ಅಂಕಣ – ಜ್ಞಾನಭಂಡಾರ
- ವಾಣಿ ಭಟ್ಟ ಹಂಡ್ರಮನೆ, ಲೇಖಕಿ
ಇದು ‘The Missing Rock of Hampi’ ಕೃತಿಯ ಕನ್ನಡಾನುವಾದ. NAAV Ai ಸಹಾಯದಿಂದ ಅನುವಾದಿಸಿದ ಕಾರಣ, ಪುಸ್ತಕ ಪ್ರಕಾಶನದಲ್ಲಿ ಇದೊಂದು ಹೊಸ ಪ್ರಯೋಗ ಎನ್ನಬಹುದು. ಭಾರತದ ಇತಿಹಾಸ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಕೃತಿಗಳನ್ನು ಪ್ರಕಟಿಸುವ FIHCR yuva ಸರಣಿಯ ಭಾಗವಾಗಿ ಈ ಪುಸ್ತಕ ಪ್ರಕಟಗೊಂಡಿದೆ. AI ಮೂಲಕ ಅನುವಾದಗೊಂಡ ಕಾರಣ, ಆರಂಭದಲ್ಲಿ ಭಾವರಹಿತ ಯಾಂತ್ರಿಕ ಭಾಷೆಯಂತೆ ಅನಿಸಿದ್ದು ನಿಜ. ಆದರೆ, ಈ ತೊಡಕು ಓದಿನ ಆರಂಭದಲ್ಲಿ ಮಾತ್ರ. ಒಮ್ಮೆ ಕಥೆಯೊಳಗೆ ಪ್ರವೇಶಿಸಿದ ಮೇಲೆ ಇದೆಲ್ಲಾ ನಗಣ್ಯವಾಗಿ ಕಾದಂಬರಿ ಕುತೂಹಲದಿಂದ ಓದಿಸಿಕೊಂಡಿತು.
ವಿಜಯನಗರ ಸಂಪತ್ತಿಗೆ ಮುಖ್ಯ ಕಾರಣ ಪ್ರಾಕೃತಿಕ ಸಂಪತ್ತಿನ ಸರಿಯಾದ ನಿರ್ವಹಣೆ. ಫಲವತ್ತಾದ ಭೂಮಿಯಿಂದ ಒಳ್ಳೆ ಫಸಲನ್ನು ಪಡೆಯಲು, ಯೋಗ್ಯ ರೀತಿಯಲ್ಲಿ ನೀರು ಸರಬರಾಜು ಮಾಡುವ ವ್ಯವಸ್ಥೆಯನ್ನು ಅವರು ನಿರ್ಮಿಸಿದ್ದರು. ಅದರಲ್ಲಿ ಕೆಲವು ಇಂದಿಗೂ ಸುಸ್ಥಿತಿಯಲ್ಲಿವೆ! ಅದೆಲ್ಲಾ ವಿವರಗಳನ್ನು ಪತ್ತೇದಾರಿ ಶೈಲಿಯಲ್ಲಿ ಆಕರ್ಷಕವಾಗಿ ನಿರೂಪಿಸಲಾಗಿದೆ. ಕಾದಂಬರಿಯಲ್ಲಿ ಎರಡು ಕಥೆಗಳು ಸಮಾನಾಂತರವಾಗಿ ನಡೆಯುತ್ತವೆ. ಒಂದು ಕಥೆ ವರ್ತಮಾನದಲ್ಲಿ ಜರುಗಿದರೆ, ಇನ್ನೊಂದು ಕಥೆ ಕ್ರಿ.ಶ. 1335ರ ಕಾಲಘಟ್ಟದ್ದು.
ಇದು ದೇವಯಾನಿ, ಸಾರಂಗ್ ಹಾಗೂ ನಕುಲ್ ಮಾಡುವ ಪತ್ತೇದಾರಿಯ ಕಥೆ. ಶಾಲೆಗೆ ರಜೆಯಿದ್ದ ಕಾರಣ, ಮಕ್ಕಳು ಡಾ. ಬೃಂದಾರೊಂದಿಗೆ ಹಂಪೆಗೆ ಹೊರಡುತ್ತಾರೆ. ಹಂಪಿಯಲ್ಲಿ ಸರ್ಕಾರದ ಯೋಜನೆಯೊಂದರೆ ಸಾಧ್ಯಾಸಾಧ್ಯತೆ ಹಾಗೂ ರೂಪುರೇಷೆಯ ಅಧ್ಯಯನ ಮಾಡುವುದು ಜಲಸಂಪನ್ಮೂಲ ತಜ್ಞೆಯಾದ ಬೃಂದಾರ ಕೆಲಸವಾಗಿತ್ತು. ಅಲ್ಲಿ ಹೋದಾಗ ಬೃಂದಾರ ಸಹೋದ್ಯೋಗಿಗಳ ನಡತೆ ಅನುಮಾನಾಸ್ಪದವಾಗಿ ಕಾಣುತ್ತದೆ. ಬೃಂದಾ ತಯಾರಿಸಲಿರುವ ರಿಪೋರ್ಟ್ ಪಡೆಯಲು ಯಾರೋ ಯತ್ನಿಸುತ್ತಿದ್ದಾರೆಂದು ಶಂಕೆಯಾಗುತ್ತದೆ. ಮಕ್ಕಳು ಹೊರಗೆ ಹೋಗಿದ್ದಾಗ ಬೃಂದಾರೊಂದಿಗೆ ಸಂಪರ್ಕ ಸಾಧ್ಯವಾಗುವುದಿಲ್ಲ. ಅವರು ಮೊಬೈಲ್ ಕಳೆದುಕೊಂಡಿದ್ದಾರಾ? ಅಥವಾ ಬೇರೆ ಸಮಸ್ಯೆ ಇದೆಯೇ? ಇವೆಲ್ಲದರ ಹಿಂದೆ ಯಾರಿದ್ದಾರೆ? ಎಂಬುದನ್ನು ಹುಡುಕಲು ಮಕ್ಕಳು ಯತ್ನಿಸುತ್ತಾರೆ.
