ಸುಸಂಸ್ಕೃತ ಅವಿಭಕ್ತ ಕುಟುಂಬದಲ್ಲಿ ಜನಿಸಿದ ನೀತಾ ಪರಶುರಾಮ್ ಮೇತ್ರಾಣಿ ಅವರು ಮೂಲತಃ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಗಜೇಂದ್ರಗಡದವರು. ಹುಬ್ಬಳ್ಳಿಯ ದೈವಭಕ್ತ ಕುಟುಂಬದಲ್ಲಿ ಬೆಳೆದ ಅವರು, ಅಜ್ಜ-ಅಜ್ಜಿ, ಅಪ್ಪ-ಅಮ್ಮ, ದೊಡ್ಡಪ್ಪ-ದೊಡ್ಡಮ್ಮ ಹೀಗೆ ಎಲ್ಲರಿಂದಲೂ ಸಂಸ್ಕಾರ, ಧರ್ಮಪ್ರೇಮ, ನಮ್ಮ ವೀರ ಪರಂಪರೆ, ರಾಮಾಯಣ, ಮಹಾಭಾರತ, ವೇದಗಳ ಮಾಹಿತಿ, ಸಂಗೀತದ ಜ್ಞಾನ ಹಾಗೂ ಕರಕುಶಲ ಕಲೆಗಳ ಬಗ್ಗೆ ತಿಳಿದುಕೊಳ್ಳುತ್ತಾ, ಕಲಿಯುತ್ತಾ ಬೆಳೆದರು. ಇವೆಲ್ಲವೂ ನೀತಾ ಮೇತ್ರಾಣಿ ಅವರ ಬಾಲ್ಯಕ್ಕೆ ಗಟ್ಟಿಯಾದ ಅಡಿಪಾಯ ಹಾಕಿದವು.
ಶಿಕ್ಷಣದ ನಂತರ 2002ರಲ್ಲಿ ಪರಶುರಾಮ್ ಮೇತ್ರಾಣಿ ಅವರೊಂದಿಗೆ ವಿವಾಹವಾದರು. ಅತ್ತೆಯ ಮನೆಯಲ್ಲಿಯೂ ಮಾವನವರು ಜನಸಂಘದ ಕಾಲದಿಂದಲೇ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಾ ಬಂದವರು. ಅವರಿಂದ ಮಾರ್ಗದರ್ಶನ ದೊರೆಯಿತು. ದೇಶ, ಧರ್ಮ, ಸಾಮಾಜಿಕ ಹಾಗೂ ರಾಜಕೀಯ ಜ್ಞಾನ ಸೇರಿದಂತೆ ಹಲವು ವಿಷಯಗಳ ಕುರಿತು ತಿಳಿದುಕೊಳ್ಳಲು ಅವಕಾಶ ದೊರೆಯಿತು. ಪತಿಯ ಸಂಪೂರ್ಣ ಸಹಕಾರವೂ ಸಿಕ್ಕಿತು. ಹೀಗೆ ನೀತಾ ಮೇತ್ರಾಣಿ ಅವರು ಬೆಳೆದರು.
2007ರಲ್ಲಿ ಮೊದಲ ಬಾರಿಗೆ ಮಹಿಳೆಯರನ್ನು ಒಗ್ಗೂಡಿಸಿ ಸ್ತ್ರೀಶಕ್ತಿ ಸಂಘಟನೆಯನ್ನು ರಚಿಸಿದರು. ಉಳಿತಾಯ ಮಾಡುವುದು, ಸಣ್ಣಪುಟ್ಟ ಸಾಲಗಳನ್ನು ವಿತರಿಸುವುದು ಹಾಗೂ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಲು ಪ್ರೋತ್ಸಾಹಿಸುವ ಕಾರ್ಯವನ್ನು ಆರಂಭಿಸಿದರು. ಹತ್ತಿರದ ದೇವಸ್ಥಾನಗಳಲ್ಲಿ ಸಣ್ಣಪುಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಸಾಮಾಜಿಕ ಕ್ಷೇತ್ರದಲ್ಲಿ ಬೆಳೆಯಲು ಪ್ರಾರಂಭಿಸಿದರು. ಈ ಕಾರ್ಯದ ಶ್ರೇಯಸ್ಸು ಶ್ರೀಮತಿ ನೀತಾ ಮೇತ್ರಾಣಿ ಅವರಿಗೆ ಸಲ್ಲುತ್ತದೆ.
