ಅಂಕಣ – Xಫ್ಯಾಕ್ಟರ್
- ಪರಪ್ಪ ಶಾನವಾಡ, ಸಾಮಾಜಿಕ ಜಾಲತಾಣ ವಿಶ್ಲೇಷಕ
ಭಾರತವು ಜಗತ್ತಿಗೆ ಸೊನ್ನೆಯಷ್ಟನ್ನೇ ಅಲ್ಲ, ಜೊತೆಗೆ ಆಯುರ್ವೇದ, ಯೋಗ, ಮೆಟಲರ್ಜಿ, ಬಾಹ್ಯಾಕಾಶ, ಜೋತಿಷ್ಯ ಸೇರಿದಂತೆ ಗಣಿತ, ವಿಜ್ಞಾನಕ್ಕೆ ಅಗಾದವಾದ ಕೊಗುಗೆಗಳನ್ನು ನೀಡಿದೆ. ಆದರೆ ಕಾಲಾನಂತರದಲ್ಲಿ ಸಾಮ್ರಾಜ್ಯ ವಿಸ್ತರಣೆ, ಮತಾಂಧರ ಆಕ್ರಮಣ, ವಸಾಹತುಶಾಹಿ ವ್ಯಾಪಾರೀಕರಣ ಹಾಗೂ ದಾಳಿಕೋರರ ಪ್ರಭಾವದಿಂದಾಗಿ ನಮ್ಮ ಸನಾತನ ಜ್ಞಾನ, ಶಾಸ್ತ್ರ, ವೈಜ್ಞಾನಿಕ ಸಂಪತ್ತು ಕೆಲವು ಹಾಳಾದರೆ, ಮತ್ತೆ ಕೆಲವು ಹಿರಿಯರಿಂದ ನಮಗೆ ವರ್ಗಾವಣೆಯಾಗದೆ, ನಮ್ಮ ಪುರಾತನ ಜ್ಞಾನದ ಅರಿವಿಲ್ಲದೆ, ಆಧುನಿಕತೆಯಲ್ಲಿ ವಿದೇಶಿಗರ ಜಾಲಕ್ಕೆ ಸಿಲುಕಿ ನಮ್ಮತನದ ಮೇಲೆ ಹೆಮ್ಮೆಯ ಬದಲು ಕೀಳರಿಮೆ ಮೂಡುವಂತ ಸನ್ನಿವೇಶಗಳು ನಿರ್ಮಾಣವಾಗಿವೆ. ಆದರೂ ಅಲ್ಲಲ್ಲಿ ಅಳಿದುಳಿದ ಜ್ಞಾನದ ಸಂಪತ್ತು ಇಂದಿಗೂ ಅಮೂಲ್ಯ ಎನಿಸಿದ್ದು, ವಿಶೇಷವಾಗಿ ವಿದೇಶಿಗರಿಂದ ಶ್ಲಾಘನೆಗೆ ಒಳಪಡುತ್ತಿವೆ. ಆಯುರ್ವೇದ ಪಂಡಿತ, ಶಸ್ತ್ರಚಿಕಿತ್ಸೆಯ ಪಿತಾಮಹ ಎಂದು ಕರೆಯಲ್ಪಡುವ ಮಹರ್ಷಿ ಸುಶ್ರುತರಿಗೆ ಇತ್ತೀಚಿಗೆ ಅಂತಾರಾಷ್ಟ್ರೀಯ ಗೌರವ ದೊರೆತಿರುವುದು ಎಲ್ಲ ಭಾರತೀಯರಿಗೆ ಅತೀವ ಸಂತೋಷ ಉಂಟುಮಾಡಿದೆ. ಸ್ಕಾಟ್ಲೆಂಡ್ನ ಎಡಿನ್ಬರ್ಗ್ ನಗರದಲ್ಲಿರುವ ಪ್ರತಿಷ್ಠಿತ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಆಫ್ ಎಡಿನ್ಬರ್ಗ್ ಸಂಸ್ಥೆಯ ಆವರಣದಲ್ಲಿ ಮಹರ್ಷಿ ಸುಶ್ರುತರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿರುವುದು ವಿಶ್ವದಾದ್ಯಂತ ಭಾರತೀಯರ ಹೆಮ್ಮೆಯನ್ನು ಮತ್ತಷ್ಟು ಹೆಚ್ಚಿಸಿದೆ. ಈ ಗೌರವವು ಭಾರತದ ಪ್ರಾಚೀನ ವೈದ್ಯಕೀಯ ಜ್ಞಾನಕ್ಕೆ ಜಾಗತಿಕ ಮನ್ನಣೆಯ ಸಂಕೇತವಾಗಿದೆ ಎನ್ನುವುದು ಜಾಲತಾಣ ಜಗಲಿಯ ಬಿಚ್ಚುಮಾತು.
