ಅಂಕಣ – ನವಸ್ವಾತಂತ್ರ್ಯ ಹೋರಾಟದ ತೇಜಸ್ವೀ ಕಿಡಿಗಳು-49
ತುರ್ತು ಪರಿಸ್ಥಿತಿಯ ನಂತರ ಮಾರ್ಚ್ 17, 1978ರ ವಿಕ್ರಮದಲ್ಲಿ ಪ್ರಕಟವಾದ ಲೇಖನ
1975ರಲ್ಲಿ ತುರ್ತು ಪರಿಸ್ಥಿತಿಯ ಹುಟ್ಟಿಗೂ ಮಳೆಗಾಲಕ್ಕೂ ಗಂಟು ಬಿದ್ದುದು ಕಡಿಮೆ ಅದೃಷ್ಟ ಏನಲ್ಲ. ಲೋಕ ಸಂಘರ್ಷ ಸಮಿತಿಯ ಭೂಗತ ಕೇಂದ್ರಗಳು ಮತ್ತು ಬೆರಳಚ್ಚು – ಕಲ್ಲಚ್ಚು ಮುಳ್ಳಚ್ಚು ಮೊಳೆಯಚ್ಚು ಕೂಟಗಳು ಅಚ್ಚುಕಟ್ಟಾಗಿ ಸ್ಥಾಪನೆ ಆಗುವುದಕ್ಕೆ ಮಳೆರಾಯನೂ ಸಾಕಷ್ಟು ಬೆವರು ಸುರಿಸಿದ್ದಾನೆ!. ಛತ್ರಿ, ಸ್ವೆಟರ್, ಮಫ್ಲರ್, ತರಹಾವರಿ ಟೋಪಿಗಳು, ಕೋಟು, ಮಳೆಕೋಟು, ಹೆಲ್ಮೆಟ್, ಬದಲಿವೇಷಕ್ಕೆ ಜೀವತೆತ್ತಿವೆ. ಅದಕ್ಕೆ ನಾವು ದುಡ್ಡು ತೆತ್ತದ್ದು ಅಪರೂಪ. ಗುಡುಗು, ಸಿಡಿಲು, ಮಳೆ ಆರ್ಭಟ ಜೋರಾಗಿ, ವಿದ್ಯುತ್ ನಿಂತ ರಾತ್ರಿಗಳಲ್ಲಂತೂ ಖುಷಿ, ನಿರಾತಂಕ!.
ಪೊಲೀಸರು ಮಳೆದಿನಗಳಲ್ಲಿ ಬಟ್ಟೆ ಕೊಳೆ ಮಾಡಿಕೊಳ್ಳುವಷ್ಟು ಪೆದ್ದರಾಗಿರಲಿಲ್ಲ.
ತುರ್ತುಪರಿಸ್ಥಿತಿ ಸಮಯದಲ್ಲಿ ನನ್ನ ತೂಕ ಸಾಕಷ್ಟು ಏರಿತು. ಪರಿಚಿತರೆಲ್ಲ ‘ಪರವಾಗಿಲ್ಲ’ ಅಂತ ಪ್ರಶಂಸಿಸತೊಡಗಿದರು. ಆದರೆ ಸ್ವತಃ ನನಗೆ ಆ ಬೆಳವಣಿಗೆಯ ಮರ್ಮ ಅರಿವಾದದ್ದು ಗೆಳೆಯರಿಬ್ಬರ ಸಂಭಾಷಣೆಗೆ ಕಿವಿಗೊಟ್ಟಾಗ:
“ಅವರ ತೂಕ ಹೆಚ್ಚಿರುವುದರ ರಹಸ್ಯ ಏನು ಗೊತ್ತೇ?”- ಒಬ್ಬನ ಪ್ರಶ್ನೆ.
“ಇಲ್ಲ, ನೀನು ಹೇಳು ನೋಡುವಾ”, ಇನ್ನೊಬ್ಬನ ದನಿ.
“ಅದು ಮುಖ್ಯವಾಗಿ ‘ಕವಳತಾಯಿ ಮಹಿಮೆ’ ಕಣೋ!”
