ಇಂದೋರ್: ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಅಖಿಲ ಭಾರತೀಯ ಕಾರ್ಯಕಾರಿಣಿ ಮಂಡಲದ ಸಭೆಯಲ್ಲಿ, ಭಾರತದ ಸ್ವಾತಂತ್ರ್ಯ ಸಂಗ್ರಾಮದ ದಾರ್ಶನಿಕ ಹಾಗೂ ರಾಷ್ಟ್ರೀಯ ಪ್ರಜ್ಞೆಯ ಪ್ರವರ್ತಕ ರಾಜನಾರಾಯಣ ಬಸು ಅವರ 200ನೇ ಜನ್ಮ ಜಯಂತಿಯ ಅಂಗವಾಗಿ ಆರ್ಎಸ್ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ವಿಶೇಷ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ದೇಶದ ಸಾಂಸ್ಕೃತಿಕ ಮರುಸ್ಥಾಪನೆಗೆ ರಾಜನಾರಾಯಣ ಬಸು ಅವರು ನೀಡಿದ ಅಪಾರ ಕೊಡುಗೆಯನ್ನು ಸ್ಮರಿಸಿರುವ ಅವರು, ಅವರಿಗೆ ಆದರಪೂರ್ವಕ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಬ್ರಿಟಿಷ್ ಸಾಂಸ್ಕೃತಿಕ ದಾಳಿಗೆ ತಕ್ಕ ಪ್ರತಿಕ್ರಿಯೆ:
ಬ್ರಿಟಿಷರ ಆಕ್ರಮಣವು ಕೇವಲ ರಾಜಕೀಯ ವಿಜಯವಾಗಿರದೆ, ಶಿಕ್ಷಣ ಕ್ಷೇತ್ರದ ಮೂಲಕ ಭಾರತೀಯ ಸಮಾಜವನ್ನು ತನ್ನ ಸಾಂಸ್ಕೃತಿಕ ಬೇರುಗಳಿಂದ ದೂರವಿಡುವ ವ್ಯವಸ್ಥಿತ ಯತ್ನವಾಗಿತ್ತು ಎಂದು ದತ್ತಾತ್ರೇಯ ಹೊಸಬಾಳೆ ತಮ್ಮ ಪ್ರಕಟಣೆಯಲ್ಲಿ ಸುದೀರ್ಘವಾಗಿ ವಿಶ್ಲೇಷಿಸಿದ್ದಾರೆ. ಈ ಸಾಂಸ್ಕೃತಿಕ ವಿಸ್ಮೃತಿಯ ಕಾಲಘಟ್ಟದಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸಲು ಮತ್ತು ರಾಷ್ಟ್ರದ ಗುರುತನ್ನು ಮರುಸ್ಥಾಪಿಸಲು ಶ್ರಮಿಸಿದ ಮಹಾನ್ ಚೇತನಗಳಲ್ಲಿ ರಾಜನಾರಾಯಣ ಬಸು ಅಗ್ರಗಣ್ಯರು ಎಂದು ಅವರು ಬಣ್ಣಿಸಿದ್ದಾರೆ.
ಸಮಾಜ ಸುಧಾರಣೆ ಮತ್ತು ಸ್ವದೇಶಿ ಚಿಂತನೆ:
ಡಿಸೆಂಬರ್ 7, 1826ರಂದು ಬಂಗಾಳದ ಬೋರಾಲ್ ಗ್ರಾಮದಲ್ಲಿ ಜನಿಸಿದ ರಾಜನಾರಾಯಣ ಬಸು ಅವರ ಜೀವನ ಹಾದಿಯನ್ನು ಸ್ಮರಿಸಿದ ಸರಕಾರ್ಯವಾಹರು, ಬಸು ಅವರು ಸಂಸ್ಕೃತ ಶಾಲೆಯಲ್ಲಿ ಶಿಕ್ಷಕರಾಗಿ ವೃತ್ತಿ ಆರಂಭಿಸಿ, ಬಡವರ ಉದ್ಧಾರ, ಮಾದಕ ದ್ರವ್ಯ ನಿಷೇಧ, ಮಹಿಳಾ ಶಿಕ್ಷಣ ಹಾಗೂ ವಿಧವಾ ಪುನರ್ವಿವಾಹಕ್ಕಾಗಿ ಅವಿರತವಾಗಿ ಶ್ರಮಿಸಿದ್ದರು ಎಂದಿದ್ದಾರೆ. ಸ್ವತಃ ತಮ್ಮ ಸಹೋದರನಿಗೆ ವಿಧವಾ ವಿವಾಹ ನೆರವೇರಿಸುವ ಮೂಲಕ ಅವರು ಸಮಾಜಕ್ಕೆ ಮುನ್ನಾದಾರಿಯಾಗಿದ್ದರು ಎಂದು ಹೊಸಬಾಳೆ ನೆನಪಿಸಿಕೊಂಡಿದ್ದಾರೆ.