ಸುಮಾರು 2,500 ವರ್ಷಗಳ ಹಿಂದೆ ರಚನೆಯಾದ ‘ಸುಶ್ರುತ ಸಂಹಿತೆ’ಯಲ್ಲಿ 300ಕ್ಕೂ ಹೆಚ್ಚು ಶಸ್ತ್ರಚಿಕಿತ್ಸಾ ವಿಧಾನಗಳು, 120ಕ್ಕೂ ಹೆಚ್ಚು ಶಸ್ತ್ರೋಪಕರಣಗಳು, ಮೂಗಿನ ಪುನರ್ನಿರ್ಮಾಣ (ರೈನೋಪ್ಲಾಸ್ಟಿ), ಗಾಯಗಳ ಚಿಕಿತ್ಸೆ ಹಾಗೂ ವೈದ್ಯಕೀಯ ನೈತಿಕತೆಗಳ ಕುರಿತು ವಿವರಿಸಲಾಗಿದೆ. ಇಂದಿನ ಆಧುನಿಕ ಶಸ್ತ್ರಚಿಕಿತ್ಸಾ ವಿಜ್ಞಾನದ ಹಲವು ಮೂಲಭೂತ ತತ್ತ್ವಗಳಿಗೆ ಸುಶ್ರುತನ ಕೊಡುಗೆ ಮಹತ್ವದ್ದಾಗಿದೆ ಎಂದು ವೈದ್ಯಕೀಯ ಇತಿಹಾಸ ಕಾರರು ಅಭಿಪ್ರಾಯಪಡುತ್ತಾರೆ. ಈ ಘಟನೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ #Sushruta, #MaharishiSushruta, #FatherOfSurgery, #IndianKnowledgeSystems, #AncientIndia, #MedicalHeritage ಹಾಗೂ #IndiaProud ಹ್ಯಾಶ್ಟ್ಯಾಗ್ಗಳು ಟ್ರೆಂಡಿಂಗ್ ಆಗಿವೆ. ಭಾರತೀಯ ಯುವಕರು, ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವಿದೇಶಗಳಲ್ಲಿ ನೆಲೆಸಿರುವ ಭಾರತೀಯ ಸಮುದಾಯಗಳು ಈ ಘಟನೆಯನ್ನು ‘ಭಾರತದ ಜ್ಞಾನ ಪರಂಪರೆಗೆ ಜಾಗತಿಕ ಗೌರವ’ ಎಂದು ಬಣ್ಣಿಸಿವೆ.
