್ಬ ಕವಿಯೂ ಇದ್ದಾನೆ ಅನ್ನುವುದನ್ನು ತೋರಿಸಿಕೊಡುವ ಮೂಲಕ 2004ರಲ್ಲಿ ತಮ್ಮದೇ ಚಿತ್ರ-ಕಾವ್ಯ ಬೆಸುಗೆಯ Diary of the Broken Leg (Bhanga Payer Diary) ಶೀರ್ಷಿಕೆಯ ಸರಣಿ ಕಲಾಕೃತಿಗಳ ಮೂಲಕ ತಮ್ಮನ್ನು ವಿಭಿನ್ನ ಆಯಾಮದಲ್ಲೇ ನೋಡುವಂತೆ ಮಾಡಿಕೊಂಡವರು ಕಲಾವಿದೆ ರೆಬಾ ಹೋರ್, ಶ್ರೇಷ್ಠ ಕಲಾವಿದ ಸೋಮನಾಥ್ ಹೋರ್ ಅವರ ಪತ್ನಿ. ಹೋರಾಟ, ದೃಶ್ಯಕಲೆ ಮತ್ತು ಸಾಹಿತ್ಯದಲ್ಲಿ ತೊಡಗಿಸಿಕೊಂಡಿದ್ದ ಅಪರೂಪದ ವ್ಯಕ್ತಿತ್ವ ರೆಬಾ ಅವರದ್ದಾಗಿತ್ತು. ಪ್ರಿಂಟ್ ಮೇಕರ್, ಶಿಲ್ಪಿ, ವರ್ಣಚಿತ್ರಕಾರರಾಗಿ ತಮ್ಮ ಕಲಾಜೀವನ ಕಳೆದಿರುವ ರೆಬಾ ಹೋರ್ ಅವರ ಶತಮಾನೋತ್ಸವಸಂಭ್ರಮದ ಹಿನ್ನೆಲೆಯಲ್ಲಿ ಕೊಲ್ಕತ್ತಾದ ಸೀಗಲ್ (Seagull, Calcutta) ಮತ್ತು ಕರ್ನಾಟಕ ಚಿತ್ರಕಲಾ ಪರಿಷತ್ ‘Broken Foot Journal & Other Stories’ ಪ್ರದರ್ಶನ ಆಯೋಜಿಸಿದೆ. ರೆಬಾ ಅವರು ಬೇರೆ ಬೇರೆ ಸಂದರ್ಭಗಳಲ್ಲಿ ರಚಿಸಿರುವ 150ಕ್ಕೂ ಹೆಚ್ಚು ಕಲಾಕೃತಿಗಳನ್ನು ಚಿತ್ರಕಲಾ ಪರಿಷತ್ನ ಗ್ಯಾಲರಿ 1,2,3 ಮತ್ತು 4ರಲ್ಲಿ ಪ್ರದರ್ಶಿಸಲಾಗಿದೆ.
ತಾವು ನಂಬಿರುವ ಸಿದ್ಧಾಂತವನ್ನು ಗಟ್ಟಿಯಾಗಿ ಕಲಾಭಿವ್ಯಕ್ತಿಗೂ ಅಳವಡಿಸಿಕೊಂಡು, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ (Freedom of Expression) ಹೆಚ್ಚಿನ ಒತ್ತುಕೊಡುವುದನ್ನು ರೆಬಾ ಅವರ ಕಲಾಕೃತಿಗಳಲ್ಲಿ ಗುರುತಿಸಬಹುದಾಗಿದೆ. ಅದರಲ್ಲೂ, ಕಾವ್ಯದ ಸಾಲುಗಳೊಂದಿಗೆ ರೇಖಾ ಪ್ರಧಾನವಾದ ಚಿತ್ರಗಳನ್ನು ಪ್ರದರ್ಶಿಸಿರುವುದು ಅವರ ಅನುಭವದ ಕಥಾನಕಗಳನ್ನು ಒಂದೆಡೆ ನಿರೂಪಿಸಿಟ್ಟಂತೆ (narrative) ಭಾಸವಾಗುತ್ತಿದೆ. ಒಂದಿಷ್ಟು ಚಿತ್ರಗಳು ನಿರೂಪಣಾತ್ಮಕ (illustrative) ಅನಿಸಿದರೂ, ಕಲಾತ್ಮಕ ನೆಲೆಯಲ್ಲೇ ನೋಡುಗರನ್ನು ಆ ಚೌಕಟ್ಟಿನಾಚೆ ಕರೆದೊಯ್ಯುವುದಿಲ್ಲ. ಈ ಅಂತಃಶಕ್ತಿ ಇರುವ ಕಾರಣದಿಂದಾಗಿ ಎಲ್ಲಾ ಕಲಾಕೃತಿಗಳೂ ನೋಡುಗರನ್ನು ಹಿಡಿದು ನಿಲ್ಲಿಸುತ್ತವೆ. ಒಂದು ಕಲಾಕೃತಿಯಿಂದ ಇನ್ನೊಂದು ಕಲಾಕೃತಿಯನ್ನು ನೋಡುವಾಗ ಹಿಂದೆ ನೋಡಿದ ಕಲಾಕೃತಿಯ ಪ್ರಭಾವದಲ್ಲೇ ಮುಂದುವರಿದಂತೆ ತೋರುತ್ತದೆ. ರಚನಾ ಕ್ರಮ, ಶೈಲಿಗೆ ಅಂಟಿಕೊಂಡಿರುವಂತೆ ಭಾಸವಾಗುವ ಸಾಧ್ಯತೆಯೂ ಉಂಟು.
