ನವದೆಹಲಿ: ನೀಟ್-ಯುಜಿ 2026ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೂವರು ವಿಷಯ ತಜ್ಞರು ಸೇರಿದಂತೆ ಒಟ್ಟು 14 ಆರೋಪಿಗಳ ವಿರುದ್ಧ ಆರೋಪಗಳನ್ನು ನಿಗದಿಪಡಿಸುವಂತೆ ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ನವೆಂಬರ್ 18ರಂದು ಆದೇಶಿಸಿದೆ. ಕೇಂದ್ರ ತನಿಖಾ ದಳ (ಸಿಬಿಐ) ತನಿಖೆ ನಡೆಸುತ್ತಿರುವ ಈ ಪ್ರಕರಣದಲ್ಲಿ, ಕೃತಿಸ್ವಾಮ್ಯ ಕಾಯ್ದೆಯಡಿ ಕೂಡ ಆರೋಪಗಳನ್ನು ನಿಗದಿಪಡಿಸುವಂತೆ ನ್ಯಾಯಾಲಯ ಸೂಚಿಸಿದೆ. ನವೆಂಬರ್ 21ರಂದು ಆರೋಪ ನಿಗದಿಪಡಿಸುವ ಪ್ರಕ್ರಿಯೆ ನಡೆಯಲಿದೆ.
ವಿಶೇಷ ಸಿಬಿಐ ನ್ಯಾಯಾಧೀಶ ಅಜಯ್ ಗುಪ್ತಾ ಅವರು ಈ ಆದೇಶ ಹೊರಡಿಸಿದ್ದಾರೆ. ನವೆಂಬರ್ 21ರಂದು ಎಲ್ಲ 14 ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಸೂಚಿಸಿದ್ದಾರೆ. ಅಲ್ಲದೆ, ನವೆಂಬರ್ 25ರಿಂದ ಪ್ರಾಸಿಕ್ಯೂಷನ್ ಪರ ಸಾಕ್ಷಿಗಳ ವಿಚಾರಣೆ ಆರಂಭಿಸಿ, ಪ್ರತಿದಿನವೂ ಮುಂದುವರಿಸುವಂತೆ ಆದೇಶಿಸಿದ್ದಾರೆ.
ಪ್ರಕರಣದ 14 ಆರೋಪಿಗಳೆಂದರೆ ಮಂಗಿಲಾಲ್ ಬಿವಾಲ್, ದಿನೇಶ್ ಬಿವಾಲ್, ವಿಕಾಸ್ ಬಿವಾಲ್, ಮನೀಷಾ ವಾಘಮಾರೆ, ಮನೀಷ್ ಮಾಂಧಾರೆ, ಮನೀಷಾ ಹವಾಲ್ದಾರ್, ಪಿ.ವಿ. ಕುಲಕರ್ಣಿ, ರಘುನಾಥ್ ಮೊಟೇಗಾಂವ್ಕರ್, ಮನೋಜ್ ಶಿರುರೆ, ಶುಭಂ ಖೈರ್ನಾರ್, ಶೇಷರಾವ್ ಬಜರಂಗ್ ಸೂರ್ಯವಂಶಿ, ಯಶ್ ಯಾದವ್, ಧನಂಜಯ್ ಲೋಕಾಂಡೆ ಮತ್ತು ತೇಜಸ್ ಹರ್ಷದ್ ಕುಮಾರ್ ಶಾ.
ಸಿಬಿಐನಿಂದ ಎರಡು ಆರೋಪಪಟ್ಟಿ ಸಲ್ಲಿಕೆ
ನೀಟ್-ಯುಜಿ 2026ರ ಪ್ರಶ್ನೆಪತ್ರಿಕೆ ಸೋರಿಕೆ ಆರೋಪದ ತನಿಖೆಗಾಗಿ ಸಿಬಿಐ 2026ರ ಮೇ ತಿಂಗಳಲ್ಲಿ ಪ್ರಕರಣ ದಾಖಲಿಸಿತ್ತು. ಜುಲೈನಲ್ಲಿ 13 ಆರೋಪಿಗಳ ವಿರುದ್ಧ ಮುಖ್ಯ ಆರೋಪಪಟ್ಟಿ ಸಲ್ಲಿಸಿತ್ತು. ಬಳಿಕ 14ನೇ ಆರೋಪಿ ಶೇಷರಾವ್ ಬಜರಂಗ್ ಸೂರ್ಯವಂಶಿ ವಿರುದ್ಧ ಸೆಪ್ಟೆಂಬರ್ 2ರಂದು ಪೂರಕ ಆರೋಪಪಟ್ಟಿ ಸಲ್ಲಿಸಿತ್ತು.
