ಅಂಕಣ – ಜ್ಞಾನಭಂಡಾರ
- ಚೇತನ ಭಾರ್ಗವ, ಲೇಖಕಿ
ಎಐ ಕುರಿತಂತೆ ಶರತ್ ಭಟ್ ಸೇರಾಜೆ ಅವರು ಬರೆದ ‘AI ಬರುತಿದೆ ದಾರಿಬಿಡಿ’ ಒಂದು ಸಮಯೋಚಿತ, ತಳಸ್ಪರ್ಶಿ ಹಾಗೂ ಜನಸಾಮಾನ್ಯರಿಗೂ ದಕ್ಕುವ ಹೊತ್ತಗೆಯಾಗಿದೆ. AI ಬಗೆಗಿನ ಯಾವುದೇ ಭಾವನೆಗಳು (ಅದು ಭಯ, ಕುತೂಹಲ ಅಥವಾ ಉಡಾಫೆ) ಇದ್ದರೂ, ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕವಿದು. ಎಐಯ ಅಗಾಧ ವ್ಯಾಪ್ತಿಯನ್ನು ಸುಮಾರು 19 ವಿಭಾಗಗಳಲ್ಲಿ ಲೇಖಕರು ತೆರೆದಿಟ್ಟಿದ್ದಾರೆ.
ಈ ಹೊತ್ತಗೆಯ ಪ್ರಮುಖ ವೈಶಿಷ್ಟ್ಯವೆಂದರೆ ಬರೆಹದ ಶೈಲಿ. ವಿಜ್ಞಾನದ ವಿಷಯಗಳನ್ನು ಲಲಿತ ಪ್ರಬಂಧದಂತೆ ಕಚಗುಳಿ ಇಡುವ ರೀತಿಯಲ್ಲಿ, ಲಘುಹಾಸ್ಯದ ದಾಟಿಯಲ್ಲಿ ಓದುಗರಿಗೆ ಉಣಬಡಿಸುವುದು ಸುಲಭಸಾಧ್ಯವಲ್ಲ. ಮಾತೃಭಾಷೆಯಲ್ಲಿಯೇ ನಿಧಾನವಾಗಿ AIನ ವಿಚಾರಧಾರೆ, ಬೆಳವಣಿಗೆ, ಸಾಧ್ಯತೆ ಮತ್ತು ಬಾಧ್ಯತೆಗಳೆಲ್ಲವನ್ನೂ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.
ಕೃತಕ ಬುದ್ಧಿಮತ್ತೆಗೂ ಮಾನವನ ಸಹಜ ನೈಸರ್ಗಿಕ ಬುದ್ಧಿಮತ್ತೆಗೂ ಇರುವ ವ್ಯತ್ಯಾಸ ಹಾಗೂ ಮಿತಿ ಏನು ಎಂಬುದನ್ನು ಮೊದಲ ವಿಭಾಗದಲ್ಲೇ ಪ್ರಸ್ತುತಪಡಿಸಿದ್ದಾರೆ. ಸಂವಹನದ ವಿಷಯಕ್ಕೆ ಬಂದಾಗ ಅದು ಕೃತಕವೋ ಅಥವಾ ಮನುಷ್ಯರೊಂದಿಗೆ ನಡೆದದ್ದೋ ಎಂಬುದನ್ನು ತೀರ್ಮಾನಿಸಲು ‘ಟ್ಯೂರಿಂಗ್ ಟೆಸ್ಟ್’ ಎಂಬ ಮೌಲ್ಯಮಾಪನ ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಬೆಳಕು ಚೆಲ್ಲಿದ್ದಾರೆ. ELIZAದಿಂದ ಶುರುವಾಗುವ ಚಾಟ್ಬಾಟ್ಗಳ ಕಥೆ ChatGPT ವರೆಗೆ ಸಾಗಿದ ಚಿತ್ರಣ ಇಲ್ಲಿದೆ. ಕೊನೆಗೆ ಮುಂಗೋಪ, ಸಿಡುಕುತನ, ಧಾವಂತದಂತಹ ಮಾನವ ಸಹಜ ದೌರ್ಬಲ್ಯಗಳೇ ಮನುಷ್ಯನ ನೈಸರ್ಗಿಕ ಬುದ್ಧಿಮತ್ತೆಯ ಸಾಕ್ಷಿಯಾಗುವ ಸ್ವಾರಸ್ಯಕರ ಪ್ರಸಂಗಗಳನ್ನೂ ನಾವು ಕಾಣಬಹುದು.
