ಭಾರತವು ಸ್ವಾತಂತ್ರ್ಯದ ಅಮೃತ ಕಾಲವನ್ನು ದಾಟಿ ಮುನ್ನಡೆಯುತ್ತಿದ್ದರೂ, ಬ್ರಿಟಿಷರ ಕರಾಳ ಇತಿಹಾಸದ ನೆರಳು ನಮ್ಮ ಸಮಾಜದ ಕೆಲವು ಭಾಗಗಳನ್ನು ಇಂದಿಗೂ ಕಾಡುತ್ತಿರುವುದು ರಾಷ್ಟ್ರೀಯ ಆತಂಕದ ಸಂಗತಿ. 1871ರಲ್ಲಿ ಬ್ರಿಟಿಷ್ ಆಡಳಿತವು ಜಾರಿಗೆ ತಂದ ‘ಕ್ರಿಮಿನಲ್ ಟ್ರೈಬ್ಸ್ ಆಕ್ಟ್’ (ಕರಾಳ ಕಾಯ್ದೆ) ಭಾರತದ ಹೆಮ್ಮೆಯ ಅಲೆಮಾರಿ ಹಾಗೂ ಡಿನೋಟಿಫೈಡ್ (DNT) ಸಮುದಾಯಗಳನ್ನು ‘ಹುಟ್ಟಿನಿಂದಲೇ ಅಪರಾಧಿಗಳು’ ಎಂದು ಮುದ್ರೆ ಒತ್ತಿ ಇತಿಹಾಸದ ಅತ್ಯಂತ ಕ್ರೂರ ಅನ್ಯಾಯಕ್ಕೆ ದೂಡಿತ್ತು. ವಸಾಹತುಶಾಹಿ ಆಡಳಿತದ ದಬ್ಬಾಳಿಕೆಗೆ ಮಣಿಯದ ಈ ದೇಶಪ್ರೇಮಿ ಜನಾಂಗಗಳನ್ನು ಹತ್ತಿಕ್ಕಲು ತಂದ ಈ ಕಾನೂನು 1952ರಲ್ಲೇ ರದ್ದಾಗಿದ್ದರೂ, ವ್ಯವಸ್ಥೆ ಮತ್ತು ನಾಗರಿಕ ಸಮಾಜದ ಮನಸ್ಥಿತಿಯಲ್ಲಿ ಆ ಕಳಂಕದ ನೆರಳು ಇಂದಿಗೂ ಸಂಪೂರ್ಣವಾಗಿ ಮಾಸಿಲ್ಲದಿರುವುದು ವಿಪರ್ಯಾಸ.
ಕರ್ನಾಟಕದಲ್ಲಿ ನೆಲೆಸಿರುವ ಲಂಬಾಣಿ, ಗೊಲ್ಲ, ಬುಡಗಜಂಗಮ, ಹೆಳವ, ಕೊರಚ, ಡೊಂಬಾರಿ ಸೇರಿದಂತೆ ಹತ್ತಾರು ಅಲೆಮಾರಿ ಜನಾಂಗಗಳು ಇಂದಿಗೂ ಸ್ಥಿರ ವಿಳಾಸ, ಶಿಕ್ಷಣ, ವಸತಿ ಮತ್ತು ಕನಿಷ್ಠ ಗುರುತಿನ ದಾಖಲೆಗಳಿಲ್ಲದೆ ಮುಖ್ಯವಾಹಿನಿಯಿಂದ ದೂರ ಉಳಿದಿದ್ದಾರೆ. ಸಣ್ಣ ಕಳ್ಳತನ ನಡೆದರೂ ಇಂದಿಗೂ ಮೊದಲ ಅನುಮಾನದ ಮುಳ್ಳು ತಿರುಗುವುದು ಈ ಡಿನೋಟಿಫೈಡ್ ಬಂಧುಗಳ ಮೇಲೆಯೇ. ಈ ಸಾಮಾಜಿಕ ತಿರಸ್ಕಾರ ಮತ್ತು ಪೂರ್ವಗ್ರಹ ಪೀಡಿತ ಮನಸ್ಥಿತಿಯನ್ನು ಬದಲಾಯಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ರೇಣಕೆ ಆಯೋಗದಂತಹ ಸಮಿತಿಗಳು ವಿಶೇಷ ಶಿಫಾರಸುಗಳನ್ನು ನೀಡಿದ್ದರೂ, ಅವುಗಳ ಪೂರ್ಣ ಪ್ರಮಾಣದ ಅನುಷ್ಠಾನ ಇಂದಿಗೂ ಬಾಕಿಯಿದೆ.
ಇಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆಯಿಂದ ಕಾರ್ಯನಿರ್ವಹಿಸುತ್ತಿರುವ ‘ಘುಮಂತು ಕಾರ್ಯಕರ್ತರು’ ಈ ವಂಚಿತ ಸಮಾಜದ ಧ್ವನಿಯಾಗಿ ನಿಂತಿರುವುದು ಶ್ಲಾಘನೀಯ. ಇವರು ಕೇವಲ ಹಕ್ಕುಗಳಿಗಾಗಿ ಹೋರಾಡುವವರಲ್ಲ, ಬದಲಿಗೆ ಇಡೀ ಸಮಾಜವನ್ನು ಒಗ್ಗೂಡಿಸುವ ಸಮರಸತೆಯ ಹರಿಕಾರರಾಗಿದ್ದಾರೆ. ಅಲೆಮಾರಿ ಬಂಧುಗಳ ನೈಜ ಸಮಸ್ಯೆಗಳನ್ನು ದಾಖಲೀಕರಿಸುವುದು, ಅವರ ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆ ಮಾಡುವುದು ಮತ್ತು ಸರ್ಕಾರದ ಸೌಲಭ್ಯಗಳನ್ನು ತಲುಪಿಸಲು ಅಗತ್ಯವಿರುವ ಗುರುತಿನ ಚೀಟಿಗಳನ್ನು ಕೊಡಿಸುವಲ್ಲಿ ಇವರು ಸಾಮಾಜಿಕ ಸಮರಸತೆಯ ಸೇತುವೆಯಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಒಂದು ದೇಶದ ನೈಜ ಅಭಿವೃದ್ಧಿಯನ್ನು ಕೇವಲ ನಗರಗಳ ಎತ್ತರದ ಕಟ್ಟಡಗಳಿಂದ ಅಳೆಯಲಾಗುವುದಿಲ್ಲ; ಬದಲಿಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ದೊರೆಯುವ ಗೌರವ ಮತ್ತು ನ್ಯಾಯದಿಂದ ಅಳೆಯಲಾಗುತ್ತದೆ. ಅಲೆಮಾರಿ ಸಮುದಾಯದ ಬಂಧುಗಳು ಇಂದು ಕರುಣೆ ಅಥವಾ ಭಿಕ್ಷೆಯನ್ನು ಕೇಳುತ್ತಿಲ್ಲ; ಬದಲಿಗೆ ಸಂವಿಧಾನ ನೀಡಿರುವ ಸಮಾನ ಹಕ್ಕುಗಳು ಮತ್ತು ಮಾನವ ಘನತೆಯನ್ನು ಮಾತ್ರ ಬಯಸುತ್ತಿದ್ದಾರೆ. ಅವರಿಗೆ ಆದರದ ಸಮಾನತೆಯ ಅವಕಾಶ ದೊರೆತಲ್ಲಿ ಎಲ್ಲಾ ಕ್ಷೇತ್ರಗಳಲ್ಲಿ ಅವರು ಮುಂಚೂಣಿಗೆ ಬರುತ್ತಾರೆ ಎಂಬ ವಿಶ್ವಾಸ ನಮ್ಮದು. ಬ್ರಿಟಿಷರು ಹೇರಿದ ಆ ಕರಾಳ ಇತಿಹಾಸದ ನೆರಳನ್ನು ಶಾಶ್ವತವಾಗಿ ಅಳಿಸಿ, ಈ ಮರೆತುಹೋದ ನಾಗರಿಕರಿಗೆ ನ್ಯಾಯ ಒದಗಿಸಿದಾಗ ಮಾತ್ರ ಸ್ವಾತಂತ್ರ್ಯದ ನೈಜ ಆಶಯ ಪೂರ್ಣಗೊಳ್ಳುತ್ತದೆ. ಸಮರಸ ಸಮಾಜ ನಿರ್ಮಾಣದ ಈ ಪವಿತ್ರ ಕಾರ್ಯದಲ್ಲಿ ನಾಗರಿಕ ಸಮಾಜ ಮತ್ತು ಸರ್ಕಾರ ಕೈಜೋಡಿಸಬೇಕಾಗಿದೆ.
