ಭಾರತದ ನಾಗರಿಕತೆಯ ಮೌಲ್ಯಗಳು ಮತ್ತು ದಶಕಗಳ ಪ್ರಜಾಪ್ರಭುತ್ವದ ಸಂಕಲ್ಪದ ಬಲದಿಂದ ದೇಶದ ಪಯಣ ಮುಂದುವರಿದಿದೆ. ಸಾಮಾಜಿಕ ನ್ಯಾಯ ಮತ್ತು ರಾಷ್ಟ್ರೀಯ ಏಕತೆಯ ಮೂಲಕ ಭಾರತ ಸಾಧಿಸಿರುವ ಪ್ರಗತಿ ಸ್ಫೂರ್ತಿದಾಯಕವಾಗಿದೆ.
ಭಾರತದ ಸಂವಿಧಾನವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಸ್ವಾಭಿಮಾನ ಮತ್ತು ಅಸ್ಮಿತೆಯನ್ನು ಪ್ರತಿನಿಧಿಸುವ ಪವಿತ್ರ ಗ್ರಂಥವಾಗಿದೆ. ಇದು ಕೇವಲ ಆಡಳಿತ ನಡೆಸುವ ದಾಖಲೆಯಲ್ಲ. ಬದಲಾಗಿ, ನಮ್ಮ ರಾಷ್ಟ್ರದ ಆತ್ಮ, ಪ್ರಜಾಪ್ರಭುತ್ವದ ಪ್ರಜ್ಞೆ, ಸ್ವಾತಂತ್ರ್ಯದ ಮೌಲ್ಯಗಳು ಮತ್ತು ಕೋಟ್ಯಂತರ ನಾಗರಿಕರ ಭವಿಷ್ಯದ ಆಶಯಗಳನ್ನು ಒಳಗೊಂಡಿದೆ. ಸಂವಿಧಾನವು ನಮಗೆ ವಿವಿಧ ಹಕ್ಕುಗಳನ್ನು ನೀಡುವುದರ ಜತೆಗೆ, ನಮ್ಮ ಕರ್ತವ್ಯಗಳ ಬಗ್ಗೆಯೂ ಅರಿವು ಮೂಡಿಸುತ್ತದೆ.
ಅಧಿಕಾರಕ್ಕೆ ಮಿತಿ ವಿಧಿಸುವುದರ ಜತೆಗೆ ರಾಷ್ಟ್ರವನ್ನು ಮುನ್ನಡೆಸುವ ಮಾರ್ಗದರ್ಶಿಯಾಗಿ ಸಂವಿಧಾನ ಕಾರ್ಯನಿರ್ವಹಿಸುತ್ತದೆ. ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವದ ತತ್ವಗಳು ಇದರ ಆಧಾರವಾಗಿವೆ. ವಿಶ್ವದ ಅತ್ಯಂತ ವಿಸ್ತೃತ ಲಿಖಿತ ಸಂವಿಧಾನಗಳಲ್ಲಿ ಒಂದಾಗಿರುವ ಭಾರತದ ಸಂವಿಧಾನದ ವಿಶೇಷತೆ ಅದರ ಸಮಗ್ರತೆಯಲ್ಲಿ ಮಾತ್ರವಲ್ಲ, ಬದಲಾಗುತ್ತಿರುವ ಕಾಲಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯದಲ್ಲಿಯೂ ಇದೆ.
1949ರ ನವೆಂಬರ್ 26ರಂದು ಸಂವಿಧಾನ ರಚನಾ ಸಭೆಯು ಭಾರತದ ಸಂವಿಧಾನವನ್ನು ಅಂಗೀಕರಿಸಿ, ಜಾರಿಗೆ ತರುವ ನಿರ್ಧಾರ ಕೈಗೊಂಡಿತು. 1950ರ ಜನವರಿ 26ರಂದು ಸಂವಿಧಾನ ಜಾರಿಗೆ ಬಂದ ನಂತರ ಭಾರತವು ಸಾರ್ವಭೌಮ ಪ್ರಜಾಸತ್ತಾತ್ಮಕ ಗಣರಾಜ್ಯವಾಯಿತು. ಡಾ. ಭೀಮರಾವ್ ಅಂಬೇಡ್ಕರ್, ಡಾ. ರಾಜೇಂದ್ರ ಪ್ರಸಾದ್ ಸೇರಿದಂತೆ ಸಂವಿಧಾನ ರಚನಾ ಸಭೆಯ ಅನೇಕ ಸದಸ್ಯರ ದೂರದೃಷ್ಟಿ, ಚಿಂತನೆ ಮತ್ತು ರಾಷ್ಟ್ರಪ್ರೇಮವು ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಲವಾದ ಅಡಿಪಾಯ ಹಾಕಿತು.
ಭಾಷೆ, ಧರ್ಮ, ಸಂಸ್ಕೃತಿ, ಸಂಪ್ರದಾಯ ಮತ್ತು ಸಾಮಾಜಿಕ ಹಿನ್ನೆಲೆಯ ವೈವಿಧ್ಯತೆಯ ಹೊರತಾಗಿಯೂ ಪ್ರತಿಯೊಬ್ಬ ನಾಗರಿಕನು ಒಂದೇ ರಾಷ್ಟ್ರೀಯ ಅಸ್ಮಿತೆಯೊಂದಿಗೆ ಮುನ್ನಡೆಯುವ ವ್ಯವಸ್ಥೆಯನ್ನು ಸಂವಿಧಾನ ರಚನಾಕಾರರು ರೂಪಿಸಿದ್ದರು.
ಭಾರತದ ಸಂವಿಧಾನದ 76 ವರ್ಷಗಳಿಗೂ ಮೀರಿದ ಈ ಪಯಣವು ಅದರ ಮೂಲ ಸ್ವರೂಪವನ್ನು ಮೀರಿ ಬೆಳೆದಿದೆ. ಇಲ್ಲಿಯವರೆಗೆ ಸಂವಿಧಾನಕ್ಕೆ 106 ತಿದ್ದುಪಡಿಗಳನ್ನು ತರಲಾಗಿದೆ. ದೇಶದ ಬದಲಾಗುತ್ತಿರುವ ಅಗತ್ಯಗಳು, ಪರಿಸ್ಥಿತಿಗಳು ಹಾಗೂ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳಿಗೆ ಅನುಗುಣವಾಗಿ ಈ ತಿದ್ದುಪಡಿಗಳನ್ನು ಮಾಡಲಾಗಿದೆ. ಇದು ಭಾರತದ ಪ್ರಜಾಪ್ರಭುತ್ವದ ಬೆಳವಣಿಗೆ ಮತ್ತು ಸಂವಿಧಾನದ ಬಗ್ಗೆ ಜನರಲ್ಲಿ ಹೆಚ್ಚುತ್ತಿರುವ ಅರಿವಿಗೆ ಸಾಕ್ಷಿಯಾಗಿದೆ.
ಸಂವಿಧಾನ ತಿದ್ದುಪಡಿ: ಬದಲಾವಣೆ ಮತ್ತು ಪ್ರಗತಿಯ ಹಾದಿ
ಸಂವಿಧಾನದ 368ನೇ ವಿಧಿಯು ಸಂವಿಧಾನಕ್ಕೆ ತಿದ್ದುಪಡಿ ತರುವ ಅಧಿಕಾರವನ್ನು ಸಂಸತ್ತಿಗೆ ನೀಡುತ್ತದೆ. ದೇಶದ ಬದಲಾಗುತ್ತಿರುವ ಅಗತ್ಯಗಳಿಗೆ ಅನುಗುಣವಾಗಿ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಈ ಅಧಿಕಾರ ನೆರವಾಗುತ್ತದೆ. ಆದರೆ, ಇದಕ್ಕೂ ಸಂವಿಧಾನಾತ್ಮಕ ಮಿತಿಗಳಿವೆ. ಸುಪ್ರೀಂ ಕೋರ್ಟ್ ಪ್ರತಿಪಾದಿಸಿರುವ ‘ಮೂಲ ರಚನೆಯ ಸಿದ್ಧಾಂತ’ದ ಪ್ರಕಾರ, ಸಂಸತ್ತು ಸಂವಿಧಾನಕ್ಕೆ ತಿದ್ದುಪಡಿ ತರಬಹುದಾದರೂ ಅದರ ಮೂಲ ಆಶಯವನ್ನು ನಾಶಪಡಿಸುವಂತಿಲ್ಲ.
1951ರ ಮೊದಲ ಸಂವಿಧಾನ ತಿದ್ದುಪಡಿಯು ಭೂ ಸುಧಾರಣೆ ಮತ್ತು ಸಾಮಾಜಿಕ ಬದಲಾವಣೆಗಳಿಗೆ ಸಂವಿಧಾನಾತ್ಮಕ ರಕ್ಷಣೆ ನೀಡಿತು. 1956ರ ಏಳನೇ ತಿದ್ದುಪಡಿಯು ರಾಜ್ಯಗಳ ಮರುವಿಂಗಡಣೆಗೆ ಹೊಸ ದಿಕ್ಕು ನೀಡಿತು. 24ನೇ ತಿದ್ದುಪಡಿಯು ಸಂವಿಧಾನಕ್ಕೆ ತಿದ್ದುಪಡಿ ತರುವ ಸಂಸತ್ತಿನ ಅಧಿಕಾರದ ವ್ಯಾಪ್ತಿಯನ್ನು ಸ್ಪಷ್ಟಪಡಿಸಿತು.
1976ರ 42ನೇ ತಿದ್ದುಪಡಿಯು ಭಾರತದ ಸಂವಿಧಾನದ ಇತಿಹಾಸದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಯಿತು. ಸಂವಿಧಾನದ ಪ್ರಸ್ತಾವನೆಯಲ್ಲಿ ‘ಸಮಾಜವಾದಿ’, ‘ಜಾತ್ಯತೀತ’ ಮತ್ತು ‘ಅಖಂಡತೆ’ ಎಂಬ ಪದಗಳನ್ನು ಸೇರಿಸಲಾಯಿತು. ನಾಗರಿಕರ ಮೂಲಭೂತ ಕರ್ತವ್ಯಗಳನ್ನೂ ಸಂವಿಧಾನದಲ್ಲಿ ಸೇರಿಸಲಾಯಿತು.
ತುರ್ತು ಪರಿಸ್ಥಿತಿಯ ನಂತರ 1978ರಲ್ಲಿ ಜಾರಿಗೆ ಬಂದ 44ನೇ ತಿದ್ದುಪಡಿಯು ನಾಗರಿಕ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವದ ರಕ್ಷಣೆಯನ್ನು ಬಲಪಡಿಸುವ ಹಲವು ಬದಲಾವಣೆಗಳನ್ನು ತಂದಿತು. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಭವಿಷ್ಯದಲ್ಲಿ ತುರ್ತು ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಲು ಸಾಧ್ಯವಾಗದಂತೆ ಈ ತಿದ್ದುಪಡಿ ಹಲವು ರಕ್ಷಣೆಗಳನ್ನು ಒದಗಿಸಿತು.
ಇತರ ಸಂವಿಧಾನ ತಿದ್ದುಪಡಿಗಳ ಪೈಕಿ 52ನೇ ತಿದ್ದುಪಡಿಯು ಪಕ್ಷಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿತು. 61ನೇ ತಿದ್ದುಪಡಿಯು ಮತದಾನದ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿತು. 73ನೇ ಮತ್ತು 74ನೇ ತಿದ್ದುಪಡಿಗಳು ಪಂಚಾಯತ್ ರಾಜ್ ಸಂಸ್ಥೆಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಿಗೆ ಸಂವಿಧಾನಾತ್ಮಕ ಸ್ಥಾನಮಾನ ನೀಡುವ ಮೂಲಕ ಪ್ರಜಾಪ್ರಭುತ್ವವನ್ನು ತಳಮಟ್ಟಕ್ಕೆ ವಿಸ್ತರಿಸಿದವು. 86ನೇ ಸಂವಿಧಾನ ತಿದ್ದುಪಡಿಯು 6ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ಕಲ್ಪಿಸಿತು.