ಸ್ನೇಹಿತರೊಬ್ಬರ ಮನೆ. ಅಲ್ಲಿನ ಹಿಂಭಾಗದ ಕೊಠಡಿಯಲ್ಲಿ ಭೂಗತ ಸಾಹಿತ್ಯದ ಬರೆವಣಿಗೆ ಕೆಲಸ. ಅವರ ನೆಂಟರೊಬ್ಬರಿಗೆ ಪೊಲೀಸ್ ಖಾತೆಯಲ್ಲಿ ಕೆಲಸ. ಆತ ಆಗಾಗ್ಗೆ (ಎಮರ್ಜೆನ್ಸಿ ಡ್ಯೂಟಿ ಇದ್ದಾಗಲೆಲ್ಲ) ಅದೇ ಮನೆಗೆ ಊಟಕ್ಕೆ ಬರುವರು. ಅವರು ಬಂದಾಗಲೆಲ್ಲ ಮನೆಯವರಿಂದ ನನ್ನ ಕೊಠಡಿಗೆ ಬೀಗ. ನಾನು ನಿಶ್ಯಬ್ದ. ಅವರು ಊಟ ಮುಗಿಸಿ ಹೊರಟನಂತರವೇ ನನಗೆ ಬಿಡುಗಡೆ. ಒಮ್ಮೆ ಅವರು ತಮ್ಮ ಹ್ಯಾಟು, ಖಾಕಿ ಸಮವಸ್ತ್ರ ಹಾಲ್ನಲ್ಲಿ ಬಿಚ್ಚಿಟ್ಟು ಮಲಗಿದ್ದರು. ಅದೇ ಸಮಯಕ್ಕೆ ಓರ್ವ ಕಾರ್ಯಕರ್ತ ಹೊರಗಿನಿಂದ ಬಂದ. ಅಲ್ಲಿನ ದೃಶ್ಯ ನೋಡಿ ಹಿಮ್ಮೆಟ್ಟಿದ. ಗಾಬರಿಯಿಂದ, ಹಿರಿಯ ಕಾರ್ಯಕರ್ತರೊಬ್ಬರ ಬಳಿ ಓಡಿಹೋಗಿ, “ಆ ಮನೆ ಪೊಲೀಸರ ವಶವಾಗಿದೆ….” ಇತ್ಯಾದಿ ವರದಿ ಮಾಡಿದ. ಆದರೆ ಆ ಹಿರಿಯರಿಗೆ ಹಿನ್ನೆಲೆಯೆಲ್ಲ ಗೊತ್ತಿತ್ತು. ಸಮಾಧಾನ ಹೇಳಿ, ಪುನಃ ಕಳಿಸಿದರು.
ಒಂದು ಮನೆ ಒಳಗಿನ ಕೋಣೆಯಲ್ಲಿ ತೀವ್ರ ಅನಾರೋಗ್ಯದಲ್ಲಿದ್ದ ಒಬ್ಬ ಹಿರಿಯ ಕಾರ್ಯಕರ್ತರು. ಅವರಿಗಾಗಿ ಪೊಲೀಸರು ಬಹಳ ಶೋಧಿಸುತ್ತಿದ್ದರು. ಕೋಣೆಯಲ್ಲೇ ನನ್ನ ಓದು ಬರೆಹ ಸಾಗುತ್ತಿತ್ತು. ಯಾರಾದರೂ ಹೊರಗಿನ ಕಾರ್ಯಕರ್ತರು ನನ್ನನ್ನು ನೋಡಲು ಬಂದರೆ, (ಅವರಿಗೆ ಈ ರೋಗಿ ಇರುವುದು ಗೊತ್ತಾಗದಿರಲೆಂದು) ನಾನೇ ಕೋಣೆಯಿಂದ ಹೊರಗೆ ಬಂದು, ಹಾಲ್ನಲ್ಲಿ ಕುಳಿತು ಮಾತನಾಡಿ ಕಳುಹಿಸುತ್ತಿದ್ದೆ. ಆಗೊಮ್ಮೆ ಮನೆಯ ಯಜಮಾನರ ತಲೆಗೆ ಒಂದು ವಿಚಾರ ಬಂತು. “ಈ ತುರ್ತುಪರಿಸ್ಥಿತಿ ಇನ್ನು ಎಷ್ಟು ಕಾಲ ಇರುತ್ತೋ ಏನೋ. ಆದ್ದರಿಂದ, ಹೊಸದಾಗಿ ಅನುಕೂಲವಾದ ಇನ್ನೊಂದು ರೂಂ ಕಟ್ಟಿಸಿಬಿಡೋಣ. ಆದರೆ, ನಂಬಿಕೆಗೆ ಯೋಗ್ಯರಾದ ನಮ್ಮವರೇ ಆದ ಕಂಟ್ರಾಕ್ಟರ್ ಒಬ್ಬರು ಸಿಕ್ಕಬೇಕಲ್ಲ” ಅಂದರು. ಆ ದಿನಗಳಲ್ಲಿ ನನಗೆ ರಹಸ್ಯ ಕಾಗದ ಪತ್ರಗಳನ್ನು ತಲುಪಿಸಲು ಅದೇ ಮನೆಗೆ ಓರ್ವ ಇಂಜಿನಿಯರ್ ಬರುತ್ತಿದ್ದರು. ಅವರನ್ನು ಮನೆಯ ಮಾಲಿಕರಿಗೆ ಪರಿಚಯಿಸಿದೆ. ನಿರೀಕ್ಷೆಗೂ ಮೊದಲೇ ಹೊಸ ಕೋಣೆ ಸಿದ್ಧವಾಯಿತು.
ತುರ್ತುಪರಿಸ್ಥಿತಿಯ ಆರಂಭದಲ್ಲೇ ಎರಡು ಬಾರಿ ಪೂಜ್ಯ ಪೇಜಾವರ ಸ್ವಾಮಿಗಳನ್ನು ಕಾಣಲು ಹೋಗಿದ್ದೆ. ಅವರಿಂದ ಸಹಾಯ ಸಹಕಾರ ಎಷ್ಟರ ಮಟ್ಟಿಗೆ ಸಾಧ್ಯ, ಭೂಗತ ನಾಯಕರು ಅವರನ್ನು ಯಾವಾಗ ಭೇಟಿ ಆಗಬಹುದು, ಅವರ ಪ್ರವಾಸದ ಕಾರ್ಯಕ್ರಮಗಳೇನು ಎಂಬುದನ್ನು ತಿಳಿದುಬರುವ ಕರ್ತವ್ಯ ನನ್ನ ಪಾಲಿಗೆ ಬಂದಿತ್ತು. ಸ್ವಾಮೀಜಿಯವರು ಕಳಕಳಿಯಿಂದ ಸರ್ವಶ್ರೀ ಹೊ.ವೆ. ಶೇಷಾದ್ರಿ, ನಂ. ಮಧ್ವರಾವ್, ನ. ಕೃಷ್ಣಪ್ಪ ಮುಂತಾದವರೆಲ್ಲರ ಯೋಗಕ್ಷೇಮ ವಿಚಾರಿಸಿದರು. ಅವರ ಗುಪ್ತನಾಮಗಳನ್ನೂ ಕೇಳಿ ತಮ್ಮ ನೆನಪಿನ ಸಂಪುಟಕ್ಕೆ ಸೇರಿಸಿಕೊಂಡರು. “ಸಹಾಯಕ್ಕೆ ನಾವು ಸಿದ್ಧರು. ನಮ್ಮಿಂದ ನೀವು ಅಪೇಕ್ಷಿಸುವುದು ಏನು, ಎಷ್ಟು ಎಂಬುದನ್ನು ತಿಳಿಸಿದರೆ ಸಾಕು, ಅದಕ್ಕೆ ನಾವು ಬದ್ಧರು” ಎಂಬ ಅಭಿಪ್ರಾಯವನ್ನು ಬಿಚ್ಚು ಮನದಿಂದ ವ್ಯಕ್ತಪಡಿಸಿದರು. ನನ್ನೊಡನೆ ಮಾತನಾಡುವಾಗ ಅವರ ಚುರುಕು ಕಣ್ಣು ನಾಲ್ಕೂ ಕಡೆ ಎಚ್ಚರದಿಂದ ಹರಿದಾಡುತ್ತಿದ್ದುದನ್ನು ಗಮನಿಸಿದೆ. ಕೊನೆಗೆ, ಹೊರಡುವ ಮುನ್ನ ಅವರಿಗೆ ಕೈಮುಗಿಯುವಷ್ಟರಿಂದಲೇ ತೃಪ್ತಿಗೊಳ್ಳಬೇಕಾಯಿತು. ಬಾಗಿ ನಮಸ್ಕರಿಸಲು ಟೈಟ್ ಪ್ಯಾಂಟ್ ಅಡ್ಡಿಯಾಗಿತ್ತು. ಹಿರಿಯರಿಗೆ ಸರಿಯಾಗಿ ನಡುಬಗ್ಗಿಸಿ ನಮಸ್ಕರಿಸಲೂ ಆಗದಷ್ಟು ಕೆಟ್ಟದಾಗಿ, ಟೈಟ್ ಆಗಿತ್ತು ತುರ್ತು ಪರಿಸ್ಥಿತಿ!.
1977ರ ಜನವರಿಯಲ್ಲಿ ಚುನಾವಣೆ ಘೋಷಣೆ ಆದ ಮೇಲೆ ಲೋಕ ಸಂಘರ್ಷ ಸಮಿತಿ ವತಿಯಿಂದ ಮುದ್ರಿತ ವಾರಪತ್ರಿಕೆಯೊಂದನ್ನು ಬಹಿರಂಗವಾಗಿ ಬೆಂಗಳೂರಿನಲ್ಲಿ ಆರಂಭಿಸಿದೆವು. ಆಗ ‘ವಿಕ್ರಮ’ ಸಂಪಾದಕರು ಇಲ್ಲಿನ ಸೆಂಟ್ರಲ್ ಜೈಲಿನಲ್ಲಿ ಮೀಸಾ ಬಂದಿಯಾಗಿದ್ದರು. ನನಗೆ ಅನಾರೋಗ್ಯವಾಗಿತ್ತು. “ದಯವಿಟ್ಟು ಲೇಖನ ಬರೆದು ಕಳುಹಿಸಿ ಸಹಾಯ ಮಾಡಬೇಕು” ಎಂದು ಗುಪ್ತ ಪತ್ರದ ಮೂಲಕ ಪ್ರಾರ್ಥಿಸಿಕೊಂಡೆ. ಅವರು ವಿಶ್ವಾಸವಿಟ್ಟು ಬರೆದು ಕಳುಹಿದರು. ಆ ಲೇಖನ ಪ್ರಕಟವೂ ಆಯಿತು. “ಜೈಲಿಗೆ ಹೋದರೂ ಬೈಲಿನವರ ಕಾಟ ತಪ್ಪದು” ಎಂಬ ನನ್ನ ಹೊಸ ಗಾದೆಗೆ ಅದೇ ನಾಂದಿ; ಅದೇ ಮಂಗಳ. ಆದರೆ, ನೆನಪಿನ ನಿಧಿಗೆ ಮಂಗಳವೆಲ್ಲಿ? ಅದು ಅಕ್ಷಯ, ನೆರವಿನ ವಿಧಿಗೂ ಪಾರ ಎಂಬುದಿಲ್ಲ.
1977ರ ಚುನಾವಣೆ ಫಲಿತಾಂಶ ಹೊರಬಿದ್ದು, ಸ್ವಾತಂತ್ರ್ಯ ಬಂದ ಬಳಿಕ, ರಸ್ತೆಯ ಮೇಲೆ ಒಬ್ಬರು ದೂರದ ದೋಸ್ತಿ ಸಿಕ್ಕಿದರು.
