“ವಿವಿಧತೆಯಲ್ಲಿ ಏಕತೆ” ಎಂಬುದು ಭಾರತದ ಸೌಂದರ್ಯ ಮತ್ತು ಜೀವಶಕ್ತಿ. ಜಾತಿ, ಮತ, ಪಂಥ ಹಾಗೂ ಪ್ರದೇಶಗಳ ಭೇದಭಾವವನ್ನು ಬದಿಗೊತ್ತಿ ‘ನಾವೆಲ್ಲ ಭಾರತೀಯರು ಒಂದೇ ಕುಟುಂಬ’ ಎಂಬ ಭಾವನೆಯಿಂದ ಜೀವಿಸುವುದು ನಮ್ಮ ಸಂಸ್ಕೃತಿ. ಹಿಮಾಲಯದ ಅಡಿಯಿಂದ ಹಿಂದೂ ಮಹಾಸಾಗರದವರೆಗಿನ ಈ ಪವಿತ್ರ ಭೂಮಿ ಭಾರತ. ಆದರೆ, ಕಾಲಕಾಲಕ್ಕೆ ಕಾಲೋಚಿತ ರೋಗಗಳು ಕಾಣಿಸಿಕೊಳ್ಳುವಂತೆ, ನಮ್ಮ ಸಮಾಜದಲ್ಲಿಯೂ ಸ್ಪೃಶ್ಯ-ಅಸ್ಪೃಶ್ಯತೆ ಹಾಗೂ ಮೇಲು-ಕೀಳು ಎಂಬ ಸಾಮಾಜಿಕ ಅಸಮಾನತೆಯ ರೋಗಗಳು ನುಸುಳಿದವು. ಬ್ರಿಟಿಷರ ‘ಒಡೆದು ಆಳುವ ನೀತಿ’ ಮತ್ತು ತದನಂತರದ ಸ್ವಾರ್ಥ ರಾಜಕೀಯದ ಫಲವಾಗಿ ಇವು ಸಮಾಜದಲ್ಲೆಲ್ಲ ವ್ಯಾಪಿಸಿ, ಪ್ರಕೃತಿ ಹಾಗೂ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಮಾಡುತ್ತಿವೆ.
ಮಾನವನು ಸಮಾಜಜೀವಿ. ಸಮಾಜದ ನಿರಂತರತೆಗೆ ನಂಬಿಕೆ ಮತ್ತು ಬಾಂಧವ್ಯಗಳು ಅತಿ ಮುಖ್ಯ. ಮನುಷ್ಯರ ನಡುವೆ ಸಡಿಲಗೊಳ್ಳುವ ಸಂಬಂಧಗಳನ್ನು ಪುನಃ ಚಿಗುರಿಸಲು ನಮ್ಮ ಹಿರಿಯರು ಹಬ್ಬ-ಹರಿದಿನಗಳ ಪರಂಪರೆಯನ್ನು ನೀಡಿದರು. ರೇಷ್ಮೆಯ ಬಿಡಿ ದಾರವು ದುರ್ಬಲ, ಆದರೆ ಅದೇ ದಾರಗಳನ್ನು ಒಂದಾಗಿ ಹೆಣೆದಾಗ ದೃಢವಾದ ‘ರಕ್ಷೆ’ಯಾಗುತ್ತದೆ. ಬೇರೆ ಬೇರೆ ಬಣ್ಣದ ಹೂವುಗಳು ದಾರದಿಂದ ಒಂದಾದಾಗ ದೇವರಿಗೆ ಏರುವ ಸುಂದರ ಮಾಲೆಯಾಗುತ್ತದೆ. ಹಾಗೆಯೇ, ಸಮಾಜದ ಪ್ರತಿಯೊಬ್ಬರನ್ನು ದೇಶಭಕ್ತಿ ಮತ್ತು ಸಾಮರಸ್ಯದ ದಾರದಿಂದ ಬೆಸೆದಾಗ ಏಕತೆ ತಾನಾಗಿಯೇ ಅರಳುತ್ತದೆ; ಸಾಮಾಜಿಕ ಭೇದಭಾವದ ರೋಗಗಳಿಗೆ ಔಷಧ ದೊರೆಯುತ್ತದೆ.