‘ಹಿಂದೂ ಮೇಳ’ದ ಮೂಲಕ ಸ್ವದೇಶಿ ಭಾವನೆ ಹಾಗೂ ಮಾತೃಭಾಷೆಯ ಪ್ರಾಮುಖ್ಯತೆಯನ್ನು ಸಾರಿದ ರಾಜನಾರಾಯಣ ಬಸು ಅವರು, ಹಿಂದೂ ಧರ್ಮವನ್ನು ಭಾರತದ ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಏಕತೆಯ ಬುನಾದಿ ಎಂದು ಪ್ರತಿಪಾದಿಸಿದ್ದರು. 1873ರಲ್ಲಿ ಅವರು ರಚಿಸಿದ ‘ದಿ ಸುಪೀರಿಯಾರಿಟಿ ಆಫ್ ಹಿಂದೂಯಿಸಂ’ ಕೃತಿ ಮತ್ತು 1880ರ ದಶಕದ ‘ವೃದ್ಧ ಹಿಂದೂರ್ ಆಶಾ’ ಕರಪತ್ರವು ಅವರ ರಾಷ್ಟ್ರೀಯ ದೃಷ್ಟಿಕೋನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮಹರ್ಷಿ ಅರವಿಂದರ ಮೇಲಿನ ಪ್ರಭಾವ:
ಮಹರ್ಷಿ ಶ್ರೀ ಅರವಿಂದರ ತಾಯಿಯವರ ತಂದೆಯಾದ (ಅಜ್ಜ) ರಾಜನಾರಾಯಣ ಬಸು ಅವರ ಚಿಂತನೆಗಳು ಯುವ ಅರವಿಂದರ ಮೇಲೆ ಆಳವಾದ ಪ್ರಭಾವ ಬೀರಿದ್ದವು. ಅಲ್ಲದೆ, ರವೀಂದ್ರನಾಥ ಟಾಗೋರ್, ಸ್ವಾಮಿ ವಿವೇಕಾನಂದ ಮತ್ತು ಸಹೋದರಿ ನಿವೇದಿತಾ ಅವರಂತಹ ಮಹಾನ್ ನಾಯಕರು ರಾಜನಾರಾಯಣ ಬಸು ಅವರನ್ನು ಅತ್ಯುನ್ನತ ಗೌರವದಿಂದ ಸ್ಮರಿಸುತ್ತಿದ್ದರು ಎಂದು ದತ್ತಾತ್ರೇಯ ಹೊಸಬಾಳೆ ಉಲ್ಲೇಖಿಸಿದ್ದಾರೆ.
ರಾಜನಾರಾಯಣ ಬಸು ಅವರು ಮಂಡಿಸಿದ ವಿಚಾರಗಳು ಮತ್ತು ತತ್ತ್ವಗಳು ಇಂದಿಗೂ ಸಾರ್ವಕಾಲಿಕ ಮಹತ್ವವನ್ನು ಹೊಂದಿದ್ದು, ಸಾಂಸ್ಕೃತಿಕ ಬೇರುಗಳೊಂದಿಗೆ ಜೋಡಣೆ ಮತ್ತು ರಾಷ್ಟ್ರೀಯ ಏಕತೆಯ ನಿರಂತರ ಅಗತ್ಯವನ್ನು ನಮಗೆ ನೆನಪಿಸುತ್ತವೆ ಎಂದು ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಕ್ರಮ ಓದುಗರ ವಾಟ್ಸಪ್ ಬಳಗಕ್ಕೆ ಸೇರಲು ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ನಲ್ಲಿ ಸೇವ್ ಮಾಡಿಕೊಂಡು ನಮಗೊಂದು ಸಂದೇಶ ಕಳುಹಿಸಿ. ಮೊಬೈಲ್ ಸಂಖ್ಯೆ: 98800 21122
