ಪಾವಗಡ: ತಾಲೂಕಿನ ವೈ.ಎನ್. ಹೊಸಕೋಟೆ ಗ್ರಾಮದ ರಾಷ್ಟ್ರೀಯ ವಿದ್ಯಾಪೀಠ ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ಸುಮಾರು 30 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಹಿರಿಯ ಶಿಕ್ಷಕ, ಆರ್ಎಸ್ಎಸ್ ಪ್ರಮುಖರಾದ ಘ. ರಾಮಚಂದ್ರ (70) ಅವರು ನಿಧನರಾಗಿದ್ದಾರೆ.
ಇಂಗ್ಲಿಷ್ ವಿಷಯದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದ ಘ. ರಾಮಚಂದ್ರ ಅವರು ತಮ್ಮ ಮೂರು ದಶಕಗಳ ಬೋಧನಾ ವೃತ್ತಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು. ಶಿಸ್ತು, ಸರಳತೆ ಮತ್ತು ಪ್ರೀತಿಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದ ಅವರು ಶೈಕ್ಷಣಿಕ ಕ್ಷೇತ್ರದಲ್ಲಿ ಅನನ್ಯ ಸೇವೆ ಸಲ್ಲಿಸಿದ್ದಾರೆ.
ಸಂಘಟನಾ ಚತುರ:
ಶಿಕ್ಷಣ ಕ್ಷೇತ್ರದ ಜೊತೆಗೆ ಸಾಮಾಜಿಕ ರಂಗದಲ್ಲೂ ಸಕ್ರಿಯರಾಗಿದ್ದ ಅವರು, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ತುಮಕೂರು ಜಿಲ್ಲಾ ಕಾರ್ಯವಾಹರಾಗಿ ಸುಮಾರು 15 ರಿಂದ 20 ವರ್ಷಗಳ ಕಾಲ ಅವಿರತವಾಗಿ ಸಂಘದ ಕಾರ್ಯವನ್ನು ಮುನ್ನಡೆಸಿದ್ದರು. ಸಂಘದ ಕಾರ್ಯಕ್ಕೆ 60 ವರ್ಷ ತುಂಬಿದ ಸಂದರ್ಭದಲ್ಲಿ ಪಾವಗಡ ತಾಲೂಕಿನಲ್ಲಿ 60 ಶಾಖೆಗಳನ್ನು ಪ್ರಾರಂಭಿಸುವ ಗುರಿ ಇಟ್ಟುಕೊಂಡು, ಶ್ರಮಿಸಿ 36 ಶಾಖೆಗಳನ್ನು ಯಶಸ್ವಿಯಾಗಿ ಸ್ಥಾಪಿಸಿ ಸಂಘಟನಾ ಕೌಶಲ್ಯ ಮೆರೆದಿದ್ದರು.
ಅವರ ಅಗಲಿಕೆಗೆ ನಾಡಿನ ಗಣ್ಯರು, ಶಿಕ್ಷಣ ತಜ್ಞರು, ಆರ್ಎಸ್ಎಸ್ ಪದಾಧಿಕಾರಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ತೀವ್ರ ಸಂತಾಪ ಸೂಚಿಸಿದ್ದು, ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
