ಮುಖಪುಟ ಲೇಖನ-2
SIR- ಸರ್ವೋಚ್ಚ ನ್ಯಾಯಾಲಯದ ಐತಿಹಾಸಿಕ ತೀರ್ಪು
- ಡಾ || ಎಸ್.ಸಿ. ಶರ್ಮ
ಒಂದು ಹೊಸ ಪರ್ವ ಆರಂಭಗೊಂಡಾಗ ಅದು ಹಳೆಯ ಜಡ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸಿ, ಹೊಸ ಕ್ರಮಕ್ಕೆ ದಾರಿ ಮಾಡಿಕೊಡುತ್ತದೆ. 27-05-2026ರಂದು ಸರ್ವೋಚ್ಚ ನ್ಯಾಯಾಲಯವು ರಿಟ್ ಅರ್ಜಿ (ಸಿವಿಲ್) ಸಂಖ್ಯೆ: 640/2025ರಲ್ಲಿ (ಇದಕ್ಕೆ ಸಂಬಂಧಿಸಿದ ಇತರೆ 18 ರಿಟ್ ಅರ್ಜಿಗಳು ಸೇರಿದಂತೆ) 124 ಪುಟಗಳ ಸುದೀರ್ಘವಾದ ಐತಿಹಾಸಿಕ ತೀರ್ಪನ್ನು ನೀಡಿತು.
ಈ ತೀರ್ಪು ವಿಶ್ವದ ಅತ್ಯಂತ ಪ್ರಾಚೀನ ಹಾಗೂ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಹೊಸ ಕ್ರಾಂತಿಗೆ ನಾಂದಿ ಹಾಡಿತು. ಇದು ಕೇಂದ್ರ-ರಾಜ್ಯ ಸರ್ಕಾರಗಳ ಸಮಗ್ರ ಹೊಣೆಗಾರಿಕೆ, ಸ್ವಾಯತ್ತ ಸಂಸ್ಥೆಯಾದ ಚುನಾವಣಾ ಆಯೋಗದ ಅಧಿಕಾರ ವ್ಯಾಪ್ತಿ ಹಾಗೂ ಚುನಾವಣಾ ಕಸರತ್ತಿನ ಕೇಂದ್ರ ಬಿಂದುವಾಗಿರುವ ‘ಮತದಾರ ಮಹಾಪ್ರಭು’ವಿನ ಸಾಂವಿಧಾನಿಕ ಜವಾಬ್ದಾರಿಗಳನ್ನು ಮರು ವ್ಯಾಖ್ಯಾನಿಸಿದೆ. ಹಲವು ದಶಕಗಳಿಂದ ಜಡ್ಡುಗಟ್ಟಿ, ಆರಂಭಿಕ ಹಂತದಲ್ಲೇ ನಿಂತು ಸದಾ ‘ಅಪೂರ್ಣ’ ಎಂಬ ಹಣೆಪಟ್ಟಿಗೆ ಒಳಗಾಗಿದ್ದ ಮತದಾರರ ಪಟ್ಟಿಯ ಪರಿಷ್ಕರಣಾ ಕಾರ್ಯಕ್ಕೆ ಈ ತೀರ್ಪು ಹೊಸ ಹುರುಪು ಮತ್ತು ಚಾಲನೆ ನೀಡಿದೆ.
ಚುನಾವಣಾ ವ್ಯವಸ್ಥೆಯ ಸಾಂವಿಧಾನಿಕ ಹೊಣೆಗಾರಿಕೆ: ಒಂದು ಪಕ್ಷಿನೋಟ
ನಮ್ಮ ಸಂವಿಧಾನ ರಚನಾ ಸಭೆಯ ಚರ್ಚೆಗಳಲ್ಲಿ, ಕಾರ್ಯಾಂಗದ ವ್ಯಾಪ್ತಿಯಿಂದ ಆಚೆಗಿರುವ, ಸಂಪೂರ್ಣ ಸ್ವಾಯತ್ತತೆ ಹೊಂದಿರುವ ಒಂದು ಸಶಕ್ತ ‘ಚುನಾವಣಾ ಆಯೋಗ’ದ ಅವಶ್ಯಕತೆಯನ್ನು ಬಲವಾಗಿ ಪ್ರತಿಪಾದಿಸಲಾಗಿತ್ತು. ಮುಕ್ತ, ಪಾರದರ್ಶಕ ಮತ್ತು ನಿರ್ಭೀತ ವಾತಾವರಣದಲ್ಲಿ ಚುನಾವಣೆ ನಡೆಸುವುದು ಹಾಗೂ ಮತದಾರರ ಪಟ್ಟಿಯನ್ನು ನಿರಂತರವಾಗಿ ಪರಿಷ್ಕರಿಸುವುದು ಇದರ ಮೂಲ ಉದ್ದೇಶವಾಗಿತ್ತು. ‘ವಯಸ್ಕರ ಮತದಾನದ ಹಕ್ಕು’ ಎಂಬ ತತ್ತ್ವದಡಿಯಲ್ಲಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಪದ್ಧತಿಯನ್ನು ಭಾರತ ಅಳವಡಿಸಿಕೊಂಡಿತು.
ಒಂದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ದೋಷರಹಿತ ಮತದಾರರ ಪಟ್ಟಿಯೇ ಮೂಲಭೂತ ದಾಖಲೆಯಾಗಿದೆ. ಅದರ ಗುಣಮಟ್ಟ ಮತ್ತು ವಿಶ್ವಾಸಾರ್ಹತೆಯನ್ನು ಕಾಯ್ದುಕೊಳ್ಳುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ, ಭಾರತದ ಸಂವಿಧಾನದ ವಿಧಿ 324 ಮತ್ತು ಜನಪ್ರತಿನಿಧಿ ಅಧಿನಿಯಮ, 1950ರ (Representation of the People Act, 1950) ಅನ್ವಯ, ಮತದಾರರ ಪಟ್ಟಿಗಳನ್ನು ಸಿದ್ಧಪಡಿಸುವ ಮೇಲುಸ್ತುವಾರಿ, ನಿರ್ದೇಶನ ಹಾಗೂ ನಿಯಂತ್ರಣದ ಸಂಪೂರ್ಣ ಅಧಿಕಾರವನ್ನು ಚುನಾವಣಾ ಆಯೋಗಕ್ಕೆ ನೀಡಲಾಗಿದೆ. ಪ್ರಸ್ತುತ ನಮ್ಮ ಚುನಾವಣಾ ಕಾರ್ಯವಿಧಾನಗಳನ್ನು ‘ಜನಪ್ರತಿನಿಧಿ ಅಧಿನಿಯಮ, 1950’ ಹಾಗೂ ಅದರ ಅಡಿಯಲ್ಲಿ ರಚಿತವಾಗಿರುವ ‘ಮತದಾರರ ನೋಂದಣಿ ನಿಯಮಗಳು, 1960’ (Registration of Electors Rules, 1960) ನಿಯಂತ್ರಿಸುತ್ತವೆ. ಈ ಕಾನೂನಿನ ಮುಖ್ಯ ಉದ್ದೇಶ—ಯಾವುದೇ ಅರ್ಹ ನಾಗರಿಕನು ಮತದಾನದ ಹಕ್ಕಿನಿಂದ ವಂಚಿತನಾಗಬಾರದು ಮತ್ತು ಯಾವುದೇ ಅನರ್ಹ ವ್ಯಕ್ತಿ ಪಟ್ಟಿಯಲ್ಲಿ ಇರಬಾರದು ಎಂಬುದೇ ಆಗಿದೆ.
SIRನ ಅಗತ್ಯ
“ನಿಷ್ಕಲ್ಮಷವಾದ ಮತ್ತು ದೋಷರಹಿತವಾದ ಮತದಾರರ ಪಟ್ಟಿಯೇ ಪ್ರಜಾತಂತ್ರದ ಬುನಾದಿಯನ್ನು ಬಲಪಡಿಸುತ್ತದೆ”. ಪ್ರತಿ ಚುನಾವಣೆಯ ಮುನ್ನ ಅಥವಾ ತುರ್ತು ಅವಶ್ಯಕತೆ ಎದುರಾದಾಗ ಕಾನೂನಿನ ಅನ್ವಯ ಮತದಾರರ ಪಟ್ಟಿಯನ್ನು ಪರಿಷ್ಕರಿಸಬೇಕಾಗುತ್ತದೆ. ಭಾರತದಲ್ಲಿ 1951ರಿಂದ 2004ರವರೆಗೆ ಸುಮಾರು 8 ಬಾರಿ ಇಂತಹ ‘ವಿಶೇಷ ಸಮಗ್ರ ಪರಿಷ್ಕರಣೆ’ (Special Integrated Revision) ನಡೆದಿತ್ತು. ರಾಜಕೀಯ ಪಕ್ಷಗಳು ಆಗಾಗ್ಗೆ ಮತದಾರರ ಪಟ್ಟಿಯ ಗುಣಮಟ್ಟವನ್ನು ಪ್ರಶ್ನಿಸುತ್ತಲೇ ಇದ್ದವು. ಕೊನೆಯದಾಗಿ ಇಂತಹ ಸಮಗ್ರ ಪರಿಷ್ಕರಣೆ ನಡೆದದ್ದು 2002-2004ರ ಅವಧಿಯಲ್ಲಿ, ಅಂದರೆ ಸುಮಾರು 21 ವರ್ಷಗಳ ಹಿಂದೆ!.