ಈ ಬದಲಾವಣೆಗಳು ಸಾಮಾನ್ಯ ನಾಗರಿಕರ ಬದುಕಿನೊಂದಿಗೆ ಸಂವಿಧಾನದ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದವು.
ಅಟಲ್ ಬಿಹಾರಿ ವಾಜಪೇಯಿ ಆಡಳಿತ: ಶಿಕ್ಷಣ, ಸಾಮಾಜಿಕ ಒಳಗೊಳ್ಳುವಿಕೆ ಮತ್ತು ರಾಜಕೀಯ ಸ್ಥಿರತೆ
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯು ಸಂವಿಧಾನದ ಬೆಳವಣಿಗೆಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಅವರ ನಾಯಕತ್ವದಲ್ಲಿ ಶಿಕ್ಷಣ, ರಾಜಕೀಯ ಸ್ಥಿರತೆ, ಸಾಮಾಜಿಕ ಪ್ರಾತಿನಿಧ್ಯ ಮತ್ತು ಭಾಷೆಗಳಿಗೆ ಗೌರವ ನೀಡುವ ವಿಚಾರಗಳಲ್ಲಿ ಮಹತ್ವದ ಬದಲಾವಣೆಗಳಾದವು.
2002ರ 86ನೇ ಸಂವಿಧಾನ ತಿದ್ದುಪಡಿಯು ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಹೆಜ್ಜೆಯಾಯಿತು. ಸಂವಿಧಾನದ 21ಎ ವಿಧಿಯ ಮೂಲಕ 6ರಿಂದ 14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ಕಲ್ಪಿಸಲಾಯಿತು.
ಇದು ಕೇವಲ ಶಿಕ್ಷಣ ನೀತಿಯ ಬದಲಾವಣೆಯಾಗಿರಲಿಲ್ಲ. ಮುಂದಿನ ಪೀಳಿಗೆಗೆ ಸಮಾನ ಅವಕಾಶ, ಸಾಮಾಜಿಕ ನ್ಯಾಯ ಮತ್ತು ಸ್ವಾವಲಂಬನೆ ಒದಗಿಸುವ ರಾಷ್ಟ್ರೀಯ ಬದ್ಧತೆಯಾಗಿತ್ತು.
2003ರ 91ನೇ ಸಂವಿಧಾನ ತಿದ್ದುಪಡಿಯು ಸಚಿವ ಸಂಪುಟದ ಗಾತ್ರಕ್ಕೆ ಮಿತಿ ವಿಧಿಸುವ ಮೂಲಕ ಆಡಳಿತದಲ್ಲಿ ರಾಜಕೀಯ ಸ್ಥಿರತೆ, ಹೊಣೆಗಾರಿಕೆ ಮತ್ತು ಶಿಸ್ತನ್ನು ಕಾಪಾಡಲು ನೆರವಾಯಿತು. ಪಕ್ಷಾಂತರಕ್ಕೆ ಸಂಬಂಧಿಸಿದ ನಿಯಮಗಳನ್ನೂ ಮತ್ತಷ್ಟು ಬಲಪಡಿಸಲಾಯಿತು.
92ನೇ ಸಂವಿಧಾನ ತಿದ್ದುಪಡಿಯ ಮೂಲಕ ಬೋಡೋ, ಡೋಗ್ರಿ, ಮೈಥಿಲಿ ಮತ್ತು ಸಂತಾಲಿ ಭಾಷೆಗಳನ್ನು ಸಂವಿಧಾನದ ಎಂಟನೇ ಅನುಸೂಚಿಗೆ ಸೇರಿಸಲಾಯಿತು. ಭಾಷಾ ವೈವಿಧ್ಯತೆ, ಸಾಂಸ್ಕೃತಿಕ ಅಸ್ಮಿತೆ ಮತ್ತು ಭಾರತೀಯ ಸಂಪ್ರದಾಯಗಳಿಗೆ ಗೌರವ ನೀಡುವ ನಿಟ್ಟಿನಲ್ಲಿ ಇದೊಂದು ಮಹತ್ವದ ಕ್ರಮವಾಗಿತ್ತು.
ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯ ಸಂವಿಧಾನಾತ್ಮಕ ದೃಷ್ಟಿಕೋನವು ಪ್ರಜಾಪ್ರಭುತ್ವದ ಸಂಸ್ಥೆಗಳ ಘನತೆಯನ್ನು ಎತ್ತಿಹಿಡಿಯುವುದು, ಸಾಮಾಜಿಕ ಒಳಗೊಳ್ಳುವಿಕೆಯನ್ನು ಉತ್ತೇಜಿಸುವುದು ಮತ್ತು ದೇಶದ ವೈವಿಧ್ಯತೆಯನ್ನು ಗೌರವಿಸುತ್ತಲೇ ರಾಷ್ಟ್ರೀಯ ಏಕತೆಯನ್ನು ಬಲಪಡಿಸುವುದಾಗಿತ್ತು.
ಅವರ ಆಡಳಿತಾವಧಿಯಲ್ಲಿ ಜಾರಿಗೆ ಬಂದ ಸಂವಿಧಾನ ತಿದ್ದುಪಡಿಗಳು ಶಿಕ್ಷಣ, ರಾಜಕೀಯ ವ್ಯವಸ್ಥೆ ಮತ್ತು ಭಾಷಾ ಹಕ್ಕುಗಳನ್ನು ಭಾರತದ ಸಂವಿಧಾನದ ಮುಖ್ಯವಾಹಿನಿಗೆ ತಂದವು.
