ಪ್ಯಾರಿಸ್, ಲಿಯಾನ್ ಸೇರಿದಂತೆ ಹಲವು ನಗರಗಳಲ್ಲಿ ಅಶಾಂತಿ; ಪ್ರತಿಭಟನಾ ಸ್ಥಳಗಳಿಂದ ದೂರವಿರಲು ಭಾರತೀಯರಿಗೆ ಸೂಚನೆ
ಫ್ರಾನ್ಸ್: ಫ್ರಾನ್ಸ್ನ ಪ್ರಮುಖ ನಗರಗಳಾದ ಪ್ಯಾರಿಸ್, ಲಿಯಾನ್ ಮತ್ತು ಮಾರ್ಸೇಯ್ನ ಕೆಲವು ಪ್ರದೇಶಗಳಲ್ಲಿ ನಾಗರಿಕ ಅಶಾಂತಿ ಹಾಗೂ ರಾತ್ರಿ ಕರ್ಫ್ಯೂ ಮುಂದುವರಿದಿರುವ ಹಿನ್ನೆಲೆಯಲ್ಲಿ, ಫ್ರಾನ್ಸ್ನಲ್ಲಿರುವ ಮತ್ತು ಅಲ್ಲಿಗೆ ಪ್ರಯಾಣಿಸುವ ಭಾರತೀಯರಿಗೆ ಪ್ಯಾರಿಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತುರ್ತು ಸುರಕ್ಷತಾ ಸಲಹೆ ನೀಡಿದೆ.
ಫ್ರಾನ್ಸ್ನ ಕೆಲವು ಭಾಗಗಳಲ್ಲಿ ನಡೆಯುತ್ತಿರುವ ಅಶಾಂತಿ ಮತ್ತು ಸ್ಥಳೀಯವಾಗಿ ಜಾರಿಗೊಳಿಸಿರುವ ಕರ್ಫ್ಯೂಗಳನ್ನು ಗಮನದಲ್ಲಿಟ್ಟುಕೊಂಡು ಭಾರತೀಯರು ಎಚ್ಚರಿಕೆಯಿಂದ ಇರಬೇಕು ಎಂದು ರಾಯಭಾರ ಕಚೇರಿ ಸೂಚಿಸಿದೆ.
“ಫ್ರಾನ್ಸ್ನಲ್ಲಿನ ಇತ್ತೀಚಿನ ಬೆಳವಣಿಗೆಗಳು ಮತ್ತು ಕೆಲವು ಪ್ರದೇಶಗಳಲ್ಲಿ ಜಾರಿಯಲ್ಲಿರುವ ಸ್ಥಳೀಯ ಕರ್ಫ್ಯೂಗಳ ಹಿನ್ನೆಲೆಯಲ್ಲಿ ದಯವಿಟ್ಟು ಎಚ್ಚರಿಕೆಯಿಂದಿರಿ ಮತ್ತು ಅಗತ್ಯ ಮುನ್ನೆಚ್ಚರಿಕೆ ವಹಿಸಿ. ಪ್ರತಿಭಟನೆಗಳು ನಡೆಯುತ್ತಿರುವ ಸ್ಥಳಗಳಲ್ಲಿ ದೊಡ್ಡ ಗುಂಪುಗಳು ಮತ್ತು ಜನದಟ್ಟಣೆಯ ಪ್ರದೇಶಗಳಿಂದ ದೂರವಿರಿ. ಸ್ಥಳೀಯ ಫ್ರೆಂಚ್ ಅಧಿಕಾರಿಗಳು ನೀಡುವ ಸೂಚನೆಗಳು ಮತ್ತು ಸಲಹೆಗಳನ್ನು ಪಾಲಿಸಿ” ಎಂದು ರಾಯಭಾರ ಕಚೇರಿ ತಿಳಿಸಿದೆ.