ಈ ಸುದೀರ್ಘ ಎರಡು ದಶಕಗಳಲ್ಲಿ ದೇಶದಲ್ಲಿ ನಿರಂತರ ವಲಸೆ ನಡೆದಿದೆ; ಒಂದಕ್ಕಿಂತ ಹೆಚ್ಚು ಸ್ಥಳಗಳಲ್ಲಿ ಹೆಸರು ನೋಂದಾಯಿಸುವಿಕೆ, ಮೃತರಾದವರ ಹೆಸರುಗಳು ಪಟ್ಟಿಯಲ್ಲೇ ಉಳಿದಿರುವುದು ಹಾಗೂ ವಿದೇಶಿಗರು/ಅಕ್ರಮ ವಲಸಿಗರು ತಪ್ಪಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿರುವ ಸಾಧ್ಯತೆಗಳು ಹೆಚ್ಚಾಗಿವೆ. ಈ ಸಾಮಾಜಿಕ ಬದಲಾವಣೆಗಳನ್ನು ಸರಿಪಡಿಸಲು, ಚುನಾವಣಾ ಆಯೋಗವು ರಾಷ್ಟ್ರವ್ಯಾಪಿ ಹಂತ-ಹಂತವಾಗಿ ವಿಶೇಷ ಸಮಗ್ರ ಪರಿಷ್ಕರಣೆಯನ್ನು ಕೈಗೊಳ್ಳಲು ನಿರ್ಧರಿಸಿ, 1-7-2025ರಿಂದ ಬಿಹಾರ ರಾಜ್ಯದಲ್ಲಿ ಈ ಪ್ರಕ್ರಿಯೆಯನ್ನು ಆರಂಭಿಸಿತು. ಈ SIR ಪ್ರಕ್ರಿಯೆಯಲ್ಲಿ ಅಧಿಕಾರಿಗಳು ಪ್ರತಿಯೊಬ್ಬ ನಾಗರಿಕನ ಮನೆ-ಮನೆಗೆ ತೆರಳಿ, ನಿಗದಿತ ನಮೂನೆಗಳ ಪ್ರಕಾರ ಮತದಾರರ ಪಟ್ಟಿಯನ್ನು ಸಮಗ್ರವಾಗಿ ಪರಿಶೀಲಿಸುತ್ತಾರೆ.
ಪ್ರಕರಣದ ಸ್ಥೂಲ ಪರಿಚಯ ಮತ್ತು ವಾದಿಗಳ ಆಕ್ಷೇಪಣೆ
ಮಾನ್ಯ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಕೆಯಾಗಿದ್ದ ರಿಟ್ ಅರ್ಜಿ ಸಂಖ್ಯೆ: 640/2025ರಲ್ಲಿ ‘ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್’ (ADR) ವಾದಿಗಳಾಗಿದ್ದರೆ, ‘ಭಾರತೀಯ ಚುನಾವಣಾ ಆಯೋಗ’ ಪ್ರತಿವಾದಿಯಾಗಿತ್ತು.
ಇತ್ತೀಚಿನ ದಶಕಗಳಲ್ಲಿ ಬಾಂಗ್ಲಾ ಅಕ್ರಮ ವಲಸಿಗರ ನುಸುಳುವಿಕೆ ಹೆಚ್ಚಾಗಿದ್ದು, ಕೆಲವು ಗಡಿ ಜಿಲ್ಲೆಗಳಲ್ಲಿ ಅಸ್ವಾಭಾವಿಕ ಜನಸಂಖ್ಯಾ ಸ್ಫೋಟ ಉಂಟಾಗಿತ್ತು. ಇದರ ದುಷ್ಪರಿಣಾಮಗಳು ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಸ್ತರಗಳಲ್ಲಿ ಗೋಚರಿಸುತ್ತಿದ್ದವು. ಮತದಾನ ಪ್ರಕ್ರಿಯೆಯಲ್ಲಿ ನಡೆಯುತ್ತಿದ್ದ ಅಕ್ರಮಗಳು ಮತ್ತು ಮತದಾರರ ಪಟ್ಟಿಯ ಲೋಪದೋಷಗಳನ್ನು ತಡೆಯಲು ಆಯೋಗವು ಬಿಹಾರದಲ್ಲಿ SIR ಪ್ರಕ್ರಿಯೆ ಆರಂಭಿಸಿತ್ತು. ಆದರೆ, ಈ ಪ್ರಕ್ರಿಯೆಯನ್ನು ತಡೆಹಿಡಿಯಬೇಕು ಎಂದು ಕೋರಿ ವಾದಿಗಳು ನ್ಯಾಯಾಲಯದ ಮೆಟ್ಟಿಲೇರಿದ್ದರು.
ಅರ್ಜಿದಾರರ (ವಾದಿಗಳ) ಮುಖ್ಯ ವಾದಗಳು
ಕಾನೂನಿನ ಚೌಕಟ್ಟನ್ನು ಮೀರಿದ ಕ್ರಮ: ಸಂವಿಧಾನದ ವಿಧಿ 327ರ ಅಡಿಯಲ್ಲಿ ಸಂಸತ್ತು ಈಗಾಗಲೇ 1950, 1951ರ ಜನಪ್ರತಿನಿಧಿ ಕಾಯ್ದೆ ಮತ್ತು 1960ರ ಮತದಾರರ ನೋಂದಣಿ ನಿಯಮಗಳನ್ನು ಜಾರಿಗೊಳಿಸಿದೆ. ಆಯೋಗವು ಇದರ ಹೊರತಾಗಿ, ಕೇವಲ ವಿಧಿ 324ರ ಅಡಿಯಲ್ಲಿ ತನ್ನ ಸ್ವಯಂ ಅಧಿಕಾರ ಚಲಾಯಿಸಿ ಹೊಸ ಆಡಳಿತಾತ್ಮಕ ಕಾರ್ಯವೈಖರಿಯನ್ನು ರೂಪಿಸುವುದು ಕಾನೂನುಬಾಹಿರ.
ಕಲಂ 21(3)ರ ಸಂಕುಚಿತ ವ್ಯಾಖ್ಯಾನ: ಜನಪ್ರತಿನಿಧಿ ಕಾಯ್ದೆಯ ಕಲಂ 21(3)ರ ಪ್ರಕಾರ, ಆಯೋಗಕ್ಕೆ ಯಾವುದೇ ನಿರ್ದಿಷ್ಟ ‘ಕ್ಷೇತ್ರ ಅಥವಾ ಕ್ಷೇತ್ರದ ಭಾಗಕ್ಕೆ’ ಮಾತ್ರ ವಿಶೇಷ ಪರಿಷ್ಕರಣೆ ನಡೆಸುವ ಅಧಿಕಾರವಿದೆ. ಆದರೆ, ಇಡೀ ‘ರಾಜ್ಯವ್ಯಾಪಿ’ ಅಥವಾ ‘ರಾಷ್ಟ್ರವ್ಯಾಪಿ’ ವ್ಯಾಪಕ ಪರಿಷ್ಕರಣೆ ನಡೆಸಲು ಈ ಕಲಂ ಆಯೋಗಕ್ಕೆ ಅಧಿಕಾರ ನೀಡುವುದಿಲ್ಲ.