2026ರ ಆಗಸ್ಟ್ 12ರಂದು ನ್ಯಾಯಾಲಯ ಮುಖ್ಯ ಆರೋಪಪಟ್ಟಿಯನ್ನು ಪರಿಗಣನೆಗೆ ತೆಗೆದುಕೊಂಡಿತ್ತು. ಈ ಸಂದರ್ಭದಲ್ಲಿ ಆರೋಪಿಗಳು ಪರಸ್ಪರ ಸಂಚು ರೂಪಿಸಿ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಹಂಚುವಲ್ಲಿ ಸಕ್ರಿಯ ಪಾತ್ರ ವಹಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ ಎಂದು ವಿಶೇಷ ನ್ಯಾಯಾಧೀಶ ಅಜಯ್ ಗುಪ್ತಾ ಅಭಿಪ್ರಾಯಪಟ್ಟಿದ್ದರು.
ಪರೀಕ್ಷೆಯ ಮೂರೂ ವಿಷಯಗಳ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿ ಹಂಚುವ ಜಾಲದಲ್ಲಿ ಆರೋಪಿಗಳು ಭಾಗಿಯಾಗಿರುವ ಸಾಧ್ಯತೆಯಿದೆ ಎಂದೂ ನ್ಯಾಯಾಲಯ ಗಮನಿಸಿತ್ತು.
ಸಿಬಿಐ ಆರೋಪಪಟ್ಟಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯಡಿ ಕ್ರಿಮಿನಲ್ ಪಿತೂರಿ, ವಂಚನೆ, ನಂಬಿಕೆ ದ್ರೋಹ ಮತ್ತು ಸಾಕ್ಷ್ಯ ನಾಶಕ್ಕೆ ಸಂಬಂಧಿಸಿದ ಆರೋಪಗಳನ್ನು ಸೇರಿಸಲಾಗಿದೆ. ಇದರ ಜತೆಗೆ ಭ್ರಷ್ಟಾಚಾರ ತಡೆ ಕಾಯ್ದೆ, 1988 ಮತ್ತು ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ವಿಧಾನಗಳ ತಡೆ) ಕಾಯ್ದೆ, 2024ರ ವಿವಿಧ ನಿಬಂಧನೆಗಳನ್ನೂ ಅನ್ವಯಿಸಲಾಗಿದೆ.
ಮೂವರು ವಿಷಯ ತಜ್ಞರ ಪಾತ್ರದ ಬಗ್ಗೆಯೂ ಉಲ್ಲೇಖ
ನೀಟ್-ಯುಜಿ 2026ರ ಪ್ರಶ್ನೆಪತ್ರಿಕೆಗಳನ್ನು ಭಾಷಾಂತರಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ನೇಮಿಸಿದ್ದ ವಿಷಯ ತಜ್ಞರ ಪಾತ್ರವನ್ನೂ ನ್ಯಾಯಾಲಯ ಪರಿಶೀಲಿಸಿದೆ.
ಆರೋಪಿ ಪಿ.ವಿ. ಕುಲಕರ್ಣಿ ಅವರಿಗೆ ವಿಷಯ ತಜ್ಞರನ್ನು ನಿಗದಿತ ಸ್ಥಳದಲ್ಲಿ ತಪಾಸಣೆ ಮಾಡುತ್ತಿರಲಿಲ್ಲ ಎಂಬುದು ತಿಳಿದಿತ್ತು. ಈ ಅವಕಾಶವನ್ನು ಬಳಸಿಕೊಂಡು, ಪ್ರಶ್ನೆಪತ್ರಿಕೆ ಭಾಷಾಂತರದ ವೇಳೆ ಸಿದ್ಧಪಡಿಸಿದ್ದ ಚೀಟಿಗಳು ಮತ್ತು ಸಣ್ಣ ಟಿಪ್ಪಣಿಗಳನ್ನು ಅವರು ರಹಸ್ಯವಾಗಿ ಹೊರಗೆ ತೆಗೆದುಕೊಂಡು ಹೋಗಿದ್ದಾರೆ ಎಂಬ ಆರೋಪವಿದೆ ಎಂದು ನ್ಯಾಯಾಲಯ ತಿಳಿಸಿದೆ.
