ಬೆಂಗಳೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, ರಾಜ್ಯದಲ್ಲಿ ಆರ್ಎಸ್ಎಸ್ ಈವರೆಗೆ ಯಾವುದೇ ಅಹಿತಕರ ಘಟನೆಗಳಲ್ಲಿ ಭಾಗಿಯಾಗಿಲ್ಲ, ಸಂಘಟನೆ ವಿರುದ್ಧ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ವಿಧಾನ ಪರಿಷತ್ನಲ್ಲಿ ಅಧಿಕೃತವಾಗಿ ಉತ್ತರಿಸಿದ್ದಾರೆ.
ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಮುಂಗಾರು ಅಧಿವೇಶನದ ವೇಳೆ ಪರಿಷತ್ ಕಲಾಪದಲ್ಲಿ ಆರ್ಎಸ್ಎಸ್ ವಿರುದ್ಧ ರಾಜ್ಯದಲ್ಲಿ ಎಷ್ಟು ಪ್ರಕರಣಗಳು ದಾಖಲಾಗಿವೆ? ಸಂಘಟನೆಯು ಯಾವುದಾದರೂ ಗಲಭೆಯಲ್ಲಿ ಭಾಗಿ ಯಾಗಿದೆಯೇ? ಅಥವಾ ರಾಜ್ಯದಲ್ಲಿ ಆರ್ ಎಎಸ್ ಪಥ ಸಂಚಲನ ಮತ್ತು ಶಾಖೆ ನಡೆಸುವ ಸಂದರ್ಭಯಾವುದಾದರೂ ಅಹಿತಕರ ಘಟನೆಗಳು ಜರುಗಿದ ಪ್ರಕರಣಗಳು ಬೆಳಕಿಗೆ ಬಂದಿವೆಯೇ ಎಂದು ಪ್ರಶ್ನಿಸಿದ್ದರು. ಇದಕ್ಕೆ ಲಿಖಿತ ಉತ್ತರ ನೀಡಿರುವ ಗೃಹ ಸಚಿವರು, ಅಂತಹ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ಷರಾ ಬರೆದಿದ್ದಾರೆ. ಇಂತಹುದೇ ಉತ್ತರ ಕಳೆದ ಚಳಿಗಾಲದ ಅಧಿವೇಶನದಲ್ಲಿಯೂ ಲಭಿಸಿತ್ತು.
ವರ್ಷದ ಹಿಂದೆ ವಿಧಾನಸಭೆಯಲ್ಲೂ ಇದೇ ಉತ್ತರ!:
ವಿಧಾನಸಭೆ ಸದಸ್ಯ ವಿ. ಸುನೀಲ್ ಕುಮಾರ್ ಅವರು ಡಿಸೆಂಬರ್ ನಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ವೇಳೆ ಪ್ರಶ್ನೆ ಕೇಳಿದ್ದರು. ಅದಕ್ಕೆ ಅಂದಿನ ಗೃಹ ಸಚಿವ ಡಾ. ಜಿ. ಪರಮೇಶ್ವರ ಲಿಖಿತ ಉತ್ತರ ನೀಡಿ, ಇದುವರೆಗೆ ನಡೆದಿರುವ ಪಥ ಸಂಚಲನದ ಸಂದರ್ಭದಲ್ಲಿ ಯಾವುದೇ ಗಲಾಟೆ, ದೊಂಬಿಗಳು, ಕೋಮುಗಲಭೆಗಳು ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಅಲ್ಲದೇ ರಾಜ್ಯದಲ್ಲಿ 2025ರ ವಿಜಯದಶಮಿ ವೇಳೆ ಆರ್ಎಸ್ಎಸ್ನಿಂದ 518 ಸ್ಥಳಗಳಲ್ಲಿ ಪಥ ಸಂಚಲನ ಕಾರ್ಯಕ್ರಮಗಳು ನಡೆದಿವೆ ಎಂದು ತಿಳಿಸಿದ್ದರು. ಆರ್ಎಸ್ ಎಸ್ ಭಯೋತ್ಪಾದಕ ಸಂಘಟನೆಯೇ? ಭೂಗತ ಮಾಫಿಯಾದವರೇ? ಆರ್ಎಸ್ ಎಸ್ ಕ್ರಿಮಿನಲ್ಗಳ ಸಮೂಹ ಇರಬಹುದೇ ಎಂದು ಪ್ರಶ್ನಿಸಿದ್ದ ಪ್ರಿಯಾಂಕ್ ಖರ್ಗೆ, ಆರ್ ಎಎಸ್ ನೋಂದಾಯಿತ ಸಂಘಟನೆಯಲ್ಲ, ಅಲ್ಲಿರುವವರು ರಾಷ್ಟ್ರಭಕ್ತರಲ್ಲ, ಅವರಿಂದ ರಾಷ್ಟ್ರಭಕ್ತಿಯ ಪಾಠ ಬೇಕಾಗಿಲ್ಲ ಎಂದೂ ಹೇಳಿದ್ದರು. ಆದರೆ, ಇದೀಗ ವಿಧಾನಮಂ ಡಲದಲ್ಲಿಯೇ ಅಧಿಕೃತ ಉತ್ತರ ನೀಡಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಆರ್ ಎಸ್ಎಸ್ ಮೇಲೆ ಯಾವುದೇ ಪ್ರಕರಣಗಳು ದಾಖಲಾಗಿಲ್ಲ ಎಂದು ತಿಳಿಸಿದ್ದಾರೆ.
ಆರೆಸ್ಸೆಸ್ ಬಗ್ಗೆ ಖರ್ಗೆ, ಪರಂ ಅವರಿಂದ ಒಂದೇ ಉತ್ತರ
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ಬಗ್ಗೆ ದಿನಬೆಳಗಾದರೆ ದ್ವೇಷ ಕಕ್ಕುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರೇ ಸದನದಲ್ಲಿ ಸಂಘದ ಬಗ್ಗೆ ಬರೆದ ಷರಾ ಇದು. ಆರ್ಎಸ್ಎಸ್ ಶಾಖೆ ಹಾಗೂ ಪಂಥ ಸಂಚಲನದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ವಿಧಾನಪರಿಷತ್ತಿನಲ್ಲಿ ಉತ್ತರಿಸಿದ್ದಾರೆ. 2025ರಲ್ಲಿ ಅಂದಿನ ಗೃಹ ಸಚಿವ ಡಾ.ಜಿ.ಪರಮೇಶ್ವರ ಕೂಡ ಇದೇ ಉತ್ತರ ನೀಡಿದ್ದರು.
ಕಾಂಗ್ರೆಸ್ ನಾಯಕರೇ ನೂರು ಸುಳ್ಳು ಹೇಳಿದರೂ ಸಂಘದ ಸಂಸ್ಕಾರಕ್ಕೆ ಧಕ್ಕೆ ತರಲಾಗದು ಎಂದು ಶಾಸಕ ವಿ. ಸುನೀಲ್ ಕುಮಾರ್ ತಿಳಿಸಿದ್ದಾರೆ.

ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