ನರೇಂದ್ರ ಮೋದಿ ನಾಯಕತ್ವ: ಹೊಸ ಭಾರತದ ಸಂವಿಧಾನಾತ್ಮಕ ಬೆಳವಣಿಗೆ ಮತ್ತು ಮಹತ್ವದ ಬದಲಾವಣೆಗಳು
2014ರಿಂದ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ಸಂವಿಧಾನಾತ್ಮಕ ಪಯಣ ಹಲವು ಮಹತ್ವದ ಮೈಲಿಗಲ್ಲುಗಳನ್ನು ತಲುಪಿದೆ. ರಾಷ್ಟ್ರೀಯ ಏಕತೆ, ಆರ್ಥಿಕ ಒಕ್ಕೂಟ ವ್ಯವಸ್ಥೆ, ಸಾಮಾಜಿಕ ನ್ಯಾಯ, ಹಿಂದುಳಿದ ವರ್ಗಗಳ ಹಕ್ಕುಗಳು ಮತ್ತು ಮಹಿಳೆಯರ ಸಬಲೀಕರಣ ಹಾಗೂ ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ಪ್ರಮುಖ ಸಂವಿಧಾನ ತಿದ್ದುಪಡಿಗಳನ್ನು ಸಂಸತ್ತು ಜಾರಿಗೆ ತಂದಿದೆ.
ರಾಷ್ಟ್ರೀಯ ನ್ಯಾಯಾಂಗ ನೇಮಕಾತಿ ಆಯೋಗವನ್ನು (NJAC) ರಚಿಸುವ ಉದ್ದೇಶದಿಂದ 99ನೇ ಸಂವಿಧಾನ ತಿದ್ದುಪಡಿಯನ್ನು ತರಲಾಗಿತ್ತು. ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯಲ್ಲಿ ವಿವಿಧ ಸಂಸ್ಥೆಗಳ ಭಾಗವಹಿಸುವಿಕೆಯನ್ನು ಖಚಿತಪಡಿಸುವುದು ಇದರ ಉದ್ದೇಶವಾಗಿತ್ತು. ಆದರೆ, 2015ರಲ್ಲಿ ಸುಪ್ರೀಂ ಕೋರ್ಟ್ ಈ ತಿದ್ದುಪಡಿಯನ್ನು ಅಸಂವಿಧಾನಿಕ ಎಂದು ಘೋಷಿಸಿತು. ಸಂವಿಧಾನ ತಿದ್ದುಪಡಿ ತರುವ ಸಂಸತ್ತಿನ ಅಧಿಕಾರ ಮತ್ತು ನ್ಯಾಯಾಂಗದ ಸ್ವಾತಂತ್ರ್ಯದ ನಡುವಿನ ಸಮತೋಲನಕ್ಕೆ ಇದು ಪ್ರಮುಖ ಉದಾಹರಣೆಯಾಗಿದೆ.
2015ರ 100ನೇ ಸಂವಿಧಾನ ತಿದ್ದುಪಡಿಯು ಭಾರತ ಮತ್ತು ಬಾಂಗ್ಲಾದೇಶ ನಡುವಿನ ಭೂ ಗಡಿ ಒಪ್ಪಂದ ಜಾರಿಗೆ ಬರಲು ನೆರವಾಯಿತು. ಗಡಿ ಪ್ರದೇಶಗಳಲ್ಲಿದ್ದ ಬಹುಕಾಲದ ಎನ್ಕ್ಲೇವ್ಗಳ ಸಮಸ್ಯೆಯನ್ನು ಬಗೆಹರಿಸಿ, ಅಲ್ಲಿನ ನಿವಾಸಿಗಳು ಎದುರಿಸುತ್ತಿದ್ದ ತೊಂದರೆಗಳನ್ನು ನಿವಾರಿಸಲಾಯಿತು. ಈ ಐತಿಹಾಸಿಕ ಕ್ರಮವು ರಾಷ್ಟ್ರೀಯ ಏಕತೆಯನ್ನು ಬಲಪಡಿಸುವುದರ ಜತೆಗೆ ಗಡಿ ಪ್ರದೇಶದ ಜನರ ಬದುಕಿಗೆ ಸ್ಥಿರತೆ ತಂದಿತು.
2016ರ 101ನೇ ಸಂವಿಧಾನ ತಿದ್ದುಪಡಿಯು ಸರಕು ಮತ್ತು ಸೇವಾ ತೆರಿಗೆ (GST) ಜಾರಿಗೆ ತರಲು ಸಂವಿಧಾನಾತ್ಮಕ ಚೌಕಟ್ಟನ್ನು ಒದಗಿಸಿತು.
ಇದರಿಂದ ದೇಶದ ಪರೋಕ್ಷ ತೆರಿಗೆ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಯಾಯಿತು. ಕೇಂದ್ರ ಮತ್ತು ರಾಜ್ಯಗಳ ನಡುವೆ ಹಂಚಿಕೆಯ ಆರ್ಥಿಕ ವ್ಯವಸ್ಥೆ ರೂಪುಗೊಂಡಿತು. ಜಿಎಸ್ಟಿ ಮಂಡಳಿಯು ಸಹಕಾರಿ ಒಕ್ಕೂಟ ವ್ಯವಸ್ಥೆಯ ಪ್ರಮುಖ ವೇದಿಕೆಯಾಗಿ ಬೆಳೆದಿದೆ. ಇಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತೆರಿಗೆ ನೀತಿ ಹಾಗೂ ಆರ್ಥಿಕ ಆಡಳಿತಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ಒಟ್ಟಾಗಿ ಕೈಗೊಳ್ಳುತ್ತವೆ. ಇದು ಏಕೀಕೃತ ರಾಷ್ಟ್ರೀಯ ಮಾರುಕಟ್ಟೆ ಮತ್ತು ಆರ್ಥಿಕ ಏಕೀಕರಣದತ್ತ ಮಹತ್ವದ ಹೆಜ್ಜೆಯಾಯಿತು.
2018ರ 102ನೇ ಸಂವಿಧಾನ ತಿದ್ದುಪಡಿಯ ಮೂಲಕ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಂವಿಧಾನಾತ್ಮಕ ಸ್ಥಾನಮಾನ ನೀಡಲಾಯಿತು.