ಎಕ್ಸ್, ಇನ್ಸ್ಟಾಗ್ರಾಮ್, ಫೇಸ್ಬುಕ್ ಹಾಗೂ ಯೂಟ್ಯೂಬ್ನಲ್ಲಿ ಹಂಚಿಕೆಯಾಗಿರುವ ಸಾವಿರಾರು ಪೋಸ್ಟ್ ಗಳಲ್ಲಿ ಪ್ರಮುಖವಾಗಿ ನಾಲ್ಕು ಕಥನ (ನರೇಟಿವ್)ಗಳಾಗಿ ಬಿತ್ತರಿಸಲ್ಪಟ್ಟಿವೆ. 1) ವಿಶ್ವವು ಕೊನೆಗೂ ಭಾರತದ ವೈಜ್ಞಾನಿಕ ಕೊಡುಗೆಯನ್ನು ಗುರುತಿಸುತ್ತಿದೆ. 2) ಸುಶ್ರುತರ ಬಗ್ಗೆ ಭಾರತದ ಶಾಲಾ ಪಠ್ಯಕ್ರಮಗಳಲ್ಲಿ ಹೆಚ್ಚಿನ ಮಾಹಿತಿ ಇರಬೇಕು. 3) ಪ್ರಾಚೀನ ಭಾರತ ವೈಜ್ಞಾನಿಕವಾಗಿ ಅತ್ಯಂತ ಮುಂದುವರಿದ ನಾಗರಿಕತೆಯಾಗಿತ್ತು. 4) ಇದು ಭಾರತೀಯರ ನಾಗರಿಕತೆಯ ಆತ್ಮವಿಶ್ವಾಸವನ್ನು ಪುನರುಜ್ಜೀವನಗೊಳಿಸುವ ಕ್ಷಣ. ಒಟ್ಟಾರೆಯಾಗಿ ಜಾಲತಾಣ ಪ್ರಬುದ್ಧರು ಈ ಘಟನೆಯನ್ನು ಸಂಸ್ಕೃತಿ ಮತ್ತು ವಿಜ್ಞಾನದ ಸಂಗಮ ಎಂದು ಕೊಂಡಾಡಿದ್ದಾರೆ. ಜಾಲತಾಣಗಳಲ್ಲಿ ಮತ್ತೊಂದು ಆಸಕ್ತಿದಾಯಕ ಚರ್ಚೆ ಆಯುರ್ವೇದ ಮತ್ತು ಅಲೋಪಥಿ ಕುರಿತಾಗಿದ್ದು, ಇವೆರಡೂ ಒಂದಕ್ಕೊಂದು ವಿರುದ್ಧವಲ್ಲ, ಬದಲಾಗಿ ಎರಡೂ ಮಾನವ ಕಲ್ಯಾಣಕ್ಕಾಗಿ ಪರಸ್ಪರ ಪೂರಕ ವ್ಯವಸ್ಥೆಗಳು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸುಶ್ರುತರ ಪರಂಪರೆ ವೈದ್ಯಕೀಯ ಸಂಶೋಧನೆ, ನೈತಿಕತೆ ಹಾಗೂ ಮಾನವ ಸೇವೆಯ ಮಹತ್ವವನ್ನು ನೆನಪಿಸುತ್ತದೆ ಎಂಬುದು ಹಲವರ ಅಭಿಮತವಾಗಿದೆ.
ವಾಸ್ತವವಾಗಿ ಎಡಿನ್ಬರ್ಗ್ ನಲ್ಲಿ ಪ್ರತಿಮೆ ಸ್ಥಾಪನೆಯು ಕೇವಲ ಒಬ್ಬ ಮಹರ್ಷಿಗೆ ಸಲ್ಲಿಸಿದ ಗೌರವವಲ್ಲ. ಇದು ಭಾರತದ ಜ್ಞಾನ, ಸಂಸ್ಕೃತಿ ಮತ್ತು ವೈಜ್ಞಾನಿಕ ಪರಂಪರೆಯ ವಿಶ್ವಮಾನ್ಯತೆಯ ಸಂಕೇತವಾಗಿದೆ. ಜಗತ್ತು ಇಂದು ಮಹರ್ಷಿ ಸುಶ್ರುತರನ್ನು ಗೌರವಿಸುತ್ತಿರುವಾಗ, ಭಾರತೀಯ ಯುವಜನತೆ ತಮ್ಮ ಇತಿಹಾಸವನ್ನು ಹೊಸ ದೃಷ್ಟಿಯಿಂದ ಅರಿಯಲು ಪ್ರೇರೇಪಿತವಾಗುತ್ತಿದೆ. ಇದು ಕೇವಲ ಭೂತಕಾಲದ ಸ್ಮರಣೆ ಅಲ್ಲ; ಭವಿಷ್ಯದ ಭಾರತಕ್ಕೆ ಆತ್ಮವಿಶ್ವಾಸ ತುಂಬುವ ಐತಿಹಾಸಿಕ ಕ್ಷಣವಾಗಿದೆ.
