ಲಂಡನ್: ಜಗತ್ತೇ ಒಂದು ಕುಟುಂಬ ಎಂಬ ‘ವಸುಧೈವ ಕುಟುಂಬಕಂ’ ತತ್ತ್ವದೊಂದಿಗೆ ನೂರು ವರ್ಷಗಳ ಸುದೀರ್ಘ ಸೇವಾ ಪಯಣ ಪೂರೈಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್ಎಸ್ಎಸ್) ತನ್ನ ಶತಮಾನೋತ್ಸವದ ಅಂಗವಾಗಿ ಜಾಗತಿಕ ಮಟ್ಟದಲ್ಲಿ ಸಂವಾದ ಮತ್ತು ಸಂಪರ್ಕ ಅಭಿಯಾನವನ್ನು ವಿಸ್ತರಿಸಿದೆ. ಈ ವಿಶೇಷ ಕಾರ್ಯಕ್ರಮಗಳ ಭಾಗವಾಗಿ ಸಂಘದ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಜೀ ಅವರು ಸೆಪ್ಟೆಂಬರ್ 2 ರಿಂದ 7 ರವರೆಗೆ ಲಂಡನ್ಗೆ ಭೇಟಿ ನೀಡಿದ್ದಾರೆ.
1925 ರಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಅವಧಿಯಲ್ಲಿ ಡಾ. ಕೇಶವ ಬಲಿರಾಮ್ ಹೆಡ್ಗೆವಾರ್ ಅವರಿಂದ ಸ್ಥಾಪಿಸಲ್ಪಟ್ಟ ಆರ್ಎಸ್ಎಸ್, ಸ್ವತಂತ್ರ ಭಾರತದ ರಾಜಕೀಯ ಮತ್ತು ಆರ್ಥಿಕ ಸ್ಥಿರತೆಗೆ ಸಮಾಜದ ಸಂಘಟನೆ ಮತ್ತು ಜಾಗೃತಿ ಅತ್ಯಗತ್ಯ ಎಂಬ ದೃಷ್ಟಿಕೋನ ಹೊಂದಿತ್ತು. ಇಂದು ಭಾರತದಾದ್ಯಂತ 1,34,000 ಕ್ಕೂ ಹೆಚ್ಚು ಸ್ಥಳೀಯ ಶಾಖೆಗಳು ಮತ್ತು ಸಭೆಗಳನ್ನು ಹೊಂದಿರುವ ಈ ಸಂಸ್ಥೆಯು, ಸ್ವಯಂಸೇವಕರ ಮೂಲಕ ಶಿಕ್ಷಣ, ಆರೋಗ್ಯ, ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳಲ್ಲಿ 1,52,000 ಕ್ಕೂ ಹೆಚ್ಚು ಸೇವಾ ಯೋಜನೆಗಳನ್ನು ನಡೆಸುತ್ತಿದೆ ಎಂದು ಸಂಘದ ಇತ್ತೀಚಿನ ವರದಿ ತಿಳಿಸಿದೆ.