ದೈನಂದಿನ ಜೀವನದ ವೈಮನಸ್ಯಗಳಿಗೆ ಪ್ರೀತಿ ಮತ್ತು ಸೋದರತ್ವವೇ ಮದ್ದು. ಈ ಸಹೋದರತ್ವ ಹಾಗೂ ಬಂಧುತ್ವದ ಭಾವನೆಯನ್ನು ಜಾಗೃತಗೊಳಿಸುವುದೇ ರಕ್ಷಾಬಂಧನ ಹಬ್ಬದ ಮೂಲ ಉದ್ದೇಶ. ರಕ್ಷಾಬಂಧನಕ್ಕೆ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಗಳಿದ್ದರೂ, ಇಂದಿನ ಸಂದರ್ಭದಲ್ಲಿ ಇದು ಕೇವಲ ಅಣ್ಣ-ತಂಗಿಯರ ಹಬ್ಬವಾಗಿ ಮಾತ್ರ ಉಳಿದಿಲ್ಲ; ಇಡೀ ದೇಶವಾಸಿಗಳಲ್ಲಿ ಸೋದರತೆಯನ್ನು ಮೂಡಿಸುವ ಹಬ್ಬವಾಗಿದೆ. ವ್ಯಕ್ತಿಗತವಾಗಿ ಯಾರು ಯಾವ ದೇವರನ್ನಾದರೂ ಪೂಜಿಸಲಿ, ಆದರೆ ಮನೆಯಿಂದ ಹೊರಬಂದ ತಕ್ಷಣ “ನಾವೆಲ್ಲ ಭಾರತೀಯರು” ಎಂಬ ವಿಶಾಲ ಮನೋಭಾವ ಮೂಡಬೇಕು.
ಸಮಸ್ಯೆಗಳು ಎಷ್ಟೇ ಇರಲಿ, ‘ಸಜ್ಜನಾತ್ಮಕ ಶಕ್ತಿಯ ಸಂಘಟನೆ’ಯೊಂದೇ ಅದಕ್ಕೆ ಶ್ರೇಷ್ಠ ಪರಿಹಾರ. ಸಮಾಜದ ಪ್ರತಿಯೊಬ್ಬರೂ ದೇಶಕಾರ್ಯದಲ್ಲಿ ಭಾಗಿಯಾಗಬೇಕು. ಸಾಮಾಜಿಕ ಸಾಮರಸ್ಯ, ಸ್ವದೇಶಿ ಜೀವನಶೈಲಿ, ಪರಿಸರ ನೈರ್ಮಲ್ಯ, ನಾಗರಿಕ ಪ್ರಜ್ಞೆ ಹಾಗೂ ಸಂಸ್ಕಾರಯುತ ಚಟುವಟಿಕೆಗಳ ಮೂಲಕ ಸಮಾಜವನ್ನು ಜಾಗೃತಗೊಳಿಸಬೇಕಿದೆ.
ರಾಷ್ಟ್ರಕಾರ್ಯದಲ್ಲಿ ಗಂಡು-ಹೆಣ್ಣು, ಪಂಡಿತ-ಪಾಮರ, ನಗರ-ಗ್ರಾಮ ಎಂಬ ಯಾವುದೇ ತಾರತಮ್ಯವಿಲ್ಲದೆ ಎಲ್ಲರೂ ಒಂದಾಗಲು ರಕ್ಷಾಬಂಧನ ಸ್ಪೂರ್ತಿ ನೀಡುತ್ತದೆ. ಭ್ರಷ್ಟಾಚಾರ, ಸ್ವಾರ್ಥ ಹಾಗೂ ನಕಾರಾತ್ಮಕತೆಗಳಿಗೆ ವಿದಾಯ ಹೇಳಿ, ಐದು ಬೆರಳುಗಳು ಸೇರಿ ಮುಷ್ಟಿಯಾಗುವಂತೆ ನಾವೆಲ್ಲರೂ ಒಂದಾಗೋಣ. ಈ ರಕ್ಷಾಬಂಧನದ ಪವಿತ್ರ ದಿನದಂದು ಮುಂಗೈಯಲ್ಲಿ ಶ್ರೀರಕ್ಷೆಯನ್ನು ಧರಿಸಿ, “ಸರ್ವೇ ಭವಂತು ಸುಖಿನಃ” ಹಾಗೂ “ಲೋಕಾ ಸಮಸ್ತಾ ಸುಖಿನೋ ಭವಂತು” ಎಂಬ ಕಲ್ಪನೆಯನ್ನು ಸಾಕಾರಗೊಳಿಸಲು ಸಂಕಲ್ಪ ಮಾಡೋಣ.
- ಮಹಾದೇವಯ್ಯ ಕರದಳ್ಳಿ, ಕಲಬುರ್ಗಿ
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