AIಗೆ ಪ್ರಜ್ಞೆಯುಂಟೇ ಎಂಬ ವಿಷಯವನ್ನು ಮುಂದಿಟ್ಟು, ನಮ್ಮ ಬುದ್ಧಿಗೂ ನಮ್ಮ ಅಸ್ತಿತ್ವದ ವ್ಯಾಖ್ಯಾನಕ್ಕೂ ಪ್ರಶ್ನೆ ಎಸೆಯುತ್ತಾರೆ ಲೇಖಕರು. ‘ಮಾಡಿ ಕಲಿ, ಎಡವಿ ತಿಳಿ’ ಎಂಬ ಅಂಕಣ ಕೃತಕ ಬುದ್ಧಿಮತ್ತೆಯ ಅಗ್ರ ಸರದಾರನಾದ ‘ಮೆಷಿನ್ ಲರ್ನಿಂಗ್’ ವಿಭಾಗದ ಪರಿಚಯ ಮಾಡಿಕೊಡುತ್ತದೆ. ಹಾಗೆಯೇ ಮಾನವ ಸಂವಹನಕ್ಕೆ ಹತ್ತಿರವಾಗುವಂತಹ ದೊಡ್ಡಮಟ್ಟದ ಭಾಷಾ ಸಾಮರ್ಥ್ಯದ (LLM) ವೃದ್ಧಿ ಹಾಗೂ ಅದರ ತಂತ್ರಜ್ಞಾನದ ಬಗ್ಗೆ ಲೇಖಕರು ಬೆಳಕು ಚೆಲ್ಲಿದ್ದಾರೆ. ಪಾಣಿನಿ, ಪತಂಜಲಿ ಮಹರ್ಷಿಗಳಂತೆ ಭಾಷೆಯ ಸೂತ್ರಗಳನ್ನು ಬರೆಯದೆ, ಕೇವಲ ದತ್ತಾಂಶಗಳಿಂದ ಗಣಿತೀಯವಾಗಿ ಭಾಷಾಸೂತ್ರಗಳನ್ನು ಕಲಿಯುವ ಹಾಗೂ ಸಂದರ್ಭಕ್ಕನುಸಾರವಾಗಿ ಪದಗಳನ್ನು ಹೆಣೆದು ಪ್ರಸ್ತುತಪಡಿಸುವ ತಾಂತ್ರಿಕ ವಿನ್ಯಾಸವನ್ನು ಲೇಖಕರು ವಿವರಿಸಿರುವ ರೀತಿ ಅದ್ಭುತ.
ಮಾಹಿತಿಯನ್ನು ಗಣಿತೀಯವಾಗಿ ಅಡಕಮಾಡಿ ಸಾಗಿಸುವ ಪ್ರಕ್ರಿಯೆಗೆ ಭಾಷ್ಯ ಬರೆದ ಕ್ಲಾಡ್ ಶಾನನ್ (Claude Shannon) ಬಗ್ಗೆಯೂ ಇಲ್ಲಿ ಮಹತ್ವದ ಪುಟಗಳಿವೆ. ಪರಿಸರ, ಆರ್ಥಿಕತೆ ಮತ್ತು ನೈತಿಕತೆಯ ಕುರಿತ ಲೇಖನಗಳು AIನ ವೈರುಧ್ಯಗಳ ಪಟ್ಟಿ ಮಾಡುತ್ತಾ ಹೋಗುತ್ತವೆ. AI ಬರೆದ ಕಥೆಗಳ ವಿನ್ಯಾಸ ನಮ್ಮನ್ನು ನಗೆಗಡಲಲ್ಲಿ ಮುಳುಗಿಸಿದರೆ; ಪ್ರತಿ ಲೆಕ್ಕಾಚಾರಕ್ಕೂ ಇದು ಬಳಸುವ ಅಗಾಧ ವಿದ್ಯುತ್, ಸರ್ವರ್ಗಳ ತಲೆಬಿಸಿಯೇರಿಸುವುದನ್ನು ತಡೆಯಲು ಬಳಸುವ ಕೋಟ್ಯಂತರ ಲೀಟರ್ ನೀರಿನ ಪ್ರಮಾಣ, ಬೃಹತ್ ಬಕಾಸುರರಂತಿರುವ ಡೇಟಾ ಸೆಂಟರ್ಗಳ ನಿರ್ವಹಣಾ ಸಾಮರ್ಥ್ಯ—ನಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತವೆ. ಇದರ ಹಿಂದಿರುವ ಹಣದ ಥೈಲಿಗಳ ಲೆಕ್ಕಾಚಾರ, ನಮ್ಮ ಗಮನವನ್ನೇ ಹಣ ಮಾಡುವ ದಾರಿಯನ್ನಾಗಿಸಿಕೊಂಡ ಮಾರುಕಟ್ಟೆ ಏಕಸ್ವಾಮ್ಯದ ಹೊಡೆದಾಟಗಳು ನಮ್ಮ ಹುಬ್ಬೇರಿಸುತ್ತವೆ.
ಕೊನೆಯಲ್ಲಿ AI ನ ನೈತಿಕ ಬಳಕೆಯನ್ನು ಸೂಕ್ಷ್ಮ ಸಂದೇಶಗಳೊಡನೆ ತಿಳಿಸುವ ಲೇಖಕರು ಪುಸ್ತಕದ ಗುಂಗಿನಲ್ಲಿರುವಂತೆ ಮಾಡುತ್ತಾರೆ.
ಕೃ: AI ಬರುತಿದೆ ದಾರಿಬಿಡಿ ಲೇ: ಶರತ್ ಭಟ್ ಸೇರಾಜೆ
ಪ್ರ: ಸಾವಣ್ಣ ಪ್ರಕಾಶನ ಪು: 200 ಬೆ: 270 ರೂ.
ಸಂ: 8088822171