ವಿಜಯನಗರದ ನಿರ್ಮಾಣ ಕಾರ್ಯಗಳಲ್ಲಿ ದೇವರಾಯನ ಮುಖ್ಯ ಅಭಿಯಂತರರಾದ ವಿಜಯೇಂದ್ರರ ಮೊಮ್ಮಗಳು ಶುಭಾ. ಅವಳಿಗೂ ತಾತನಂತೆ ನಿರ್ಮಾಣ ಯೋಜನೆಗಳಲ್ಲಿ ಆಸಕ್ತಿ. ಅವಳಿಗೆ ಜಲಾಶಯ ಹಾಳುಗೆಡಹುವ ಕುತಂತ್ರವೊಂದು ಗೊತ್ತಾಗುತ್ತದೆ. ಅನುಮಾನಾಸ್ಪದ ವ್ಯಕ್ತಿಗಳ ಪಟ್ಟಿ ಮಾಡಿ ರಾಜರಿಗೆ ತಲುಪಿಸುವ ಯತ್ನಿಸುತ್ತಾಳೆ. ಅದು ರಾಣಿಯವರಿಗೆ ಸಿಕ್ಕಿದಾಗ ಏನಾಯ್ತು? ಎಂಬುದು ಇನ್ನೊಂದು ಕಥೆ. ಎರಡೂ ಕಥೆಗಳು ಆಸಕ್ತಿಕರವಾಗಿವೆ.
ಹದಿಹರೆಯದ ಮಕ್ಕಳು ಮಾಡಬಹುದಾದ ಪತ್ತೇದಾರಿಯೇ ಇಲ್ಲಿರುವುದರಿಂದ, ಅವಾಸ್ತವಿಕ ಅನ್ನಿಸುವುದಿಲ್ಲ. ಇತಿಹಾಸ ಹಾಗೂ ವರ್ತಮಾನದ ಹದವಾದ ಮಿಳಿತವಿದೆ. ಮಕ್ಕಳಿಗೆ ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡುವ ಆಸಕ್ತಿ ಹುಟ್ಟಿಸುವಂತಿದೆ. ಸುಂದರ ಚಿತ್ರಗಳು ಪುಸ್ತಕದ ಅಂದ ಹೆಚ್ಚಿಸಿರುವ ಜೊತೆಗೆ ಓದುಗನ ಕಲ್ಪನೆಗೂ ರೂಪ ಕೊಡುತ್ತವೆ. ಮುಖ್ಯವಾಗಿ, ವಿಜಯನಗರ ಕಾಲದ ಜಲಸಂಪನ್ಮೂಲ ನಿರ್ವಹಣೆ ಹಾಗೂ ಅಣೆಕಟ್ಟುಗಳ ನಿರ್ಮಾಣ ಕೌಶಲದ ಬಗ್ಗೆ ಮಕ್ಕಳಿಗೆ ಕುತೂಹಲ ಹುಟ್ಟಿಸುವುದರೊಂದಿಗೆ, ಇಂದಿನ ಜಲಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನವನ್ನೂ ಈ ಕೃತಿ ಮಾಡುತ್ತದೆ.
ಮೂಲಕೃತಿ: The Missing Rock of Hampi
ಲೇ: ಮಾಲಾ ಕುಮಾರ್ ಅನುವಾದ & ಸಂಪಾದನೆ: ಶ್ರೀಗೌರಿ ಎಸ್ ಜೋಶಿ (NAAV AI) ಪ್ರ: ಬ್ಲೂ ಒನ್ ಇಂಕ್ ಪ್ರೈವೆಟ್ ಲಿಮಿಟೆಡ್ ಪು: 160 ಬೆ: 299 ರೂ.