“ನೀವೂ ಮೀಸಾದಲ್ಲಿದ್ದಿರಾ? ಅದಕ್ಕೆ ಕಾಣಿಸ್ತಿರಲಿಲ್ಲ. ಪಾಪ, ಎಷ್ಟು ಕಷ್ಟ ಅನುಭವಿಸಬೇಕಾಯ್ತ ?” ಎಂದು ದೀರ್ಘ ಎಳೆದರು; ಅಳೆದರು.
“ಮೀಸಾ ಭಾಗ್ಯ ಬರಲಿಲ್ಲ. ಭೂಗತನಾಗಿ ಕೆಲಸ ಮಾಡ್ತಿದ್ದೆ” ಅಂದೆ.
“ಅಂದರೆ ಅಂಡರ್ಗ್ರೌಂಡ್?”
“ಹೌದು.”
ಅವರು ತಟ್ಟನೆ ತಮ್ಮ ಅಕ್ಕಪಕ್ಕದಲ್ಲಿದ್ದ ಗೆಳೆಯರಿಗೆ ಪರಿಚಯ ಮಾಡಿಕೊಟ್ಟರು: “ನೋಡಿ, ಇವರು ನನ್ನ ಫ್ರೆಂಡ್, ಎಮರ್ಜೆನ್ಸಿಯಲ್ಲಿ ಪೂರ್ತಿ ಅಂಡರ್ಗ್ರೌಂಡ್, ಏನೂಂತ ತಿಳಿದಿದ್ದೀರಿ ಅಂಡರ್ಗ್ರೌಂಡ್ ಅಂದರೆ? ಭೂಮಿ ಒಳಗೇ ವಾಸ. ಗಾಳಿ ಬೆಳಕಿಗೆ ಕಷ್ಟ, ಸೆಕೆಯಾಗಿ ಉಸಿರುಕಟ್ಟುವಂತಾದರೂ ಸಹಿಸಿಕೊಳ್ಳಬೇಕು……
ಅವರು ವೈನಾಗಿ ವಿವರಿಸುತ್ತಲೇ ಇದ್ದರು. ನಾನು ಮುಂದಕ್ಕೆ ಹೆಜ್ಜೆ ಇಡುತ್ತಾ ಮೂಕ ಪ್ರಾರ್ಥನೆ ಸಲ್ಲಿಸಿದೆ: “ದೇವರೇ! ಇಂಥ ಸ್ನೇಹಿತರಿಂದ ನನ್ನನ್ನು ಪಾರು ಮಾಡು”.
ಇನ್ನೊಬ್ಬರು ಸಿಕ್ಕಿದರು. ತುಂಬ ವಿಚಾರವಂತರು; ವಿದ್ಯಾವಂತರು, ಮೂರು ಡಿಗ್ರಿ ಪಡೆದು ನಾಲ್ಕನೆಯದನ್ನು ಗಳಿಸಲಿದ್ದವರು.
“ನಿಮ್ಮಲ್ಲಿ ಒಂದು ವಿಷ್ಯ ಕೇಳಬಹುದೇ?” ಅಂದರು.
“ಓಹೋ, ಅಗತ್ಯವಾಗಿ ಕೇಳಿ.”
“ನೀವು ಅಂಡರ ಗ್ರೌಂಡ್ ಇದ್ದಾಗ, ಊಟ-ತಿಂಡಿ ಬರುತ್ತಿದ್ದುದು ಪ್ಲೇಟ್ನಲ್ಲೋ, ಪ್ಯಾಕೆಟ್ನಲ್ಲೋ? ಅದು ಕಿಟಕಿಯಿಂದ ಬರುತ್ತಿತ್ತೋ ಅಥವಾ ಛಾವಣಿಯಲ್ಲಿ ಹೋಲ್ ಮಾಡಿಕೊಂಡಿದ್ದಿರೋ? ನೀವೆಲ್ರೂ ಇದ್ದ ನೆಲಮಾಳಿಗೆ ನಗರದ ಯಾವ ಭಾಗದಲ್ಲಿ, ಯಾವ ಜಾಗದಲ್ಲಿ ತೋಡಿಕೊಂಡಿದ್ದಿರಿ?”