2019ರ 103ನೇ ತಿದ್ದುಪಡಿಯು ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (EWS) ಶೇ.10ರವರೆಗೆ ಮೀಸಲಾತಿ ಕಲ್ಪಿಸಲು ಅವಕಾಶ ನೀಡಿತು. ಆರ್ಥಿಕ ಆಧಾರದ ಮೇಲೆ ಅವಕಾಶಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಕ್ರಮವಾಗಿತ್ತು. 2022ರಲ್ಲಿ ಸುಪ್ರೀಂ ಕೋರ್ಟ್ ಬಹುಮತದ ತೀರ್ಪಿನ ಮೂಲಕ ಈ ಮೀಸಲಾತಿಯನ್ನು ಎತ್ತಿಹಿಡಿಯಿತು.
104ನೇ ಸಂವಿಧಾನ ತಿದ್ದುಪಡಿಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ನೀಡಲಾಗಿದ್ದ ಮೀಸಲಾತಿಯನ್ನು 2030ರವರೆಗೆ ವಿಸ್ತರಿಸಿತು. ಅದೇ ವೇಳೆ, ಆಂಗ್ಲೋ-ಇಂಡಿಯನ್ ಸಮುದಾಯದ ಸದಸ್ಯರನ್ನು ನಾಮನಿರ್ದೇಶನ ಮಾಡುವ ವಿಶೇಷ ಅವಕಾಶವನ್ನು ರದ್ದುಗೊಳಿಸಲಾಯಿತು.
2021ರ 105ನೇ ಸಂವಿಧಾನ ತಿದ್ದುಪಡಿಯು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿಯನ್ನು ತಮ್ಮ ಉದ್ದೇಶಗಳಿಗಾಗಿ ಸಿದ್ಧಪಡಿಸುವ ಅಧಿಕಾರವನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸ್ಪಷ್ಟವಾಗಿ ಮರಳಿ ನೀಡಿತು.
ಇದು ಒಕ್ಕೂಟ ವ್ಯವಸ್ಥೆ, ಸಾಮಾಜಿಕ ನ್ಯಾಯ ಮತ್ತು ಆಯಾ ಪ್ರದೇಶಗಳ ಅಗತ್ಯಗಳಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳುವ ರಾಜ್ಯಗಳ ಅಧಿಕಾರಕ್ಕೆ ಉತ್ತಮ ಉದಾಹರಣೆಯಾಗಿದೆ.
2023ರ 106ನೇ ಸಂವಿಧಾನ ತಿದ್ದುಪಡಿಯಾದ ‘ನಾರಿ ಶಕ್ತಿ ವಂದನ್ ಅಧಿನಿಯಮ’ವು ಭಾರತದ ಪ್ರಜಾಪ್ರಭುತ್ವದಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿಸುವ ನಿಟ್ಟಿನಲ್ಲಿ ಐತಿಹಾಸಿಕ ಬದಲಾವಣೆಯಾಗಿದೆ. ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ದೆಹಲಿ ವಿಧಾನಸಭೆಯಲ್ಲಿ ಮಹಿಳೆಯರಿಗೆ ಸುಮಾರು ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡಲು ಇದು ಅವಕಾಶ ಕಲ್ಪಿಸುತ್ತದೆ.
ಮಹಿಳೆಯರ ರಾಜಕೀಯ ಭಾಗವಹಿಸುವಿಕೆ, ನಾಯಕತ್ವ ಮತ್ತು ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಅವರ ಪ್ರಾತಿನಿಧ್ಯವನ್ನು ಹೆಚ್ಚಿಸುವುದು ಈ ತಿದ್ದುಪಡಿಯ ಉದ್ದೇಶವಾಗಿದೆ. ಆದರೆ, ಇದರ ಅನುಷ್ಠಾನವು ನಿಗದಿತ ಜನಗಣತಿ ಮತ್ತು ಕ್ಷೇತ್ರ ಮರುವಿಂಗಡಣೆ ಪ್ರಕ್ರಿಯೆಗಳ ಮೇಲೆ ಅವಲಂಬಿತವಾಗಿದೆ.
370ನೇ ವಿಧಿ: ರಾಷ್ಟ್ರೀಯ ಏಕತೆಯ ಐತಿಹಾಸಿಕ ಅಧ್ಯಾಯ
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಸಂವಿಧಾನದ 370ನೇ ವಿಧಿಯ ವಿಶೇಷ ನಿಬಂಧನೆಗಳನ್ನು 2019ರ ಆಗಸ್ಟ್ನಲ್ಲಿ ನಿಷ್ಕ್ರಿಯಗೊಳಿಸಿದ ನಿರ್ಧಾರವು ಭಾರತದ ಸಂವಿಧಾನದ ಇತಿಹಾಸದಲ್ಲಿ ಮಹತ್ವದ ಅಧ್ಯಾಯವಾಗಿದೆ.
ರಾಷ್ಟ್ರಪತಿಗಳು ಹೊರಡಿಸಿದ ಸಂವಿಧಾನಾತ್ಮಕ ಆದೇಶಗಳು ಮತ್ತು ಸಂಸತ್ತು ಅಂಗೀಕರಿಸಿದ ಜಮ್ಮು ಮತ್ತು ಕಾಶ್ಮೀರ ಮರುವಿಂಗಡಣೆ ಕಾಯ್ದೆಯ ಮೂಲಕ ಜಮ್ಮು ಮತ್ತು ಕಾಶ್ಮೀರದ ಸಂವಿಧಾನಾತ್ಮಕ ಸ್ಥಾನಮಾನದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಲಾಯಿತು. ಹಿಂದಿನ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ಮರುವಿಂಗಡಿಸಲಾಯಿತು.
ರಾಷ್ಟ್ರೀಯ ಏಕತೆ, ಸಂವಿಧಾನದ ಏಕರೂಪತೆ ಮತ್ತು ಆಡಳಿತಾತ್ಮಕ ಮರುವಿಂಗಡಣೆಯ ದೃಷ್ಟಿಯಿಂದ ಈ ನಿರ್ಧಾರವನ್ನು ಮಹತ್ವದ ಹೆಜ್ಜೆಯೆಂದು ಪರಿಗಣಿಸಲಾಯಿತು. 2023ರ ಡಿಸೆಂಬರ್ನಲ್ಲಿ ಸುಪ್ರೀಂ ಕೋರ್ಟ್ ಈ ಬದಲಾವಣೆಯ ಸಂವಿಧಾನಾತ್ಮಕ ಸಿಂಧುತ್ವವನ್ನು ಎತ್ತಿಹಿಡಿಯಿತು.