ಈ ವಾರದ ವಿಕ್ರಮ ಸಂಚಿಕೆಯ ಮುಖಪುಟ ಲೇಖನ- ಘುಮಂತು ಕಾರ್ಯದ ಕುರಿತಾಗಿದ್ದು, ಸಮಾಜದ ಎಲ್ಲ ವರ್ಗಗಳನ್ನೂ ಸಮಾನವಾಗಿ ತಲುಪುವ ಹಾಗೂ ಉನ್ನತಿಗೆ ಸಮಾನ ಅವಕಾಶಗಳನ್ನು ಅನುಕೂಲಿಸಿ ಕೊಡುವ ಘುಮಂತು ಕಾರ್ಯ ಎಂಬ ಆಯಾಮದ ಬಗ್ಗೆ ಸಮಗ್ರ ಚಿತ್ರಣವನ್ನು ನೀಡಲಾಗಿದೆ. ಎಂದಿನಂತೆ ಓದಿ, ಪ್ರತಿಕ್ರಿಯಿಸಿ.
ರಾಷ್ಟ್ರಹಿತದ 12 ವರ್ಷಗಳು
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ 12 ವರ್ಷಗಳ ಸಾಧನೆಯ ಅವಲೋಕನ ಈ ಬಾರಿಯ ರಾಷ್ಟ್ರಹಿತ ಅಂಕಣದಲ್ಲಿ ಡಾ. ನಂದಕಿಶೋರ್ ಅವರು ಕಟ್ಟಿಕೊಟ್ಟಿದ್ದಾರೆ. ಕಳೆದ ಹನ್ನೆರಡು ವರ್ಷಗಳಲ್ಲಿ ಭಾರತದ ಜಾಗತಿಕ ವರ್ಚಸ್ಸು ಮತ್ತು ಆರ್ಥಿಕ ರಾಜತಾಂತ್ರಿಕತೆ ಅಭೂತಪೂರ್ವವಾಗಿ ವೃದ್ಧಿಸಿದೆ. ಬಹು-ಮೈತ್ರಿ ನೀತಿ ಹಾಗೂ ಡಿಜಿಟಲ್ ಮೂಲಸೌಕರ್ಯದ ರಫ್ತು ದೇಶಕ್ಕೆ ಜಾಗತಿಕ ಮನ್ನಣೆ ತಂದುಕೊಟ್ಟಿವೆ. ಆದರೆ, ನೆರೆಹೊರೆಯಲ್ಲಿ ಹೆಚ್ಚುತ್ತಿರುವ ಚೀನಾದ ಪ್ರಭಾವ ಮತ್ತು ಅಮೆರಿಕದೊಂದಿಗಿನ ಇಂಧನ ರಾಜತಾಂತ್ರಿಕತೆಯ ಸವಾಲುಗಳು ನೈಜ ಮಿತಿಗಳನ್ನು ತೋರ್ಪಡಿಸಿವೆ. ಕೇವಲ ಬಾಹ್ಯ ಪ್ರಚಾರಕ್ಕಿಂತ ಸಾಂಸ್ಥಿಕ ಬಲ, ಆರ್ಥಿಕ ಆಳ ಮತ್ತು ಗಡಿ ಭದ್ರತೆಯೇ ರಾಷ್ಟ್ರಹಿತದ ನಿಜವಾದ ಅಳತೆಗೋಲು ಎಂಬುದನ್ನು ಈ ಪಯಣ ನೆನಪಿಸುತ್ತದೆ.