ನಾನು ಮಂಕಾಗಿ ಮನಸ್ಸಿನಲ್ಲೇ, “ದೇವರೇ, ಇಂಥ ವಿದ್ಯಾವಂತರಿಂದ ಸಹ ನನ್ನನ್ನೂ ನನ್ನ ದೇಶವನ್ನೂ ಕಾಪಾಡು” ಎಂದು ಹೇಳಿಕೊಳ್ಳತೊಡಗಿದೆ.
“ನೀವು ಆರ್ಎಸ್ಎಸ್, ಎಷ್ಟೇ ಆಗಲಿ, ಸೀಕ್ರೆಟ್, ಹೇಳದಿದ್ದರೂ ಪರವಾಗಿಲ್ಲ. ಬಿಡಿ. ನಾನು ಕೇಳಿದ್ದೇ ತಪ್ಪಾಯ್ತು. ಕ್ಷಮಿಸಿ” ಎನ್ನುತ್ತಾ ಅವರು ಜಾಗ ಖಾಲಿ ಮಾಡಿದರು!.
-ಶಿವರಾಮು
ಸೆರೆಮನೆಯೊಳಗೆ
1975ರ ಅಕ್ಟೋಬರ್ 15. ನಮ್ಮ ಟವರ್ ಕಡೆಗಿನ ನಮ್ಮ ಬ್ಯಾರಕಿನ ಬಾಗಿಲನ್ನು ಸಂಪೂರ್ಣವಾಗಿ ಹಲಗೆಯಿಂದ ಮುಚ್ಚಲಾಯಿತು. ಈಗ ಆಕಾಶ, ಸೂರ್ಯ, ಚಂದ್ರ, ನಕ್ಷತ್ರಗಳು ಮತ್ತು ಹಕ್ಕಿಗಳ ಹೊರತು ಇನ್ನೇನೂ ಕಾಣುವಂತಿಲ್ಲ. ಟವರ್ ಮೇಲಿನ ವಾಚನಾಲಯದ ಜಗಲಿಯಲ್ಲಿ ಯಾರಾದರೂ ನಿಂತರೆ ಕಾಣುತ್ತಿತ್ತು, ಅಷ್ಟೇ. ಮುಚ್ಚಲ್ಪಟ್ಟ ಬಾಗಿಲಿನ ಕಡೆ ಯಾರೂ ಸುಳಿಯದಂತೆ ಕಟ್ಟುನಿಟ್ಟು ಪಹರೆಯೂ ಇತ್ತು. ಇಂದೇ ಸತ್ಯಾಗ್ರಹಿಗಳಲ್ಲಿ ‘ಬಿ’ ವರ್ಗದವರ ಸಾಮಾನುಗಳನ್ನೆಲ್ಲ ಜೈಲು ಪೊಲೀಸರು ತಪಾಸಣೆ ಮಾಡಿದರೆಂದು ತಿಳಿಯಿತು. ಇತ್ತ ಕಾಫಿಪೋಸಾ ಮತ್ತು ಮಟ್ಕಾ ಮೀಸಾ ಸ್ಥಾನಬದ್ಧರು ಬಿಡುಗಡೆ ನಿರೀಕ್ಷಿಸಿ ಬೇಸತ್ತು ಇಂದು ರಾಜಕೀಯ ಸ್ಥಾನಬದ್ಧರ ಬಗ್ಗೆ ಅಸಂತೋಷ ವ್ಯಕ್ತಪಡಿಸಿದರು. ನಿಮ್ಮ ಜನ ಹೊರಗೆ ಇದ್ದಾರಲ್ಲ? ಅವರಿಗೆ ಒಳಗಿದ್ದ ಎಲ್ಲರ ಬಿಡುಗಡೆಗಾಗಿ ಚಳವಳಿ ಮಾಡಲು ಹೇಳಿ ಎಂದರು. ನಿಮ್ಮ ಜನರಿಗೆ ಮೊದಲು ಹೇಳಿ ಎಂದಾಗ ಅವರಿಂದ ಬಂದ ಉತ್ತರ, “ನಾವೆಲ್ಲ ವ್ಯಾಪಾರಿಗಳು. ನಮಗೆ ಪಾಲಿಟಿಕ್ಸ್ ನ ಟಚ್ಚೇ ಇಲ್ಲ. ಇದೆಲ್ಲ ನೀವು ಮಾಡಬೇಕಾದ ಕೆಲ್ಸ. ದಿಲ್ಲಿಯ ಮೂವರು ಮಹತ್ವದ ವ್ಯಕ್ತಿಗಳು ಬೆಂಗಳೂರಿಗೆ ಬಂದಿದ್ದರಂತೆ, ಅವರ ಸಲಹೆಯಂತೆ ಶೀಘ್ರವೇ ಸ್ಥಾನಬದ್ಧರ ಸಾಮೂಹಿಕ ಬಿಡುಗಡೆಯಾಗಲಿದೆ ಎಂದು ಮಹ್ಮದಾಲಿ, ದಿ.17ರಂದು ಆಸ್ಪತ್ರೆಯಿಂದ ಹಿಂತಿರುಗಿ ಬಂದಾಗ ಸುದ್ದಿ ತಂದರು. ಬಿಡುಗಡೆ ಬಗ್ಗೆ ಬೇಸತ್ತವರಿಗೆ ಸ್ವಲ್ಪ ಸಂತೋಷವಾಯಿತು!.
ದಿಲ್ಲಿಯ ಜೈಲಿನಲ್ಲಿ ಸ್ಥಾನಬದ್ಧರ ಮೇಲೆ ಲಾಠಿಚಾರ್ಜ್ ಆಗಿದೆ, ಜೆ.ಪಿ.ಯವರನ್ನು ಎಲ್ಲಿ ಇಟ್ಟಿದ್ದಾರೆಂದು ಗೊತ್ತಿಲ್ಲ ಮತ್ತು ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಜನರು ಸೇರಿ ತುರ್ತು ಪರಿಸ್ಥಿತಿಯ ದಬ್ಬಾಳಿಕೆಯ ವಿರುದ್ಧ ಪ್ರತಿಭಟಿಸಿದರಂತೆ ಎಂದು ಅ.18ರಂದು ಆಸ್ಪತ್ರೆಗೆ ಹೋದ ಮುಸ್ಲಿಂ ನೌಜವಾನ್ ಕಮಿಟಿಯ ಶಮ್ಸುಲ್ ಹುದಾ ಸುದ್ದಿ ತಂದರು.
ಸಂಜೆ 6.30ಕ್ಕೆ ಜೈಲರ್ ಶ್ರೀನಿವಾಸಯ್ಯ ಬಂದು ಗಣಪಯ್ಯನವರಿಗೆ “ನಿಮಗೆ ರಿಲೀಸ್ ಆಗಿದೆ. ತಕ್ಷಣ ಸಾಮಾನು ಸಮೇತ ಬಂದುಬಿಡಿ” ಎಂದರು. ಗಣಪಯ್ಯನವರು ಹಿಂದೊಮ್ಮೆ ಆದ ಅನುಭವ ಸ್ಮರಿಸಿ, “ನಿಜವಾಗಿ ರಿಲೀಸ್ ಆಗಿದೆಯೋ? ಇಲ್ಲದಿದ್ರೆ ಹೀಗೇ ಬರ್ತೇನೆ, ಬಿಡುಗಡೆ-ಬಂಧನದ ಶಾಸ್ತ್ರ ಮುಗಿಸಿಬಿಡಿ. ಈ ವಯಸ್ಸಿನಲ್ಲಿ ಅನವಶ್ಯಕ ಬೆಡ್ಡಿಂಗ್ ಎಲ್ಲಾ ತೊಂದರೆ ಕೊಡಬೇಡಿ” ಎಂದರು. ಅದಕ್ಕೆ ಶ್ರೀನಿವಾಸಯ್ಯ, “ಇಲ್ಲ ಇಲ್ಲ. ನಿಜವಾಗಿಯೂ ರಿಲೀಸ್. ಈ ಸಲ ಹೋಂ ಡಿಪಾರ್ಟ್ಮೆಂಟಿನ ಜನ ಬಂದಿದ್ದಾರೆ. ಪೊಲೀಸ್ ಬಂದರೆ ರಿಅರೆಸ್ಟ್ ಎಂದೇ ಅರ್ಥ” ಎಂದು ಭರವಸೆ ಹೇಳಿದರು. ಎಲ್ಲರೂ ಗಣಪಯ್ಯನವರ ಸಾಮಾನುಗಳನ್ನು ಕಟ್ಟಿ, ಅವರನ್ನು ಸಂತೋಷದಿಂದ ಬೀಳ್ಕೊಟ್ಟರು. ಅನಂತರ ಎಲ್ಲರಲ್ಲೂ “ನಮ್ಮದು ಸೋಮವಾರ ರಿಲೀಸ್” ಎಂಬ ಭಾವನೆ. ಆಗಲೇ ನಮ್ಮನ್ನೆಲ್ಲ ಗೂಡಿಗೆ ಸೇರಿಸಿ ಆಗಿತ್ತು. ರಾತ್ರಿ 7.05ಕ್ಕೆ ನಮ್ಮ ಕೋಣೆಯ ಬಾಗಿಲ ಎದುರು ‘ಭಾರತ ಮಾತಾಕಿ ಜೈ’ ಎಂದು ಕೇಳಿಸಿತು. ಎಲ್ಲರ ಕಣ್ಣುಗಳೂ ಅತ್ತ ಕಡೆ ಹೊರಳಿದವು. ಗಣಪಯ್ಯನವರು ಮತ್ತೆ ಹಿಂತಿರುಗಿ ಹಾಜರ್! ಜೈಲರ್ ಬೀಗ ತೆಗೆದು ಒಳಗೆ ಬಿಟ್ಟು ಪುನಃ ಬೀಗ ಹಾಕಿ ಹೋದರು. ಪುನಃ ಹಾಸಿಗೆ ಸುರುಳಿ ಬಿಚ್ಚುವ ಕೆಲಸ. ಪ್ರಾರ್ಥನೆ, ಊಟ ಆದನಂತರ ಗಣಪಯ್ಯನವರ ಬಿಡುಗಡೆಯ ಕಥಾ ಶ್ರವಣ. “ಜೈಲಿನ ಕಛೇರಿಯಲ್ಲಿ ಬಿಡುಗಡೆಯ ಎಲ್ಲ ಶಾಸ್ತ್ರ ಮುಗಿದು ಬಾಗಿಲು ದಾಟಿ ಹೊರಗೆ ಹೋದಾಗ ಅಲ್ಲಿ ಪೊಲೀಸ್ ಅಧಿಕಾರಿ ಜೀಪ್ ಸಹಿತ ಕಾದಿದ್ದರು. ನೇರವಾಗಿ ಪೊಲೀಸ್ ಕಮಿಶನರ ಕಛೇರಿಗೆ ಕರಕೊಂಡು ಹೋಗಿ ಕುಳಿತುಕೊಳ್ಳಿಸಿ, ಹೊಸ ಮೀಸಾ ಸ್ಥಾನಬದ್ಧತೆಯ ಆಜ್ಞೆ ಜಾರಿಮಾಡಿ ಜೀಪಿನಲ್ಲಿ ಜೈಲಿಗೆ ತಂದು ಪುನಃ ಸೇರಿಸಿದರು” ಎಂದರು!.
ಮೀಸಾ ಬಂಧು ಉವಾಚ
ಜೈಲು ಜೈಲೆಂದು ಕೊರಗುವುದೇಕೆ ಬಂಧು,
ಕೃಷ್ಣ ಜೈಲಲಿ ಜನ್ಮತಾಳಿದನು ಅಂದು
ನಮ್ಮ ಪುಣ್ಯದ ಫಲವು ನಮ್ಮನಿಲ್ಲಿಗೆ ತಂದು
ಯೋಗ್ಯ ಶಿಕ್ಷಣಕ್ಕೆ ಅನುವುಮಾಡಿತು ಇಂದು
ರಾಮಭಟ್ಟ
31-12-1976