ಈ ಬೆಳವಣಿಗೆಗಳು ಭಾರತದ ಒಕ್ಕೂಟ ವ್ಯವಸ್ಥೆ ಮತ್ತು ರಾಷ್ಟ್ರೀಯ ಏಕತೆಗೆ ಸಂಬಂಧಿಸಿದ ಸಂವಿಧಾನಾತ್ಮಕ ಚರ್ಚೆಯಲ್ಲಿ ಮಹತ್ವದ ಮೈಲಿಗಲ್ಲುಗಳಾಗಿವೆ.
ಚುನಾವಣೆಗಳ ಮೂಲಕ ಶಾಂತಿಯುತ ಅಧಿಕಾರ ಹಸ್ತಾಂತರ: ಭಾರತೀಯ ಪ್ರಜಾಪ್ರಭುತ್ವದ ಹೆಗ್ಗುರುತು
ಚುನಾವಣೆಗಳ ಮೂಲಕ ಶಾಂತಿಯುತವಾಗಿ ಅಧಿಕಾರ ಹಸ್ತಾಂತರವಾಗುವುದು ಭಾರತದ ಪ್ರಜಾಪ್ರಭುತ್ವ ಸಂಪ್ರದಾಯದ ಪ್ರಮುಖ ಸಾಧನೆಯಾಗಿದೆ. ನಾಗರಿಕರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ ಸರ್ಕಾರವನ್ನು ಆಯ್ಕೆ ಮಾಡುತ್ತಾರೆ. ಅದೇ ರೀತಿ, ಸೂಕ್ತ ಸಮಯದಲ್ಲಿ ಆ ಸರ್ಕಾರವನ್ನು ಬದಲಾಯಿಸುವ ಅಧಿಕಾರವೂ ಅವರಿಗಿದೆ.
ನಾಗರಿಕರು ಸ್ವತಂತ್ರವಾಗಿ, ನ್ಯಾಯಸಮ್ಮತವಾಗಿ ಮತ್ತು ಜವಾಬ್ದಾರಿಯುತವಾಗಿ ಮತದಾನ ಮಾಡಿದಾಗ ಮಾತ್ರ ಈ ವ್ಯವಸ್ಥೆ ಬಲವಾಗಿ ಉಳಿಯಲು ಸಾಧ್ಯ. ಚುನಾವಣೆಯಲ್ಲಿ ಜನರ ಭಾಗವಹಿಸುವಿಕೆ, ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ವಿಶ್ವಾಸ ಮತ್ತು ಸಂವಿಧಾನಾತ್ಮಕ ನಿಯಮಗಳಿಗೆ ಗೌರವ ನೀಡುವುದು ಪ್ರಜಾಪ್ರಭುತ್ವದ ಸ್ಥಿರತೆಗೆ ನೆರವಾಗುತ್ತದೆ.
ಭಾರತದಲ್ಲಿ ಅಧಿಕಾರ ಹಸ್ತಾಂತರದ ಆಧಾರವು ಜನರ ತೀರ್ಪೇ ಹೊರತು ಹಿಂಸೆ, ಬಲಪ್ರಯೋಗ ಅಥವಾ ಸಂವಿಧಾನಬಾಹಿರ ಮಾರ್ಗಗಳಲ್ಲ ಎಂಬುದಕ್ಕೆ ನಮ್ಮ ಪ್ರಜಾಪ್ರಭುತ್ವವೇ ಸಾಕ್ಷಿಯಾಗಿದೆ. ಈ ಸಂಪ್ರದಾಯವನ್ನು ಉಳಿಸಿಕೊಂಡು ಹೋಗುವುದು ಪ್ರತಿಯೊಬ್ಬ ನಾಗರಿಕನ ಸಾಮೂಹಿಕ ಜವಾಬ್ದಾರಿಯಾಗಿದೆ.
ಸಂವಿಧಾನ ದಿನ: ಹಕ್ಕುಗಳ ಜತೆಗೆ ಕರ್ತವ್ಯಗಳ ಬದ್ಧತೆ
ಪ್ರಧಾನಿ ನರೇಂದ್ರ ಮೋದಿ ಅವರ ಪ್ರಯತ್ನದಿಂದ 2015ರಲ್ಲಿ ನವೆಂಬರ್ 26ರಂದು ‘ಸಂವಿಧಾನ ದಿನ’ ಆಚರಿಸುವ ಸಂಪ್ರದಾಯವನ್ನು ಅಧಿಕೃತವಾಗಿ ಆರಂಭಿಸಲಾಯಿತು.
ಸಂವಿಧಾನದ ಬಗ್ಗೆ ನಾಗರಿಕರಲ್ಲಿ ಹೆಚ್ಚಿನ ಅರಿವು ಮೂಡಿಸುವುದು, ಸಂವಿಧಾನ ರಚನಾ ಸಭೆಯ ಕೊಡುಗೆಯನ್ನು ಸ್ಮರಿಸುವುದು ಮತ್ತು ಯುವ ಪೀಳಿಗೆಯನ್ನು ಪ್ರಜಾಸತ್ತಾತ್ಮಕ ಮೌಲ್ಯಗಳೊಂದಿಗೆ ಬೆಸೆಯುವುದು ಇದರ ಉದ್ದೇಶವಾಗಿದೆ.
ಸಂವಿಧಾನ ದಿನವು ನಮ್ಮ ಹಕ್ಕುಗಳನ್ನು ಮಾತ್ರವಲ್ಲದೆ, ರಾಷ್ಟ್ರ, ಸಮಾಜ ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳ ಕಡೆಗೆ ನಮಗಿರುವ ಕರ್ತವ್ಯಗಳನ್ನೂ ನೆನಪಿಸುತ್ತದೆ.