ನೋಟಿಸ್ ಪ್ರಕ್ರಿಯೆಯ ಆಕ್ಷೇಪಣೆ: SIR ಮಾರ್ಗಸೂಚಿಗಳ ಷರತ್ತು-14ರ ಪ್ರಕಾರ, ಕರಡು ಪಟ್ಟಿ ಪ್ರಕಟಣೆಯ ನಂತರ ಮತದಾರರ ಅರ್ಹತೆಯ ಬಗ್ಗೆ ಸಂಶಯ ಬಂದರೆ ಮತದಾರರ ನೋಂದಣಿ ಅಧಿಕಾರಿಗಳು (ERO/AERO) ಶೋಕಾಸ್ ನೋಟಿಸ್ ನೀಡಬೇಕು, ಅವರ ಪ್ರತಿಕ್ರಿಯೆ ಪಡೆಯಬೇಕು ಮತ್ತು ತಾರ್ಕಿಕ ಆದೇಶ (Speaking Order) ಹೊರಡಿಸಬೇಕು ಎಂದು ನಿಯಮ ರೂಪಿಸಲಾಗಿದೆ. ಇದು ಆಡಳಿತಾತ್ಮಕ ಕಸರತ್ತನ್ನು ಅನಗತ್ಯವಾಗಿ ಜಟಿಲಗೊಳಿಸುತ್ತದೆ ಎಂಬುದು ವಾದಿಗಳ ಆಕ್ಷೇಪವಾಗಿತ್ತು.
ಸುಪ್ರೀಂ ಕೋರ್ಟ್ ನ ತರ್ಕಬದ್ಧ ವಿಶ್ಲೇಷಣೆ ಮತ್ತು ತೀರ್ಪು
ಮಾನ್ಯ ಸರ್ವೋಚ್ಚ ನ್ಯಾಯಾಲಯವು ಈ ಎಲ್ಲ ವಾದಗಳನ್ನು ಕಾನೂನಿನ ಚೌಕಟ್ಟಿನೊಳಗೆ ಅತ್ಯಂತ ಎಳೆ-ಎಳೆಯಾಗಿ, ವಿಶ್ಲೇಷಣಾತ್ಮಕವಾಗಿ ಪರಿಶೀಲಿಸಿ, ಚುನಾವಣಾ ಆಯೋಗದ ಕ್ರಮವನ್ನು ಎತ್ತಿಹಿಡಿಯಿತು. ಘನ ನ್ಯಾಯಾಲಯದ ಪ್ರಮುಖ ಅಭಿಪ್ರಾಯಗಳು ಹೀಗಿವೆ:
“ಯಾವುದೇ” ಎಂದರೆ “ಎಲ್ಲಾ” ಎಂದೂ ಅರ್ಥೈಸಬಹುದು: ಜನಪ್ರತಿನಿಧಿ ಕಾಯ್ದೆಯ ಕಲಂ 21(3) ರಲ್ಲಿ ‘ಕ್ಷೇತ್ರ’ದ ಮುಂಚೆ ಬಳಸಿರುವ ‘ಯಾವುದೇ’ (Any) ಎಂಬ ಪದವು ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಲ್ಲ. ಇದರ ವ್ಯಾಪ್ತಿಯನ್ನು ಮೊಟಕುಗೊಳಿಸಲು ಸಾಧ್ಯವಿಲ್ಲ. ತ್ವರಿತ ನಗರೀಕರಣ, ನಕಲಿ ಮತದಾರರು ಮತ್ತು ಗಡಿಯಾಚೆಗಿನ ವಲಸೆಯು ಇಡೀ ರಾಜ್ಯಕ್ಕೆ ಸಾಮಾನ್ಯ ಸಮಸ್ಯೆಯಾಗಿರುವಾಗ, ಆಯೋಗವು ಇಡೀ ರಾಜ್ಯದ ಎಲ್ಲಾ ಕ್ಷೇತ್ರಗಳಿಗೂ ಒಟ್ಟಾರೆ ಆದೇಶ ಹೊರಡಿಸಬಹುದು. ಇಲ್ಲಿ ‘ಯಾವುದೇ’ ಎನ್ನುವುದನ್ನು ‘ಹಲವು’ ಅಥವಾ ‘ಎಲ್ಲಾ’ ಎಂದು ಓದಬೇಕಾಗುತ್ತದೆ.
