ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಹೆಸರು ಕೇಳುತ್ತಿದ್ದಂತೆ ಅಥವಾ ವಿಜಯದಶಮಿ ಸೇರಿದಂತೆ ಪ್ರಮುಖ ಉತ್ಸವಗಳ ಸಂದರ್ಭದಲ್ಲಿ ಕಣ್ಣಿಗೆ ಮುದನೀಡುವುದು ಖಾಕಿ ಪ್ಯಾಂಟ್, ಬಿಳಿ ಗಣವೇಷ, ತಲೆಗೆ ಕಪ್ಪು ಬಣ್ಣದ ಟೋಪಿ ಹಾಗೂ ಕೈಯಲ್ಲಿ ದಂಡ ಹಿಡಿದು ಸಾಗುವ ಸ್ವಯಂಸೇವಕರ ಶಿಸ್ತಿನ ಹೆಜ್ಜೆಗಳು. ಈ ದೃಶ್ಯವನ್ನು ಕಾಣುವ ಅನೇಕರು ಪಥಸಂಚಲನವನ್ನು ಕೇವಲ ರಸ್ತೆಯಲ್ಲಿ ನಡೆಯುವ ಒಂದು ಸಾಂಪ್ರದಾಯಿಕ ಪಥ ಪ್ರದರ್ಶನ ಎಂದು ಭಾವಿಸುವುದುಂಟು. ಆದರೆ, ಮೇಲ್ನೋಟಕ್ಕೆ ಗೋಚರಿಸುವ ಈ ದೃಶ್ಯದ ಆಳದಲ್ಲಿ ರಾಷ್ಟ್ರೀಯತೆ ಬೇರುಗಳು, ಗಂಭೀರ ಸಿದ್ಧಾಂತ, ಸಾಂಘಿಕ ಶಿಸ್ತು ಮತ್ತು ಸಮಾಜದ ಬಗ್ಗೆ ಅಪಾರ ಕಳಕಳಿ ಅಡಗಿದೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬೇಕಿದೆ.
ಸಂಘದ ಗಣವೇಷದ ವಿಚಾರಕ್ಕೆ ಬಂದರೆ, ಅದು ಕೇವಲ ಒಂದು ಉಡುಪಲ್ಲ ಬದಲಿಗೆ ಅದೊಂದು ರಾಷ್ಟ್ರಭಕ್ತಿ ಪ್ರೇರಿಪಿಸಿ ಸಮಾನತೆಯನ್ನು ನರನಾಡಿಗಳಲ್ಲಿ ಹರಿಯುವಂತೆ ಮಾಡುವ ಊಡುಪು. ಎಲ್ಲರೂ ಒಂದೇ ರೀತಿಯ ಸಮವಸ್ತ್ರ ಧರಿಸಿದಾಗ ಅಲ್ಲಿ ವ್ಯಕ್ತಿಗತ ಅಹಂಕಾರ ಕರಗಿ, ಒಗ್ಗಟ್ಟಿನ ಸಮಾನತೆಯ ಭಾವ ಮೂಡುತ್ತದೆ.ಪಥಸಂಚಲನದ ಸಾಲುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಅಲ್ಲಿ ಕಾಣಸಿಗುವುದ ಸಮಾಜದ ಅತ್ಯಂತ ಸುಂದರ ರೂಪ. ಆ ಸಾಲಿನಲ್ಲಿ ಹೆಜ್ಜೆ ಹಾಕುವವರಲ್ಲಿ ಬಡವ-ಶ್ರೀಮಂತ ಎಂಬ ತಾರತಮ್ಯವಿರುವುದಿಲ್ಲ ಮೇಲು-ಕೀಳು ಎಂಬ ಜಾತಿ ಭಾವನೆಗಳಿರುವುದಿಲ್ಲ. ಸಣ್ಣ ಶಾಲಾ ವಿದ್ಯಾರ್ಥಿಯಿಂದ ಹಿಡಿದು ಹಿರಿಯ ವೃದ್ಧರವರೆಗೆ ಎಲ್ಲರೂ ಒಂದೇ ರೀತಿಯ ಸಮವಸ್ತ್ರವನ್ನು ಧರಿಸಿರುತ್ತಾರೆ. ಇಲ್ಲಿ ಪ್ರತಿಯೊಬ್ಬ ವ್ಯಕ್ತಿಯ ವೈಯಕ್ತಿಕ ಪರಿಚಯ ಹಿನ್ನೆಲೆಗೆ ಸರಿದು, ಕೇವಲ ‘ಸ್ವಯಂಸೇವಕ’ ಹಾಗೂ ‘ಭಾರತೀಯ’ ಎಂಬ ಅಸ್ಮಿತೆ ಮಾತ್ರ ಮುಂಚೂಣಿಗೆ ಬರುತ್ತದೆ. ಸಮಾಜದಲ್ಲಿ ಬಿರುಕು ಮೂಡಿಸುತ್ತಿರುವ ಜಾತಿ-ಮತಗಳ ಗೋಡೆಗಳನ್ನು ಕರಗಿಸಿ, ಸೌಹಾರ್ದತೆಯ ಎಳೆಗಳನ್ನು ಗಟ್ಟಿಗೊಳಿಸುವ ಜೀವಂತ ಪಾಠವೇ ಈ ಪಥಸಂಚಲನ