ಫ್ರಾನ್ಸ್ನ ವಿವಿಧ ನಗರಗಳಲ್ಲಿ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುವುದರಿಂದ ಸ್ಥಳೀಯ ಸುದ್ದಿಗಳನ್ನು ಗಮನಿಸುವಂತೆ ಹಾಗೂ ಅಧಿಕೃತ ಮೂಲಗಳಿಂದ ಮಾಹಿತಿ ಪಡೆಯುವಂತೆ ಭಾರತೀಯರಿಗೆ ಸಲಹೆ ನೀಡಲಾಗಿದೆ. ಫ್ರಾನ್ಸ್ ಸರ್ಕಾರದ ಅಧಿಕೃತ ಜಾಲತಾಣ gouvernement.fr ಮೂಲಕ ನವೀಕರಣಗಳನ್ನು ಪರಿಶೀಲಿಸಬೇಕು. ಸಾರ್ವಜನಿಕ ಸಾರಿಗೆ ಸೇವೆಗಳಲ್ಲಿನ ವ್ಯತ್ಯಯಗಳ ಕುರಿತು ratp.fr ಜಾಲತಾಣದಲ್ಲಿ ಮಾಹಿತಿ ಪಡೆಯಬೇಕು ಎಂದು ಸೂಚಿಸಲಾಗಿದೆ.
ತುರ್ತು ಪರಿಸ್ಥಿತಿಯಲ್ಲಿ ಭಾರತೀಯರಿಗೆ ನೆರವು ನೀಡಲು ಪ್ಯಾರಿಸ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಮಾರ್ಸೇಯ್ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಸಂಪರ್ಕ ವಿವರಗಳನ್ನು ಹಂಚಿಕೊಂಡಿವೆ.
ಅಕ್ಟೋಬರ್ 24ರ ಪ್ರತಿಭಟನೆಗೆ ಬಿಗಿ ಭದ್ರತೆ
ಅಕ್ಟೋಬರ್ 24ರಂದು ಮತ್ತೊಂದು ಸುತ್ತಿನ ಪ್ರತಿಭಟನೆಗಳು ನಡೆಯುವ ನಿರೀಕ್ಷೆಯಿರುವ ಹಿನ್ನೆಲೆಯಲ್ಲಿ, ಫ್ರಾನ್ಸ್ ಪ್ರಧಾನಿ ಸೆಬಾಸ್ಟಿಯನ್ ಲೆಕಾರ್ನು ಬೃಹತ್ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸುವುದಾಗಿ ಭರವಸೆ ನೀಡಿದ್ದಾರೆ. ಜೀವನ ವೆಚ್ಚದ ಏರಿಕೆ ಮತ್ತು ಶಾಲೆಗಳ ಹದಗೆಟ್ಟ ಪರಿಸ್ಥಿತಿಗೆ ಸಂಬಂಧಿಸಿದಂತೆ ದೇಶಾದ್ಯಂತ ನಡೆದ ಪ್ರತಿಭಟನೆಗಳು ಹಿಂಸಾತ್ಮಕ ಸ್ವರೂಪ ಪಡೆದ ಬಳಿಕ ಸರ್ಕಾರ ಭದ್ರತೆಯನ್ನು ಬಿಗಿಗೊಳಿಸಿದೆ. ಕೆಲವು ಪ್ರದೇಶಗಳಲ್ಲಿ ರಾತ್ರಿ ಕರ್ಫ್ಯೂಗಳನ್ನು ವಿಸ್ತರಿಸಲಾಗಿದೆ.
ಸಿಬಿಎಸ್ ನ್ಯೂಸ್ ವರದಿಯ ಪ್ರಕಾರ, ಶನಿವಾರದ ಪ್ರತಿಭಟನೆಗಳ ಸಂದರ್ಭದಲ್ಲಿ ಅಶಾಂತಿಯ ತೀವ್ರತೆಯನ್ನು ಅಧಿಕಾರಿಗಳು ಕಡಿಮೆ ಅಂದಾಜಿಸಿದ್ದರು ಮತ್ತು ಕೆಲವು ನಗರಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ ಎಂದು ಆಂತರಿಕ ವ್ಯವಹಾರಗಳ ಸಚಿವ ಲಾರೆಂಟ್ ನುನೆಜ್ ಒಪ್ಪಿಕೊಂಡಿದ್ದಾರೆ.