ಭಾರತದ ಸಂವಿಧಾನದ ಸುದೀರ್ಘ ಪಯಣದಲ್ಲಿ 106 ತಿದ್ದುಪಡಿಗಳು ನಡೆದಿರುವುದು ಕಾಲಕ್ಕೆ ತಕ್ಕಂತೆ ನಮ್ಮ ಪ್ರಜಾಪ್ರಭುತ್ವ ಬೆಳೆದುಬಂದಿರುವುದಕ್ಕೆ ಸಾಕ್ಷಿಯಾಗಿದೆ.
ಅಟಲ್ ಬಿಹಾರಿ ವಾಜಪೇಯಿ ಅವರ ಆಡಳಿತಾವಧಿಯಲ್ಲಿ ಶಿಕ್ಷಣ, ಭಾಷೆಗಳಿಗೆ ಗೌರವ ಮತ್ತು ರಾಜಕೀಯ ಸ್ಥಿರತೆಗೆ ಸಂಬಂಧಿಸಿದ ಮಹತ್ವದ ಬದಲಾವಣೆಗಳು ನಡೆದವು. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ರಾಷ್ಟ್ರೀಯ ಏಕತೆ, ಆರ್ಥಿಕ ಒಕ್ಕೂಟ ವ್ಯವಸ್ಥೆ, ಸಾಮಾಜಿಕ ನ್ಯಾಯ, ಹಿಂದುಳಿದ ವರ್ಗಗಳ ಹಕ್ಕುಗಳು ಮತ್ತು ಮಹಿಳೆಯರ ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ಹೊಸ ಅಧ್ಯಾಯಗಳು ಸೇರ್ಪಡೆಯಾಗಿವೆ.
ಸಂವಿಧಾನದ ಯಶಸ್ಸು ಅದಕ್ಕೆ ಮಾಡಲಾದ ತಿದ್ದುಪಡಿಗಳ ಸಂಖ್ಯೆಯಲ್ಲಿಲ್ಲ; ಬದಲಾಗಿ ಆ ತಿದ್ದುಪಡಿಗಳು ಸಮಾಜದ ಮೇಲೆ ಬೀರಿದ ಪರಿಣಾಮದಲ್ಲಿದೆ.
ಬಡವರಿಗೆ ನ್ಯಾಯ ದೊರೆಯುವಾಗ, ಯುವಜನರಿಗೆ ಅವಕಾಶಗಳು ಸಿಗುವಾಗ, ಮಹಿಳೆಯರಿಗೆ ಗೌರವ ಮತ್ತು ಪ್ರಾತಿನಿಧ್ಯ ದೊರೆಯುವಾಗ, ಪ್ರತಿಯೊಂದು ಮಗುವಿಗೂ ಶಿಕ್ಷಣ ಸಿಗುವಾಗ, ರಾಜ್ಯಗಳ ಭಾಗವಹಿಸುವಿಕೆ ಬಲಗೊಳ್ಳುವಾಗ ಮತ್ತು ಪ್ರಜಾಪ್ರಭುತ್ವ ಸಂಸ್ಥೆಗಳ ಮೇಲಿನ ನಾಗರಿಕರ ವಿಶ್ವಾಸ ಹೆಚ್ಚಾದಾಗ ಮಾತ್ರ ಸಂವಿಧಾನದ ನಿಜವಾದ ಆಶಯ ಈಡೇರುತ್ತದೆ.
ಭಾರತದ ಸಂವಿಧಾನವು ನಮ್ಮ ಪರಂಪರೆಯಾಗಿದೆ. ವರ್ತಮಾನದ ಶಕ್ತಿಯಾಗಿದೆ ಮತ್ತು ಭವಿಷ್ಯಕ್ಕೆ ದಾರಿದೀಪವಾಗಿದೆ.
ಬದಲಾವಣೆ ಅಗತ್ಯವಾದರೂ ಸಂವಿಧಾನಾತ್ಮಕ ನಿಯಮಗಳಿಗೆ ಗೌರವ ನೀಡುವುದು ಅತ್ಯಂತ ಮುಖ್ಯ ಎಂಬುದನ್ನು ಸಂವಿಧಾನದ ಪಯಣ ನಮಗೆ ಕಲಿಸುತ್ತದೆ. ಅಭಿವೃದ್ಧಿ ಅಗತ್ಯ, ಆದರೆ ನ್ಯಾಯವಿಲ್ಲದ ಅಭಿವೃದ್ಧಿ ಅಪೂರ್ಣ. ಪ್ರಜಾಪ್ರಭುತ್ವ ಅತ್ಯಂತ ಮಹತ್ವದ್ದು, ಆದರೆ ನಾಗರಿಕರ ಸಕ್ರಿಯ ಭಾಗವಹಿಸುವಿಕೆ ಇಲ್ಲದಿದ್ದರೆ ಅದು ದುರ್ಬಲವಾಗುತ್ತದೆ.
ರಾಜಸ್ಥಾನ ವಿಧಾನಸಭೆಯ ‘ಸಂವಿಧಾನ ಗ್ಯಾಲರಿ’: ಸಂವಿಧಾನದ ಅರಿವು ಮೂಡಿಸುವ ಪ್ರಯತ್ನ
ಸಂವಿಧಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಲ್ಲಿ ಶಾಸಕಾಂಗ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸುತ್ತವೆ.
2024ರ ನವೆಂಬರ್ 26ರಂದು ರಾಜಸ್ಥಾನ ವಿಧಾನಸಭೆಯಲ್ಲಿ ‘ಸಂವಿಧಾನ ಗ್ಯಾಲರಿ’ ಉದ್ಘಾಟನೆಯಾಗಿದ್ದು, ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ವಿಧಾನಸಭೆಯ ‘ರಾಜಕೀಯ ನಿರೂಪಣೆಗಳ ವಸ್ತುಸಂಗ್ರಹಾಲಯ’ದಲ್ಲಿ ಸ್ಥಾಪಿಸಲಾಗಿರುವ ಈ ಗ್ಯಾಲರಿಯು ಭಾರತದ ಸಂವಿಧಾನದ ಮೂಲ ಆಶಯ, ಅದರ ರಚನೆಯ ಇತಿಹಾಸ ಮತ್ತು ಶ್ರೀಮಂತ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಪರಂಪರೆಯನ್ನು ಸಾರ್ವಜನಿಕರಿಗೆ ಪರಿಚಯಿಸುತ್ತದೆ.