ಶಿಸ್ತು ಎನ್ನುವುದು ಒಂದೇ ದಿನದಲ್ಲಿ ಬರುವುದಿಲ್ಲ. ಪ್ರತಿದಿನದ ಶಾಖೆಗಳಲ್ಲಿ (ದೈನಂದಿನ ಕೂಟಗಳಲ್ಲಿ) ನಡೆಸುವ ವ್ಯಾಯಾಮ, ಬೌದ್ಧಿಕ ಚರ್ಚೆ ಮತ್ತು ಸಾಂಘಿಕ ಚಟುವಟಿಕೆಗಳ ಫಲವೇ ಈ ಪಥಸಂಚಲನ. ವಾದ್ಯಗಳ (ಘೋಷ್) ಅಚ್ಚುಕಟ್ಟಾದ ತಾಳಕ್ಕೆ ತಕ್ಕಂತೆ ನೂರಾರು ಕಾಲುಗಳು ಒಂದೇ ಸಮಯಕ್ಕೆ ಮುಂದೆ ಬೀಳುವಾಗ, ಅದು ಕೇವಲ ದೈಹಿಕ ವ್ಯಾಯಾಮವಾಗಿರದೆ ಮಾನಸಿಕ ಏಕಾಗ್ರತೆ ಮತ್ತು ಪರಸ್ಪರ ಸಮನ್ವಯತೆಯ ಪ್ರತೀಕವಾಗುತ್ತದೆ. ಸಮಾಜಕ್ಕೆ ಅಥವಾ ದೇಶಕ್ಕೆ ಯಾವುದೇ ಆಪತ್ತು ಎದುರಾದಾಗ, ಒಗ್ಗಟ್ಟಿನಿಂದ ಸ್ಪಂದಿಸಲು ಇಂತಹ ಶಾರೀರಿಕ ಹಾಗೂ ಮಾನಸಿಕ ಸಿದ್ಧತೆ ಅತ್ಯಾವಶ್ಯಕ ಎಂಬುದನ್ನು ಸಂಘವು ನಿರಂತರವಾಗಿ ಸಾರಿಹೇಳುತ್ತಿದೆ.ಪಥಸಂಚಲನವು ರಸ್ತೆಗಳಲ್ಲಿ ಸಾಗುವಾಗಲೆಲ್ಲಾ ಇಕ್ಕೆಲಗಳಲ್ಲಿ ನಿಂತು ವೀಕ್ಷಿಸುವ ಸಾರ್ವಜನಿಕರ ಮುಖದಲ್ಲಿ ಅಚ್ಚರಿಯೊಂದಿಗೆ ಭರವಸೆಯ ಮಿಂಚು ಗೋಚರಿಸುತ್ತದೆ. “ದೇಶವನ್ನು ರಕ್ಷಿಸಲು, ಸಂಸ್ಕೃತಿಯನ್ನು ಉಳಿಸಲು ಮತ್ತು ಕಷ್ಟಕಾಲದಲ್ಲಿ ನಮ್ಮೊಂದಿಗೆ ನಿಲ್ಲಲು ಒಂದು ಬಲವಾದ ಸಂಘಟನೆ ಇದೆ ಎಂಬ ವಿಶ್ವಾಸವನ್ನು ಇದು ಸಾಮಾನ್ಯ ನಾಗರಿಕರಲ್ಲಿ ಮೂಡಿಸುತ್ತದೆ. ಇದು ಯಾವುದೇ ಬಲಾತ್ಕಾರದ ಪ್ರದರ್ಶನವಲ್ಲದೆ ಬದಲಿಗೆ ಸಮಾಜದ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವ ಜಾಗೃತಿಯಾಗಿದ್ದು.
ಸ್ವಯಂಸೇವಕರು ಸಾಗುವ ಮಾರ್ಗದ ಇಕ್ಕೆಲಗಳಲ್ಲಿ ಮನೆ-ಮನೆಗಳ ಮುಂದೆ ಹಾಕುವ ರಂಗೋಲಿ ಹಾಗೂ ಮಕ್ಕಳು ಧರಿಸುವ ಮಹಾಪುರುಷರ ವೇಷಭೂಷಣಗಳು ಸಾರ್ವಜನಿಕರಲ್ಲಿ ದೇಶಭಕ್ತಿಯನ್ನು ಎದ್ದುತೋರಿಸುವಂತೆ ಮಾಡುತ್ತವೆ.ಇಂದಿನ ಆಧುನಿಕ ಹಾಗೂ ಯಾಂತ್ರಿಕ ಯುಗದಲ್ಲಿ ಪ್ರತಿಯೊಬ್ಬರೂ ತಮ್ಮ ವೈಯಕ್ತಿಕ ಲಾಭ ಮತ್ತು ಪ್ರಚಾರದ ಹಿಂದೆ ಓಡುತ್ತಿದ್ದಾರೆ. ಆದರೆ, ಪಥಸಂಚಲನದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಸ್ವಯಂಸೇವಕನೂ ಯಾವುದೇ ಆಮಿಷ ಅಥವಾ ಫಲಾಪೇಕ್ಷೆಯಿಲ್ಲದೆ, ಕೇವಲ ‘ಭಾರತ ಮಾತೆಯ ಸೇವೆ’ ಎಂಬ ಪರಮ ಪವಿತ್ರ ಉದ್ದೇಶದಿಂದಸ್ವಯಂಪ್ರೇರಿತನಾಗಿ ಧಾವಿಸಿರುತ್ತಾನೆ.
ಅಗ್ನಿಹೋತ್ರಿ ಲೋಕೇಶ್ ಶರ್ಮಾ
ಲೇಖಕ ಹಾಗೂ ಪತ್ರಕರ್ತ
ಬೆಂಗಳೂರು
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