ಹುಬ್ಬಳ್ಳಿಯ ಕಮರಿಪೇಟೆಯಲ್ಲಿರುವ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಪಂಚ ಕಮಿಟಿ ಹಾಗೂ ಮಿತ್ರಮಂಡಳಿಯವರ ಮನವೊಲಿಸಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಳ್ಳುವಲ್ಲಿ ಸಹಕರಿಸಿದರು. ಓಣಿಯಲ್ಲಿರುವ ಮಹಿಳೆಯರು ಮತ್ತು ಮಕ್ಕಳಿಗೆ ಸರ್ಕಾರದ ಸೌಲಭ್ಯಗಳು ದೊರೆಯದಿದ್ದಾಗ, ಅವರಿಗೆ ನ್ಯಾಯ ದೊರಕಿಸಿಕೊಡಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವಲ್ಲಿ ಮೇತ್ರಾಣಿ ಅವರ ಪಾತ್ರ ದೊಡ್ಡದು.
ನೀರು, ರಸ್ತೆ, ಚರಂಡಿ ಸೇರಿದಂತೆ ಹಲವು ಮೂಲಸೌಕರ್ಯ ಸಮಸ್ಯೆಗಳ ವಿರುದ್ಧ ಧ್ವನಿ ಎತ್ತಿ, ಅವುಗಳನ್ನು ಸರಿಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕಮರಿಪೇಟೆಯ ಜೈ ಮಾತಾ ಮಹಿಳಾ ಮಂಡಳಿಯಲ್ಲಿ ಕಳೆದ ಹನ್ನೊಂದು ವರ್ಷಗಳಿಂದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. 12 ಸ್ತ್ರೀಶಕ್ತಿ ಸಂಘಗಳ ಒಕ್ಕೂಟದ ಅಧ್ಯಕ್ಷೆಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಮಹಿಳೆಯರಿಗೆ ಸ್ವಉದ್ಯೋಗ, ಸಾಲ ಸೌಲಭ್ಯ ಹಾಗೂ ತರಬೇತಿ ಒದಗಿಸುವ ಕೆಲಸದಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಹಿಂದೂ ಧರ್ಮದ ಉಳಿವಿಗಾಗಿ ಹಾಗೂ ಹಿಂದೂ ಜನಜಾಗೃತಿಯ ಕಾರ್ಯಗಳಲ್ಲಿ ತಮ್ಮಿಂದಾದ ಸೇವೆ ಸಲ್ಲಿಸುತ್ತಿರುವ ಅವರು, ಲವ್ ಜಿಹಾದ್ ಮತ್ತು ಸನಾತನ ಧರ್ಮದ ಜಾಗೃತಿಗೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ಹೆಣ್ಣುಮಕ್ಕಳ ಸಂಸ್ಕಾರದ ಬಗ್ಗೆ ಗಂಟೆಗಟ್ಟಲೆ ನಿರರ್ಗಳವಾಗಿ ಮಾತನಾಡುವುದರ ಜೊತೆಗೆ, ಎಸ್ಎಸ್ಕೆ ಸಮಾಜದ ಶ್ರೀ ನವಶಕ್ತಿ ಧರ್ಮಶಿಕ್ಷಣ ವಿಭಾಗದ ಪ್ರಮುಖರಾಗಿ ಸಮಾಜದ ಓರೆಕೋರೆಗಳನ್ನು ತಿದ್ದುವ ಕಾರ್ಯವನ್ನು ಶ್ರೀಮತಿ ನೀತಾ ಮೇತ್ರಾಣಿ ಅವರು ನಿರಂತರವಾಗಿ ಮಾಡುತ್ತಿರುವುದು ಹೆಮ್ಮೆಯ ಸಂಗತಿ.