ಸಾಕ್ಷ್ಯ ಕಾಯ್ದೆಯ ಅನ್ವಯ ಸಿಂಧುತ್ವ: ನ್ಯಾಯಾಲಯವು ಭಾರತೀಯ ಸಾಕ್ಷ್ಯ ಕಾಯ್ದೆ, 1872ರ ಕಲಂ – 114ನ್ನು ಉಲ್ಲೇಖಿಸುತ್ತಾ – ಮತದಾರರ ಪಟ್ಟಿಯಲ್ಲಿ ಹೆಸರಿರುವುದು ಒಂದು ‘ಸಿಂಧುತ್ವದ ಊಹೆ’ಯನ್ನು (Presumption of validity) ಹೊಂದಿರುತ್ತದೆ. ಆದ್ದರಿಂದ, ಆರಂಭಿಕ ಹಂತದಲ್ಲೇ ಅರ್ಹತೆಯ ಪೂರ್ವ ಷರತ್ತುಗಳನ್ನು ಸೂಕ್ತವಾಗಿ ಪರಿಶೀಲಿಸುವುದು ಆಯೋಗದ ಕರ್ತವ್ಯವಾಗಿದೆ.
ಸಾಂವಿಧಾನಿಕ ಆದೇಶಕ್ಕೆ ಜೀವ ತುಂಬುವಿಕೆ: ಈ ವಿಶೇಷ ಸಮಗ್ರ ಪರಿಷ್ಕರಣೆಯು (SIR) 1950ರ ಕಾಯ್ದೆಯನ್ನಾಗಲಿ ಅಥವಾ 1960ರ ನಿಯಮಗಳನ್ನಾಗಲಿ ಬದಲಿಸುವುದಿಲ್ಲ. ಬದಲಿಗೆ, ಇದು ಸಂವಿಧಾನದ ವಿಧಿ 324ರ ಆಶಯಗಳಿಗೆ ಜೀವ ತುಂಬುತ್ತದೆ. ಆಯೋಗವು ಕಾನೂನಿನ ಚೌಕಟ್ಟಿನೊಳಗೇ ಕೆಲಸ ಮಾಡುತ್ತಿರುವುದರಿಂದ ಮತ್ತು ಯಾವುದೇ ಸ್ಪಷ್ಟ ನಿಷೇಧವನ್ನು ಉಲ್ಲಂಘಿಸದೇ ಇರುವುದರಿಂದ, ಕೇವಲ ಸಾಮಾನ್ಯ ಪ್ರಕ್ರಿಯೆಗಿಂತ ಭಿನ್ನವಾಗಿದೆ ಎಂಬ ಕಾರಣಕ್ಕೆ SIR ಅನ್ನು ರದ್ದುಗೊಳಿಸಲು ಸಾಧ್ಯವಿಲ್ಲ.
ಪ್ರಜಾಪ್ರಭುತ್ವದ ಒಳಿತಿಗಾಗಿ: ಮತದಾರರ ಪಟ್ಟಿಯು ಜಡ (Static) ದಾಖಲೆಯಲ್ಲ; ಅದು ಜನಸಂಖ್ಯೆ, ವಾಸಸ್ಥಳದ ಬದಲಾವಣೆಗಳಿಗೆ ತಕ್ಕಂತೆ ವಿಕಸನಗೊಳ್ಳಬೇಕು. ದೋಷಪೂರಿತ ಸೇರ್ಪಡೆ ಅಥವಾ ಹೊರಗಿಡುವಿಕೆಯು ‘ಚುನಾವಣಾ ಸಮಾನತೆಯ ತತ್ತ್ವ’ವನ್ನು ಮತ್ತು ಪ್ರಾತಿನಿಧಿಕ ಆಡಳಿತ ವ್ಯವಸ್ಥೆಯ (Representative Governance) ಮೂಲವನ್ನೇ ಘಾಸಿಗೊಳಿಸುತ್ತದೆ.
ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಎಲೆಕ್ಷನ್ ಕಮಿಷನ್ ವರ್ಸಸ್ ಅಶೋಕ್ ಕುಮಾರ್ (2000), ಮೊಹಿಂದರ್ ಸಿಂಗ್ ಗಿಲ್ ವರ್ಸಸ್ ಚೀಫ್ ಎಲೆಕ್ಷನ್ ಕಮಿಷನರ್ (1978), ಲಾಲ್ ಬಾಬು ಹುಸೇನ್ ವರ್ಸಸ್ ಇಲೆಕ್ಟೋರಲ್ ರಿಜಿಸ್ಟ್ರೇಷನ್ ಆಫೀಸರ್ (1995) ಮುಂತಾದ ಪ್ರಮುಖ ಪೂರ್ವ ನಿದರ್ಶನಗಳ ತೀರ್ಪುಗಳನ್ನು ಉಲ್ಲೇಖಿಸಿ ತನ್ನ ನಿರ್ಧಾರವನ್ನು ದೃಢಪಡಿಸಿತು.