ಆರಂಭದ ದಿನಗಳಿಂದ ಅವರ ಕಲಾಕೃತಿಯಲ್ಲಿ ಬಣ್ಣಗಳ ಬೀಸು (strokes) ಮೇಲ್ನೋಟಕ್ಕೆ ಅಮೂರ್ತತೆಯ ನೆಲೆಯಲ್ಲೇ ನಿಲ್ಲಿಸುತ್ತದೆ. ಆದರೆ, ಕಲಾಕೃತಿಯನ್ನು ಧ್ಯಾನಿಸುತ್ತಲೇ ಒಳಪ್ರವೇಶಿಸಿದರೆ ಕಲಾಕೃತಿ ರಚನೆಯಲ್ಲಿ ಭಾವನಾತ್ಮಕ ಅನಿಸುವ ಆಕೃತಿಗಳನ್ನು ಮೂಡಿಸುವಲ್ಲಿ ಪರಕಾಯ ಪ್ರವೇಶ ಮಾಡಿರುವುದನ್ನು ಗಮನಿಸಬಹುದು. ಅಂದರೆ, ಕಲಾಕೃತಿಯಲ್ಲಿ ಯಾವ ಸಂದೇಶ ನೀಡಬೇಕೆನ್ನುವ ಉದ್ದೇಶ ಹೊಂದಿರುತ್ತಾರೋ ಅದಕ್ಕೆ ಪೂರಕವಾದ ಆಕೃತಿಗಳನ್ನು ಅಮೂರ್ತನೆಲೆಯಲ್ಲೇ ಬಳಸಿಕೊಳ್ಳುವ ಕ್ರಮ ಹೆಚ್ಚೆಚ್ಚು ಆಸಕ್ತಿ ಮೂಡಿಸುತ್ತವೆ. ಕಾಲಿಗೆ ಏಟು ಮಾಡಿಕೊಂಡು ವಿಶ್ರಾಂತಿಯಲ್ಲಿದ್ದ ಸಂದರ್ಭದಲ್ಲಿ ಅವರು ರಚಿಸಿರುವ ಕಲಾಕೃತಿಗಳು ಮತ್ತು ಆ ಸಂದರ್ಭದಲ್ಲಿ ಅವರ ದಿನಚರಿಯ ಪುಸ್ತಕದಲ್ಲಿ ಮೂಡಿಬಂದ ಕಾವ್ಯದ ಸಾಲುಗಳನ್ನು ಬಹಳ ಅಚ್ಚುಕಟ್ಟಾಗಿ ಪ್ರದರ್ಶಿಸಲಾಗಿದೆ. ಕಾವ್ಯ ಮತ್ತು ಚಿತ್ರ ಎಷ್ಟು ಪರಿಣಾಮಕಾರಿ ಎನ್ನುವುದಕ್ಕೆ ಈ ಪ್ರದರ್ಶನ ದೊಡ್ಡದೊಂದು ಸಾಕ್ಷಿಯಾಗಿ ನಿಲ್ಲುತ್ತದೆ. ಅಷ್ಟೇ ಅಲ್ಲ, ಕಾವ್ಯ ಅಥವಾ ಇನ್ನಾವುದೇ ಬರೆಹಗಳು ಕಲಾಕೃತಿಗೆ ಹೇಗೆ ಸ್ಫೂರ್ತಿಯಾಗಬಲ್ಲದು ಎನ್ನುವುದಕ್ಕೂ ರೆಬಾ ಅವರ ಕಲಾಕೃತಿಗಳು ನಿದರ್ಶನವಾಗಬಲ್ಲದು. ಈ ಎಲ್ಲಾ ಕಲಾಕೃತಿಗಳು ಈ ಮೊದಲು ಕೊಲ್ಕತ್ತಾ, ಹೈದರಾಬಾದ್ ಮತ್ತು ಬಿಹಾರ್ ಮ್ಯೂಸಿಯಂನಲ್ಲಿ ಪ್ರದರ್ಶನ ಕಂಡಿದ್ದು, ಇದೀಗ ಬೆಂಗಳೂರಿಗರೂ ವೀಕ್ಷಿಸುವ ಅವಕಾಶ ಈ ಪ್ರದರ್ಶನದಿಂದ ಸಾಧ್ಯವಾಗಿದೆ.