ಸೋಮವಾರ ಸಂಜೆಯ ವೇಳೆಗೆ 2,500ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದರು ಎಂದು ನ್ಯಾಯಾಂಗ ಸಚಿವ ಜೆರಾಲ್ಡ್ ದರ್ಮನಿನ್ ತಿಳಿಸಿದ್ದಾರೆ. ಹಿಂಸಾಚಾರದ ವೇಳೆ ಲಿಮೋಜ್ ನಗರದ ಐತಿಹಾಸಿಕ ಪುರಭವನಕ್ಕೆ ಬೆಂಕಿ ಹಚ್ಚಲಾಗಿದ್ದು, ಹಲವು ವ್ಯಾಪಾರ ಮಳಿಗೆಗಳಲ್ಲಿ ಲೂಟಿ ಮತ್ತು ಆಸ್ತಿ ಹಾನಿ ಸಂಭವಿಸಿದೆ.
ಪ್ಯಾರಿಸ್ನ ಪ್ಲಾಸ್ ದೆ ಲಾ ರೆಪ್ಯೂಬ್ಲಿಕ್ ಮತ್ತು ಲೆಸ್ ಹಾಲ್ಸ್ ವಾಣಿಜ್ಯ ಪ್ರದೇಶಗಳ ಸುತ್ತಮುತ್ತ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಲಿಯಾನ್ ಸೇರಿದಂತೆ ಇತರ ನಗರಗಳಲ್ಲಿಯೂ ಇದೇ ರೀತಿಯ ನಿರ್ಬಂಧಗಳನ್ನು ವಿಧಿಸಲಾಗಿದೆ. ಸೋಮವಾರ ರಾತ್ರಿ ಪ್ಯಾರಿಸ್ ಮತ್ತು ಲಿಯಾನ್ನಲ್ಲಿ ದೊಡ್ಡ ಪ್ರಮಾಣದ ಅಹಿತಕರ ಘಟನೆಗಳು ವರದಿಯಾಗದಿದ್ದರೂ, ಮುನ್ನೆಚ್ಚರಿಕೆಯಾಗಿ ನಿರ್ಬಂಧಗಳನ್ನು ಮುಂದುವರಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಶಾಲೆಗಳ ಸಮಸ್ಯೆಯಿಂದ ಆರಂಭವಾದ ಪ್ರತಿಭಟನೆ
ಭಾನುವಾರ ಮಾತನಾಡಿದ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ಶಾಂತಿಯುತವಾಗಿ ಪ್ರತಿಭಟಿಸುವವರನ್ನು ಗಲಭೆ ಮತ್ತು ಲೂಟಿಯಲ್ಲಿ ತೊಡಗಿರುವವರಿಂದ ಪ್ರತ್ಯೇಕವಾಗಿ ನೋಡಬೇಕು ಎಂದು ಹೇಳಿದ್ದಾರೆ. ಪ್ರತಿಭಟನಾಕಾರರ ಸಮಸ್ಯೆಗಳನ್ನು ಸರ್ಕಾರ ಆಲಿಸಲಿದೆ. ಆದರೆ ಹಿಂಸಾಚಾರಕ್ಕೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸೆಪ್ಟೆಂಬರ್ ಮಧ್ಯಭಾಗದಲ್ಲಿ ಪ್ಯಾರಿಸ್ನ ಹೊರವಲಯದ ಪ್ರೌಢಶಾಲಾ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪ್ರತಿಭಟನೆ ಆರಂಭಿಸಿದ್ದರು. ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿರುವುದು, ಶಾಲಾ ಕಟ್ಟಡಗಳ ಹದಗೆಟ್ಟ ಸ್ಥಿತಿ ಮತ್ತು ಶಿಕ್ಷಕರ ಕೊರತೆಯನ್ನು ಪರಿಹರಿಸಬೇಕೆಂದು ಅವರು ಒತ್ತಾಯಿಸಿದ್ದರು.