ಮೂವರು ವಿಷಯ ತಜ್ಞರು ಈ ಕೆಲಸಕ್ಕೆ ನೇಮಕಗೊಳ್ಳುವ ಮೊದಲು, ಪರೀಕ್ಷೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ ಎಂದು ಲಿಖಿತ ಭರವಸೆ ನೀಡಿದ್ದರು. ಆದರೆ, ಅವರು ಈ ಭರವಸೆಯನ್ನು ಉಲ್ಲಂಘಿಸಿರುವ ಸಾಧ್ಯತೆಯಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ತಮ್ಮ ತಮ್ಮ ವಿಷಯಗಳ ಪ್ರಶ್ನೆಪತ್ರಿಕೆಗಳನ್ನು ಭಾಷಾಂತರಿಸುವ ಜವಾಬ್ದಾರಿಯನ್ನು ಎನ್ಟಿಎ ಈ ತಜ್ಞರಿಗೆ ನೀಡಿತ್ತು. ಹೀಗಾಗಿ, ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು ಸೋರಿಕೆ ಮಾಡಿರುವ ಆರೋಪವು ಎನ್ಟಿಎಗೆ ಮಾಡಿದ ನಂಬಿಕೆ ದ್ರೋಹವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮನೀಷಾ ಮಾಂಧಾರೆ, ಪಿ.ವಿ. ಕುಲಕರ್ಣಿ ಮತ್ತು ಮನೀಷಾ ಸಂಜಯ್ ಹವಾಲ್ದಾರ್ ಎಂಬ ಮೂವರು ವಿಷಯ ತಜ್ಞರು ಇತರ ಆರೋಪಿಗಳೊಂದಿಗೆ ಸೇರಿ ಅಕ್ರಮವಾಗಿ ಹಣ ಗಳಿಸುವ ಉದ್ದೇಶದಿಂದ ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಯನ್ನು ಸೋರಿಕೆ ಮಾಡಿದ್ದಾರೆ ಎಂಬ ಆರೋಪವಿದೆ. ತಮ್ಮ ವಿಷಯಗಳಿಗೆ ಸಂಬಂಧಿಸಿದ ಸೋರಿಕೆಯಾದ ಪ್ರಶ್ನೆಗಳನ್ನು ಇತರ ಆರೋಪಿಗಳು ಮತ್ತು ಹಲವು ಅಭ್ಯರ್ಥಿಗಳಿಗೆ ಮಾರಾಟ ಮಾಡಿದ್ದಾರೆ. ಕೋಚಿಂಗ್ ನೀಡುವ ನೆಪದಲ್ಲಿ ಈ ವ್ಯವಹಾರ ನಡೆದಿದೆ ಎಂದು ನ್ಯಾಯಾಲಯದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಸಾಕ್ಷ್ಯ ನಾಶಪಡಿಸಿದ ಆರೋಪವೂ ಇದೆ
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶಪಡಿಸಿರುವ ಆರೋಪವನ್ನೂ ನ್ಯಾಯಾಲಯ ಗಮನಿಸಿದೆ. ಕೆಲವು ಆರೋಪಿಗಳು ಸೋರಿಕೆಯಾದ ಪರೀಕ್ಷಾ ಸಾಮಗ್ರಿಗಳನ್ನು ವಿಲೇವಾರಿ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಹೊಂದಿದ್ದ ಎಲೆಕ್ಟ್ರಾನಿಕ್ ಸಾಧನಗಳನ್ನು ನಾಶಪಡಿಸಿದ್ದಾರೆ ಎಂಬ ಆರೋಪವಿದೆ.
ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ವಿಧಾನಗಳ ತಡೆ) ಕಾಯ್ದೆ, 2024ರ ಸೆಕ್ಷನ್ 3, 4 ಮತ್ತು 5ರ ಅಡಿಯಲ್ಲಿ ಈ ಕೃತ್ಯಗಳು ಅಪರಾಧವಾಗಿದ್ದು, ಸೆಕ್ಷನ್ 10 ಮತ್ತು 11ರ ಅಡಿಯಲ್ಲಿ ಶಿಕ್ಷೆಗೆ ಅವಕಾಶವಿದೆ ಎಂದು ನ್ಯಾಯಾಲಯ ತಿಳಿಸಿದೆ.
ನವೆಂಬರ್ 21ರಂದು 14 ಆರೋಪಿಗಳ ವಿರುದ್ಧ ಔಪಚಾರಿಕವಾಗಿ ಆರೋಪಗಳನ್ನು ನಿಗದಿಪಡಿಸಲಾಗುತ್ತದೆ. ನವೆಂಬರ್ 25ರಿಂದ ಪ್ರಾಸಿಕ್ಯೂಷನ್ ಪರ ಸಾಕ್ಷಿಗಳ ವಿಚಾರಣೆ ಆರಂಭವಾಗಲಿದೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