ಪಂಡಿತ್ ದೀನದಯಾಳ್ ಉಪಾಧ್ಯಾಯರ ಸಿದ್ಧಾಂತ ಮತ್ತು SIR ಪ್ರಸ್ತುತತೆ
ಮಹಾಮನ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ರಾಜಕೀಯ ಸಿದ್ಧಾಂತಗಳು ಮತ್ತು ವಿಚಾರಗಳು ಆಧುನಿಕ ಆಡಳಿತಕ್ಕೆ ಅತ್ಯಂತ ಪ್ರಾಯೋಗಿಕ ಹಾಗೂ ಪ್ರಸ್ತುತವಾಗಿವೆ. ಅವರು ಪ್ರತಿಪಾದಿಸಿದ ರಾಷ್ಟ್ರ ನಿರ್ಮಾಣದ ಕಲ್ಪನೆ, ‘ಸ್ವದೇಶಿ’, ‘ಅಂತ್ಯೋದಯ’ ಮತ್ತು ವಿಕೇಂದ್ರೀಕೃತ ಅಭಿವೃದ್ಧಿಯ ಚಿಂತನೆಗಳು ಇಂದಿನ ಸಾಮಾಜಿಕ -ರಾಜಕೀಯ ಬೆಳವಣಿಗೆಗಳ ಮೇಲೆ ಆಳವಾದ ಪ್ರಭಾವ ಬೀರಿವೆ. ಪ್ರಜಾಪ್ರಭುತ್ವದ ಸುಸ್ಥಿರತೆ ಮತ್ತು ಅಂತರ್ಗತ ಬೆಳವಣಿಗೆಯ ಬೇರುಗಳು ಇಂದಿನ SIR ಪ್ರಕ್ರಿಯೆಯಲ್ಲಿ ಫಲಿತಗೊಳ್ಳುತ್ತಿರುವುದನ್ನು ನಾವು ಗಮನಿಸಬಹುದು.
ದೀನದಯಾಳರು ಅಂದೇ ಎಚ್ಚರಿಸಿದಂತೆ—ಅಕ್ರಮ ವಲಸಿಗರ ನುಸುಳುವಿಕೆಯಿಂದ ದೇಶದ ನೆಲಮೂಲ ಸಂಸ್ಕೃತಿ, ಸಾಮಾಜಿಕ, ಆರ್ಥಿಕ ಹಾಗೂ ಔದ್ಯೋಗಿಕ ವಲಯಗಳಲ್ಲಿ ಏರುಪೇರಾಗಿ, ‘ರಾಷ್ಟ್ರೀಯ ಅಸ್ಮಿತೆ’ಗೇ ಅಪಾಯ ಉಂಟಾಗುತ್ತದೆ. ಅವರು ಪ್ರತಿಪಾದಿಸಿದ ಆದರ್ಶಮಯ ರಾಷ್ಟ್ರವಾದ ಸಾಕಾರಗೊಳ್ಳಬೇಕಾದರೆ, ಪ್ರಸ್ತುತ ಚಾಲ್ತಿಯಲ್ಲಿರುವ ರಾಜಕೀಯ ಅಪಸವ್ಯಗಳನ್ನು ನಿವಾರಿಸಲು ‘ವಿಶೇಷ ಸಮಗ್ರ ಪರಿಷ್ಕರಣೆ’ಯಂತಹ ಕಠಿಣ ಪ್ರಕ್ರಿಯೆಗಳು ಅತ್ಯಗತ್ಯ. ಏಕೆಂದರೆ, ರಾಜಕೀಯ ಎಂದರೆ ಸ್ವಹಿತಾಸಕ್ತಿಯಲ್ಲ, ಅದೊಂದು ‘ರಾಷ್ಟ್ರ ಸೇವಾ ಕೈಂಕರ್ಯ’. ಅವರ ಈ ಭವ್ಯ ಕಲ್ಪನೆ ಮೂರ್ತರೂಪ ಪಡೆಯಲು ದೇಶದ ಪ್ರತಿಯೊಬ್ಬ ಪ್ರಜೆಯೂ SIR ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಅತ್ಯವಶ್ಯಕವಾಗಿದೆ.