ಬಹುಮಾಧ್ಯಮಗಳಲ್ಲಿ ಕಲಾಕೃತಿಗಳನ್ನು ರಚಿಸಿರುವ ರೆಬಾ ಹೋರ್ ಅವರ ವಸ್ತು ವಿಷಯ ಆಯ್ಕೆ ಎಲ್ಲಿಯೂ ಕ್ಲಿಷ್ಟ ಅನಿಸುವುದೇ ಇಲ್ಲ. ದೈನಂದಿನ ಅನುಭವವನ್ನೇ ಕಲಾಕೃತಿಗೆ ವಸ್ತುವಿಷಯವಾಗಿಸಿಕೊಂಡಿದ್ದಾರೆ. ಸ್ವಾಭಾವಿಕತೆಯನ್ನು ಅವರ ರೇಖೆ, ಬಣ್ಣ ಮತ್ತು ದುಡಿಸಿಕೊಳ್ಳುವ ವಿಧಾನದಲ್ಲಿ ಕಂಡುಕೊಳ್ಳಲು ಸಾಧ್ಯವಾಗಲಿದೆ. ಆಧುನಿಕ ಕಲಾ ಪರಂಪರೆಯ ಕಲಾವಿದರ ಚಿಂತನೆಗಳು ಹೇಗಿದ್ದವು ಎನ್ನುವುದಕ್ಕೆ ರೆಬಾ ಅವರ ಕಲಾಕೃತಿಗಳು ಉತ್ತಮ ಉದಾಹರಣೆ ಆಗಬಲ್ಲವು. ಒಂದೊಳ್ಳೆಯ ಕಲಾಪ್ರದರ್ಶನ ಇದಾಗಿದ್ದು, ಕಲಾ ವಿದ್ಯಾರ್ಥಿಗಳು ನೋಡಬೇಕಾದ ಪ್ರದರ್ಶನವಾಗಿದೆ.
ರೆಬಾ ಅವರು ಅರ್ಥಶಾಸ್ತ್ರ ಪದವೀಧರೆಯಾದರೂ, ಸಾಮಾಜಿಕ ಕಾರ್ಯಗಳತ್ತ ಆಸಕ್ತಿ ಬೆಳೆಸಿಕೊಂಡರೂ ಕಲಾಭ್ಯಾಸ ನಿಲ್ಲಿಸಲಿಲ್ಲ. ಸೋಮನಾಥ್ ಅವರ ಜೊತೆ ಮದುವೆಯಾದ ಬಳಿಕವೂ ನಿರಂತರವಾಗಿ ಕಲಾಭ್ಯಾಸದಲ್ಲಿ ತೊಡಗಿಕೊಂಡಿದ್ದರು. ಅವರ ಮಗಳು ಚಂದನಾ ಹೋರ್ ಕೂಡ ಕಲಾವಿದೆ. ಮನೆಯಲ್ಲಿ ಕಲೆಯ ವಾತಾವರಣ ಇದ್ದ ಕಾರಣ ಅವರ ಕಲಾಭ್ಯಾಸಕ್ಕೆ ಯಾವುದೂ ಅಡ್ಡಿಯಾಗಲಿಲ್ಲ. ಹೀಗಾಗಿ ರೆಬಾ ಅವರು ಕಲಾಕ್ಷೇತ್ರದಲ್ಲಿ ಆದರ್ಶ ಕಲಾವಿದೆಯಾಗಿ ಬೆಳೆಯಲು ಸಾಧ್ಯವಾಯಿತು. ಶಾಂತಿನಿಕೇತನದಲ್ಲಿ ಹೆಚ್ಚಿನ ವೃತ್ತಿಜೀವನ ಸಾಗಿಸಿರುವ ಇವರ ಕಲಾ ಬೆಳೆವಣಿಗೆಯ ಮೇಲೆ ಪತಿ ಸೋಮನಾಥ್ ಹೋರ್ ಅವರ ನೆರಳು ಇರುವುದನ್ನು ಗಮನಿಸಬಹುದು.
