- ತಮ್ಮ ಸರ್ಕಾರವೂ ಹೊಣೆ ನಿಭಾಯಿಸಲಿ; ಸಿಎಂಗೆ ಪತ್ರ ಬರೆದು ಒತ್ತಾಯಿಸಿರುವ ಕೇಂದ್ರ ಸಚಿವರು
- ಕಬ್ಬು ಖರೀದಿ, ಕಟಾವು, ಸಾಗಣೆ ಮತ್ತು ಪಾವತಿಯಲ್ಲಿ ಪಾರದರ್ಶಕತೆ ಕಾಪಾಡಲು ಸೂಚನೆ
ನವದೆಹಲಿ: ಕರ್ನಾಟಕದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಪರಿಹರಿಸಲು ರಾಜ್ಯ ಸರ್ಕಾರ ತಕ್ಷಣವೇ ಆಡಳಿತಾತ್ಮಕ ಮತ್ತು ಆರ್ಥಿಕವಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸುದೀರ್ಘ ಪತ್ರ ಬರೆದಿರುವ ಸಚಿವರು, ಕಬ್ಬು ಖರೀದಿ, ಕಟಾವು, ಸಾಗಣೆ ಮತ್ತು ರೈತರಿಗೆ ಸಕಾಲಕ್ಕೆ ಹಣ ಪಾವತಿಸುವ ಪ್ರಕ್ರಿಯೆಯಲ್ಲಿ ನ್ಯಾಯಸಮ್ಮತ, ಪಾರದರ್ಶಕ ವ್ಯವಸ್ಥೆ ಜಾರಿಗೊಳಿಸುವಂತೆ ಸಹ ಒತ್ತಾಯಿಸಿದ್ದಾರೆ.
ಕಬ್ಬಿನ ಕನಿಷ್ಠ ಮಾರಾಟ ಬೆಲೆ (MSP) ಪರಿಷ್ಕರಣೆಗೆ ಸಂಬಂಧಿಸಿದಂತೆ ಉಲ್ಲೇಖಿಸಿರುವ ಸಚಿವರು, ಪ್ರಸ್ತುತ ಸಕ್ಕರೆ ಕೆಜಿಗೆ ₹48ರಿಂದ ₹50 ದರದಲ್ಲಿ ಮಾರಾಟವಾಗುತ್ತಿದ್ದು, ಸರ್ಕಾರ ನಿಗದಿಪಡಿಸಿರುವ ಕನಿಷ್ಠ ಮಾರಾಟ ಬೆಲೆ ₹31 ಕ್ಕಿಂತ ಹೆಚ್ಚಾಗಿದೆ. ಎಥೆನಾಲ್ ನೀತಿ ಮತ್ತು ರಫ್ತು ಉತ್ತೇಜನದಂತಹ ಕೇಂದ್ರದ ಕ್ರಮಗಳಿಂದ ಸಕ್ಕರೆ ಬೆಲೆ ಸ್ಥಿರತೆ ಸಾಧಿಸಲಾಗಿದೆ ಎಂದಿದ್ದಾರೆ.
ಎಥೆನಾಲ್ ನಿಂದ ಸಕ್ಕರೆ ಕಾರ್ಖಾನೆಗಳಿಗೆ ₹5,803 ಆದಾಯ: ಎಥೆನಾಲ್ ಉತ್ಪಾದನೆಯಿಂದ ಕರ್ನಾಟಕದ ಸಕ್ಕರೆ ಕಾರ್ಖಾನೆಗಳಿಗೆ ಗಣನೀಯ ಆದಾಯ ಲಭಿಸುತ್ತಿದೆ. 2025-26ನೇ ಸಾಲಿನಲ್ಲಿ ಕರ್ನಾಟಕದ ಸಕ್ಕರೆ ಕಾರ್ಖಾನೆಗಳು ಎಥೆನಾಲ್ ಮಾರಾಟದಿಂದ ₹5,803 ಕೋಟಿ ಆದಾಯ ಗಳಿಸಿವೆ. ಎಥೆನಾಲ್ ಡಿಸ್ಟಿಲರಿಗಳ ಸ್ಥಾಪನೆಗೆ ಎಥೆನಾಲ್ ಬಡ್ಡಿ ಸಹಾಯಧನ ಯೋಜನೆಯಡಿ ಕೇಂದ್ರ ಸರ್ಕಾರ ₹548 ಕೋಟಿ ಆರ್ಥಿಕ ನೆರವು ಸಹ ನೀಡಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
SAP ಮೂಲಕ ನೇರವಾಗಿ: ಪ್ರಸಕ್ತ ಹಂಗಾಮಿಗೆ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯನ್ನು (FRP) ಪ್ರತಿ ಕ್ವಿಂಟಾಲ್ಗೆ ₹355 ರಿಂದ ₹365ಕ್ಕೆ ಹೆಚ್ಚಿಸಿದ್ದು, ಪ್ರತಿ ಮೆಟ್ರಿಕ್ ಟನ್ಗೆ ₹3,650 ನಿಗದಿಪಡಿಸಲಾಗಿದೆ. ಕರ್ನಾಟಕದಲ್ಲಿ ಕಬ್ಬು ಬೆಳೆಯುವ ವೆಚ್ಚ ಹೆಚ್ಚಿದ್ದರೆ, ರಾಜ್ಯ ಸರ್ಕಾರ ಪ್ರತ್ಯೇಕ ರಾಜ್ಯ ಸಲಹಾ ಬೆಲೆ (SAP) ಅಥವಾ ಇತರ ಪ್ರೋತ್ಸಾಹಧನ ಘೋಷಿಸುವ ಮೂಲಕ ರೈತರಿಗೆ ನೆರವಾಗಿ ಎಂದೂ ಮುಖ್ಯಮಂತ್ರಿಗೆ ಸಲಹೆ ನೀಡಿದ್ದಾರೆ.