ಶತಮಾನೋತ್ಸವದ 5 ಮುಖ್ಯ ಆದ್ಯತೆಗಳು:
ತನ್ನ ನೂರನೇ ವರ್ಷದ ಹಿನ್ನೆಲೆಯಲ್ಲಿ ಸಂಘವು ಸಮಾಜದ ಸಮಗ್ರ ಹಿತದೃಷ್ಟಿಯಿಂದ ಐದು ಮುಖ್ಯ ವಿಷಯಗಳಿಗೆ ಆದ್ಯತೆ ನೀಡಿದೆ:
ಸಾಮಾಜಿಕ ಸಾಮರಸ್ಯ | ಕುಟುಂಬ ಮೌಲ್ಯಗಳ ಬಲವರ್ಧನೆ | ಪರಿಸರ ಸಂರಕ್ಷಣೆ | ಸ್ವಾವಲಂಬನೆ | ನಾಗರಿಕ ಜವಾಬ್ದಾರಿ | ಜಾಗತಿಕ ಮಟ್ಟದಲ್ಲಿ ಸಾಂಸ್ಕೃತಿಕ ಸಂವಾದ
ಈ ಶತಮಾನೋತ್ಸವ ವರ್ಷದಲ್ಲಿ ಆರ್ಎಸ್ಎಸ್ ಜಗತ್ತಿನಾದ್ಯಂತ ವಿವಿಧ ದೇಶಗಳ ಪ್ರಮುಖ ಸಂಸ್ಥೆಗಳು ಹಾಗೂ ಸಮುದಾಯಗಳೊಂದಿಗೆ ಸೌಹಾರ್ದಯುತ ಸಂವಾದ ನಡೆಸುತ್ತಿದೆ. ಇದರ ಮೊದಲ ಹಂತವಾಗಿ ಏಪ್ರಿಲ್ನಲ್ಲಿ ಆರ್ಎಸ್ಎಸ್ ಸರ್ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಜೀ ಅವರು ಬ್ರಿಟನ್, ಅಮೆರಿಕ ಹಾಗೂ ಜರ್ಮನಿಗಳಲ್ಲಿ ಪ್ರಮುಖ ಚಿಂತಕರ ಚಾವಡಿಗಳು ಮತ್ತು ವಿದ್ವಾಂಸರೊಂದಿಗೆ ಚರ್ಚೆ ನಡೆಸಿದ್ದರು.
ತದನಂತರ, ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಜೀ ಅವರು ಅಮೆರಿಕದ ನ್ಯೂಯಾರ್ಕ್ನಲ್ಲಿ ನಡೆದ ಬಹುಧರ್ಮೀಯ ನಾಯಕರ ಸಭೆ ಹಾಗೂ ‘ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್’ನಲ್ಲಿ ನಡೆದ ‘ಯುನಿವರ್ಸಲ್ ಒನ್ನೆಸ್’ ಸಮ್ಮೇಳನದಲ್ಲಿ ಭಾಷಣ ಮಾಡಿದ್ದರು. ಬಳಿಕ ಕೆನಡಾದ ಟೊರೊಂಟೊದಲ್ಲಿ ನಡೆದ ‘ಹಿಂದೂ ವಿಶ್ವ ಬಂಧು’ ಸಮಾವೇಶದಲ್ಲೂ ಭಾಗವಹಿಸಿ ಜಾಗತಿಕ ಸೌಹಾರ್ದತೆಯ ಸಂದೇಶ ನೀಡಿದ್ದರು.
ಲಂಡನ್ನಲ್ಲಿ ವಿವಿಧ ಕಾರ್ಯಕ್ರಮಗಳು:
ಈ ಪ್ರವಾಸದ ಕೊನೆಯ ಭಾಗವಾಗಿ ಲಂಡನ್ಗೆ ಆಗಮಿಸಿರುವ ಡಾ. ಮೋಹನ್ ಭಾಗವತ್ ಜೀ ಅವರು ಪ್ರಮುಖ ಧಾರ್ಮಿಕ ನಾಯಕರು, ಶಿಕ್ಷಣತಜ್ಞರು ಮತ್ತು ಸಂಶೋಧಕರನ್ನು ಭೇಟಿಯಾಗುತ್ತಿದ್ದಾರೆ. ಈಗಾಗಲೇ ಅವರು ವಿಲ್ಸ್ಡನ್ನ ಶ್ರೀ ಸ್ವಾಮಿನಾರಾಯಣ ಮಂದಿರ ಹಾಗೂ ಖಾಲ್ಸಾ ಜಥಾ ಬ್ರಿಟಿಷ್ ಐಲ್ಸ್ ಗುರುದ್ವಾರಕ್ಕೆ ಭೇಟಿ ನೀಡಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