ಬಳಿಕ ಕಾರ್ಮಿಕ ಸಂಘಟನೆಗಳು ಮತ್ತು ‘ಯೆಲ್ಲೋ ವೆಸ್ಟ್’ ಚಳವಳಿಯ ಕಾರ್ಯಕರ್ತರೂ ಪ್ರತಿಭಟನೆಯಲ್ಲಿ ಸೇರಿಕೊಂಡರು. ಇದರಿಂದ ಜೀವನ ವೆಚ್ಚದ ಏರಿಕೆ ಮತ್ತು ಸಾರ್ವಜನಿಕ ಸೇವೆಗಳ ಕುಸಿತದ ವಿರುದ್ಧದ ರಾಷ್ಟ್ರವ್ಯಾಪಿ ಹೋರಾಟವಾಗಿ ಪ್ರತಿಭಟನೆ ವಿಸ್ತರಿಸಿತು.
ಅಗತ್ಯ ಹೆಚ್ಚಿರುವ ಶಾಲೆಗಳಿಗೆ 3,000ಕ್ಕೂ ಹೆಚ್ಚು ತಾತ್ಕಾಲಿಕ ಶಿಕ್ಷಕರನ್ನು ನಿಯೋಜಿಸಲು ಸರ್ಕಾರ ಯೋಜನೆ ಪ್ರಕಟಿಸಿದೆ. ಇದರ ಜೊತೆಗೆ ಹಲವು ನೂರು ಹೆಚ್ಚುವರಿ ನೇಮಕಾತಿಗಳಿಗೂ ಅನುಮತಿ ನೀಡಿದೆ. ಆದರೆ ಹಣಕಾಸಿನ ಒತ್ತಡ ಮತ್ತು ರಾಜಕೀಯ ಭಿನ್ನಾಭಿಪ್ರಾಯಗಳಿಂದಾಗಿ ವ್ಯಾಪಕ ಸುಧಾರಣೆಗಳನ್ನು ಜಾರಿಗೆ ತರುವುದು ಕಷ್ಟಕರವಾಗಿದೆ.
ಆರ್ಥಿಕ ಒತ್ತಡವೂ ಸರ್ಕಾರಕ್ಕೆ ಸವಾಲು
ಜೂನ್ ಅಂತ್ಯದ ವೇಳೆಗೆ ಫ್ರಾನ್ಸ್ನ ಸಾರ್ವಜನಿಕ ಸಾಲ ಸುಮಾರು 3.6 ಟ್ರಿಲಿಯನ್ ಯೂರೋಗಳಷ್ಟಿತ್ತು. ಇದು ದೇಶದ ವಾರ್ಷಿಕ ಆರ್ಥಿಕ ಉತ್ಪಾದನೆಯ ಶೇ. 119ಕ್ಕೆ ಸಮಾನವಾಗಿದೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.
ಈ ವರ್ಷ ದೇಶದ ವಿತ್ತೀಯ ಕೊರತೆ ಆರ್ಥಿಕ ಉತ್ಪಾದನೆಯ ಶೇ. 5.4ರಷ್ಟಾಗಬಹುದು ಎಂದು ಸರ್ಕಾರ ಅಂದಾಜಿಸಿದೆ. 2027ರಲ್ಲಿ ಅದನ್ನು ಶೇ. 5ಕ್ಕೆ ಇಳಿಸುವ ಗುರಿಯನ್ನು ಹೊಂದಿದೆ.
ಅಧ್ಯಕ್ಷ ಮ್ಯಾಕ್ರನ್ ಅವರ ಬೆಂಬಲಿಗರಿಗೆ ಸಂಸತ್ತಿನಲ್ಲಿ ಬಹುಮತವಿಲ್ಲ. ಹೀಗಾಗಿ ಪ್ರಮುಖ ನೀತಿ ಕ್ರಮಗಳಿಗೆ ಅಗತ್ಯ ಬೆಂಬಲ ಪಡೆಯುವುದೂ ಸರ್ಕಾರಕ್ಕೆ ಸವಾಲಾಗಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