‘ಶ್ರೀ ಶಕ್ತಿ’ ಎಂಬ ಹೆಣ್ಣುಮಕ್ಕಳ ತಂಡವನ್ನು ರಚಿಸಿ, ಮಕ್ಕಳಿಗೆ ಸ್ವರಕ್ಷಣಾ ತರಬೇತಿಯ ಭಾಗವಾಗಿ ಲಾಠಿ ಮತ್ತು ಕರಾಟೆ ಕಲಿಸುವುದರ ಜೊತೆಗೆ ಧರ್ಮಶಿಕ್ಷಣವನ್ನೂ ನೀಡುತ್ತಿದ್ದಾರೆ. ಶ್ಲೋಕಗಳ ಪಠಣ, ಭಗವದ್ಗೀತೆಯ ಪಠಣ ಹಾಗೂ ವೀರವನಿತೆಯರ ವೀರಪರಂಪರೆಯ ಕಥೆಗಳನ್ನು ಹೇಳುವ ಮೂಲಕ ಮಕ್ಕಳ ಮನಸ್ಸಿನಲ್ಲಿ ಸನಾತನ ಧರ್ಮದ ಬಗ್ಗೆ ಪ್ರೀತಿ ಹೆಚ್ಚಾಗಲು ಪ್ರಯತ್ನಿಸುತ್ತಿದ್ದಾರೆ.
ಮುಖ್ಯವಾಗಿ, ಆಧುನಿಕ ಜೀವನಶೈಲಿಯಲ್ಲಿ ಟಿ.ವಿ., ಮೊಬೈಲ್, ಫೇಸ್ಬುಕ್ ಮುಂತಾದವುಗಳ ಆಕರ್ಷಣೆಗೆ ಒಳಗಾಗಿ, ಲವ್ ಜಿಹಾದ್ನ ಬಲೆಗೆ ಸಿಲುಕಿ ತಮ್ಮ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವ ಘಟನೆಗಳು ಸಾಮಾನ್ಯವಾಗಿವೆ. ಈ ಪರಿಸ್ಥಿತಿಯನ್ನು ಸರಿಪಡಿಸಲು ಯುವತಿಯರಿಗೆ ಧರ್ಮಶಿಕ್ಷಣ ನೀಡುವ ಕಾರ್ಯವನ್ನು ಶ್ರೀಮತಿ ನೀತಾ ಮೇತ್ರಾಣಿ ಅವರು ಮಾಡುತ್ತಿದ್ದಾರೆ. ಅವರ ನಿಸ್ವಾರ್ಥ ಸಮಾಜಸೇವೆಯ ಕಾರ್ಯವೈಖರಿ ಪ್ರತಿಯೊಬ್ಬ ಮಹಿಳೆಯಲ್ಲಿಯೂ ಬೆಳೆದುಬರಬೇಕಿದೆ.
ನಮ್ಮ ಸಮಾಜದಲ್ಲಿ ನೀತಾ ಮೇತ್ರಾಣಿ ಅವರಂತಹ ಸಾವಿರಾರು ವೀರವನಿತೆಯರು ಮುಂದೆ ಬಂದಾಗ ಸಮಾಜ ಸರಿದಾರಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ. ನೀತಾ ಮೇತ್ರಾಣಿ ಅವರ ಸಮಾಜಮುಖಿ ಕಾರ್ಯಗಳನ್ನು ಸರ್ಕಾರ ಹಾಗೂ ಸಂಘ-ಸಂಸ್ಥೆಗಳು ಗುರುತಿಸಿ ಪ್ರೋತ್ಸಾಹಿಸಬೇಕು. ಮಹಿಳಾ ಸಮಾಜದಲ್ಲಿ ತಮ್ಮದೇ ಆದ ವಿಶಿಷ್ಟ ಗುಣಗಳಿಂದ ವಿಭಿನ್ನವಾಗಿ ಗುರುತಿಸಿಕೊಂಡಿರುವ ಶ್ರೀಮತಿ ನೀತಾ ಮೇತ್ರಾಣಿ ಅವರ ಮುಂದಿನ ಎಲ್ಲ ಕಾರ್ಯಗಳಿಗೂ ಪ್ರತಿಯೊಬ್ಬರೂ ಬೆಂಬಲವಾಗಿ ನಿಂತು ಸಹಕಾರ ನೀಡಬೇಕು. ಆಗ ಅವರ ಶ್ರಮ ಸಾರ್ಥಕವಾಗುತ್ತದೆ.
- ಚಿದಂಬರ.ಪಿ. ನಿಂಬರಗಿ
ಶಿಕ್ಷಣಶ್ರೀ ರಾಜ್ಯ ಪ್ರಶಸ್ತಿ ಪುರಸ್ಕೃತರು
ಶಿರೋಳ–ಧಾರವಾಡ
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