ಕಬ್ಬು ಬೆಳೆಗಾರರ ಬೇಡಿಕೆಗಳು ಹಾಗೂ ಸಕ್ಕರೆ ಕಾರ್ಖಾನೆಗಳ ಸಮಸ್ಯೆಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರ ಆಗಲೇ ಪ್ರೊ.ರಮೇಶ್ ಚಂದ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಿದೆ. ಈ ಸಮಿತಿ ರೈತರು, ಸಕ್ಕರೆ ಕಾರ್ಖಾನೆಗಳು, ಉದ್ಯಮ ಪ್ರತಿನಿಧಿಗಳು ಮತ್ತು ರಾಜ್ಯ ಸರ್ಕಾರದೊಂದಿಗೆ ಸಮಾಲೋಚನೆ ನಡೆಸುತ್ತಿದ್ದು, ಕರ್ನಾಟಕ ಸರ್ಕಾರದ ಪ್ರತಿನಿಧಿಗಳೊಂದಿಗೂ ಅಕ್ಟೋಬರ್ 29 ಮತ್ತು 30ರಂದು ಸಭೆ ನಡೆಸಿರುವ ಬಗ್ಗೆ ಮನವರಿಕೆ ಮಾಡಿ ಕೊಟ್ಟಿದ್ದಾರೆ.
ಪಾರದರ್ಶಕ ವ್ಯವಸ್ಥೆಗೆ ಸೂಚನೆ:
ರಾಜ್ಯ ಸರ್ಕಾರ, ಕಬ್ಬಿನ ತೂಕ ಮತ್ತು ಸಕ್ಕರೆ ಇಳುವರಿ ಪ್ರಮಾಣವನ್ನು ಅಳೆಯುವ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಬೇಕು. ತೂಕದ ಯಂತ್ರಗಳ ಮಾಪನಾಂಕ ನಿರ್ಣಯ, ಪರಿಶೀಲನೆ ಹಾಗೂ ಕಟಾವು ಪ್ರಕ್ರಿಯೆಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಬೇಕು. ಯಾಂತ್ರಿಕ ಕಟಾವು, ಸಾಗಣೆ ವ್ಯವಸ್ಥೆ ಮತ್ತು ಕಬ್ಬಿನ ತೂಕದ ಲೆಕ್ಕಾಚಾರದಲ್ಲಿ ಸುಧಾರಣೆ ತರುವ ಮೂಲಕ ರೈತರಿಗೆ ಹೆಚ್ಚಿನ ಹಣ ದೊರೆಯುವಂತೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ.
ಕಟಾವು ಮತ್ತು ಸಾಗಣೆ ವೆಚ್ಚ (H&T Charges), ಯಾಂತ್ರಿಕ ಕಟಾವಿನ ಹೆಸರಿನಲ್ಲಿ ಮಾಡಲಾಗುತ್ತಿರುವ ಕಡಿತಗಳು ರೈತರ ಪ್ರಮುಖ ಸಮಸ್ಯೆಗಳಾಗಿವೆ. ಸ್ಥಳೀಯವಾಗಿ ಇಂಧನ ಮತ್ತು ವಿದ್ಯುತ್ ದರ ಸೇರಿದಂತೆ ಹೆಚ್ಚುತ್ತಿರುವ ವೆಚ್ಚಗಳನ್ನು ಪರಿಗಣಿಸಿ ರೈತರಿಗೆ SAP ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರದ ಕ್ರಮಗಳಿಂದ 2024-25ನೇ ಸಾಲಿನ ಕಬ್ಬಿನ ಬಾಕಿ ಪಾವತಿಯಲ್ಲಿ ಶೇ.99.8ರಷ್ಟು ಹಾಗೂ 2025-26ನೇ ಸಾಲಿನಲ್ಲಿ ಶೇ.99.6ರಷ್ಟು ಪಾವತಿ ಪೂರ್ಣಗೊಂಡಿದೆ. ಹೀಗಾಗಿ ರಾಜ್ಯ ಸರ್ಕಾರವೂ ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ, ಸಕ್ಕರೆ ಕಾರ್ಖಾನೆಗಳು ಮತ್ತು ಕಬ್ಬು ಬೆಳೆಗಾರರ ನಡುವಿನ ವಿವಾದಗಳನ್ನು ತಕ್ಷಣ ಬಗೆಹರಿಸಬೇಕು ಎಂದು ಸಿಎಂಗೆ ಆಗ್ರಹಿಸಿದ್ದಾರೆ.
ಕಬ್ಬು, ಸಕ್ಕರೆ ವಲಯದಲ್ಲಿ ಬೆಲೆ ಸ್ಥಿರತೆ, ಸಕ್ಕರೆ ಕಾರ್ಖಾನೆಗಳ ಬಲವರ್ಧನೆ ಜತೆಗೆ ರೈತರು ಮತ್ತು ಗ್ರಾಹಕರ ಹಿತ ಕಾಪಾಡುವಲ್ಲಿ ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಅಂತೆಯೇ ಕರ್ನಾಟಕ ಸರ್ಕಾರವೂ ತನ್ನ ಜವಾಬ್ದಾರಿ ಅರಿತು ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಪ್ರಲ್ಹಾದ ಜೋಶಿ ಅವರು ಸಿಎಂಗೆ ಪತ್ರ ಬರೆದು ಗಮನ ಸೆಳೆದಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