ಸಂವಿಧಾನದ ಮೂಲ ಸ್ವರೂಪದಲ್ಲಿರುವ 22 ಭಾಗಗಳಿಗೆ ಸಂಬಂಧಿಸಿದ ಕಲಾತ್ಮಕ ಚಿತ್ರಣಗಳು ಮತ್ತು ಐತಿಹಾಸಿಕ ದಾಖಲೆಗಳ ಮೂಲಕ ಈ ಗ್ಯಾಲರಿಯು ಸಂವಿಧಾನದ ರಚನೆ, ಅದರ ವ್ಯಾಪ್ತಿ ಮತ್ತು ಭಾರತೀಯ ಸಂಸ್ಕೃತಿಯೊಂದಿಗಿನ ಆಳವಾದ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಸಂದರ್ಶಕರಿಗೆ ಅವಕಾಶ ಕಲ್ಪಿಸುತ್ತದೆ.
ಇದು ಕೇವಲ ಚಿತ್ರಗಳು ಮತ್ತು ದಾಖಲೆಗಳ ಸಂಗ್ರಹವಲ್ಲ. ಬದಲಾಗಿ, ನಾಗರಿಕರಲ್ಲಿ ಸಂವಿಧಾನದ ಬಗ್ಗೆ ಅರಿವು ಮತ್ತು ಗೌರವ ಮೂಡಿಸುವ ವೇದಿಕೆಯಾಗಿದೆ.
ವಿಧಾನಸಭೆಯಂತಹ ಪ್ರಜಾಪ್ರಭುತ್ವದ ಸಂಸ್ಥೆಯಲ್ಲಿ ಸಂವಿಧಾನ ಗ್ಯಾಲರಿಯನ್ನು ಸ್ಥಾಪಿಸಿರುವುದು ವಿಶೇಷ ಮಹತ್ವ ಹೊಂದಿದೆ. ಇಲ್ಲಿಗೆ ಭೇಟಿ ನೀಡುವ ವಿದ್ಯಾರ್ಥಿಗಳು, ಯುವಜನರು, ಸಂಶೋಧಕರು ಮತ್ತು ಸಾರ್ವಜನಿಕರು ಸಂವಿಧಾನದ ಪಯಣವನ್ನು ಹತ್ತಿರದಿಂದ ತಿಳಿದುಕೊಳ್ಳಬಹುದು. ಇದು ಸಂವಿಧಾನದ ಬಗ್ಗೆ ಗೌರವ ಮೂಡಿಸುವುದರ ಜತೆಗೆ, ಅದರ ಮೂಲ ಮೌಲ್ಯಗಳನ್ನು ದೈನಂದಿನ ಬದುಕಿನಲ್ಲಿ ಅಳವಡಿಸಿಕೊಳ್ಳಲು ಪ್ರೇರಣೆ ನೀಡುತ್ತದೆ.
ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಇಂತಹ ಪ್ರಯತ್ನಗಳನ್ನು ದೇಶದ ಎಲ್ಲ ವಿಧಾನಸಭೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರೋತ್ಸಾಹಿಸಬೇಕು ಎಂಬುದು ನನ್ನ ದೃಢವಾದ ನಂಬಿಕೆ. ಸಂವಿಧಾನವು ಕೇವಲ ಪುಸ್ತಕಗಳು ಅಥವಾ ನ್ಯಾಯಾಲಯಗಳಿಗೆ ಸೀಮಿತವಾಗದೆ, ಸಾರ್ವಜನಿಕ ಜೀವನದ ಅವಿಭಾಜ್ಯ ಅಂಗವಾಗಬೇಕು. ಇದು ಇಂದಿನ ಅಗತ್ಯವಾಗಿದೆ.
ಒಟ್ಟಾರೆಯಾಗಿ, 106 ತಿದ್ದುಪಡಿಗಳ ಮೂಲಕ ಸಾಗಿಬಂದ ಭಾರತದ ಸಂವಿಧಾನದ ಸುದೀರ್ಘ ಪಯಣವು ಕೇವಲ ಕಾನೂನು ಬದಲಾವಣೆಗಳ ಇತಿಹಾಸವಲ್ಲ. ಬದಲಾಗಿ, ನಿರಂತರವಾಗಿ ಬೆಳೆಯುತ್ತಿರುವ ಭಾರತದ ಪ್ರಜಾಪ್ರಭುತ್ವ, ರಾಷ್ಟ್ರೀಯ ಏಕತೆ, ಸಾಮಾಜಿಕ ಸಾಮರಸ್ಯ ಮತ್ತು ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಸಂಕಲ್ಪದ ಐತಿಹಾಸಿಕ ಕಥನವಾಗಿದೆ.
ಸಂವಿಧಾನವೇ ಸರ್ವೋಚ್ಚ. ಪ್ರಜಾಪ್ರಭುತ್ವ ನಮ್ಮೆಲ್ಲರ ಸಾಮೂಹಿಕ ಶಕ್ತಿ. ರಾಷ್ಟ್ರೀಯ ಏಕತೆ, ಪ್ರತಿಯೊಬ್ಬ ನಾಗರಿಕನ ಘನತೆ ಮತ್ತು ಎಲ್ಲರಿಗೂ ನ್ಯಾಯ ಒದಗಿಸುವುದೇ ನಮ್ಮ ಅಂತಿಮ ಗುರಿಯಾಗಿದೆ. ಇದೇ ಭಾರತದ ಸಂವಿಧಾನದ ಐತಿಹಾಸಿಕ ಪಯಣದ ಸಾರವಾಗಿದೆ.
- ವಾಸುದೇವ್ ದೇವನಾನಿ
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