ಕೊನೆಯದಾಗಿ
ಒಂದು ಉನ್ನತ ನಂಬಿಕೆ, ಸುಸಂಸ್ಕೃತ ನಡವಳಿಕೆ ಮತ್ತು ತನ್ನ ಜವಾಬ್ದಾರಿಯನ್ನು ಅರಿತು ನಡೆಯುವ ಸಮಾಜದ ನಿರ್ಮಾಣದಲ್ಲಿ ಇಂತಹ ಐತಿಹಾಸಿಕ ತೀರ್ಪುಗಳು ಕೇವಲ ಕಾನೂನು ಮಾನದಂಡಗಳಾಗಿ ಮಾತ್ರವಲ್ಲ, ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಮಾರ್ಗದರ್ಶಕ ಚಾಟಿಯಾಗಿಯೂ ಕೆಲಸ ಮಾಡುತ್ತವೆ.
ಹಲವು ದಶಕಗಳಿಂದ ನೇಪಥ್ಯಕ್ಕೆ ಸರಿದಿದ್ದ ಮತದಾರರ ಪಟ್ಟಿಯ ನವೀಕರಣ ಹಾಗೂ ಹೊಸ ಯುವ ಮತದಾರರ ಸೇರ್ಪಡೆಯಂತಹ ಸವಾಲಿನ ಕೆಲಸಕ್ಕೆ ಈ ತೀರ್ಪು ‘ಗಜಬಲ’ವನ್ನು ನೀಡಿದೆ. ಸ್ವಾತಂತ್ರ್ಯೋತ್ತರ ಕಾಲದಿಂದ ದೇಶಕ್ಕೆ ಕಂಟಕವಾಗಿರುವ ನೆರೆಹೊರೆಯ ದೇಶಗಳ ಅಕ್ರಮ ವಲಸೆ, ಅವರಿಗೆ ಕಾನೂನುಬಾಹಿರವಾಗಿ ನಾಗರಿಕತ್ವದ ದಾಖಲೆಗಳನ್ನು ಮಾಡಿಕೊಡುವ ಜಾಲ, ತನ್ಮೂಲಕ ಸಂಭವಿಸುವ ಅಸ್ವಾಭಾವಿಕ ಜನಸಂಖ್ಯಾ ಸ್ಫೋಟ ಮತ್ತು ದೇಶದ ಕಾನೂನು ಸುವ್ಯವಸ್ಥೆಯ ಮೇಲಾಗುವ ಋಣಾತ್ಮಕ ಪ್ರಭಾವಗಳಿಗೆ ಈ ತೀರ್ಪಿನ ಮೂಲಕ ದೊಡ್ಡ ಕಡಿವಾಣ ಬೀಳಲಿದೆ. ಒಂದು ನಿರ್ದಿಷ್ಟ ಕಾಲಮಿತಿಯೊಳಗೆ ಈ SIR ಪ್ರಕ್ರಿಯೆಯು ದೇಶವ್ಯಾಪಿ ಜಾರಿಗೊಂಡು ತನ್ನ ಗುರಿಯನ್ನು ತಲುಪಿದರೆ, ಅದು ಭಾರತದ ಪ್ರಜಾಪ್ರಭುತ್ವ ಇತಿಹಾಸದಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸನ್ನು ತರುವುದರಲ್ಲಿ ಯಾವುದೇ ಸಂಶಯವಿಲ್ಲ.
ಡಾ || ಎಸ್.ಸಿ. ಶರ್ಮ
ಮಾಜಿ ನಿರ್ದೇಶಕ – ನ್ಯಾಕ್(NAAC), ವಿಶ್ರಾಂತ ಕುಲಪತಿ
ತುಮಕೂರು ವಿಶ್ವವಿದ್ಯಾಲಯ &
ಸ್ವಾಮಿ ವಿವೇಕಾನಂದ ತಾಂತ್ರಿಕ ವಿಶ್ವವಿದ್ಯಾಲಯ, ಛತ್ತೀಸ್ಘಡ.
ಸಲಹೆಗಾರ ಮತ್ತು ಗೌರವ ಪ್ರಾಧ್ಯಾಪಕ
ಜೈನ್ ಶಿಕ್ಷಣ ಸಮೂಹ ಸಂಸ್ಥೆಗಳು.
